Published on: March 6, 2023

H3N2: ವೈರಸ್

H3N2: ವೈರಸ್


ಸುದ್ದಿಯಲ್ಲಿ ಏಕಿದೆ? ದೇಶದಾದ್ಯಂತ ಈಗ ಕೋವಿಡ್ ಲಕ್ಷಣಗಳನ್ನೇ ಹೋಲುವ ಇನ್‌ಫ್ಲೂಯೆಂಜಾ ಎಚ್‌3ಎನ್‌2 ಉಪ ಮಾದರಿ ವೈರಸ್ ಸೋಂಕು ಹರಡುತ್ತಿವೆ. ಇದರ ಲಕ್ಷಣಗಳನ್ನು ಪಟ್ಟಿಮಾಡಿರುವ ಕೇಂದ್ರ ಸರ್ಕಾರ, ಇದರ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸಿದೆ.


ಮುಖ್ಯಾಂಶಗಳು

  • ಭಾರತದ ಅನೇಕ ರಾಜ್ಯಗಳಲ್ಲಿ ಜ್ವರ ಹಾಗೂ ಫ್ಲೂ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ.
  • ಇನ್‌ಫ್ಲೂಯೆಂಜಾ ಎ ಉಪವಿಧದ ಎಚ್‌3ಎನ್2 ವೈರಸ್ ಈ ಸಮಸ್ಯೆಗೆ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
  • ಕಳೆದ ಎರಡು ಮೂರು ತಿಂಗಳಿನಿಂದ ಇದು ಭಾರತದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ.
  • ಸೋಂಕು ನಿವಾರಣೆಯಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಲಕ್ಷಣಗಳು ಬಹಳ ಪ್ರಬಲವಾಗಿವೆ. ರೋಗಿಗಳು ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕವೂ, ದೀರ್ಘ ಕಾಲದವರೆಗೆ ಲಕ್ಷಣಗಳು ಉಳಿದುಕೊಳ್ಳುತ್ತಿವೆ.

ಐಎಂಎ ವರದಿ

  • ವಿಶೇಷವಾಗಿ 15 ವರ್ಷ ವಯಸ್ಸಿಗಿಂತ ಕೆಳಗಿನವರು ಹಾಗೂ 50 ವರ್ಷ ವಯಸ್ಸಿನ ಮೇಲ್ಪಟ್ಟವರಲ್ಲಿ ಜ್ವರದ ಜತೆಗೆ ಉಸಿರಾಟದ ಸೋಂಕು ಕಂಡುಬರುತ್ತಿದೆ.
  • ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ದೇಶಾದ್ಯಂತ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕೆಮ್ಮು, ನೆಗಡಿ, ಅಸ್ವಸ್ಥತೆ ಪ್ರಕರಣಗಳಲ್ಲಿ ಆ್ಯಂಟಿಬಯೋಟಿಕ್‌ಗಳನ್ನು ಮನಬಂದಂತೆ ಬಳಸುವುದರ ವಿರುದ್ಧ ಎಚ್ಚರಿಕೆ ನೀಡಿದೆ.
  • ‘ರೋಗಿಗಳಿಗೆ ರೋಗಲಕ್ಷಣದ ಚಿಕಿತ್ಸೆಯನ್ನು ಮಾತ್ರ ನೀಡಬೇಕು. ಆ್ಯಂಟಿಬಯೋಟಿಕ್ಗಳನ್ನು ನೀಡಬಾರದು’ ಎಂದೂ ವೈದ್ಯರಿಗೆ ಐಎಂಎ ಸೂಚಿಸಿದೆ.
  • ‘ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಜನರು ಆಜಿಥ್ರೋ ಮೈಸಿನ್ ಮತ್ತು ಅಮೋಕ್ಸಿಕ್ಲಾವ್ ಮೊದಲಾದ ಆ್ಯಂಟಿಬಯೋಟಿಕ್ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಅದೂ ವೈದ್ಯರ ಸಲಹೆ ಇಲ್ಲದೇ ಸೇವಿಸುತ್ತಾರೆ. ಕಾಯಿಲೆಯಿಂದ ಸ್ವಲ್ಪ ನಿರಾಳವಾದ ಬಳಿಕ ಅವುಗಳ ಸೇವನೆಯನ್ನು ನಿಲ್ಲಿಸುತ್ತಾರೆ. ಇದು ಆ್ಯಂ ಟಿಬಯೋಟಿಕ್ಗಳ ಪ್ರತಿರೋಧಕತೆಗೆ ಕಾರಣವಾಗುತ್ತದೆ. ನಿಜವಾಗಿಯೂ ಆ್ಯಂಟಿ ಬಯೋಟಿಕ್ಗಳ ಅವಶ್ಯಕತೆ ಯಾವಾಗ ಇರುತ್ತದೆಯೋ ಆಗ ಅವುಗಳು ಕೆಲಸ ಮಾಡುವುದಿಲ್ಲ’.
  • ಇದರಲ್ಲಿ ವಾಯು ಮಾಲಿನ್ಯವೂ ಪ್ರಮುಖ ಪಾತ್ರ ವಹಿಸುತ್ತಿದೆ.

ಲಕ್ಷಣಗಳು

  • ಕೆಮ್ಮು, ವಾಕರಿಕೆ, ವಾಂತಿ, ಗಂಟಲು ನೋವು, ಮೈ ಕೈ ನೋವು, ಅತಿಸಾರ, ನೆಗಡಿ, ಉಸಿರಾಟದ ತೊಂದರೆ ಇದರ ಪ್ರಮುಖ ಲಕ್ಷಣಗಳಾಗಿವೆ. ಇವು ದೀರ್ಘ ಸಮಯದವರೆಗೆ ಕಾಡುತ್ತಿರುವುದು ಚಿಂತೆಗೆ ಎಡೆಮಾಡಿದೆ. ಜ್ವರ ಕಡಿಮೆಯಾದರೂ ಕೆಮ್ಮು, ಆಯಾಸದಂತಹ ಲಕ್ಷಣಗಳು ವಾಸಿಯಾಗುತ್ತಿಲ್ಲ.