ಅಸ್ಸಾಂ–ಮಿಜೋರಾಂ ನಡುವೆ ಸಂಘರ್ಷ
ಅಸ್ಸಾಂ–ಮಿಜೋರಾಂ ನಡುವೆ ಸಂಘರ್ಷ
ಸುದ್ಧಿಯಲ್ಲಿ ಏಕಿದೆ ? ಅಸ್ಸಾಂ ಮತ್ತು ಮಿಜೋರಾಂ ಸರಿಸುಮಾರು 165 ಕಿ.ಮೀ ಉದ್ದದ ಗಡಿ ಹಂಚಿಕೊಂಡಿದ್ದು, ಅದು ಆಗಾಗ ವಿವಾದ, ಸಂಘರ್ಷದ ರೂಪದಲ್ಲಿ ಮೇಲೆದ್ದು ನಿಲ್ಲುತ್ತದೆ. ಈಶಾನ್ಯದ ಈ ಎರಡೂ ರಾಜ್ಯಗಳ ನಡುವೆ ನಡೆದ ಗಡಿ ಸಂಘರ್ಷದ ವೇಳೆ ಸಂಭವಿಸಿದ ಗುಂಡಿನ ದಾಳಿಯಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ಮತ್ತು ಕಲ್ಲುತೂರಾಟದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಜೀವ ಹಾನಿ ಆಗುವ ಹಂತಕ್ಕೆ ಸಂಘರ್ಷಗಳು ನಡೆಯುವ ಈ ವಿವಾದ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದ್ದು.
- 19 ನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರ ಚಹಾ ತೋಟಗಳು ಕಚಾರ್ ಪ್ರದೇಶದಲ್ಲಿ (ಹೈಲಕಂಡಿ ಮತ್ತು ಕರಿಮ್ಗಂಜ್ ಜಿಲ್ಲೆಗಳನ್ನು ಒಳಗೊಂಡಿರುವ ಪ್ರದೇಶ) ವ್ಯಾಪಿಸಲಾರಂಭಿಸಿದ್ದವು. ಅವುಗಳ ವಿಸ್ತರಣೆಯು ಮಿಜೋರಾಮ್ನ ಸ್ಥಳೀಯರಿಗೆ ಸಮಸ್ಯಾತ್ಮಕವಾಗಿ ಪರಿಣಮಿಸಿತ್ತು.
- ಆಗಸ್ಟ್ 1875 ರಲ್ಲಿ ಕಚಾರ್ ಜಿಲ್ಲೆಯ ದಕ್ಷಿಣ ಗಡಿಯನ್ನು ಅಸ್ಸಾಂನ ಗೆಜೆಟ್ನಲ್ಲಿ ಪ್ರಕಟಿಸಲಾಯಿತು. ಲುಶಾಯ್ ಬೆಟ್ಟಗಳು ಮತ್ತು ಕಚಾರ್ ಬಯಲು ಪ್ರದೇಶಗಳ ನಡುವಿನ ಗಡಿಯನ್ನು ಗುರುತಿಸುವ ಬ್ರಿಟಿಷರ ಐದನೇ ಪ್ರಯತ್ನ ಅದಾಗಿತ್ತು. ಅದಲ್ಲದೇ ಮಿಜೋರಾಂನ ನಾಯಕರನ್ನು ಸಂಪರ್ಕಿಸಿ ಗುರುತಿಸಲಾದ ಮೊದಲ ಗಡಿ ರೇಖೆ ಅದು ಎಂದು ಮಿಜೋರಾಂ ಹೇಳುತ್ತದೆ. ಮೀಸಲು ಅರಣ್ಯದ ಒಳರೇಖೆ ಗುರುತಿಸಲು ಇದೇ ಆಧಾರವಾಯಿತು ಎನ್ನಲಾಗಿದ್ದು, ಎರಡು ವರ್ಷಗಳ ನಂತರ ಅದನ್ನು ಗೆಜೆಟ್ನಲ್ಲಿ ಪ್ರಕಟಿಸಲಾಯಿತು.1933 ರಲ್ಲಿ ಲುಶಾಯ್ ಹಿಲ್ಸ್ ಮತ್ತು ಅಂದಿನ ರಾಜಮನೆತನವಾದ ಮಣಿಪುರದ ನಡುವಿನ ಗಡಿಯನ್ನು ಗುರುತಿಸಲಾಯಿತು. ಮಣಿಪುರದ ಗಡಿಯು ಲುಶಾಯ್ ಹಿಲ್ಸ್, ಅಸ್ಸಾಂನ ಕಚಾರ್ ಜಿಲ್ಲೆಯಿಂದ ಪ್ರಾರಂಭವಾಗುತ್ತದೆ ಎಂದು ಅದರಲ್ಲಿ ತೋರಿಸಲಾಗಿತ್ತು. ಆದರೆ, ಇದಕ್ಕೆ ಮಿಜೋರಾಂ ವಿರೋಧ ವ್ಯಕ್ತಪಡಿಸಿತು. 1875ರಲ್ಲಿ ರಾಜ್ಯದ ನಾಯಕರನ್ನು ಸಂಪರ್ಕಿಸಿ ರೂಪಿಸಲಾದ ಗಡಿಗುರುತೇ ಸರಿ ಎಂದು ವಾದಿಸಿತು.
- ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ, ಅಸ್ಸಾಂ – ನಾಗಾಲ್ಯಾಂಡ್ (1963), ಅರುಣಾಚಲ ಪ್ರದೇಶ (1972 ), ಮೇಘಾಲಯ (1972), ಮಿಜೋರಾಂ (1972) ಎಂಬ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಯಿತು.
- ಮಿಜೋರಾಂ ಮತ್ತು ಅಸ್ಸಾಂ ನಡುವಿನ ಒಪ್ಪಂದದ ಪ್ರಕಾರ, ಗಡಿ ಪ್ರದೇಶದ ಮಾನವ ರಹಿತ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಫೆಬ್ರವರಿ 2018 ರಲ್ಲಿ ಗಡಿ ಪ್ರದೇಶದ ಅಸ್ಸಾಂನದ್ದು ಎಂದು ಹೇಳಲಾದ ಪ್ರದೇಶದಲ್ಲಿ ‘ಮಿಜೋ ಝಿರ್ಲೈ ಪಾವ್ಲ್‘ ಎಂಬ ವಿದ್ಯಾರ್ಥಿ ಸಂಘಟನೆಯ ಸದಸ್ಯರು ರೈತರಿಗಾಗಿ ಮರದ ವಿಶ್ರಾಂತಿ ಗೃಹವನ್ನು ನಿರ್ಮಿಸಿದರು. ಇದು ಸಂಘರ್ಷಕ್ಕೆ ಕಾರಣವಾಯಿತು. ನಂತರದಲ್ಲಿ ವಿಶ್ರಾಂತಿ ಗೃಹವನ್ನು ಅಸ್ಸಾಂ ಪೊಲೀಸರು ಧ್ವಂಸಗೊಳಿಸಿದ್ದರು.
- ಕಳೆದ ವರ್ಷ ಅಕ್ಟೋಬರ್ನಲ್ಲಿ ಅಸ್ಸಾಂನ ಲೈಲಾಪುರ ಎಂಬಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. ಆದರೆ, ಆ ಪ್ರದೇಶ ತನ್ನದು ಎಂದು ಮಿಜೋರಾಂ ವಾದಿಸಿತ್ತು. ಹೀಗಾಗಿ ಮತ್ತೊಮ್ಮೆ ಘರ್ಷಣೆ ನಡೆದಿತ್ತು.
ಈಶಾನ್ಯ ರಾಜ್ಯಗಳ ವಿವಾದ ಪರಿಹರಿಸಲು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿರುವ ಕ್ರಮಗಳು
- ಗಡಿ ಭಾಗಗಳನ್ನು ಗುರುತಿಸುವ ಸಮಸ್ಯೆಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಪರಿಹಾರವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
- ಬಾಹ್ಯಾಕಾಶ ಇಲಾಖೆ ಮತ್ತು ಈಶಾನ್ಯ ಮಂಡಳಿಗಳ (ಎನ್ಇಸಿ) ಜಂಟಿ ಸಹಭಾಗಿತ್ವದ ಬಾಹ್ಯಾಕಾಶ ಅನ್ವಯ ಕೇಂದ್ರವನ್ನು (ಎನ್ಇಎಸ್ಎಸಿ) ರಾಜ್ಯಗಳ ನಡುವಿನ ಗಡಿಗಳ ವ್ಯಾಪ್ತಿಯನ್ನು ವೈಜ್ಞಾನಿಕವಾಗಿ ಗುರುತಿಸಲು ಸಹಾಯ ಮಾಡುವಂತೆ ಗಡಿ ಪ್ರದೇಶಗಳ ಉಪಗ್ರಹ ನಕಾಶೆ ಸಿದ್ಧಪಡಿಸುವ ಕಾರ್ಯಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
- ಈಶಾನ್ಯ ರಾಜ್ಯಗಳ ಗಡಿ ಭಾಗಗಳನ್ನು ಗುರುತಿಸಲು ಮತ್ತು ಅರಣ್ಯ ಪ್ರದೇಶಗಳನ್ನು ದಾಖಲಿಸಲು ಎನ್ಇಎಸ್ಎಸಿಗೆ ಹೊಣೆ ನೀಡುವ ಮೂಲಕ ರಾಜ್ಯಗಳ ನಡುವಣ ಗಡಿಗಳನ್ನು ವೈಜ್ಞಾನಿಕ ಆಧಾರದಲ್ಲಿ ನಿರ್ಧರಿಸುವ ಬಗ್ಗೆ ಕೆಲವು ತಿಂಗಳ ಹಿಂದೆ ಗೃಹ ಸಚಿವ ಅಮಿತ್ ಶಾ ಸಲಹೆ ನೀಡಿದ್ದರು.
- ಈಶಾನ್ಯ ರಾಜ್ಯಗಳಲ್ಲಿನ ಪ್ರವಾಹ ನಿರ್ವಹಣೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಈಗಾಗಲೇ ಎನ್ಇಎಸ್ಎಸಿ ಬಳಸಿಕೊಳ್ಳುತ್ತಿದೆ.
- ಅಂತರ್ ರಾಜ್ಯ ಕೌನ್ಸಿಲ್ ಅನ್ನು ಪುನರುಜ್ಜೀವನಗೊಳಿಸುವುದು ಅಂತರ್-ರಾಜ್ಯ ವಿವಾದವನ್ನು ಪರಿಹರಿಸಲು ಒಂದು ಆಯ್ಕೆಯಾಗಿದೆ.
- ಸಂವಿಧಾನದ ಪರಿಚ್ಛೇದ 263 ರ ಪ್ರಕಾರ, ಅಂತರ-ರಾಜ್ಯ ಕೌನ್ಸಿಲ್ ವಿವಾದಗಳನ್ನು ವಿಚಾರಿಸಲು ಮತ್ತು ಸಲಹೆ ನೀಡಲು, ಎಲ್ಲಾ ರಾಜ್ಯಗಳಿಗೆ ಸಾಮಾನ್ಯವಾದ ವಿಷಯಗಳನ್ನು ಚರ್ಚಿಸಲು ಮತ್ತು ಉತ್ತಮ ನೀತಿ ಸಮನ್ವಯಕ್ಕಾಗಿ ಶಿಫಾರಸುಗಳನ್ನು ಮಾಡಲು ನಿರೀಕ್ಷಿಸಲಾಗಿದೆ.
- ಅಂತೆಯೇ, ಪ್ರತಿ ವಲಯದ ರಾಜ್ಯಗಳಿಗೆ ಸಾಮಾನ್ಯ ಕಾಳಜಿಯ ವಿಷಯಗಳನ್ನು ಚರ್ಚಿಸಲು ವಲಯ ಮಂಡಳಿಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ-ಸಾಮಾಜಿಕ ಮತ್ತು ಆರ್ಥಿಕ ಯೋಜನೆ, ಗಡಿ ವಿವಾದಗಳು, ಅಂತರ್ ರಾಜ್ಯ ಸಾರಿಗೆ, ಇತ್ಯಾದಿ.
- ಭಾರತವು ವಿವಿಧತೆಯಲ್ಲಿ ಏಕತೆಯ ಪ್ರತಿರೂಪವಾಗಿದೆ. ಆದಾಗ್ಯೂ, ಈ ಏಕತೆಯನ್ನು ಮತ್ತಷ್ಟು ಬಲಪಡಿಸಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರಿ ಫೆಡರಲಿಸಂನ ತತ್ವವನ್ನು ಅಳವಡಿಸಿಕೊಳ್ಳಬೇಕು.
ಕೇಂದ್ರ ಸರಕಾರವು ದೇಶದಲ್ಲಿ ಏಳು ಗಡಿ ಬಿಕ್ಕಟ್ಟುಗಳಿವೆ ಎಂದು ಸಂಸತ್ತಿಗೆ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಗಡಿ ಬಿಕ್ಕಟ್ಟಿದೆ? ಅದರ ಸಂಕ್ಷಿಪ್ತ ನೋಟ ಇಲ್ಲಿದೆ.
- ಕರ್ನಾಟಕ-ಮಹಾರಾಷ್ಟ್ರ
ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಾಜ್ಯಗಳ ವಿಂಗಡಣೆಯೊಂದನ್ನೇ ನೆಪ ಮಾಡಿಕೊಂಡಿರುವ ಮಹಾರಾಷ್ಟ್ರವು ಕರ್ನಾಟಕದ ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ತಗಾದೆ ತೆಗೆದಿದೆ. ಮರಾಠಿ ಮಾತನಾಡುವ ಪ್ರದೇಶಗಳ ಮೇಲೆ ಕಣ್ಣಿಟ್ಟಿರುವ ಮಹಾರಾಷ್ಟ್ರವು ಆಗಾಗ ಇವೆಲ್ಲ ನಮಗೆ ಸೇರಬೇಕು ಎಂದು ಹುಸಿ ಒತ್ತಾಯ ಮಾಡುತ್ತಿದೆ.
- ಅಸ್ಸಾಂ-ಮಿಜೋರಾಂ
ಪ್ರಸ್ತುತ ಎರಡೂ ರಾಜ್ಯಗಳ ಗಡಿಯಲ್ಲಿ ಮಾರಣಾಂತಿಕ ಸಂಘರ್ಷ ನಡೆದಿದ್ದು, ಮುಂಜಾಗ್ರತೆಗಾಗಿ ಹೆಚ್ಚಿನ ಸೈನಿಕರು, ಪೊಲೀಸರನ್ನು ನಿಯೋಜಿಸಲಾಗಿದೆ. ಎರಡೂ ರಾಜ್ಯಗಳು ಸುಮಾರು 6 ಕಿ.ಮೀ. ಗಡಿ ಹಂಚಿಕೊಂಡಿವೆ. ಕಳೆದ ನಾಲ್ಕು ವರ್ಷಗಳಿಂದ ಬಿಕ್ಕಟ್ಟು ಉಲ್ಬಣಿಸಿದೆ. ಆಕ್ರಮಣ, ಶಿಬಿರ ನಿರ್ಮಾಣ ಆರೋಪದಲ್ಲಿ ಜಟಾಪಟಿ ನಡೆಯುತ್ತಲೇ ಇದೆ.
- ಅಸ್ಸಾಂ-ಮೇಘಾಲಯ
ದೇಶದಲ್ಲೇ ಅತಿ ಹೆಚ್ಚು ರಾಜ್ಯಗಳ ಜತೆ ಗಡಿ ಬಿಕ್ಕಟ್ಟು ಹೊಂದಿರುವ ರಾಜ್ಯ ಎಂದೇ ಕುಖ್ಯಾತಿ ಪಡೆದಿರುವ ಅಸ್ಸಾಂ, 1972ರಲ್ಲಿ ಮೇಘಾಲಯ ರಾಜ್ಯ ಸ್ಥಾಪನೆ ಆದಾಗಿನಿಂದಲೂ ಬಿಕ್ಕಟ್ಟು ಹೊಂದಿದೆ. ಅಸ್ಸಾಂ ರಾಜಧಾನಿ ಗುವಾಹಟಿಯು ಮೇಘಾಲಯದ ರಿಭೋಯಿ ಜತೆ ಗಡಿ ಹಂಚಿಕೊಂಡಿದ್ದು, ಆಗಾಗ ಜನ, ಗುತ್ತಿಗೆದಾರರು, ವಿದ್ಯುತ್ ಕಂಪನಿಗಳ ಜತೆ ಸಂಘರ್ಷ ನಡೆಯುವುದು ಸಾಮಾನ್ಯವಾಗಿದೆ.
- ಅಸ್ಸಾಂ-ನಾಗಾಲ್ಯಾಂಡ್
ಅಸ್ಸಾಂನ ಮೆರಾಪಾನಿ ಎಂಬ ಸಣ್ಣ ಗ್ರಾಮ ಹಾಗೂ ನಾಗಾಲ್ಯಾಂಡ್ನ ಡೊಯಾಂಗ್ ಮೀಸಲು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ಮಧ್ಯೆ ಬಿಕ್ಕಟ್ಟಿದ್ದು, 1963ರ ಒಪ್ಪಂದವನ್ನು ಒಪ್ಪುವುದಿಲ್ಲ ಎಂದು ನಾಗಾಲ್ಯಾಂಡ್ ಕ್ಯಾತೆ ತೆಗೆದಿದೆ. ಅತ್ತ, ಅಸ್ಸಾಂ 1972ರ ಒಪ್ಪಂದದ ನಿಯಮ ಮುರಿದು ದಾಳಿ ಮಾಡುತ್ತಿದೆ ಎಂಬ ಆರೋಪವಿದೆ. ಇದರಿಂದಾಗಿ ಇದುವರೆಗೆ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ.
- ಅಸ್ಸಾಂ-ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶದ ಜತೆ ಸುಮಾರು 804 ಕಿ.ಮೀ. ಗಡಿ ಹಂಚಿಕೊಂಡಿರುವ ಅಸ್ಸಾಂ, ಈ ರಾಜ್ಯದ ಜತೆಗೂ ಸಮಸ್ಯೆ ಹೊಂದಿದೆ. ಬಿಕ್ಕಟ್ಟಿಗೆ ಸಂಬಂಧಿಸಿದಂತೆ 1989ರಿಂದ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣವಿದ್ದು, ತೀರಾ ಅಂತಹ ಸಂಘರ್ಷಗಳೇನೂ ನಡೆದಿಲ್ಲ. ಆದರೆ, ಬಿಕ್ಕಟ್ಟು ಮಾತ್ರ ಶಮನವಾಗಿಲ್ಲ.
- ಲಡಾಕ್-ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶ ಹಾಗೂ ಲಡಾಕ್ ಗಡಿ ಮಧ್ಯೆ ಇರುವ ಸರ್ಚು ಪ್ರದೇಶದ ಮೇಲೆ ಉಭಯ ರಾಜ್ಯಗಳು ಹಕ್ಕು ಚಲಾಯಿಸುವ ಕುರಿತು ಹಲವುವರ್ಷಗಳಿಂದ ಬಿಕ್ಕಟ್ಟಿದೆ. ಲಡಾಕ್ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ಬಳಿಕ ಸರ್ಚು ಪ್ರದೇಶವನ್ನು ಲಡಾಕ್ಗೆ ಸೇರಿಸಿದ್ದು, ಅತ್ತ ಹಿಮಾಚಲ ಪ್ರದೇಶವು ಸಮೀಕ್ಷೆ ನಡೆಸಿ ಎಂದು ಒತ್ತಾಯಿಸುತ್ತಿದೆ.
- ಹರಿಯಾಣ-ಹಿಮಾಚಲ ಪ್ರದೇಶ
ಹತ್ತಾರು ವರ್ಷಗಳಿಂದ ಉಭಯ ರಾಜ್ಯಗಳ ಮಧ್ಯೆ ಬಿಕ್ಕಟ್ಟಿದ್ದು, ಆಗಾಗ ಗಡಿಗಳ ಲ್ಲಿಕಾಮಗಾರಿ ನಿರ್ಮಾಣ, ಅರಣ್ಯ ರಕ್ಷಣೆ ಸೇರಿ ಹಲವು ವಿಷಯಗಳಲ್ಲಿ ಸಂಘರ್ಷ ಏರ್ಪಡುತ್ತಲೇ ಇದೆ.