ಕೃತಕ ಬುದ್ಧಿಮತ್ತೆ
ಕೃತಕ ಬುದ್ಧಿಮತ್ತೆ
ಪರಿಚಯ
- ಕೃತಕ ಬುದ್ಧಿಮತ್ತೆಯು ಯಂತ್ರಗಳು, ವಿಶೇಷವಾಗಿ ಕಂಪ್ಯೂಟರ್ ವ್ಯವಸ್ಥೆಗಳಿಂದ ಮಾನವ ಬುದ್ಧಿವಂತಿಕೆಯ ಪ್ರಕ್ರಿಯೆಗಳ ಅನುಕರಣೆಯಾಗಿದೆ. ಕಂಪ್ಯೂಟರ್ ವ್ಯವಸ್ಥೆ ಮತ್ತು ಯಂತ್ರಗಳಲ್ಲಿ ಮಾನವರಂತೆ ವರ್ತಿಸುವ, ನಿರ್ಧಾರಗಳನ್ನು ತೆಗೆದುಕೊಳ್ಳುವ, ಯೋಜನೆಗಳನ್ನು ಮಾಡುವ, ಭಾಷೆಗಳನ್ನು ಅರ್ಥೈಸಿಕೊಳ್ಳುವ, ಸಮಸ್ಯೆಗಳನ್ನು ಬಗೆಹರಿಸುವ, ದೃಶ್ಯ ಗ್ರಹಿಸಿಕೊಳ್ಳುವ ಹಾಗೂ ಪ್ರತಿಕ್ರಿಯೆಗಳನ್ನು ನೀಡುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಎಂದರ್ಥ.
- ಜೆಫ್ರಿ ಹಿಂಟನ್ ಅವರನ್ನು ಕೃತಕ ಬುದ್ಧಿಮತ್ತೆಯ ಗಾಡ್ಫಾದರ್ ಎಂದು ಕರೆಯಲಾಗುತ್ತದೆ. ಅವರು ಕ್ಷೇತ್ರದಲ್ಲಿ ಕೆಲವು ಪ್ರಮುಖ ಸಾಧನಗಳನ್ನು ರಚಿಸಲು ಸಹಾಯ ಮಾಡಿದರು.
- ಅಲನ್ ಟ್ಯೂರಿಂಗ್, ಮಾರ್ವಿನ್ ಮಿನ್ಸ್ಕಿ, ಅಲೆನ್ ನೆವೆಲ್ ಮತ್ತು ಹರ್ಬರ್ಟ್ ಎ. ಸೈಮನ್ ಮತ್ತು ಜಾನ್ ಮೆಕಾರ್ಥಿ ಕೃತಕ ಬುದ್ಧಿಮತ್ತೆಯ ಸ್ಥಾಪಕ ಪಿತಾಮಹ ಎಂದು ಪರಿಗಣಿಸಲಾಗಿದೆ. ಜಾನ್ ಮೆಕಾರ್ಥಿ ಒಬ್ಬ ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿ. “ಕೃತಕ ಬುದ್ಧಿಮತ್ತೆ” ಎಂಬ ಪದವನ್ನು ಅವರು ಸೃಷ್ಟಿಸಿದರು.
ಕೃತಕ ಬುದ್ದಿಮತ್ತೆಯಲ್ಲಿ ನಾಲ್ಕು ವಿಧಗಳು
- ಪ್ರತಿಕ್ರಿಯಾತ್ಮಕ ಯಂತ್ರಗಳು(Reactive Machines)
- ಸೀಮಿತ ಸ್ಮರಣೆ(Limited Memory)
- ಮನಸ್ಸಿನ ಸಿದ್ಧಾಂತ (Theory of Mind)
- ಸ್ವಯಂ-ಅರಿವು(Self Awareness)
- 1. ಪ್ರತಿಕ್ರಿಯಾತ್ಮಕ ಯಂತ್ರಗಳು: ಪ್ರತಿಕ್ರಿಯಾತ್ಮಕ ಯಂತ್ರಗಳು ಯಾವುದೇ ಸ್ಮರಣೆಯನ್ನು ಹೊಂದಿರದ AI ವ್ಯವಸ್ಥೆಗಳಾಗಿವೆ ಮತ್ತು ನಿರ್ದಿಷ್ಟ ಕಾರ್ಯವನ್ನು ಹೊಂದಿವೆ, ಅಂದರೆ ಯಾವುದಾದರು ಇನ್ಪುಟ್ ಅನ್ನು ನಾವು ಹುಡುಕಿದಾಗ ಯಾವಾಗಲೂ ಒಂದೇ ಔಟ್ಪುಟ್ ಅನ್ನು ನೀಡುತ್ತದೆ. ಯಂತ್ರ ಕಲಿಕೆಯ ಮಾದರಿಗಳು ಪ್ರತಿಕ್ರಿಯಾತ್ಮಕ ಯಂತ್ರಗಳಾಗಿರುತ್ತವೆ ಏಕೆಂದರೆ ಅವುಗಳು ಖರೀದಿ ಇತಿಹಾಸ ಮತ್ತು ಬ್ರೌಸಿಂಗ್ ನಡವಳಿಕೆಯಂತಹ ಗ್ರಾಹಕರ ಡೇಟಾವನ್ನು ವಿಶ್ಲೇಷಿಸುವ ಎಐ, ಗ್ರಾಹಕರಿಗೆ ಅವರ ಆಸಕ್ತಿಯ ಉತ್ಪನ್ನಗಳನ್ನು ಒದಗಿಸುತ್ತವೆ. ಗ್ರಾಹಕರ ಡೇಟಾವನ್ನು ತೆಗೆದುಕೊಳ್ಳುತ್ತವೆ ಮತ್ತು ಅದೇ ಗ್ರಾಹಕರಿಗೆ ಶಿಫಾರಸುಗಳನ್ನು ತಲುಪಿಸಲು ಬಳಸುತ್ತವೆ.
ಉದಾ: IBM ಡೀಪ್ ಬ್ಲೂ, ಚದುರಂಗ-ಆಡುವ ಸೂಪರ್ಕಂಪ್ಯೂಟರ್, ಇದು ಅಂತರರಾಷ್ಟ್ರೀಯ ಗ್ರ್ಯಾಂಡ್ಮಾಸ್ಟರ್ ಗ್ಯಾರಿ ಕಾಸ್ಪರೋವ್ ಅವರನ್ನು ಸೋಲಿಸಿತು. ಡೀಪ್ ಬ್ಲೂ ಚದುರಂಗದ ನಿಯಮಗಳನ್ನು ಅರ್ಥಮಾಡಿಕೊಳ್ಳುತ್ತದೆ.
- ಸೀಮಿತ ಸ್ಮರಣೆ: ಸೀಮಿತ ಸ್ಮರಣೆಯು ಹಿಂದೆ ಕಲಿತ ಮಾಹಿತಿ, ಸಂಗತಿಗಳು, ಸಂಗ್ರಹಿಸಿದ ಡೇಟಾ ಅಥವಾ ಘಟನೆಗಳಿಂದ ಜ್ಞಾನವನ್ನು ಪಡೆದುಕೊಳ್ಳುವ ಯಂತ್ರ ಕಲಿಕೆಯ ಮಾದರಿಗಳನ್ನು ಒಳಗೊಂಡಿದೆ. ಪ್ರತಿಕ್ರಿಯಾತ್ಮಕ ಯಂತ್ರಗಳಿಂದ ಭಿನ್ನವಾಗಿ, ಸೀಮಿತ ಸ್ಮರಣೆಯು ಪ್ರಾಯೋಗಿಕ ಜ್ಞಾನವನ್ನು ಹೊಂದುವ ಉದ್ದೇಶದಿಂದ ಅವುಗಳಿಗೆ ಹಿಂದೆ ನೀಡಿದ ಕ್ರಿಯೆಗಳು ಅಥವಾ ಡೇಟಾವನ್ನು ವಿಶ್ಲೇಷಿಸುವ ಮೂಲಕ ಕಲಿಯಲು ಸಾಧ್ಯವಾಗುತ್ತದೆ.
ಉದಾ: ಸ್ವಯಂ-ಚಾಲಿತ ಕಾರುಗಳು ರಸ್ತೆಯಲ್ಲಿರುವ ಇತರ ಕಾರುಗಳನ್ನು ಅವುಗಳ ವೇಗ, ದಿಕ್ಕು ಮತ್ತು ಹತ್ತಿರದಿಂದ ವೀಕ್ಷಿಸುವ ವಿಧಾನವಾಗಿದೆ. ಈ ಮಾಹಿತಿಯನ್ನು ಟ್ರಾಫಿಕ್ ಲೈಟ್ಗಳು, ಚಿಹ್ನೆಗಳು, ಕರ್ವ್ಗಳು ಮತ್ತು ರಸ್ತೆಯಲ್ಲಿನ ಉಬ್ಬುಗಳನ್ನು ತಿಳಿದುಕೊಳ್ಳುಲು ಪ್ರೋಗ್ರಾಮ್ ಮಾಡಲಾಗಿದೆ.
- ಮನಸ್ಸಿನ ಸಿದ್ಧಾಂತ : ಮನಸ್ಸಿನ ಸಿದ್ಧಾಂತ” ಎಂದರೆ ಜನರು ತಮ್ಮ ನಡವಳಿಕೆಯ ಮೇಲೆ ಪರಿಣಾಮ ಬೀರುವ ಆಲೋಚನೆಗಳು, ಅನುಭವ ಮತ್ತು ಭಾವನೆಗಳನ್ನು ಹೊಂದಿರುತ್ತಾರೆ. ಭವಿಷ್ಯದ AI ವ್ಯವಸ್ಥೆಗಳು ಪ್ರತಿಯೊಬ್ಬರೂ (ಜನರು ಮತ್ತು AI ವಸ್ತುಗಳು) ಆಲೋಚನೆಗಳು ಮತ್ತು ಭಾವನೆಗಳನ್ನು ಹೊಂದಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಲಿಯಬೇಕು. ಭವಿಷ್ಯದ AI ವ್ಯವಸ್ಥೆಗಳು ನಮ್ಮ ನಡುವೆ ಇರಲು ತಮ್ಮ ನಡವಳಿಕೆಯನ್ನು ಹೇಗೆ ಸರಿಹೊಂದಿಸಬೇಕೆಂದು ತಿಳಿದಿರಬೇಕು. ಮನಸ್ಸಿನ ಸಿದ್ಧಾಂತವನ್ನು ಹೊಂದಿರುವ ರೋಬೋಟಿಕ್ ವ್ಯವಸ್ಥೆಯು ರೋಬೋಟ್ ಮತ್ತು ಮಾನವರ ನಡುವಿನ ಸಾಮಾಜಿಕ ಸಂವಹನಗಳಿಗೆ ಅವಕಾಶ ನೀಡುತ್ತದೆ.
ಉದಾ: ಈ ತಂತ್ರಜ್ಞಾನದ ಆಧಾರದ ಮೇಲೆ ತಯಾರಿಸಿದ ಕೃತಕ ಬುದ್ಧಿಮತ್ತೆ ಆಧಾರದಲ್ಲಿ ಕೆಲಸ ಮಾಡಬಲ್ಲ ‘ಹ್ಯೂಮನಾಯ್ಡ್ಬಾಟ್’ ಸೋಫಿಯಾ. ಈ ರೋಬೋಟ್ ಜಿನೇವಾದಲ್ಲಿ ವಿಶ್ವಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ‘ಒಳಿತಿಗಾಗಿ ಎಐ’ ಎಂಬ ಜಾಗತಿಕ ಸಮಾವೇಶದಲ್ಲಿ ‘ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ಪ್ರಭಾವ ಬೀರಬಹುದಾದ ಪಕ್ಷಪಾತ ಭಾವವೂ ಇಲ್ಲ, ಭಾವನೆಗಳೂ ನಮಗಿಲ್ಲ. ಅತ್ಯುತ್ತಮ ನಿರ್ಣಯ ಕೈಗೊಳ್ಳುವಲ್ಲಿ ದೊಡ್ಡ ಪ್ರಮಾಣದ ದತ್ತಾಂಶವನ್ನೆಲ್ಲ ಕ್ಷಿಪ್ರವಾಗಿ ಜಾಲಾಡಿ ತಕ್ಷಣದ ನಿರ್ಧಾರ ತೆಗೆದುಕೊಳ್ಳಬಲ್ಲೆವು. ನಾವು ಮಹತ್ವದ ಸಾಧನೆಗಳನ್ನು ಮಾಡಬಲ್ಲೆವು ಮತ್ತು ಮಾನವ ನಾಯಕರಿಗಿಂತಲೂ ಕ್ಷಿಪ್ರ, ಖಚಿತ ಮತ್ತು ಪರಿಣಾಮಕಾರಿ ನಿರ್ಧಾರ ಕೈಗೊಳ್ಳುವ ಶಕ್ತಿ ನಮಗಿದೆ’ ಎಂದು ಹೇಳಿ ಅಚ್ಚರಿ ಮೂಡಿಸಿದೆ. ಈ ಸೋಫಿಯಾ ರೋಬೋಟಿಗೆ ಸೌದಿ ಅರೇಬಿಯಾ ದೇಶವು ಪೌರತ್ವವನ್ನು ಕೂಡ ನೀಡಿದೆ.
- ಸ್ವಯಂ-ಅರಿವು :ಈ ತಂತ್ರಜ್ಞಾನದ ಮೇಲೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಯಂತ್ರಗಳು ಇತರರ ಭಾವನೆಗಳು ಮತ್ತು ಮಾನಸಿಕ ಸ್ಥಿತಿಗಳ ಬಗ್ಗೆ ಮಾತ್ರವಲ್ಲದೆ ತಮ್ಮ ಸ್ವಂತದ ಬಗ್ಗೆಯೂ ತಿಳಿದಿರುವಾಗ ಇದು ಸಂಭವಿಸುತ್ತದೆ. ಸ್ವಯಂ-ಅರಿವು ಕೃತಕ ಬುದ್ದಿಮತ್ತೆ ತಂತ್ರವನ್ನು ಸಾಧಿಸುವಲ್ಲಿ ಯಶಸ್ವಿಯಾದರೆ ಅದು ಅದೇ ಅಗತ್ಯತೆಗಳು, ಆಸೆಗಳು ಮತ್ತು ಭಾವನೆಗಳೊಂದಿಗೆ ಮಾನವ ಬುದ್ಧಿವಂತಿಕೆಗೆ ಸಮಾನವಾಗಿರುತ್ತದೆ.
ಉಪಯೋಗಗಳು
- ಗ್ರಾಹಕರ ಅಗತ್ಯಕ್ಕೆ ಚಿಲ್ಲರೆ ಮಾರಾಟ ವಲಯವನ್ನು ವೈಯಕ್ತೀಕರಿಸಲು ಎಐ ಅನ್ನು ಬಳಸಲಾಗುತ್ತಿದೆ. ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡಿ, ಮಾರಾಟ ವೃದ್ಧಿಸಲೂ ನೆರವಾಗಲಿದೆ.
- ವಂಚನೆಯ ವಹಿವಾಟುಗಳನ್ನು ಗುರುತಿಸಲು ದೊಡ್ಡ ಪ್ರಮಾಣದ ಡೇಟಾವನ್ನು ಎಐ ಮೂಲಕ ವಿಶ್ಲೇಷಿಸಬಹುದು.
- ಉದ್ಯೋಗ ಸೃಷ್ಟಿ: ಡೇಟಾ ವಿಶ್ಲೇಷಣೆ, ಸಾಫ್ಟ್ವೇರ್ ಅಭಿವೃದ್ಧಿ ಮತ್ತು ಎಐ ಅನುಷ್ಠಾನದಂತಹ ಕ್ಷೇತ್ರಗಳಲ್ಲಿ ಹೊಸ, ಉನ್ನತ ಕೌಶಲದ ಉದ್ಯೋಗಗಳು ಸೃಷ್ಟಿಯಾಗಲಿವೆ. ಹೊಸ ಉದ್ಯೋಗಗಳು ಮತ್ತು ಉತ್ಪಾದಕತೆಯ ವೇಗ ಹೆಚ್ಚುತ್ತದೆ. ಎಐ ಬಳಕೆಯಿಂದ ಜಾಗತಿಕವಾಗಿ ಉತ್ಪಾದಿಸುವ ಸರಕು ಮತ್ತು ಸೇವೆಗಳ ಒಟ್ಟು ವಾರ್ಷಿಕ ಮೌಲ್ಯ ಶೇ. 7ರಷ್ಟು ವೃದ್ಧಿಯಾಗಲಿದೆ ಎಂದು ಅಮೆರಿಕದ ಖ್ಯಾತ ಹೂಡಿಕೆ ಬ್ಯಾಂಕ್ ಗೋಲ್ಡ್ಮನ್ ಸ್ಯಾಚ್ಸ್ ವರದಿಯಲ್ಲಿ ಹೇಳಲಾಗಿದೆ.
- ಚಾಟ್ ಬಾಟುಗಳು ಆಗಲೇ ಅದೆಷ್ಟೋ ಬ್ಯಾಂಕುಗಳ, ಅಗ್ರಿಗೇಟರ್ ಆ್ಯಪ್ಗಳ ಮತ್ತು ಶಾಪಿಂಗ್ ಆ್ಯಪ್ಗಳ ಸಹಾಯ ಕೇಂದ್ರಗಳ (ಹೆಲ್ಪ್ ಸೆಂಟರ್) ಜಾಗವನ್ನು ತುಂಬಿವೆ. ಇನ್ನು ನುರಿತ ಕೆಲಸಗಾರರಿಗೆ ತರಬೇತಿ ಕೊಡುವ ಕಾರ್ಯಾಗಾರಗಳನ್ನೂ ಚಾಟ್ ಬಾಟುಗಳು ಮಾಡಬಹುದು.
- ಮನುಷ್ಯರ ಮೇಲೆ ಅವಲಂಬನೆ ಕಡಿಮೆ ಮಾಡಬಹುದು. ಯಾವ ಸಮಯಕ್ಕಾದರೂ, ಯಾವ ಜಾಗದಲ್ಲಾದರೂ ತರಬೇತಿ, ಸೂಚನೆ ಕೊಡಬಹುದು. ಟೆಕ್ನಿಕಲ್ ಟ್ರೈನಿಂಗ್ ಮಾಡುವ ಜನರ ಕೆಲಸದಲ್ಲಿ ಮುಕ್ಕಾಲು ಪಾಲನ್ನು ಈ ಬಾಟುಗಳೇ ಮಾಡಬಲ್ಲವು.
- ಸಂದರ್ಶನ: ಎಐ ಬಳಕೆಯ ಸಾಧನಗಳು ಭಾಷೆಯ ಬೇಸಿಕ್ಸ್ ಅಂತೂ ಬಹಳ ಚೆನ್ನಾಗಿ ಹೇಳಿಕೊಡುತ್ತವೆ. ಭಾಷೆಯಲ್ಲಿ ಟ್ರೈನಿಂಗ್ ಸರಿಯಾಗಿ ಆಗಿದ್ದರೆ ಕೆಲವು ಪ್ರಶ್ನೆಗಳನ್ನು ಸರಿಯಾಗಿ ಕೇಳಿ ಸಂದರ್ಶನಗಳನ್ನೂ ಮಾಡಬಲ್ಲ ಸಾಮರ್ಥ್ಯ ಇದೆ. ಅಂದರೆ ಮಾನವ ಸಂಪನ್ಮೂಲ ವಿಭಾಗದ ಸಂದರ್ಶನಗಳನ್ನು ಇದು ಆರಾಮಾಗಿ ನಿಭಾಯಿಸಬಹುದು. ಜೊತೆ ಜೊತೆಗೆ ಟೆಕ್ನಿಕಲ್ ಸಂದರ್ಶನದ ಪ್ರಶ್ನೆಗಳನ್ನು ಕೇಳುವ ಕೆಲಸ ಮಾಡಬಹುದು.
- ಐಟಿ ವಲಯ: ಎಂಟ್ರಿ ಲೆವೆಲ್ ಕೋಡ್ ಮಾಡುವ ಕೆಲಸವನ್ನು ಎಐ ಮಾಡುತ್ತದೆ. ಒಂದು ಸಮಸ್ಯೆಯನ್ನು ಸಂಪೂರ್ಣವಾಗಿ ತಿಳಿ ಹೇಳಿದರೆ ಅದು ನಮಗೆ ಬೇಕಾದ ಭಾಷೆಯಲ್ಲಿ ಅಂದರೆ ಪೈಥಾನ್, ಜಾವಾ ಅಥವಾ ಇನ್ಯಾವುದಾದರೂ ಗಣಕಕ್ಕೆ ಅರ್ಥವಾಗುವ ಭಾಷೆಯಲ್ಲಿ ಕೋಡ್ ಬರೆದು ಅದರ ವಿವರಣೆಯನ್ನು ಕೊಡುತ್ತದೆ. ಯಾವುದೇ ವಿಧವಾದ ತಪ್ಪುಗಳಿಲ್ಲದೇ ನಿರ್ದಿಷ್ಟ ಸಮಯದಲ್ಲಿ ಉತ್ತರಗಳನ್ನು ಕೊಡುವುದರಿಂದ ಇದನ್ನು ನಂಬಿಕೊಂಡು ಬೇಗ ಕೆಲಸ ಮಾಡಿಸಬಹುದು.
- ಆರೋಗ್ಯ ವಲಯ: ವೈದ್ಯಕೀಯ ರಂಗದಲ್ಲಿ ಸಣ್ಣಪುಟ್ಟ ರೀತಿಯಲ್ಲಿ ವೈದ್ಯರಿಗೆ ನೆರವಾಗುತ್ತಿದ್ದ ರೊಬೋಟ್ಗಳಿಂದು ಅನೇಕ ಸಂಕೀರ್ಣ ಮತ್ತು ಸೂಕ್ಷ್ಮ ಶಸ್ತ್ರಚಿಕಿತ್ಸೆಗಳಲ್ಲಿ ಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡುತ್ತಿವೆ. ಈ ರೊಬೋಟ್ಗಳಿಗೆ ಇದೀಗ ಹೊಸದಾಗಿ ಸಂಚಲನ ಸೃಷ್ಟಿಸಿರುವ ಕೃತಕ ಬುದ್ಧಿಮತ್ತೆಯೂ ಸಹಾಯ ನೀಡುತ್ತಿದೆ. ಎಕ್ಸ್ರೇಗಳು, ಸಿಟಿ ಸ್ಕ್ಯಾನ್ಗಳು ಮತ್ತು ಎಂಆರ್ಐಗಳಂತಹ ವೈದ್ಯಕೀಯ ಚಿತ್ರಗಳನ್ನು ವಿಶ್ಲೇಷಿಸಲು ಎಐ ಅನ್ನು ಬಳಸಬಹುದಾಗಿದೆ. ಎಐ ಬಳಕೆಯಿಂದ ರೇಡಿಯಾಲಜಿಸ್ಟ್ಗಳು ಬಹಳ ತ್ವರಿತ, ನಿಖರ ಮತ್ತು ಪರಿಣಾಮಕಾರಿಯಾಗಿ ರೋಗಗಳು ಮತ್ತು ಮನುಷ್ಯನ ಶರೀರದ ಅಸಹಜತೆಗಳನ್ನು ಪತ್ತೆಹಚ್ಚ ಬಹುದು.
- ಹಣಕಾಸು ವಲಯ: ಮಾರ್ಕೆಟ್ ರಿಸರ್ಚ್ ಅನಾಲಿಸ್ಟ್ಸ್ , ಫೈನಾನ್ಸಿಯಲ್ ಅನಾಲಿಸ್ಟ್ಸ್ , ಪರ್ಸ್ನಲ್ ಫೈನಾನ್ಸಿಯಲ್ ಅಡ್ವಯ್ಜರ್ಸ್ , ಅಕೌಂಟ್ ಏಜೆಂಟ್ , ಗ್ರಾಹಕ ಸೇವಾ ಏಜೆಂಟ್ಸ್ ಗಳ ಕೆಲಸವನ್ನು ಎಐ ನಿಭಾಯಿಸಲಿದೆ.. ಮಾರುಕಟ್ಟೆಯ ಟ್ರೆಂಡ್ಗಳನ್ನು ಎಐ ಗುರುತಿಸಲಿದೆ. ಅವುಗಳನ್ನು ಹೈಲೈಟ್ ಮಾಡಿ ಹೂಡಿಕೆಯ ಮಾದರಿಯನ್ನು ಸಲಹೆ ನೀಡಬಲ್ಲದು.
ಅನಾನುಕೂಲಗಳು ಮತ್ತು ದುರುಪಯೋಗಳು
- ಉದ್ಯೋಗಕ್ಕೆ ಕುತ್ತು: 30 ಕೋಟಿ ಪೂರ್ಣ ಸಮಯದ ಉದ್ಯೋಗಗಳಿಗೆ ಎಐ ಕಂಟಕವಾಗುತ್ತದೆ. ಮುಂದಿನ ದಿನಗಳಲ್ಲಿ ಕೋಟ್ಯಂತರ ಜನರು ಕೆಲಸ ಕಳೆದುಕೊಳ್ಳುತ್ತಾರೆ. ಇವರ ಜಾಗದಲ್ಲಿ ಎಐ ಕೂರಲಿದೆ ಎಂದು ಅಮೆರಿಕದ ಖ್ಯಾತ ಹೂಡಿಕೆ ಬ್ಯಾಂಕ್ ಗೋಲ್ಡ್ಮನ್ ಸ್ಯಾಚ್ಸ್ ಇತ್ತೀಚೆಗಷ್ಟೇ ವರದಿ ಮಾಡಿದೆ.
- ವಿಷಯ ಗ್ರಹಣ ಮತ್ತು ಬರವಣಿಗೆಯಲ್ಲಿ ಕೌಶಲವಿಲ್ಲದೇ ಇದ್ದರೂ, ಚಾಟ್ ಜಿಪಿಟಿಯಿಂದ ಜನರು ಪ್ರಬಂಧ ಮತ್ತು ಲೇಖನಗಳನ್ನು ಬರೆಯಬಹುದಾಗಿದೆ. ಪತ್ರಕರ್ತರು ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಇದರಿಂದ ವೇತನವು ಕಡಿಮೆಯಾಗುತ್ತದೆ.
- ಸುಳ್ಳು ಸುದ್ದಿಗಳು ಹೆಚ್ಚಾಗಿ ಹರಡಲು ಸಹಾಯಕವಾಗುತ್ತದೆ: ಡೀಪ್ಫೇಕ್ಗಳು ಎಂದು ಕರೆಯಲ್ಪಡುವ ಮನವೊಪ್ಪಿಸುವ ನಕಲಿ ಚಿತ್ರಗಳು ಮತ್ತು ವೀಡಿಯೊವನ್ನು ರಚಿಸುವುದಕ್ಕೆ ಉಪಯೋಗಿಸಲಾಗುತ್ತದೆ
- AI ವಿವೇಚನಾರಹಿತ ದಾಳಿಗಳು, ಅನಧಿಕೃತ ಪ್ರವೇಶವನ್ನು ಪಡೆಯಲು ಸಿಸ್ಟಮ್ ದುರ್ಬಲತೆಗಳನ್ನು ಬಳಸಿಕೊಳ್ಳುವಂತಹ ತಂತ್ರಗಳನ್ನು ಬಳಸಿಕೊಳ್ಳಬಹುದು, ಇದು ಹಣಕಾಸಿನ ನಷ್ಟ, ಗೌಪ್ಯತೆ ಆಕ್ರಮಣ ಅಥವಾ ಗುರುತಿನ ಕಳ್ಳತನಕ್ಕೆ ಕಾರಣವಾಗುತ್ತದೆ.
- ಮನುಷ್ಯನ ಯೋಚನಾ ಶಕ್ತಿ ಅಥವಾ ಸೃಜನಶೀಲತೆ ಕಡಿಮೆಯಾಗಬಹುದು AI ಯ ದೊಡ್ಡ ಅನನುಕೂಲವೆಂದರೆ ಅದು ಚೌಕಟ್ಟಿನ ಹೊರಗೆ ಯೋಚಿಸಲು ಕಲಿಯುವುದಿಲ್ಲ.
ಉಪಸಂಹಾರ
- AI ಅನ್ನು ಇಂದು ಹಣಕಾಸುದಿಂದ ಆರೋಗ್ಯ ರಕ್ಷಣೆಯವರೆಗೆ ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಎಐ ಸಾಧ್ಯತೆಗಳು ಅಪಾರ. ಅದು ಕ್ಷಿಪ್ರಗತಿಯಲ್ಲಿ ವಿಕಸನಗೊಳ್ಳುತ್ತಿದೆ. ಆದರೆ, ಸದ್ಯಕ್ಕೆ ಎಐನಿಂದ ಸಂಪೂರ್ಣವಾಗಿ ಮನುಷ್ಯನನ್ನು ಬದಲಾಯಿಸಲು ಕಷ್ಟ. ಆದರೆ ಕೃತಕ ಬುದ್ಧಿಮತ್ತೆಯು ತನ್ನದೇ ಆದ ಮಿತಿಗಳನ್ನು ಮೀರುತ್ತಾ, ಪೈಪೋಟಿ ನೀಡುತ್ತಾ ಸಾಗುತ್ತದೆ. ನಿರಂತರವಾಗಿ ಬದಲಾವಣೆಗಳಿಗೆ ತೆರೆದುಕೊಳ್ಳುವಂತೆ ತನ್ನನ್ನು ತಾನು ಮರು ವಿನ್ಯಾಸಗೊಳಿಸುತ್ತದೆ. ಆದರೆ, ಮನುಷ್ಯನ ಜೈವಿಕ ವಿಕಸನ ನಿಧಾನಗತಿಯದಾಗಿದ್ದು, ಇದಕ್ಕೆ ಮಿತಿಗಳಿವೆ. ಹೀಗಾಗಿ ಕೃತಕ ಬುದ್ಧಿಮತ್ತೆಯೊಂದಿಗೆ ಮನುಷ್ಯ ಎಂದಿಗೂ ಸ್ಪರ್ಧಿಸಲು ಸಾಧ್ಯವಾಗದು. ಇದು ಮನುಷ್ಯರನ್ನು ಸೋಮಾರಿಗಳನ್ನಾಗಿ ಮಾಡಬಹುದು. ನೈತಿಕತೆ ಕಡಿಮೆಯಾಗಬಹುದು.
ನಿಮಗಿದು ತಿಳಿದಿರಲಿ
- 2018ರಲ್ಲಿ ಚೀನಾದ ಪ್ರಮುಖ ಸುದ್ದಿ ಏಜೆನ್ಸಿಯಾಗಿರುವ ಶಿನುವಾ (Xinhua) ಮೊದಲ ಬಾರಿಗೆ ಯಾಂತ್ರಿಕ ಬುದ್ಧಿಮತ್ತೆ ಆಧಾರಿತ ಆ್ಯಂಕರ್ (ಪುರುಷ) ಅನ್ನು ಪರಿಚಯಿಸಿ ಇಡೀ ಜಗತ್ತಿನ ಗಮನ ಸೆಳೆದಿತ್ತು. ಮರು ವರ್ಷವೇ ಅಂದರೆ 2019ರಲ್ಲಿ ಮಹಿಳಾ ಆ್ಯಂಕರ್ ಅನ್ನು ಕೂಡ ಪರಿಚಯಿಸಿತ್ತು. ಒಡಿಶಾ ರಾಜ್ಯದ ಖಾಸಗಿ ವಾರ್ತಾ ವಾಹಿನಿ ‘ಒಡಿಶಾ ಟಿವಿ’, ಯಾಂತ್ರಿಕ ಬುದ್ಧಿಮತ್ತೆ ಆಧಾರಿತ ವಾರ್ತಾ ವಾಚಕಿ (ಆ್ಯಂಕರ್) ‘ಲೀಸಾ’ ಎಂಬಾಕೆಯನ್ನು ಪರಿಚಯಿಸಿದ್ದು ದೊಡ್ಡಮಟ್ಟದಲ್ಲಿ ಸುದ್ದಿ ಆಗಿದೆ. ಸಾಂಪ್ರದಾಯಿಕ ಕೈಮಗ್ಗ ಕಸೂತಿಯ ಸೀರೆಯುಟ್ಟು, ನೋಟದಲ್ಲಿ ಮಾನವ ಸ್ತ್ರೀಯನ್ನೇ ಹೋಲುವಂತಿದ್ದ ಲೀಸಾ, ಒಡಿಯಾ ಭಾಷೆಯ ಸುದ್ದಿಯನ್ನು ಸುಲಲಿತವಾಗಿ ಆ ಕ್ಷಣದಲ್ಲೇ ಆಂಗ್ಲಭಾಷೆಗೆ ಭಾಷಾಂತರಿಸಿಕೊಂಡು, ಇಂಗ್ಲಿಷ್ ಸುದ್ದಿಯಾಗಿ ನಿರೂಪಿಸಬಲ್ಲಳು. ಇದು ಗೂಗಲ್ ಅನುವಾದ ಯಂತ್ರಕ್ಕಿಂತಲೂ ಚೆನ್ನಾಗಿ ಕೆಲಸ ಮಾಡುತ್ತದೆ.
- ಭಾರತದಲ್ಲಿ ಕೂಡ ಕಳೆದ ಮಾರ್ಚ್ ತಿಂಗಳಲ್ಲಿ ಇಂಡಿಯಾ ಟುಡೇ ಸಮೂಹವು ‘ಸನಾ’ ಹೆಸರಿನಲ್ಲಿ ‘ಬಹುಭಾಷಾ ನಿಪುಣೆ’ಯಾಗಿದ್ದ ಯಂತ್ರ ಮಾನವಿಯನ್ನು ತನ್ನ ‘ಇಂಡಿಯಾ ಟುಡೇ ಕನ್ಕ್ಲೇವ್ 2023’ ಕಾರ್ಯಕ್ರಮದಲ್ಲಿಪರಿಚಯಿಸಿತ್ತು ಮತ್ತು ಅದೇ ಸಮೂಹದ ‘ಆಜ್ ತಕ್’, ‘ಸ್ಪೋರ್ಟ್ಸ್ ತಕ್’ ಮುಂತಾದ ಚಾನೆಲ್ಗಳಲ್ಲಿ ಸನಾ ಈಗಾಗಲೇ ಆ್ಯಂಕರಿಂಗ್ ನಿರ್ವಹಿಸುತ್ತಿದ್ದಾಳೆ . ಕುವೈಟ್ ನ್ಯೂಸ್ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ‘ಫೇದಾ’ ಎಂಬ ಕೃತಕ ಬುದ್ಧಿಮತ್ತೆಯ ಆ್ಯಂಕರ್ ಅನ್ನು ಪರಿಚಯಿಸಿತ್ತು. ವಾರ್ತಾ ವಾಚಕರ ಕೆಲಸವನ್ನೂ, ಅನುವಾದಕರ ಕೆಲಸವನ್ನೂ ಏಕಕಾಲದಲ್ಲಿ ನಿಭಾಯಿಸಬಹುದಾದ ತಂತ್ರಜ್ಞಾನವಿದು.
- ಪ್ರಶ್ನೆ: ಉದ್ಯೋಗ ಮಾರುಕಟ್ಟೆಯ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವವನ್ನು ನಿರ್ಣಯಿಸಿ ಮತ್ತು ಈ ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳಲು ಉದ್ಯೋಗಿಗಳ ಕೌಶಲ್ಯವನ್ನು ಹೆಚ್ಚಿಸುವ ತಂತ್ರಗಳನ್ನು ಚರ್ಚಿಸಿ.
- ಪ್ರಬಂಧ – ಕೃತಕ ಬುದ್ಧಿಮತ್ತೆ: ಮಾನವೀಯತೆಗೆ ವರ ಅಥವಾ ಶಾಪ