Published on: September 27, 2021
‘ಒಂದು ರಾಷ್ಟ್ರ ಒಂದು ಚುನಾವಣೆ’
‘ಒಂದು ರಾಷ್ಟ್ರ ಒಂದು ಚುನಾವಣೆ’
‘ಒಂದು ರಾಷ್ಟ್ರ ಒಂದು ಚುನಾವಣೆ’ ಸದ್ಯಕ್ಕೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಹಣಕಾಸು, ಸಮಯ, ಆಡಳಿತಾತ್ಮಕ ಅನುಕೂಲದ ದೃಷ್ಟಿಯಿಂದ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳ ಚುನಾವಣೆಗಳು ನಡೆಯಬೇಕು ಎಂಬ ಚರ್ಚೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದೆ.
1952 ರಿಂದ 1967 ರ ವರೆಗೆ ನಡೆದಿತ್ತು ಏಕಕಾಲದಲ್ಲಿ ಚುನಾವಣೆ
- ದೇಶದ ಮೊದಲ ಚುನಾವಣೆ ನಡೆದಿದ್ದು 1952 ರಲ್ಲಿ. ದೇಶದಾದ್ಯಂತ ಏಕಕಾಲದಲ್ಲಿ ನಡೆದ ಚುನಾವಣೆಯಲ್ಲಿ 193 ದಶಲಕ್ಷ ಭಾರತೀಯರು ನೊಂದಾಯಿತ ಮತದಾರರಾಗಿದ್ದರು. ಈ ಪೈಕಿ ಅರ್ಧಕ್ಕೂ ಹೆಚ್ಚು ಜನ ಮತಚಲಾಯಿಸಿದ್ದರು. ಅಲ್ಲಿಂದ 1967 ರ ವರೆಗೆ ದೇಶದ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತಿತ್ತು.
- ಆದರೆ ಬಳಿಕ ಹಲವು ವಿಧಾನಸಭೆಗಳ ಅವಧಿ ಪೂರ್ವ ವಿಸರ್ಜನೆಯಿಂದಾಗಿ ಚುನಾವಣಾ ವೇಳಾಪಟ್ಟಿ ಬದಲಾವಣೆ ಆದವು. ಆದರೆ ಇದೀಗ ಮತ್ತೆ ಏಕಕಾಲದಲ್ಲಿ ದೇಶದ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕು ಎಂಬ ಚರ್ಚೆ ಶುರುವಾಗಿದೆ.
ಏಕಕಾಲದಲ್ಲಿ ಚುನಾವಣೆ ಲಾಭ ಏನು?
- ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಸುವುದರಿಂದ ಹಲವು ಲಾಭಗಳು ಇವೆ ಎಂಬುವುದು ಇದರ ಪರವಾಗಿ ವಾದ ಮಾಡುವವರ ಅಭಿಪ್ರಾಯ.
- ಭಾರತೀಯ ಚುನಾವಣಾ ಆಯೋಗ 1983 ರಲ್ಲಿ ತನ್ನ ವಾರ್ಷಿಕ ವರದಿಯಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಸೂಕ್ತ ಹಾಗೂ ಆರ್ಥಿಕ ಮಿತವ್ಯಯ ಸಾಧ್ಯ ಎನ್ನುವುದನ್ನು ಎತ್ತಿತೋರಿಸಿದೆ. 1952 ರಿಂದ 1967 ರ ವರೆಗೆ ಲೋಕಸಭೆ ಹಾಗೂ ರಾಜ್ಯಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು.
- ಪದೇ ಪದೇ ಚುನಾವಣೆ ನಡೆಯುವುದರಿಂದ ಸರ್ಕಾರಕ್ಕೆ ಕೋಟ್ಯಂತರ ವೆಚ್ಚತಗಲುತ್ತದೆ. ಅಲ್ಲದೆ ರಾಜಕೀಯ ಪಕ್ಷಗಳ ನಾಯಕರಿಗೂ ಹೆಚ್ಚಿನ ಒತ್ತಡ ಬೀಳುತ್ತದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚ, ಪ್ರಚಾರ ಕಾರ್ಯ ವೆಚ್ಚಗಳು ಹೆಚ್ಚಳವಾಗುತ್ತಿವೆ.
- ಈ ನಿಟ್ಟಿನಲ್ಲಿ ಏಕಕಾಲಕ್ಕೆ ಚುನಾವಣೆ ನಡೆದರೆ ಮಾನವ ಶ್ರಮ, ಸಮಯ ಮತ್ತು ಹಣ ಉಳಿತಾಯ ಆಗುತ್ತದೆ. ಅಧಿಕಾರಿಗಳಿಗೂ ಪದೇ ಪದೇ ಚುನಾವಣಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದ ಪ್ರಮೇಯ ಬರುವುದಿಲ್ಲ. ಇನ್ನು ನೀತಿ ಸಂಹಿತೆ ಜಾರಿಯಿಂದ ಅಭಿವೃದ್ದಿ ಯೋಜನೆಗಳೂ ಕುಂಠಿತ ಆಗುತ್ತದೆ ಎಂಬುವುದು ಬಿಜೆಪಿ ವಾದ. ಈ ನಿಟ್ಟಿನಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಯ ಅಗತ್ಯ ಇದೆ
ಎಲ್ಲೆಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದೆ?
- ಅಮೆರಿಕ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದೆ. ಆದರೆ ಅಲ್ಲಿರುವುದು ಅಧ್ಯಕ್ಷೀಯ ಪದ್ದತಿ. ಉಳಿದಂತೆ ಸ್ವೀಡನ್, ದಕ್ಷಿಣ ಆಫ್ರಿಕಾ, ಜರ್ಮನಿ, ಸ್ಪೇನ್, ಹಂಗೇರಿ, ಬೆಲ್ಜಿಯಂ ಮೊದಲಾದ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯುತ್ತದೆ. ಈ ನಿಟ್ಟಿನಲ್ಲಿ ಭಾರತದಲ್ಲೂ ಜಾರಿಗೊಳ್ಳಲಿ ಎಂಬುವುದು ಬಿಜೆಪಿ ಅಭಿಪ್ರಾಯ.
ಸವಾಲುಗಳು:
- ಭಾರತದ ಸಂಸದೀಯ ವ್ಯವಸ್ಥೆಯು ಅನುಸರಿಸುವ ಸಂಪ್ರದಾಯಗಳು ಮತ್ತು ನಿಯಮಗಳನ್ನು ಪರಿಗಣಿಸಿ ಸಿಂಕ್ರೊನೈಸೇಶನ್ ಒಂದು ಪ್ರಮುಖ ಸಮಸ್ಯೆಯಾಗಿದೆ. ಸರ್ಕಾರವು ಕೆಳಮನೆಗೆ ಜವಾಬ್ದಾರನಾಗಿರುತ್ತದೆ ಮತ್ತು ಸರ್ಕಾರವು ತನ್ನ ಅವಧಿಯನ್ನು ಪೂರ್ಣಗೊಳಿಸುವ ಮೊದಲು ಬೀಳುವ ಸಾಧ್ಯತೆಯಿದೆ ಮತ್ತು ಸರ್ಕಾರ ಬೀಳುವ ಕ್ಷಣಕ್ಕೆ ಚುನಾವಣೆ ನಡೆಯಬೇಕಿದೆ.
- ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳನ್ನು ಮನವೊಲಿಸುವುದು ಮತ್ತು ಒಟ್ಟುಗೂಡಿಸುವುದು ಕಷ್ಟ.
- ಏಕಕಾಲಿಕ ಚುನಾವಣೆಗಳನ್ನು ನಡೆಸಲು, ಇಸಿಐ ಎರಡು ಸೆಟ್ಗಳನ್ನು ಒದಗಿಸಬೇಕಾಗಿರುವುದರಿಂದ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು (ಇವಿಎಂ) ಮತ್ತು ಮತದಾರರ ಪರಿಶೀಲಿತ ಪೇಪರ್ ಆಡಿಟ್ ಟ್ರೇಲ್ಸ್ (ವಿವಿಪಿಎಟಿ) ಗಳ ಅವಶ್ಯಕತೆಗಳು ದ್ವಿಗುಣಗೊಳ್ಳುತ್ತವೆ (ಒಂದು ವಿಧಾನಸಭೆಗೆ ಚುನಾವಣೆಗೆ ಮತ್ತು ಎರಡನೆಯದು ಲೋಕಸಭೆಗೆ ).
- ಮತದಾನ ಸಿಬ್ಬಂದಿಯ ಹೆಚ್ಚುವರಿ ಅವಶ್ಯಕತೆ ಮತ್ತು ಉತ್ತಮ ಭದ್ರತಾ ವ್ಯವಸ್ಥೆಗಳೂ ಇರಲಿವೆ
ಚುನಾವಣೆ ಯಶಸ್ಸು ಹಣಬಲದ ಮೇಲೆ ನಿಂತಿರುವುದು ದುರದೃಷ್ಟಕರ
- ಅಂತೆಯೇ ಇತ್ತೀಚಿನ ದಿನಗಳಲ್ಲಿ ಚುನಾವಣೆ ಯಶಸ್ಸು ಹಣಬಲದ ಮೇಲೆ ನಿಂತಿರುವುದು ದುರದೃಷ್ಟಕರ, ವ್ಯಕ್ತಿತ್ವ, ಚರಿತ್ರೆ ಹಾಗೂ ಅಭ್ಯರ್ಥಿಗಳ ವರ್ಚಸ್ಸು ಮತ್ತು ವಿಶ್ವಾಸಾರ್ಹತೆಯನ್ನು ಅವಲಂಬಿಸಬೇಕು. ಪಾರದರ್ಶಕ ಚುನಾವಣೆಗಳು ನಡೆಯುವುದರಿಂದ ಪಕ್ಷ, ಅಭ್ಯರ್ಥಿ ಹಾಗೂ ಮತದಾರರ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಿ ದೇಶದಲ್ಲಿ ಮಹತ್ವದ ಬದಲಾವಣೆ ತರಲಿದೆ.
- ಆಳವಾದ ಅಧ್ಯಯನ ಮತ್ತು ಸಮಾಲೋಚನೆ, ಸವಿಸ್ತಾರವಾದ ಚರ್ಚೆ ನಡೆಯಬೇಕು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿರುವ ನಮಗೆ ಚುನಾವಣೆಯಲ್ಲಿ ಏಕರೂಪ ವ್ಯವಸ್ಥೆ ಜಾರಿಗೆ ತರುವುದು ಕಷ್ಟವೇನಲ್ಲ.
ಒಟ್ಟಿನಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ಸಾಧಕ-ಬಾಧಕಗಳು ಹಾಗೂ ಪ್ರಾಯೋಗಿಕವಾಗಿ ಇದು ಸಾಧ್ಯವೇ ಎಂಬ ನಿಟ್ಟಿನಲ್ಲಿ ಚಿಂತನ-ಮಂಥನ ನಡೆಯಬೇಕಿದೆ. ಜನಪ್ರತಿನಿಧಿಗಳು ಅಲ್ಲದೆ ಚುನಾವಣಾ ತಜ್ಞರ ಅಭಿಪ್ರಾಯವೂ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಚರ್ಚೆ ನಡೆಸಬೇಕಾಗಿದೆ. ಚರ್ಚೆಯಿಂದಷ್ಟೇ ಸಾಧಕ-ಬಾಧಕಗಳ ಕುರಿತಾಗಿ ಬೆಳಕು ಚೆಲ್ಲಲು ಸಾಧ್ಯ.