Published on: July 16, 2023
ಚಂದ್ರಯಾನ-3
ಚಂದ್ರಯಾನ-3
ಸುದ್ದಿಯಲ್ಲಿ ಏಕಿದೆ? ಇಸ್ರೋದ ಚಂದ್ರಯಾನ-3 ಗಗನನೌಕೆಯು ಶ್ರೀ ಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಎಲ್ ವಿಎಂ3-ಎಂ4 ವಾಹಕದ ಮೂಲಕ ಜುಲೈ 14 ರಂದು ಯಶಸ್ವಿಯಾಗಿ ಉಡಾವಣೆಗೊಂಡಿತು.
ಮುಖ್ಯಾಂಶಗಳು
- ಚಂದ್ರಯಾನ-3 ಪ್ರೊಪಲ್ಷನ್ ಮಾಡ್ಯೂಲ್ (PM), ಲ್ಯಾಂಡರ್ ಮಾಡ್ಯೂಲ್ (LM) ಅನ್ನು ಒಳಗೊಂಡಿದೆ.
- ಚಂದ್ರನ ಅಂಗಳ ತಲುಪೋದಕ್ಕೆ 40 ದಿನ ಬೇಕು. ಆಗಸ್ಟ್ 23 ಅಥವಾ 24 ರಂದು ಚಂದ್ರನ ಮೇಲೆ ನೌಕೆ ಲ್ಯಾಂಡ್ ಆಗಲಿದೆ.
- ಚಂದ್ರನಲ್ಲಿ ಭೂಮಿಗಿಂತ ಕಡಿಮೆ ಗುರುತ್ವಾಕರ್ಷಣ ಶಕ್ತಿಇರುವುದರಿಂದ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವಂತೆ ಮಾಡುವುದು ಸವಾಲಿನ ಕಾರ್ಯ. ಈ ಬಾರಿಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ‘ಸಾಫ್ಟ್ ಲ್ಯಾಂಡಿಂಗ್’ನಲ್ಲಿ ಯಶಸ್ಸು ಸಿಕ್ಕಲ್ಲಿ, ಭಾರತವು ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ. ಅಮೆರಿಕ, ಚೀನಾ ಹಾಗೂ ಈ ಹಿಂದಿನ ಸೋವಿಯತ್ ಒಕ್ಕೂಟ ಈ ಸಾಧನೆ ಮಾಡಿರುವ ಇತರ ದೇಶಗಳಾಗಿವೆ.
- ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲೇ ಇಳಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಚಂದ್ರನ ಮೇಲೆ ವಿಶಾಲವಾದ ಸ್ಥಳವನ್ನೂ ಗುರ್ತಿಸಲಾಗಿದೆ.
- ಇದು ಹಿಂದಿನ ಪ್ರಯತ್ನವಾದ ಚಂದ್ರಯಾನ-2 2019 ರಲ್ಲಿ ವಿಫಲವಾದ ನಂತರ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ರೋಬೋಟಿಕ್ ಉಪಕರಣಗಳ ಭಾರತದ ಎರಡನೇ ಪ್ರಯತ್ನವಾಗಿದೆ.
ಉದ್ದೇಶ
- ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ಅನ್ನು ಮೃದುವಾಗಿ ಯಶಸ್ವಿಯಾಗಿ ಇಳಿಸುವುದು, ಲ್ಯಾಂಡರ್ ನಿಂದ ರೋವರ್ ಅನ್ನು ರ್ಯಾಂಪ್ ಬಳಸಿ ಚಂದ್ರನ ನೆಲಕ್ಕಿಳಿಸಿ ಓಡಾಡಿಸುವುದು ಮತ್ತು ಸಂಗ್ರಹಿಸಿದ ಮಾದರಿಗಳನ್ನು ಅಲ್ಲಿಯೇ ಪ್ರಯೋಗಕ್ಕೆ ಒಳಪಡಿಸುವುದು. ಈ ಯೋಜನೆಯ ಮೂಲಕ ಚಂದ್ರನಲ್ಲಿ ನೀರು ಇರುವ ಸ್ಥಳವನ್ನು ಪತ್ತೆ ಮಾಡಲು, ನೀರಿನ ಪ್ರಮಾಣ ತಿಳಿಯಲು, ಚಂದ್ರನ ಕತ್ತಲಿನ ಭಾಗದ ಅನ್ವೇಕ್ಷಣೆ, ಖನಿಜಗಳ ಅಧ್ಯಯನ ಸೇರಿದಂತೆ ಚಂದ್ರನ ವೈಜ್ಞಾನಿಕ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ.
ಲ್ಯಾಂಡರ್ : ವಿಕ್ರಂ
- ಚಂದ್ರನ ಮೇಲೆ ಗಗನ ನೌಕೆ ‘ಸಾಫ್ಟ್ ಲ್ಯಾಂಡಿಂಗ್’ ಮಾಡುವುದು ಇದರ ಕೆಲಸವಾಗಿದೆ.
- ಲ್ಯಾಂಡರ್ ನಲ್ಲಿ ಅಳವಡಿಸಿರುವ ಲ್ಯಾಂಗ್ ಮುಯಿರ್ ಪ್ರೋಬ್ ಚಂದ್ರನ ಮೇಲಿನ ಪ್ಲಾಸ್ಮಾ ಸಾಂದ್ರತೆ ಮತ್ತು ಅದರಲ್ಲಿರುವ ವ್ಯತ್ಯಾಸವನ್ನು ಪತ್ತೆ ಮಾಡಲಿದೆ.
- ಚಂದ್ರನ ಮೇಲ್ಮೈ ಥರ್ಮೊಫಿಸಿಕಲ್ ಮಾದರಿಯು ಚಂದ್ರನ ಮೇಲ್ಮೈನ ತಾಪಮಾನವನ್ನು ಅಧ್ಯಯನ ಮಾಡಲಿದೆ. ಇನ್ಸ್ಸ್ಟ್ರೆಮೆಂಟ್ ಫಾರ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ ಚಂದ್ರನ ಮೇಲ್ಮೈನ ಭೂಕಂಪಗಳ ಬಗ್ಗೆ ಅಧ್ಯಯನ ನಡೆಸಲಿದೆ.
ರೋವರ್ : ಪ್ರಗ್ಯಾನ್
- ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿದ ಮೇಲೆ ಪ್ರಗ್ಯಾನ್ ರೋವರ್ ಹೊರಗೆ ಬರಲಿದೆ. ಇದರ ಜೀವಿತಾವಧಿ 14 ದಿನ ಮಾತ್ರ. ಈ ರೋವರ್ ಒಳಗೆ ಲೇಸರ್ ಸ್ಪೆಕ್ಟ್ರೋ ಮೀಟರ್ ಇರುತ್ತೆ. ಈ ಉಪಕರಣವು ಚಂದ್ರನ ಮೇಲೆ ಇರುವ ಖನಿಜಗಳು ಮತ್ತು ರಾಸಾಯನಿಕ ವಸ್ತುಗಳ ಸಂಯೋಜನೆಗಳನ್ನು ಅಧ್ಯಯನ ಮಾಡಲಿದೆ. ಈ ಮೂಲಕ ಚಂದ್ರನ ಮೇಲ್ಮೈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅನುಕೂಲ ಆಗಲಿದೆ. ಇನ್ನು ಈ ರೋವರ್ನಲ್ಲಿ ಎಕ್ಸ್ ರೇ ಸ್ಪೆಕ್ಟ್ರೋ ಮೀಟರ್ ಕೂಡಾ ಇದೆ. ಈ ಉಪಕರಣವು ಚಂದ್ರನಲ್ಲಿ ಇರುವ ಕಲ್ಲು ಮತ್ತು ಮಣ್ಣಿನಲ್ಲಿ ಇರುವ ಮೆಗ್ನೀಶಿಯಂ, ಅಲ್ಯುಮಿನಿಯಂ, ಸಿಲಿಕಾನ್, ಕಬ್ಭಿಣ ಸೇರಿದಂತೆ ಹಲವು ಖನಿಜಗಳ ಕುರಿತಾಗಿ, ಲೋಹಗಳ ಕುರಿತಾಗಿ ಮಾಹಿತಿ ಸಂಗ್ರಹ ಮಾಡಲಿದೆ.
ಚಂದ್ರನ ದಕ್ಷಿಣ ಧ್ರುವ ಅನ್ವೇಷಣೆ ಏಕೆ?
- ಚಂದ್ರನ ದಕ್ಷಿಣ ಧ್ರುವ ವಿಜ್ಞಾನಿಗಳಿಗೆ ಬಹಳ ಸಮಯದಿಂದ ಕುತೂಹಲ ಕೆರಳಿಸಿದೆ. ಯಾಕಂದ್ರೆ, ಈ ಭಾಗದಲ್ಲಿ ಉಷ್ಣಾಂಶ ಮೈನಸ್ 230 ಡಿಗ್ರಿಗಿಂತಲೂ ಕಡಿಮೆ ಇದೆ. ಬೆಳಕನ್ನೇ ಕಾಣದ ಎಷ್ಟೊಂದು ಪ್ರದೇಶಗಳು ಇಲ್ಲಿವೆ. ಈ ಭಾಗದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪಳೆಯುಳಿಕೆ ಇರಬಹುದು ಎಂಬ ಅಂದಾಜಿದೆ. ಹಾಗೆ ನೋಡಿದ್ರೆ ಚಂದ್ರಯಾನ 1 ಯೋಜನೆಯು ಚಂದ್ರನ ಮೇಲೆ ನೀರಿದೆ ಎಂದು ಮೊದಲ ಬಾರಿಗೆ ಕಂಡು ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲೇ ಮತ್ತೆ ಅಧ್ಯಯನ ನಡೆಸೋದಕ್ಕೆ ಇಸ್ರೋ ಮುಂದಾಗಿದೆ.
- ಪರಸ್ಪರ ಸಂವಹನ: ಪ್ರೊಪಲನ್ ಪೇಲೋಡ್ ಚಂದ್ರನಿಂದ ಇಸ್ರೋದ ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್(ಐಡಿಎಸ್ಎನ್)ನೊಂದಿಗೆ ಸಂವಹನ ನಡೆಸಲಿದೆ. ಅದೇ ರೀತಿ ಲ್ಯಾಂಡರ್ ಮಾಡ್ನೂಲ್ ಐಡಿಎಸ್ಎನ್ ಮತ್ತು ರೋವರ್ನೊಂದಿಗೆ ಸಂವಹನ ನಡೆಸಲಿದೆ. ಆದರೆ ರೋವರ್, ಲ್ಯಾಂಡರ್ನೊಂದಿಗೆ ಮಾತ್ರ ಸಂವಹನ ನಡೆಸುತ್ತದೆ.
ಭಾರತಕ್ಕಾಗುವ ಪ್ರಯೋಜನ
- ಈ ಯೋಜನೆ ಯಶಸ್ವಿಯಾದರೆ, ಭಾರತದ ಆಂತರಿಕ್ಷ ವಿಜ್ಞಾನ ವಲಯಕ್ಕೆ ಬೂಸ್ಟ್ ಸಿಗುತ್ತದೆ. ಉಪಗ್ರಹ ಉಡಾವಣೆ ಸೇರಿದಂತೆ ಹಲವು ವಿಚಾರಗಳಿಗೆ ವಿಶ್ವದ ಹಲವು ರಾಷ್ಟ್ರಗಳು ಭಾರತವನ್ನೇ ಅವಲಂಬಿಸಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗಲಿದೆ.
LVM3
- ಅಭಿವೃದ್ಧಿಪಡಿಸಿದವರು: ಇಸ್ರೋ
- ಉಡಾವಣಾ ವಾಹನ ಮಾರ್ಕ್-III ಅಥವಾ LVM3, (ಹಿಂದೆ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ III ಅಥವಾ GSLV Mk III ಎಂದು ಕರೆಯಲಾಗುತ್ತಿತ್ತು
- ಹೆವಿ ಲಿಫ್ಟ್ ಉಡಾವಣಾ ವಾಹನವಾಗಿದ್ದು, ವೆಚ್ಚದ ಪರಿಣಾಮಕಾರಿ ರೀತಿಯಲ್ಲಿ GTO (ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್) ಗೆ 4000 ಕೆಜಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಸಾಧಿಸಿದೆ.
- ಅದರ ಹೆವಿಲಿಫ್ಟ್ ಸಾಮರ್ಥ್ಯಕ್ಕಾಗಿ ‘ಫ್ಯಾಟ್ ಬಾಯ್’ ಎಂದು ಕೂಡ ಕರೆಯಲಾಯಿತು.
- LVM3 ರಾಕೆಟ್ ಸತತ ಆರು ಯಶಸ್ವಿ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದೆ.
ಚಂದ್ರಯಾನ 2 ಯೋಜನೆ
- ಉಡಾವಣೆ: 2019
- ರಾಕೆಟ್: ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ III
- ಉಡಾವಣಾ ಸ್ಥಳ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
- ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲೇ ಇಳಿಸಲು ತೀರ್ಮಾನಿಸಲಾಗಿತ್ತು ಆದರೆ ವಿಫಲವಾಗಿತ್ತು
ಚಂದ್ರಯಾನ 1 ಯೋಜನೆ
- ಚಂದ್ರಯಾನ ಕಾರ್ಯಕ್ರಮದ ಅಡಿಯಲ್ಲಿ ಮೊದಲ ಭಾರತೀಯ ಚಂದ್ರನ ಮೇಲ್ಮೈ ಅನ್ವೇಷಣೆ
- ರಾಕೆಟ್: PSLV-XL C11
- ಉಡಾವಣೆ: 2008
- ಉಡಾವಣಾ ದ್ರವ್ಯರಾಶಿ: 1,380 ಕೆಜಿ (3,040 ಪೌಂಡು)
- ಉದ್ದೇಶ:ಚಂದ್ರನ ರಾಸಾಯನಿಕ, ಖನಿಜಶಾಸ್ತ್ರ ಮತ್ತು ಫೋಟೋ-ಭೂವೈಜ್ಞಾನಿಕ ಮ್ಯಾಪಿಂಗ್ಗಾಗಿ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಿಂದ 100 ಕಿಮೀ ಎತ್ತರದಲ್ಲಿ ಚಂದ್ರನ ಸುತ್ತ ಪರಿಭ್ರಮಿಸುತ್ತಿತ್ತು.