Published on: September 4, 2023
ಆದಿತ್ಯ ಎಲ್1
ಆದಿತ್ಯ ಎಲ್1
ಸುದ್ದಿಯಲ್ಲಿ ಏಕಿದೆ? ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮೊದಲ ಸೌರ ಯೋಜನೆ ಆದಿತ್ಯ ಎಲ್1 ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಮುಖ್ಯಾಂಶಗಳು
- ನಾನಾ ಹಂತಗಳ ಮೂಲಕ 120 ದಿನ ಪಯಣಿಸಿ, ಅಂತಿಮವಾಗಿ ಎಲ್1 ಪಾಯಿಂಟ್ನಲ್ಲಿ ಸ್ಥಾಪನೆಗೊಳ್ಳಲಿದೆ. 4 ಬಾರಿ ಚಂದ್ರನಲ್ಲಿಗೆ ಹೋದಷ್ಟು ದೂರವನ್ನು ಆದಿತ್ಯ-ಎಲ್1 ಕ್ರಮಿಸಲಿದೆ.
- ಸೂರ್ಯನ ಕೊರೊನಾ ಭಾಗ ಹಾಗೂ ಸೌರ ಮಾರುತಗಳ ಕುರಿತಾದ ಅಧ್ಯಯನಗಳನ್ನು ನಡೆಸಿ, ದತ್ತಾಂಶಗಳನ್ನು ರವಾನಿಸುವಂತೆ ಆದಿತ್ಯ ಎಲ್1 ಅನ್ನು ವಿನ್ಯಾಸಗೊಳಿಸಲಾಗಿದೆ.
- ಆದಿತ್ಯ ಬಾಹ್ಯಾಕಾಶ ನೌಕೆಯನ್ನು ಲಾಂಗ್ರೇಂಜಿಯನ್ ಪಾಯಿಂಟ್ 1 (ಎಲ್1) ಕಕ್ಷೆಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಲಿಕ್ವಿಡ್ ಅಪೋಜೀ ಮೋಟಾರ್ (ಎಲ್ಎಎಂ) ಅನ್ನು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಂ ಸೆಂಟರ್ (ಎಲ್ಪಿಎಸ್ಸಿ) ಅಭಿವೃದ್ಧಿಪಡಿಸಿದೆ.
- ಆದಿತ್ಯದಲ್ಲಿರುವ ಪ್ರಮುಖ ಪೇಲೋಡ್ ವಿಸಿಬಲ್ ಎಮಿಷನ್ ಲೈನ್ ಕೊರೊನಾಗ್ರಾಫ್ (ವಿಇಎಲ್ಸಿ) ಉದ್ದೇಶಿತ ಕಕ್ಷೆಯನ್ನು ಸೇರಿಕೊಂಡ ಬಳಿಕ ಪ್ರತಿ ನಿತ್ಯವೂ 1,440 ಚಿತ್ರಗಳನ್ನು ಅಧ್ಯಯನಕ್ಕಾಗಿ ಭೂಮಿಯಲ್ಲಿನ ಕೇಂದ್ರಕ್ಕೆ ರವಾನಿಸಲಿದೆ.
- ಅಮೆರಿಕ, ಯೂರೋಪ್, ಜಪಾನ್ನ ಬಾಹ್ಯಾಕಾಶ ಸಂಸ್ಥೆಗಳ ನಂತರ ಸೂರ್ಯನ ಅಧ್ಯಯನಕ್ಕಾಗಿ ನೌಕೆ ಕಳುಹಿಸಿದ ಜಗತ್ತಿನ ನಾಲ್ಕನೆಯ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಉಡಾವಣಾ ವಾಹನ: ಪಿಎಸ್ಎಲ್ವಿ- ಸಿ57 (ಪಿಎಸ್ಎಲ್ವಿ- ಎಕ್ಸ್ಎಲ್ ವೇರಿಯಂಟ್ ರಾಕೆಟ್ 44.4 ಮೀಟರ್ ಉದ್ದವಿದ್ದು, ರಾಕೆಟ್ಗೆ ಇದು 25ನೇ ಬಾಹ್ಯಾಕಾಶ ಯಾನವಾಗಿದೆ).
ತೂಕ :1,480.7 ಕೆಜಿ
ಏನಿದು ಆದಿತ್ಯ ಎಲ್1?
- ಆದಿತ್ಯ- ಎಲ್1 ಎಂಬುದು ಭಾರತದ ಮೊಟ್ಟ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯ (Observatory). ಇದು 14.85 ಕೋಟಿ ಕಿ.ಮೀ. ದೂರದಲ್ಲಿರುವ ಸೂರ್ಯನವರೆಗೂ ಹೋಗುವುದಿಲ್ಲ.
- ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಎಲ್ 1 ಎಂಬ ಸನ್-ಅರ್ಥ್ ಲ್ಯಾಗ್ರೇಂಜ್ ಪಾಯಿಂಟ್ನಲ್ಲಿಇಸ್ರೊ ಆದಿತ್ಯ-ಎಲ್ 1 ಸ್ಥಾಪಿಸಲಿದೆ. ಭೂಮಿ ಮತ್ತು ಸೂರ್ಯ ನಡುವೆ ಇಂಥ 5 ಬಿಂದುಗಳಿದ್ದು, ಭೂಮಿಯ ಗುರುತ್ವಾಕರ್ಷಣೆ ಕೊನೆಗೊಳ್ಳುವ ಜಾಗಗಳಾಗಿವೆ.
ಲ್ಯಾಗ್ರೇಂಜ್ ಪಾಯಿಂಟ್
- ಲ್ಯಾಗ್ರೇಂಜ್ ಪಾಯಿಂಟ್ಗೆ ಈ ಹೆಸರು ಬಂದಿದ್ದು ಇಟಾಲಿಯನ್- ಫ್ರೆಂಚ್ ಗಣಿತಜ್ಞ ಜೋಸೆಫ್ ಲೂಯಿಸ್ನಿಂದಾಗಿ. ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯ ಕೊನೆಯ ಬಿಂದುಗಳು ಸಂದಿಸುವ ಈ ಜಾಗದಲ್ಲಿ ಯಾವುದೇ ವಸ್ತು ಸ್ಥಿರವಾಗಿ ನಿಲ್ಲುತ್ತದೆ.
- ಈ ಎಲ್-1 ಪಾಯಿಂಟ್ನಿಂದ ತುಸು ಮುಂದಕ್ಕೆ ಹೊರಟರೆ ಸೂರ್ಯನ ಸೆಳೆತ ಆರಂಭಗೊಳ್ಳುತ್ತದೆ. ಸೂರ್ಯನ ಗುರುತ್ವಾಕರ್ಷಣೆಗೆ ಒಳಗಾಗದಂತೆ ಅಲ್ಲಿ ನೌಕೆಯನ್ನು ಪಾರ್ಕ್ ಮಾಡಿದರೆ, ಮುಂದಿನ 5 ವರ್ಷಗಳವರೆಗೆ ಸೂರ್ಯನ ಆಂತರ್ಯದ ಬದಲಾವಣೆಗಳನ್ನು ಹತ್ತಿರದಿಂದ ಅಧ್ಯಯನಿಸಲು ಸಾಧ್ಯ.
- ಎಲ್1ರಲ್ಲಿ ಸ್ಥಾಪನೆಗೊಳ್ಳುವ ಉಪಗ್ರಹಗಳ ದೊಡ್ಡ ಅನುಕೂಲವೆಂದರೆ, ಇಲ್ಲಿ ಯಾವುದೇ ಗ್ರಹಣದ ಪರಿಣಾಮವಿಲ್ಲ.
ಉದ್ದೇಶ
- ಸೂರ್ಯನ ಕರೋನಾ ಭಾಗದಿಂದ ಹೊರಹೊಮ್ಮುವ ಬಿರುತಾಪದ ಕಾರ್ಯವಿಧಾನ ಮತ್ತು ಸೌರಜ್ವಾಲೆಗಳನ್ನು ನೈಜ ಸಮಯದಲ್ಲಿ ಸಮೀಪದಿಂದ ಅಧ್ಯಯನಿಸುವುದು.
- ಸೂರ್ಯನ ಪ್ರಮುಖ ಭಾಗಗಳಾದ ದ್ಯುತಿಗೋಳ, ವರ್ಣಗೋಳ ಮತ್ತು ಹೊರ ಪದರಗಳನ್ನು ಅಧ್ಯಯನ ಮಾಡಲು ಈ ನೌಕೆ 7 ಪೇಲೋಡ್ಗಳನ್ನು ಹೊಂದಿದೆ. ನಾಲ್ಕು ವಿಶೇಷ ಉಪಕರಣಗಳು ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ ಅಧ್ಯಯನ ಮಾಡುತ್ತವೆ. ಉಳಿದ ಮೂರು ಉಪಕರಣಗಳು ಸ್ಥಳೀಯ ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ಮಾಡುತ್ತವೆ.
- ಭೂಮಿಯ ವಾತಾವರಣದ ಮೇಲೆ ಸೌರ ಜ್ವಾಲೆಗಳು ಬೀರುವ ಪರಿಣಾಮಗಳನ್ನು ಅವಲೋಕಿಸುವುದು ಈ ಯೋಜನೆಯ ಬಹುಮುಖ್ಯ ಉದ್ದೇಶ.
ಸೌರ ಮಾರುತಗಳನ್ನು ಅರಿಯುವುದು ಏಕೆ ಮುಖ್ಯ?
- ಮೂಲತಃ ಸೂರ್ಯನು ಅನಿಲಗಳ ಚೆಂಡು. ಇದು ಶೇ. 92.1 ಹೈಡ್ರೋಜನ್ ಮತ್ತು ಶೇ.7.8 ಹೀಲಿಯಂ ಅನಿಲವನ್ನು ಹೊಂದಿದೆ. ಸೂರ್ಯನಲ್ಲಿ ಕಾಂತೀಯ ಚಟುವಟಿಕೆಗಳು ನಿರಂತರ ನಡೆಯುತ್ತಲೇ ಇರುತ್ತವೆ. ಇವು 11 ಅಥವಾ 12 ವರ್ಷಗಳ ಮಧ್ಯಂತರದಲ್ಲಿ ಉತ್ತುಂಗ ತಲುಪುತ್ತವೆ. ಸೌರಚಕ್ರದ ಈ ಉತ್ತುಂಗ ಸ್ಥಿತಿಯೇ ಭೂಮಿಗೆ ಮಾರಕ.
- ಸೌರ ಕಿರೀಟದಲ್ಲಿರುವ (ಕೊರೋನ) ಪ್ಲಾಸ್ಮಾ ಕಣಗಳು ಸೆಕೆಂಡಿಗೆ 100 ಕಿ.ಮೀ ಗಳಷ್ಟು ವೇಗದಲ್ಲಿ ಅಡ್ಡಾದಿಡ್ಡಿಯಾಗಿ ಧಾವಿಸುತ್ತಿರುತ್ತವೆ. ಪ್ರಭಾಗೋಳದ ಬಳಿ ಇವನ್ನು ಗುರುತ್ವವು ಹಿಡಿದಿಟ್ಟುಕೊಂಡಿರುತ್ತದೆ. ಇನ್ನೂ ಎತ್ತರದಲ್ಲಿ ಪ್ರಭಾವಲಯವು ಕಡಿಮೆ ಆಗುವುದರಿಂದ ಅಯಾಣುಗಳು ದೂರ ದೂರಕ್ಕೆ ಚಿಮ್ಮುತ್ತವೆ. ಹೀಗೆ ಚಿಮ್ಮಿದ ಶಕ್ತಿಶಾಲಿ ಕಣಗಳು ಶಬ್ದದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಧಾವಿಸುತ್ತವೆ. ಸೌರ ಚಕ್ರದ ಸಮಯದಲ್ಲಿ ಶತಕೋಟಿ ಟನ್ ಬಿಸಿ ಅನಿಲಗಳು (ಜ್ವಾಲೆಗಳು) ಭೂ ವಾತಾವರಣವನ್ನು ಪ್ರವೇಶಿಸುತ್ತವೆ. ಭೂಮಿಯ ವಾತಾವರಣದಲ್ಲಿ ಇವು ಕಾಂತೀಯ ಬಿರುಗಾಳಿಗಳನ್ನು ಸೃಷ್ಟಿಸುತ್ತವೆ. ಇದನ್ನು ಸೌರ ಚಂಡಮಾರುತ ಎಂದು ಕರೆಯಲಾಗುತ್ತದೆ. ವಿಜ್ಞಾನಿ ಯೂಜೆನ್ ಪಾರ್ಕರ್ (1927–2022) ಅವರು ಇದರ ಅಸ್ತಿತ್ವ ಮತ್ತು ವೇಗವನ್ನುಊಹಿಸಿದ್ದರು.
- 1989ರಲ್ಲಿ ಸೌರಮಾರುತವು ಕೆನಡಾದ ಕ್ವಿಬೆಕ್ ನಗರದ ಮೇಲೆ ಭಾರಿ ಪರಿಣಾಮ ಬೀರಿತ್ತು. ಸುಮಾರು 12 ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಂಡಿತ್ತು. ಜನರು ಸಾಕಷ್ಟು ತೊಂದರೆಗೀಡಾಗಿದ್ದರು.
- ಸೌರ ಮಾರುತಗಳಿಂದಾಗಿ ಭೂಮಿಯ ಹೊರಗಿನ ವಾತಾವರಣವು ಅನೇಕ ಬಾರಿ ಬಿಸಿಯಾಗುತ್ತದೆ. ಇದು ನೇರವಾಗಿ ಉಪಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಭೂಮಿ ಮೇಲೆ ಬೀಸುವ ಘೋರ ಚಂಡಮಾರುತಗಳಿಗಿಂತ 20 ಪಟ್ಟು ಹೆಚ್ಚಿನ ಆರ್ಥಿಕ ನಷ್ಟವನ್ನು ಇವು ಉಂಟುಮಾಡಬಹುದು.
- ಸೂರ್ಯನು ಸೃಷ್ಟಿಸುವ ಚಂಡಮಾರುತಗಳು ಬಾಹ್ಯಾಕಾಶ ನಿಲ್ದಾಣಗಳಲ್ಲಿನ ಗಗನಯಾತ್ರಿಗಳ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ. ಈ ಅವಘಡಗಳನ್ನು ತಪ್ಪಿಸಲು ಸೂರ್ಯನ ಅಧ್ಯಯನ ಬಹಳ ಮುಖ್ಯವಾಗಿದೆ.
ಸೌರ ಅಧ್ಯಯನ ನಡೆಸುತ್ತಿರುವ ಅಂತರಿಕ್ಷ ವೀಕ್ಷಣಾಲಯಗಳು
- ಹಿನೋಡೆ: ಜಪಾನಿನ ಜಾಕ್ಸಾ ಸಂಸ್ಥೆಯು 2006ರಲ್ಲಿ ಉಡಾವಣೆ ಮಾಡಿದೆ
- ಸೋಹೋ: ಅಮೆರಿಕದ ನಾಸಾ ಸಂಸ್ಥೆಯು1995ರಲ್ಲಿ ಉಡಾವಣೆಮಾಡಿದೆ. ಸೂರ್ಯನ ವೀಕ್ಷಣೆಯ ಜತೆಗೆ ಸೂರ್ಯನ ಸಮೀಪಿಸುವ ಧೂಮಕೇತುಗಳನ್ನು ಪತ್ತೆ ಮಾಡುತ್ತದೆ. ಈವರೆಗೆ, 4,000ಕ್ಕೂ ಹೆಚ್ಚು ಧೂಮಕೇತುಗಳನ್ನು ಪತ್ತೆ ಮಾಡಿದೆ
- ಮ್ಯಾಗ್ನೆಟಿಕ್ ಮಲ್ಟಿ ಸ್ಕೇಲ್: ಇದನ್ನು ಯೂರೋಪಿಯನ್ ಸ್ಪೇಸ್ ಏಜೆನ್ಸಿ 2015ರಲ್ಲಿ ಉಡಾವಣೆಮಾಡಿತು. ಅಯಸ್ಕಾಂತ ಕ್ಷೇತ್ರ ಮತ್ತು ರಿಕನೆಕ್ಷನ್ ವಿದ್ಯಮಾನಗಳನ್ನು ಅಧ್ಯಯನ ಮಾಡುತ್ತದೆ
- ಯೂಲಿಸಿಸ್: 1990ರಲ್ಲಿ ಯೂರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ನಾಸಾ ಜಂಟಿಯಾಗಿ ಉಡಾವಣೆಮಾಡಿವೆ. ಇದು ಸೂರ್ಯಗೋಳದ ಉತ್ತರ ಧ್ರುವವನ್ನು ವೀಕ್ಷಣೆ ಮಾಡುತ್ತದೆ
- ಸ್ಟೀರಿಯೋ ಎ ಮತ್ತು ಬಿ: ಈ ಜೋಡಿ ನೌಕೆಗಳನ್ನು ನಾಸಾ 2006ರಲ್ಲಿ ಉಡಾವಣೆಮಾಡಿತು. ಸೂರ್ಯನನ್ನು ಬೇರೆ ಬೇರೆ ಕೋನಗಳಿಂದ ವೀಕ್ಷಿಸಿ ಅದರ ಮೂರು ಆಯಾಮದ ಚಿತ್ರಗಳನ್ನು ಒದಗಿಸಿವೆ
- ಸೋಲಾರ್ ಡೈನಮಿಕ್ ಅಬ್ಸರ್ವೇಟರಿ: ನಾಸಾ 2010ರಲ್ಲಿ ಈ ವೀಕ್ಷಣಾಲಯವನ್ನು ಉಡಾವಣೆಮಾಡಿದೆ. ಇದು ಅಯಸ್ಕಾಂತ ಕ್ಷೇತ್ರವನ್ನು ದಾಖಲು ಮಾಡುತ್ತಿದೆ
- ಪಾರ್ಕರ್ ವೀಕ್ಷಣಾಲಯ: 2018ರಲ್ಲಿ ನಾಸಾ ಇದನ್ನು ಉಡಾವಣೆ ಮಾಡಿದ್ದು ಸೂರ್ಯನ ಕಿರೀಟವನ್ನು ಪಾರ್ಕರ್ ಹಾದುಹೋಗುವಂತೆ ವಿನ್ಯಾಸಮಾಡಲಾಗಿದೆ
- ಸೋಲಾರ್ ಆರ್ಬೈಟರ್: ನಾಸಾ 2020 ರಲ್ಲಿ ಉಡಾವಣೆಮಾಡಿದ್ದು, ಈ ವೀಕ್ಷಣಾಲಯ ಸೂರ್ಯನನ್ನು ದೀರ್ಘ ವೃತ್ತ ಕಕ್ಷೆಯಲ್ಲಿ ಸುತ್ತುತ್ತಿದೆ
ಸೂರ್ಯ
- ಸೌರ ಮಂಡಲದ ಮಹಾನಕ್ಷತ್ರ, ಭೂಮಿಗೆ ಅತ್ಯಂತ ಸಮೀಪದಲ್ಲಿರುವ ನಕ್ಷತ್ರ.15 ಕೋ ಟಿ ಕಿ.ಮೀ ದೂರದಲ್ಲಿದೆ. ಆಕಾಶದಲ್ಲಿ ನಮ್ಮ ದೃಷ್ಟಿಗೆ ನಿಲುಕುವ ದೊಡ್ಡ ಕಾಯ. ಇದರಿಂದ ಬೆಳಕು ಹೊರಬಿದ್ದು, ಭೂಮಿ ತಲುಪಲು 8 ನಿಮಿಷ ಬೇಕಾಗುತ್ತದೆ. ಸೂರ್ಯ ಎಷ್ಟು ದೊಡ್ಡವನು ಎಂದರೆ ಅವನೊಳಗೆ 13 ಲಕ್ಷ ಭೂಮಿಗಳನ್ನು ಕೂಡಿಡಬಹುದು. ವಿಜ್ಞಾನಿಗಳು ಇದನ್ನು ಸಾಮಾನ್ಯ ನಕ್ಷತ್ರ ಎಂದು ಕರೆಯುತ್ತಾರೆ, ಏಕೆಂದರೆ ಇದಕ್ಕಿಂತ ನೂರು ಪಟ್ಟು ದೊಡ್ಡದಿರುವ ನಕ್ಷತ್ರಗಳು ನಮ್ಮ ಗ್ಯಾಲಕ್ಸಿಗಳಲ್ಲಿವೆ. ಆರ್ದಾ ನಕ್ಷತ್ರ ನಮ್ಮ ಸೂರ್ಯನಿಗಿಂತ 1,400 ಪಟ್ಟು ದೊಡ್ಡದು.
- ಇಡೀ ಸೂರ್ಯ ಅನಿಲಗಳಿಂದಾಗಿದೆ. ಭೂಮಿಯಂತೆ ಗಟ್ಟಿ ಬಂಡೆಯಲ್ಲ. ಅಲ್ಲಿಯ ಮೇಲ್ಮೈ ತಾಪಮಾನ 5,700 ಕೆಲ್ವಿನ್ ಅಂದರೆ 5,426.85 ಡಿಗ್ರಿ ಸೆಲ್ಸಿಯಸ್ ಇದೆ.ಇದರ ಗರ್ಭದ ಉಷ್ಣಾಂಶ 1,50,00,000 ಕೆಲ್ವಿನ್ (14,999,726.85 ಡಿಗ್ರಿ ಸೆಲ್ಸಿಯಸ್)
ನಿಮಗಿದು ತಿಳಿದಿರಲಿ
- 1859ರಲ್ಲೂ ಅದೇ ಸೆಪ್ಟೆಂಬರ್ 1. ಜಗತ್ತಿನ ಟೆಲಿಗ್ರಾಫ್ ಬಳಕೆದಾರರೆಲ್ಲ ಶಾರ್ಟ್ ಸರ್ಕೀಟ್ನಿಂದ ಕರೆಂಟ್ ತಗುಲಿ ಗಾಬರಿಗೊಂಡಿದ್ದರು. ಭೂಮಂಡಲಕ್ಕೆ ಅಪ್ಪಳಿಸಿದ ಸೌರಮಾರುತಗಳೇ ಇದಕ್ಕೆ ಕಾರಣ ಎಂದು ಬ್ರಿಟಿಷ್ ಖಗೋಳಶಾಸ್ತ್ರಜ್ಞ ರಿಚರ್ಡ್ ಕ್ಯಾರಿಂಗ್ಟನ್ ಅಚ್ಚರಿಯ ಸಂಶೋಧನೆಯನ್ನು ಜಗತ್ತಿನ ಮುಂದಿಟ್ಟಿದ್ದ. ಸೂರ್ಯನಲ್ಲಿ ಪ್ರತಿ 11 ವರ್ಷಗಳಿಗೊಮ್ಮೆ ಇಂಥ ಭೀಕರ ಮಾರುತಗಳ ಸೌರಚಕ್ರ ಹುಟ್ಟಿಕೊಳ್ಳುತ್ತದೆ. 2012ರ ಕೊನೆಯಲ್ಲಿ ಅದೃಷ್ಟವಶಾತ್ ಭೂಮಿ ಘೋರ ಸೌರಮಾರುತದಿಂದ ತಪ್ಪಿಸಿಕೊಂಡಿತ್ತು. ಈಗ ಮುಂದಿನ ವರ್ಷ (2024) ಅಂಥದ್ದೇ ಸೌರ ಜ್ವಾಲೆಗಳು ಏಳುವ, ಭೂಮಿಯತ್ತ ಸಾಗಿಬರುವ ಸಾಧ್ಯತೆಗಳಿವೆ ಎನ್ನುವುದು ಖಗೋಳ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ.