Published on: November 30, 2021
‘ಕನಿಷ್ಠ ಬೆಂಬಲ ಬೆಲೆ’
‘ಕನಿಷ್ಠ ಬೆಂಬಲ ಬೆಲೆ’
ಸುದ್ಧಿಯಲ್ಲಿ ಏಕಿದೆ ? ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಲು ಕೇಂದ್ರ ಸರಕಾರ ನಿರ್ಧರಿಸಿದ ನಂತರ, ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಕೊಟ್ಟು ವಿಸ್ತರಿಸಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂದಿದೆ.
ಎಂಎಸ್ಪಿಗೆ ಕಾನೂನು
- ದಿಲ್ಲಿಯ ಗಡಿಭಾಗದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್, ಹರಿಯಾಣದ ರೈತರು ಇದೀಗ ಎಲ್ಲ ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ವಿಸ್ತರಿಸಬೇಕು ಹಾಗೂ ಕಾನೂನು ರಚಿಸಿ ಕಡ್ಡಾಯಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಎಂಎಸ್ಪಿ ಏಕೆ ಅಗತ್ಯ?
- ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನದ ದರ ಕುಸಿದಾಗ ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವ ಮೂಲಕ ಮಧ್ಯಪ್ರವೇಶಿಸುತ್ತದೆ. ಇದರಿಂದ ರೈತರಿಗೆ ಖಾತರಿಯ ಆದಾಯ ಸಿಗುತ್ತದೆ. ನಿರ್ದಿಷ್ಟ ಬೆಳೆಗಳ ಕೊಯ್ಲಿನ ಸಮಯದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಸರಕಾರ ಪ್ರಕಟಿಸುತ್ತದೆ. ನಂತರ ಖರೀದಿ ಕೇಂದ್ರಗಳನ್ನು ಕೂಡ ತೆರೆದು ರೈತರಿಂದ ಬೆಳೆಯನ್ನು ಖರೀದಿಸುತ್ತದೆ.
- ಉತ್ಪಾದನೆಗೆ ತಗಲುವ ವೆಚ್ಚ, ವೆಚ್ಚದಲ್ಲಾಗುವ ಬದಲಾವಣೆ, ಮಾರುಕಟ್ಟೆ ಟ್ರೆಂಡ್, ಬೇಡಿಕೆ ಮತ್ತು ಪೂರೈಕೆ, ಅಂತಾರಾಷ್ಟ್ರೀಯ ದರ ಇತ್ಯಾದಿಗಳನ್ನು ಗಮನಿಸಿ ಎಂಎಸ್ಪಿಯನ್ನು ನಿಗದಿಪಡಿಸುತ್ತಾರೆ. ಸಾಮಾನ್ಯವಾಗಿ ಉತ್ಪಾದನಾ ವೆಚ್ಚದ 1.5 ಪಟ್ಟು ಮೊತ್ತವನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನೀಡುತ್ತಾರೆ.
ತಜ್ಞರ ಅಭಿಪ್ರಾಯವೇನು?
- ಎಲ್ಲ ಬೆಳೆಗಳಿಗೆ ಎಂಎಸ್ಪಿಯನ್ನು ಕಡ್ಡಾಯಗೊಳಿಸಿ ಕಾಯಿದೆ ಜಾರಿಗೊಳಿಸಿದರೆ, ಮಾರುಕಟ್ಟೆಯ ಪೂರೈಕೆ-ಬೇಡಿಕೆ ನೀತಿಗೆ ವಿರುದ್ಧವಾಗಲಿದೆ. ಇದರ ಪರಿಣಾಮ ಹಣದುಬ್ಬರ ಹೆಚ್ಚಲಿದೆ ಎಂದು ಬಹುತೇಕ ಅಭಿಪ್ರಾಯಪಡುತ್ತಾರೆ. ಕೆಲ ತಜ್ಞರು ಬೆಂಬಲಿಸಿದ್ದೂ ಇದೆ.
ಕನಿಷ್ಠ ಬೆಂಬಲ ಬೆಲೆ
- ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಎಂಬುದು ಕೃಷಿ ಉತ್ಪನ್ನದ ಬೆಲೆಯಲ್ಲಿ ಯಾವುದೇ ತೀವ್ರತರಹದ ಕುಸಿತ ಉಂಟಾದಾಗ ಕೃಷಿ ಉತ್ಪಾದಕರ ಸಹಾಯಕ್ಕೆ ಧಾವಿಸುವ ಒಂದು ರೂಪವಾಗಿದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಕೆಲವು ಬೆಳೆಗಳಿಗೆ ಬಿತ್ತನೆ ಕಾಲದ ಆರಂಭದಲ್ಲಿ ಭಾರತ ಸರ್ಕಾರವು ಕನಿಷ್ಠ ಬೆಂಬಲ ಬೆಲೆಗಳನ್ನು ಘೋಷಿಸುತ್ತದೆ. ಉತ್ಪಾದನೆ ಭಾರಿ ಹೆಚ್ಚಳವಾದ ವರ್ಷಗಳಲ್ಲಿ ಅತಿಯಾದ ಬೆಲೆ ಕುಸಿತದ ವಿರುದ್ಧ ಉತ್ಪಾದಕ ರೈತರನ್ನು ರಕ್ಷಿಸಲು ಎಂಎಸ್ಪಿ ಬೆಲೆಯನ್ನು ಭಾರತ ಸರ್ಕಾರ ನಿಗದಿಪಡಿಸುತ್ತದೆ.
- ಕನಿಷ್ಠ ಬೆಂಬಲ ಬೆಲೆಗಳು ಸರ್ಕಾರದಿಂದ ಕೃಷಿ ಉತ್ಪನ್ನಗಳಿಗೆ ನೀಡುವ ಖಾತರಿಯ ಬೆಲೆಯಾಗಿದೆ. ರೈತರಿಗೆ ಉಂಟಾಗುವ ಮಾರಾಟ ಯಾತನೆಯನ್ನು ಸರಿಪಡಿಸುವುದು ಮತ್ತು ಸಾರ್ವಜನಿಕ ವಿತರಣೆಗಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ.
- ಒಂದು ವೇಳೆ ಭಾರಿ ಬೆಳೆ ಉತ್ಪಾದನೆಯಾಗಿ ಸರಕುಗಳ ಮಾರುಕಟ್ಟೆ ಬೆಲೆ ಘೋಷಿತ ಕನಿಷ್ಠ ಬೆಲೆಗಿಂತ ಕಡಿಮೆಯಾಗಿದ್ದಲ್ಲಿ, ಸರ್ಕಾರಿ ಸಂಸ್ಥೆಗಳು ರೈತರು ನೀಡುವ ಸಂಪೂರ್ಣ ಪ್ರಮಾಣದ ಬೆಳೆಯನ್ನು ಘೋಷಿಸಿದ ಕನಿಷ್ಠ ಬೆಲೆಗೆ ಖರೀದಿಸುತ್ತವೆ.
ಎಂಎಸ್ಪಿಯ ಐತಿಹಾಸಿಕ ದೃಷ್ಟಿಕೋನ
- ಕನಿಷ್ಠ ಖಾತರಿಪಡಿಸಿದ ಬೆಲೆಗಳ ಮೂಲಕ, ಯಾವ ಕಾರಣಕ್ಕೂ ಇದಕ್ಕಿಂತ ಕಡಿಮೆಗೆ ಮಾರುಕಟ್ಟೆ ಬೆಲೆಗಳು ಕುಸಿಯದಂತೆ ಇದನ್ನು ರಚಿಸಲಾಗಿದೆ. 1970 ರ ದಶಕದ ಮಧ್ಯಭಾಗದವರೆಗೆ, ಸರ್ಕಾರವು ಎರಡು ರೀತಿಯ ಆಡಳಿತಾತ್ಮಕ ಬೆಲೆಗಳನ್ನು ಘೋಷಿಸುತ್ತಿತ್ತು.
- ಕನಿಷ್ಠ ಬೆಂಬಲ ಬೆಲೆಗಳು (ಎಂಎಸ್ಪಿ)
- ಖರೀದಿ ಬೆಲೆಗಳು
- ಎಂಎಸ್ಪಿಗಳು ಬೆಳೆಗಾರರಿಗೆ ಖಾತರಿಯನ್ನು ನೀಡುತ್ತಿದ್ದವು. ಇದರಿಂದ ಉತ್ಪಾದಕರಿಗೆ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಯಕವಾಗುತ್ತಿತ್ತು; ಮತ್ತು ಈಗಲೂ ಆಗುತ್ತಿದೆ. ಅಂದರೆ ಬಂಪರ್ ಬೆಳೆಯ ಸಂದರ್ಭದಲ್ಲಿಯೂ ಸಹ, ತಮ್ಮ ಉತ್ಪನ್ನಗಳ ಬೆಲೆಯು ಇದಕ್ಕಿಂತ ಕಡಿಮೆಗೆ ಕುಸಿಯುವುದಿಲ್ಲ ಎಂಬ ಖಾತರಿಯನ್ನು ಅವು ಬೆಳೆಗಾರರಿಗೆ ನೀಡುತ್ತವೆ.
- ಖರೀದಿ ಬೆಲೆ (ಪ್ರೊಕ್ಯುರ್ಮೆಂಟ್ ಪ್ರೈಸ್), ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್) ಮೂಲಕ ಬಿಡುಗಡೆ ಮಾಡಲು ‘ಎಫ್ಸಿಐ’ನಂತಹ ಸಾರ್ವಜನಿಕ ಸಂಸ್ಥೆಗಳು ದೇಶೀಯವಾಗಿ ಖರೀದಿಸುವ ಖಾರಿಫ್ ಮತ್ತು ರಾಬಿ ಧಾನ್ಯಗಳ ಖರೀದಿ ಬೆಲೆಗಳಾಗಿವೆ.
- ಸುಗ್ಗಿ ಪ್ರಾರಂಭವಾದ ಕೂಡಲೇ ಇದನ್ನು ಘೋಷಿಸಲಾಗುತ್ತದೆ. ಸಾಮಾನ್ಯವಾಗಿ ಈ ಖರೀದಿ ಬೆಲೆ ಮುಕ್ತ ಮಾರುಕಟ್ಟೆ ಬೆಲೆಗಿಂತ ಕಡಿಮೆಯಿರುತ್ತಿತ್ತು ಮತ್ತು ಎಂಎಸ್ಪಿಗಿಂತ ಹೆಚ್ಚಿರುತ್ತಿತ್ತು.
- ಎರಡು ಅಧಿಕೃತ ಬೆಲೆಗಳ ಘೋಷಣೆಯ ಈ ನೀತಿಯು, ಭತ್ತದ ವಿಷಯದಲ್ಲಿ 1973-74ರವರೆಗೆ ಕೆಲವು ವ್ಯತ್ಯಾಸಗಳೊಂದಿಗೆ ಮುಂದುವರಿಯಿತು. ಗೋಧಿಯ ವಿಷಯದಲ್ಲಿ ಇದನ್ನು 1969 ರಲ್ಲಿ ನಿಲ್ಲಿಸಲಾಯಿತು ಮತ್ತು ನಂತರ 1974-75ರಲ್ಲಿ ಒಂದು ವರ್ಷಕ್ಕೆ ಮಾತ್ರ ಪುನಃ ಪ್ರಾರಂಭಿಸಲಾಯಿತು.
- ಎಂಎಸ್ಪಿಯನ್ನು ಹೆಚ್ಚಿಸಲು ಹಲವಾರು ಬೇಡಿಕೆಗಳು ಇದ್ದುದರಿಂದ, 1975-76ರಲ್ಲಿ, ಪ್ರಸ್ತುತ ವ್ಯವಸ್ಥೆಯು ವಿಕಸನಗೊಂಡಿತು. ಇದರಲ್ಲಿ ಭತ್ತ (ಮತ್ತು ಇತರ ಖಾರಿಫ್ ಬೆಳೆಗಳು) ಮತ್ತು ಬಫರ್ ಸ್ಟಾಕ್ ಕಾರ್ಯಾಚರಣೆಗಳಿಗಾಗಿ ಗೋಧಿಯನ್ನು ಖರೀದಿಸಲು ಕೇವಲ ಒಂದೇ ಬೆಲೆಗಳನ್ನು ಘೋಷಿಸಲಾಯಿತು.
ಎಂಎಸ್ಪಿ ನಿರ್ಣಯ
- ಕನಿಷ್ಟ ಬೆಂಬಲ ಬೆಲೆಗಳು ಮತ್ತು ಇತರ ಬೆಲೆ ರಹಿತ ಕ್ರಮಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ರೂಪಿಸುವಾಗ, ಆಯೋಗವು ಒಂದು ನಿರ್ದಿಷ್ಟ ಉತ್ಪನ್ನ ಅಥವಾ ಉತ್ಪನ್ನದ ಗುಂಪಿನ ಆರ್ಥಿಕತೆಯ ಸಂಪೂರ್ಣ ರಚನೆಯ ಸಮಗ್ರ ದೃಷ್ಟಿಕೋನವನ್ನು ಮಾತ್ರವಲ್ಲದೆ ಈ ಕೆಳಗಿನ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತದೆ.
- ಉತ್ಪಾದನಾ ವೆಚ್ಚ
- ಒಳಹರಿವು ಬೆಲೆಯಲ್ಲಿನ ಬದಲಾವಣೆಗಳು (ಉತ್ಪಾದನಾ ವೆಚ್ಚ)
- ಒಳಹರಿವು-ಹೊರಹರಿವುಗಳ ಬೆಲೆ ಸಮಾನತೆ
- ಮಾರುಕಟ್ಟೆ ಬೆಲೆಗಳಲ್ಲಿನ ಪ್ರವೃತ್ತಿಗಳು
- ಬೇಡಿಕೆ ಮತ್ತು ಪೂರೈಕೆ
- ಅಂತರ-ಬೆಳೆ ಬೆಲೆ ಸಮಾನತೆ
- ಕೈಗಾರಿಕಾ ವೆಚ್ಚದ ರಚನೆಯ ಮೇಲೆ ಪರಿಣಾಮ
- ಜೀವನ ವೆಚ್ಚದ ಮೇಲೆ ಪರಿಣಾಮ
- ಸಾಮಾನ್ಯ ಬೆಲೆ ಮಟ್ಟದಲ್ಲಿ ಪರಿಣಾಮ
- ಅಂತರರಾಷ್ಟ್ರೀಯ ಬೆಲೆ ಪರಿಸ್ಥಿತಿ
- ರೈತರು ಪಾವತಿಸಿದ ಬೆಲೆಗಳು ಮತ್ತು ಪಡೆದ ಬೆಲೆಗಳ ನಡುವಿನ ವ್ಯತ್ಯಾಸ.
- ವಿತರಣಾ ಬೆಲೆಗಳ ಪರಿಣಾಮ ಮತ್ತು ಸಬ್ಸಿಡಿಯ ಸೂಚನೆಗಳು
- ಆಯೋಗವು ತೀರಾ ಸಣ್ಣ ಪ್ರದೇಶ ಮಟ್ಟದ ದತ್ತಾಂಶ ಮತ್ತು ಜಿಲ್ಲೆ, ರಾಜ್ಯ ಮತ್ತು ದೇಶದ ಮಟ್ಟದ ಒಟ್ಟು ಸರಾಸರಿ ದತ್ತಾಂಶ ಎರಡನ್ನೂ ಬಳಸುತ್ತದೆ. ಆಯೋಗವು ಬೆಲೆ ನಿರ್ಧರಿಸುವಾಗ ಬಳಸುವ ಮಾಹಿತಿ, ಮತ್ತು ಇತರ ಹಲವು ವಿಷಯಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ.
ಯಾವ ಬೆಳೆಗಳಿಗೆ ವಿಸ್ತರಿಸಲಾಗಿದೆ:
- ಸರ್ಕಾರವು ಕಡ್ಡಾಯವಾಗಿ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್ಪಿ) ಮತ್ತು ಕಬ್ಬಿಗೆ ನ್ಯಾಯಯುತ ಮತ್ತು ಸಂಭಾವನೆ ದರವನ್ನು (ಎಫ್ಆರ್ಪಿ) ಪ್ರಕಟಿಸುತ್ತದೆ. ಕಡ್ಡಾಯ ಬೆಳೆಗಳು ಖಾರಿಫ್ ಕಾಲದ 14 ಬೆಳೆಗಳು, 6 ರಾಬಿ ಬೆಳೆಗಳು ಮತ್ತು ಇತರ ಎರಡು ವಾಣಿಜ್ಯ ಬೆಳೆಗಳನ್ನು ಒಳಗೊಂಡಿವೆ. ಇದಲ್ಲದೆ, ಟೊರಿಯಾ ಮತ್ತು ಡಿ-ಹಸ್ಕ್ ತೆಂಗಿನಕಾಯಿಯ ಎಂಎಸ್ಪಿಗಳನ್ನು ಕ್ರಮವಾಗಿ ರಾಪ್ಸೀಡ್/ಸಾಸಿವೆ ಮತ್ತು ಕೊಪ್ರಾಗಳ ಎಂಎಸ್ಪಿಗಳ ಆಧಾರದ ಮೇಲೆ ನಿಗದಿಪಡಿಸಲಾಗಿದೆ.
ಬೆಳೆಗಳ ಪಟ್ಟಿ ಹೀಗಿದೆ
- ಸಿರಿಧಾನ್ಯಗಳು (7) – ಭತ್ತ, ಗೋಧಿ, ಬಾರ್ಲಿ, ಜೋವರ್, ಬಜ್ರಾ, ಮೆಕ್ಕೆ ಜೋಳ ಮತ್ತು ರಾಗಿ
- ದ್ವಿದಳ ಧಾನ್ಯಗಳು (5) –ಕಡಲೆ, ಅರ್ಹರ್/ತೊಗರಿ , ಹೆಸರು, ಉದ್ದು ಮತ್ತು ಮಸೂರ
- ಎಣ್ಣೆಕಾಳುಗಳು (8) – ನೆಲಗಡಲೆ, ರಾಪ್ಸೀಡ್/ ಸಾಸಿವೆ, ಟೋರಿಯಾ, ಸೋಯಾಬೀನ್, ಸೂರ್ಯಕಾಂತಿ ಬೀಜ, ಎಳ್ಳು, ಕುಂಕುಮ ಬೀಜ ಮತ್ತು ನೈಗರ್ ಬೀಜ
- ಕಚ್ಚಾ ಹತ್ತಿ
- ಕಚ್ಚಾ ಸೆಣಬು
- ಕೊಪ್ರಾ
- ಡಿ-ಹಸ್ಕ್ಡ್ ತೆಂಗಿನಕಾಯಿ
- ಕಬ್ಬು (ನ್ಯಾಯೋಚಿತ ಮತ್ತು ಸಂಭಾವನೆ ಬೆಲೆ)
- ವರ್ಜೀನಿಯಾ ಫ್ಲೂ ಕ್ಯೂರ್ಡ್ (ವಿಎಫ್ಸಿ) ತಂಬಾಕು