Published on: December 21, 2021
ಮಹಿಳೆಯರ ವಿವಾಹದ ವಯಸ್ಸು
ಮಹಿಳೆಯರ ವಿವಾಹದ ವಯಸ್ಸು
ಸುದ್ಧಿಯಲ್ಲಿ ಏಕಿದೆ? ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.
- ಸದ್ಯ, ಪುರುಷರಿಗೆ ಕನಿಷ್ಠ ವಿವಾಹದ ವಯಸ್ಸು 21 ವರ್ಷ ಇದ್ದರೆ, ಮಹಿಳೆಯರಿಗೆ 18 ವರ್ಷ ಇದೆ.
ಜಯಾ ಜೇಟ್ಲಿ ಆಯೋಗ
- ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗದ ಕಾರ್ಯಪಡೆಯ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆರೋಗ್ಯ ಸಚಿವಾಲಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆಯನ್ನು ಕಳೆದ ವರ್ಷದ ಜೂನ್ನಲ್ಲಿ ರಚಿಸಲಾಗಿತ್ತು. ಈ ಕಾರ್ಯಪಡೆಯಲ್ಲಿ ಮಕ್ಕಳ ತಜ್ಞ ವಿಕೆ ಪಾಲ್ ಕೂಡ ಇದ್ದರು.
- ತಾಯ್ತನದ ವಯಸ್ಸು, ತಾಯಿಯ ಮರಣ ಪ್ರಮಾಣ ಕಡಿಮೆ ಮಾಡುವ ಅಗತ್ಯತೆಗಳು, ಪೌಷ್ಟಿಕಾಂಶದ ಮಟ್ಟಗಳ ಸುಧಾರಣೆ ಮತ್ತು ಇತರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಲಾಗಿತ್ತು. ಲೈಂಗಿಕ ಶಿಕ್ಷಣದ ಜಾರಿ ಮತ್ತು ಅದನ್ನು ಶಾಲಾ ಪಠ್ಯಕ್ರಮದಲ್ಲಿ ಪರಿಚಯಿಸಬೇಕು ಎಂದು ಕಾರ್ಯಪಡೆ ಶಿಫಾರಸು ಮಾಡಿದೆ
ಹಲವು ಕಾಯ್ದೆಗಳ ತಿದ್ದುಪಡಿ
- ಸಂಸತ್ನಲ್ಲಿ ಹಲವು ಕಾಯ್ದೆಗಳ ತಿದ್ದುಪಡಿಗಾಗಿ ಮಸೂದೆ ಮಂಡಿಸಬೇಕಾಗಿದೆ. ಮಹಿಳೆಯರ ಕನಿಷ್ಠ ವಿವಾಹ ವಯೋಮಿತಿ ಹೆಚ್ಚಿಸಲು ಪ್ರಮುಖವಾಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ. ತಿದ್ದುಪಡಿ ತಂದ ಬಳಿಕ ಹೊಸ ನಿರ್ಧಾರಗಳು ಜಾರಿಯಾಗಲಿವೆ.
ವಯಸ್ಸಿನ ಹೆಚ್ಚಳದಿಂದ ಆಗುವ ಪ್ರಯೋಜನಗಳು
- ಇದರಿಂದ ಮಹಿಳೆಯರ ಸಬಲೀಕರಣ ಸಾಧ್ಯವಾಗುತ್ತದೆ. ಜತೆಗೆ ಆರೋಗ್ಯ ದೃಷ್ಟಿಯಿಂದಲೂ ಈ ಕ್ರಮ ಒಳ್ಳೆಯದು
- ಹೆಣ್ಣು ಮಕ್ಕಳನ್ನು 21 ವರ್ಷಕ್ಕೆ ಮದುವೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಬೆಳೆದಿರುತ್ತಾರೆ. ಇದು ಸಹಜ ಹೆರಿಗೆಗೆ ಅನುಕೂಲವಾಗಲಿದ್ದು ಶಿಶು ಮರಣ ಪ್ರಮಾಣ ತಗ್ಗಲಿದೆ. ಶಿಶು ತೂಕ ಕೂಡ ಹೆಚ್ಚಾಗಲಿದೆ. ರಕ್ತದೊತ್ತಡ ಮತ್ತು ಅನಿಮಿಯಾ ಸಮಸ್ಯೆಯಿಂದ ಹೆಣ್ಣುಮಕ್ಕಳನ್ನು ರಕ್ಷಿಸುವುದಕ್ಕೆ ಇದು ಸಹಕಾರಿ.
- ಮದುವೆಯ ವಯಸ್ಸನ್ನು ಹೆಚ್ಚಿಸುವುದರಿಂದ ಸಹಜವಾಗಿ ಗರ್ಭ ಧರಿಸುವ ವಯಸ್ಸು ಕೂಡ ಅಧಿಕವಾಗಲಿದೆ. ಇದರಿಂದ ಪ್ರಸವ ಸಂದರ್ಭದಲ್ಲಿನ ತಾಯಿ ಮತ್ತು ಮಗುವಿನ ಮರಣವನ್ನು ಕಡಿಮೆ ಮಾಡಬಹುದಾಗಿದೆ
ವಯಸ್ಸು ಕಡಿಮೆ ಇರುವುದರಿಂದ ಆಗುವ ತೊಂದರೆಗಳು
- ಹೆಣ್ಣು ಮಕ್ಕಳನ್ನು 18 ವರ್ಷಕ್ಕೆ ಮದುವೆ ಮಾಡಿದರೆ, ಆ ವಯಸ್ಸಿನಲ್ಲಿ ಬಹಳಷ್ಟು ಮಂದಿ ದೈಹಿಕವಾಗಿ ದುರ್ಬಲರಾಗಿರುತ್ತಾರೆ. ಅವರು ಮದುವೆಯ ಬಗ್ಗೆ ಆಲೋಚನೆ ಕೂಡ ಮಾಡಿರುವುದಿಲ್ಲ. ಮದುವೆ ಬಳಿಕ ಯುವತಿಯು ಮಕ್ಕಳನ್ನು ಹೆರುವ ಒತ್ತಡಕ್ಕೂ ಒಳಗಾಗುತ್ತಾಳೆ. ಇದು ತಾಯಿ ಮತ್ತು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
- ಚಿಕ್ಕ ವಯಸ್ಸಿನಲ್ಲಿಯೇ ಗರ್ಭ ಧರಿಸುವುದರಿಂದ ಅಕಾಲಿಕ ಪ್ರಸವ ಮತ್ತು ರಕ್ತಸ್ರಾವಕ್ಕೆ ತುತ್ತಾಗುವರ ಸಂಖ್ಯೆ ಅಧಿಕವಾಗಿದೆ
- ಪ್ರಸವದ ವಯಸ್ಸು ಚಿಕ್ಕದಿದ್ದಾಗ ಪೌಷ್ಟಿಕಾಂಶದ ಕೊರತೆ, ರಕ್ತಹೀನತೆ, ವಿಟಮಿನ್ ಕೊರತೆ ಉಂಟಾಗಲಿದೆ. ಅದು ಹುಟ್ಟುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಜನಿಸುವ ಮಕ್ಕಳು ದೀರ್ಘಕಾಲದ ಡಯಾಬಿಟಿಸ್, ರಕ್ತದ ಒತ್ತಡ ಸೇರಿದಂತೆ ಹಲವು ಕಾಯಿಲೆಗೆಗಳಿಗೆ ತುತ್ತಾಗುವ ಸಾಧ್ಯತೆ ಇದೆ
ಆದಿವಾಸಿಗಳ ವಿರೋಧ
- ಪುರುಷ ಹಾಗೂ ಮಹಿಳೆಯರ ವಿವಾಹ ಕನಿಷ್ಠ ವಯೋಮಿತಿಯನ್ನು ಸಮಾನವಾಗಿ 21ಕ್ಕೆ ನಿಗದಿ ಮಾಡಿರುವುದನ್ನು ಹಲವರು ಸ್ವಾಗತಿಸಿದ್ದಾರೆ. ಈ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಆದಿವಾಸಿಗಳು ಈ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
- 2020ರ ಜನವರಿಯಲ್ಲಿ ಆದಿವಾಸಿಗಳ ಪಾರ್ಲಿಮೆಂಟ್ ಸಭೆ ನಡೆದು ಹೆಣ್ಣು ಮಕ್ಕಳ ವಿವಾಹದ ಕನಿಷ್ಠ ವಯೋಮಿತಿಯನ್ನು 18ರಿಂದ 16ಕ್ಕೆ ಹಾಗೂ ಗಂಡುಮಕ್ಕಳ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಮಾಡಿತ್ತು. ಇದಕ್ಕೆ ಹಲವು ವೈಜ್ಞಾನಿಕ ಕಾರಣಗಳನ್ನೂ ನೀಡಲಾಗಿತ್ತು. ಆದರೆ, ಈಗ ಅದನ್ನು ಪರಿಗಣಿಸುವುದಿರಲಿ ಸಾಮಾನ್ಯ ವರ್ಗದಂತೆ ಅರಣ್ಯ ಮೂಲದ ಆದಿವಾಸಿಗಳನ್ನೂ ಪರಿಗಣಿಸುವುದು ಅವೈಜ್ಞಾನಿಕ ಎಂದು ಆದಿವಾಸಿಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿರೋಧಕ್ಕೆ ಕಾರಣವೇನು?
- ಆದಿವಾಸಿಗಳ ಯೌವನದ ಹಾಗೂ ಬದುಕುವ ಸರಾಸರಿ ವಯಸ್ಸು ಇತರರಿಗಿಂತ ಕಡಿಮೆ ಇದೆ. ಅವರು ಅರಣ್ಯವಾಸಿಗಳಾಗಿರುವ ಹಿನ್ನೆಲೆಯಲ್ಲಿ ಇನ್ನೂ ಮುಖ್ಯವಾಹಿನಿಗೆ ಬಂದಿಲ್ಲ. ಅವರ ವಂಶವಾಹಿನಿ ಹಾಗೂ ಜೀವನ ಕ್ರಮದಿಂದಾಗಿ ಬಹುಬೇಗನೇ ಪ್ರೌಢಾವಸ್ಥೆಗೆ ಬರುತ್ತಾರೆ. ಅವರು 40 ವರ್ಷಕ್ಕೆಲ್ಲ ವೃದ್ಧರಾಗುತ್ತಾರೆ. ಅವರ ಜೀವಿತ ಅವಧಿ ಸರಾಸರಿ 55ರಿಂದ 60 ಮಾತ್ರ ಎನ್ನಲಾಗುತ್ತಿದೆ.
- ಈ ಹಿನ್ನೆಲೆಯಲ್ಲಿ 21 ವರ್ಷಕ್ಕೆ ವಿವಾಹವಾದಲ್ಲಿ ಅವರು ಬದುಕಿನ ಬಹುಭಾಗವನ್ನು ಆ ವೇಳೆಗಾಗಲೇ ಕಳೆದುಕೊಳ್ಳುತ್ತಾರೆ. ಇದು ಮಾವನ ಹಕ್ಕನ್ನು ಕಿತ್ತುಕೊಂಡಂತೆ ಎಂದು ಕರ್ನಾಟಕ ವಿಕಾಸ ವಾಹಿನಿ ಅಭಿಪ್ರಾಯಪಟ್ಟಿದೆ.
ಬೇಡಿಕೆ ಶಾಶ್ವತವಲ್ಲ
- ಆದಿವಾಸಿಗಳನ್ನು ಸಾಮಾನ್ಯ ವರ್ಗದಂತೆಯೇ ಸೇರಿಸಿ ಕಾನೂನು ರೂಪಿಸುವುದು ಅವೈಜ್ಞಾನಿಕ. ಈ ಹಿನ್ನೆಲೆಯಲ್ಲಿ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮೊದಲು ಮಾಡಬೇಕು. ಅವರ ಪುನರ್ವಸತಿ, ಅವರ ಆಹಾರ ಪದ್ಧತಿ ಸುಧಾರಣೆ, ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕು. ಅವರ ಬದುಕಿನ ಕ್ರಮ ಬದಲಾದ ನಂತರ ಅವರ ಶಾರೀರಿಕ ಸ್ಥಿತಿಯೂ ಬದಲಾಗುತ್ತದೆ. ಅಲ್ಲಿಯವರೆಗೆ ಅವರನ್ನು ಸಾಮಾನ್ಯ ವರ್ಗದಂತೆ ಸಾಮಾಜಿಕ ಕಟ್ಟುಪಾಡುಗಳಿಗೆ ತಳ್ಳಬಾರದು. ಅವರು ಮುಖ್ಯವಾಹಿನಿಗೆ ಬಂದ ನಂತರ ಸಾಮಾನ್ಯರಂತೆಯೇ ಪರಿಗಣಿಸಲಿ