Published on: June 10, 2021
ಕನಿಷ್ಠ ಬೆಂಬಲ ಬೆಲೆ
ಕನಿಷ್ಠ ಬೆಂಬಲ ಬೆಲೆ
ಸುದ್ಧಿಯಲ್ಲಿ ಏಕಿದೆ ? 2021-22ನೇ ಸಾಲಿಗೆ ಭತ್ತ, ಹತ್ತಿ ಸೇರಿದಂತೆ ಮುಂಗಾರು ಹಂಗಾಮಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ಹೆಚ್ಚಳ ಮಾಡಿದೆ.
ಕೃಷಿ ಚಟುವಟಿಕೆಗೆ ಉತ್ತೇಜನ
- ಕೋವಿಡ್ ಎರಡನೇ ಅಲೆ, ಲಾಕ್ಡೌನ್ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬೆಂಬಲ ಬೆಲೆ ಹೆಚ್ಚಳದಿಂದ ನೆರವಾಗಲಿದೆ. ಜೊತೆಗೆ, ಇದರಿಂದ ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ದೊರೆಯಲಿದೆ.
- ಯಾವ ಬೆಳೆಗಳನ್ನು ಬೆಳೆಯಬೇಕೆಂಬ ಬಗ್ಗೆ ನಿರ್ಧರಿಸಲೂ ಸಹಾಯಕವಾಗಲಿದೆ.
- ಈಗಾಗಲೇ ಮುಂಗಾರು ಮಾರುತ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಗೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಕೃಷಿ ಚುಟವಟಿಕೆಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ.
ಕನಿಷ್ಠ ಬೆಂಬಲ ಬೆಲೆಯನ್ನು ಏಕೆ ಘೋಷಿಸಲಾಗುತ್ತದೆ ?
- ದೇಶದಲ್ಲಿ ಕೃಷಿ ಉತ್ಪಾದನೆಯನ್ನು ಸುಸ್ಥಿತಿಯಲ್ಲಿಡಲು ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಘೋಷಿಸುತ್ತದೆ. ಏಕೆಂದರೆ ದರ ಕುಸಿತಕ್ಕೀಡಾದಾಗ ರೈತರು ಸಂಕಷ್ಟಕ್ಕೀಡಾಗಿ, ಉತ್ಪಾದನೆಯಿಂದ ವಿಮುಖರಾಗುವುದು ಸಹಜ. ಇದು ಆಹಾರ ಭದ್ರತೆಗೆ ಧಕ್ಕೆ ತರಬಹುದು. ಹಣದುಬ್ಬರ ಹೆಚ್ಚಿಸಬಹುದು. ಇದನ್ನು ತಡೆಯಲು ಸರಕಾರ ಕೃಷಿ ವೆಚ್ಚ ಮತ್ತು ದರ ಆಯೋಗದ ಶಿಫಾರಸಿನ ಮೇರೆಗೆ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ.
ಕನಿಷ್ಠ ಬೆಂಬಲ ಬೆಲೆಯ ಸವಾಲೇನು?
- ನಾನಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದಾಗ, ಹಣದುಬ್ಬರ ಉಂಟಾಗುವ ಸಾಧ್ಯತೆಯೂ ಇದೆ ಎಂದು ಡಿಬಿಎಸ್ ಬ್ಯಾಂಕ್ನ ವರದಿ ಈ ಹಿಂದೆ ಹೇಳಿದೆ.
- ಎಂಎಸ್ಪಿಯಲ್ಲಿ 1 ಪರ್ಸೆಂಟ್ ಏರಿಸಿದರೂ, ಹಣದುಬ್ಬರದಲ್ಲಿ 15 ಬೇಸಿಸ್ ಪಾಯಿಂಟ್ (ಶೇ.15) ಹೆಚ್ಚಳವಾಗಲಿದೆ.
- ಎಂಎಸ್ಪಿ ಹೆಚ್ಚಳದಿಂದ ಖಾಸಗಿ ಮಾರುಕಟ್ಟೆಯ ಬೆಳವಣಿಗೆಗೆ ಅಡಚಣೆಯಾಗಬಹುದು. ಅಂಥ ಸಂದರ್ಭದಲ್ಲಿ ಸರಕಾರ ರೈತರಿಗೆ ತೊಂದರೆಯಾಗದಂತೆ ಎಲ್ಲ ಬೆಳೆಗಳನ್ನು ಖರೀದಿಸಿ, ದಾಸ್ತಾನಿಟ್ಟು, ವಿಲೇವಾರಿ ಮಾಡುವ ಸವಾಲು ಇರಲಿದೆ.
- ಎಂಎಸ್ಪಿ ವ್ಯವಸ್ಥೆಯು ಇತರ ಬೆಳೆಗಳಿಗಿಂತ ಆಹಾರ ಧಾನ್ಯಗಳ ಉತ್ಪಾದನೆಗೆ ಉತ್ತೇಜಿಸಿವೆ. ಇದರ ಪರಿಣಾಮ ಬೇಳೆ ಕಾಳುಗಳಿಗೆ (ದ್ವಿದಳ ಧಾನ್ಯಗಳು, ಎಣ್ಣೆ ಕಾಳು) ನೆಲ ಮತ್ತು ಜಲ ಸಂಪನ್ಮೂಲ ಲಭಿಸದೆ ದುಬಾರಿ ಆಮದನ್ನು ನೆಚ್ಚಿಕೊಳ್ಳುವಂತಾಗಿದೆ.
- ಹೆಚ್ಚುವರಿ ಧಾನ್ಯಗಳನ್ನು ರಫ್ತು ಮಾಡುವ ಸಂದರ್ಭ ಡಬ್ಲುಟಿಒ ಆಕ್ಷೇಪಿಸುವ ನಿರೀಕ್ಷೆ ಇದೆ.
ಎಂಎಸ್ಪಿ ಲೆಕ್ಕಾಚಾರ ಹೇಗೆ? :
- ಕೇಂದ್ರ ಸರಕಾರದ ಸೂತ್ರ: ಕೇಂದ್ರ ಸರಕಾರ ‘ಎ2+ಎಫ್ಎಲ್+ 50%’ ಎಂಬ ಸೂತ್ರದ ಅಡಿಯಲ್ಲಿಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತಿದೆ. ಇದರಲ್ಲಿ’ಎ2′ ಎಂದರೆ ರೈತರಿಗೆ ಬೀಜ, ಗೊಬ್ಬರ ಇತ್ಯಾದಿಗೆ ತಗಲುವ ವೆಚ್ಚ ( ಆಕ್ಚುವಲ್ ಪೇಯ್ಡ್ ಕಾಸ್ಟ್) ಮತ್ತು ‘ಎಫ್ಎಲ್’ ಎಂದರೆ ಕುಟುಂಬ ಕಾರ್ಮಿಕರ ವೆಚ್ಚವನ್ನು (ರೈತ ಕುಟುಂಬದ ಸದಸ್ಯರು) ಪರಿಗಣಿಸಿ ಅದರ ಮೇಲೆ 50% ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ನೀಡುತ್ತಿರುವುದಾಗಿ ಕೇಂದ್ರ ಸರಕಾರ ಹೇಳುತ್ತದೆ.
- ಸ್ವಾಮಿನಾಥನ್ ವರದಿಯ ಶಿಫಾರಸು: ಎಂ.ಎಸ್ ಸ್ವಾಮಿನಾಥನ್ ವರದಿ ಪ್ರಕಾರ, ಕೃಷಿ ಉತ್ಪಾದನೆಗೆ ತಗಲುವ ಸಮಗ್ರ ವೆಚ್ಚ ಮತ್ತು ಅದರ 50% ಮೊತ್ತವನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನೀಡಬೇಕು. ಸಮಗ್ರ ವೆಚ್ಚದಲ್ಲಿಕುಟುಂಬ ಕಾರ್ಮಿಕ ವೆಚ್ಚ (ಫ್ಯಾಮಿಲಿ ಲೇಬರ್), ಗುತ್ತಿಗೆ ಆಧಾರಿತ ಭೂಮಿಗೆ ತಗಲುವ ಗುತ್ತಿಗೆ ವೆಚ್ಚ ಕೂಡ ಒಳಗೊಳ್ಳುತ್ತದೆ.
ಖರೀದಿಸುವವರು ಯಾರು?
- ಕೇಂದ್ರ ಸರಕಾರ ಭಾರತೀಯ ಆಹಾರ ನಿಗಮ (ಎಫ್ಸಿಎ) ಮೂಲಕ ಆಹಾರ ಧಾನ್ಯಗಳನ್ನು ಖರೀದಿಸುತ್ತದೆ. ರಾಜ್ಯ ಸರಕಾರಗಳ ಸಹಯೋಗದಲ್ಲೂ ಈ ಪ್ರಕ್ರಿಯೆ ನಡೆಯುತ್ತದೆ. ಕೆಲವು ರಾಜ್ಯಗಳು ಎಂಎಸ್ಪಿ ಜತೆಗೆ ಬೋನಸ್ ಕೂಡ ಘೋಷಿಸುತ್ತವೆ.