Published on: June 22, 2023
ಚೋಳರ ಸಾಂಸ್ಕೃತಿಕ ಕೊಡುಗೆಗಳು
ಚೋಳರ ಸಾಂಸ್ಕೃತಿಕ ಕೊಡುಗೆಗಳು
ಪರಿಚಯ
- ಧರ್ಮ, ಸಾಹಿತ್ಯ, ಕಲೆಗೆ, ಚೋಳರು ಅತ್ಯಮೋಘ ಸೇವೆ ಸಲ್ಲಿಸಿದ್ದಾರೆ. ಚೋಳ ರಾಜರು ತಮ್ಮ ಸಾಮ್ರಾಜ್ಯದಾದ್ಯಂತ ಅನೇಕ ದೇವಾಲಯಗಳನ್ನು ನಿರ್ಮಿಸಿದರು ಮತ್ತು ಆರಂಭಿಕ ಚೋಳರ ದೇವಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿ ಪುದುಕೊಟ್ಟೈ ಪ್ರದೇಶದಲ್ಲಿಕಂಡುಬರುತ್ತವೆ.
- ಈ ಚೋಳ ದೇವಾಲಯಗಳು ಚೋಳರ ಕಲೆ ಮತ್ತು ವಾಸ್ತುಶಿಲ್ಪದ ಕ್ರಮೇಣ ವಿಕಾಸವನ್ನು ಬಹಿರಂಗಪಡಿಸುತ್ತವೆ.
- ಚೋಳ ರಾಜರು ಮೊದಲು ಇಟ್ಟಿಗೆ ದೇವಾಲಯಗಳನ್ನು ನಿರ್ಮಿಸಿದರು ಮತ್ತು ನಂತರ ಅವರು ಕಲ್ಲಿನ ದೇವಾಲಯಗಳನ್ನು ನಿರ್ಮಿಸಿದರು.
ಧರ್ಮ
- ಚೋಳರ ಆರಾಧ್ಯ ದೈವ ಶಿವ ಆಗಿದ್ದನು ಮತ್ತು ಎರಡು ರೂಪಗಳಲ್ಲಿ ಪ್ರತಿನಿಧಿಸಲ್ಪಟ್ಟನು. ಶಿವನ ಪ್ರತಿಮಾರೂಪವು ಲಿಂಗೋದ್ಭವ, ಮತ್ತು ನಟರಾಜನ ವಿಗ್ರಹವು ಮಾನವ ರೂಪವಾಗಿತ್ತು.
- ಚೋಳರು ಶಿವಭಕ್ತರಾಗಿದ್ದರೂ ಕೂಡ ಪರಮತ ಸಹಿಷ್ಣರು. ಅವರ ಕಾಲದಲ್ಲಿ ಶೈವ ಮತ್ತು ವೈಷ್ಣವ ಪಂತಗಳೆರಡು ಪ್ರಗತಿ ಕಂಡವು. ಈ ಅವಧಿಯಲ್ಲಿಶೈವ ಸಿದ್ಧಾಂತ ಎಂಬ ಅತ್ಯಂತ ಅಭಿವೃದ್ಧಿ ಹೊಂದಿದ ತಾತ್ವಿಕ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.
- ಶಿವಭಕ್ತನಾದ ರಾಜನು ತಂಜಾವೂರಿನಲ್ಲಿ ರಾಜೇಶ್ವರ ದೇವಾಲಯವನ್ನು ನಿರ್ಮಿಸಿದನು. ಕಾಳಮುಖ, ಕಪಾಳಕ ಹಾಗೂ ಪಾಶುಪತ ಎಂಬ ಶೈವ ಪಂಥಗಳು ರೂಢಿಯಲ್ಲಿದ್ದವು.
- ಆಗಿನ ಕಾಲದ ಗಮನಾರ್ಹ ಧಾರ್ಮಿಕ ಬೆಳವಣಿಗೆ ಎಂದರೆ 63 ನಾಯನಾರ ಎಂಬ ಶೈವ ಸಂತರಿಂದ ಶೈವ ಪಂಥವು, 12 ಆಳ್ವಾರರಿಂದ ವೈಷ್ಣವ ಪಂಥವು ಜನಪ್ರಿಯತೆಗೆ ಬಂದಿದ್ದು. ಅವರು ಮುಕ್ತಿ ಸಾಧನೆಗೆ ಭಕ್ತಿಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಹೀಗಾಗಿ ಭಕ್ತಿ ಪಂಥ ಚಳುವಳಿ ದಕ್ಷಿಣ ಭಾರತದಲ್ಲಿ ಆರಂಭವಾಯಿತ. ಅದರ ಪ್ರಭಾವದಿಂದ ವೈದಿಕ ಧರ್ಮ ಸುಧಾರಣೆಗೊಂಡಿತು. ಇದರ ಪ್ರಭಾವ ಕರ್ನಾಟಕದ ಮೇಲು ಆಯಿತು. ಕುಲತುಂಗ ಚೋಳ ಒಬ್ಬ ಕಟ್ಟಾ ಶೈವ. ಅವನು ವೈಷ್ಣವರನ್ನು ಹಿಂಸಿಸಿದನು ಇದರಿಂದ ರಾಮಾನುಜರಿಗೆ ತಮಿಳುನಾಡಿನಲ್ಲಿ ನೆಲೆಸಿಗದೆ ಕರ್ನಾಟಕಕ್ಕೆ ಬಂದು ಹೊಯ್ಸಳ ದೊರೆ ವಿಷ್ಣುವರ್ಧನನ ಆಶ್ರಯದಲ್ಲಿ ಭಕ್ತಿ ಪಂಥ ಚಳುವಳಿಯನ್ನು ಜನಪ್ರಿಯಗೊಳಿಸಿದರು.
ಸಾಹಿತ್ಯ
- ಚೋಳರ ಕಾಲ ತಮಿಳು ಸಾಹಿತ್ಯದ ಸುವರ್ಣ ಕಾಲವಾಗಿತ್ತು ವಿದ್ಯಾಭಿಮಾನಿಗಳು ಸಾಹಿತ್ಯಪ್ರಿಯರು ಆದ ಚೋಳರು ತಮಿಳು ಸಾಹಿತ್ಯವನ್ನು ವಿಪುಲವಾಗಿ ಪೋಷಿಸಿದರು. ಸಂಸ್ಕೃತದಲ್ಲಿ ಕೆಲವು ಕೃತಿಗಳು ರಚನೆಯಾದವು. ಅವರ ಕಾಲದಲ್ಲಿ ಶೈವ ನಯನರ ಮತ್ತು ವೈಷ್ಣವ ಆಳ್ವಾರರು ಭಕ್ತಿ ಪ್ರಧಾನ ಗೀತೆಗಳು ರಚಿಸಿದ್ದರಿಂದ ಸಾಹಿತ್ಯ ರಚನೆಗೆ ಪ್ರೇರಣೆಯಾಯಿತು. ಹೀಗಾಗಿ ತಮಿಳುನಲ್ಲಿ ಕಾವ್ಯ ಸಾಹಿತ್ಯ ಅರಳಿತು ಕಾವ್ಯವಲ್ಲದೆ ನಾಟಕ ತತ್ವಶಾಸ್ತ್ರಗಳ ಶಾಸ್ತ್ರ ವ್ಯಾಕರಣಗಳಲ್ಲಿ ಅಧಿಕ ಕೃತಿಗಳು ಹೊರಬಂದವು.
- ತಮಿಳು ಸಾಹಿತ್ಯದ ತ್ರಿರತ್ನಗಳು ಎಂದೆ ಹೆಸರಾದ ಕಂಬನ್ ಒಟ್ಟು, ಕುಟ್ಟನ್ ಮತ್ತು ಪುಗಳೆಂದಿಯರು ಚೋಳರ ಆಶಯದಲ್ಲಿದ್ದರು. ಕವಿ ಚಕ್ರವರ್ತಿ ಎಂಬ ಬಿರುದು ಪಡೆದಿದ್ದ ಕಂಬ ತಮಿಳಿನಲ್ಲಿ ರಾಮಾಯಣವನ್ನು ರಚಿಸಿದನು. ಅದು ಕಂಬನ್ ರಾಮಾಯಣ ಎಂದು ಹೆಸರಾಗಿದೆ. ಅವನ ಕಾಲವನ್ನು ಕಂಬ ಯುಗವೆಂದು ಕರೆಯಲಾಯಿತು. ಒಂದನೇ ಕುಲೋತುಂಗನ ಆಶ್ರಯದಲ್ಲಿದ್ದ ಒಟ್ಟು ಕುಟ್ಟನ್ ಹಲವು ಕವಿತೆಗಳನ್ನು ರಚಿಸಿದನು.
- ಐದನೇ ವೇದಯೆಂದು ಕರೆಯುವ ನಯನಾರ್ ಮತ್ತು ಆಳ್ವಾರರ ಬರಹಗಳಾದ ತಿರುಮಲೈ ರಚನೆಯಾಯಿತು. ಒಂದನೇ ಕುಲತುಂಗನ ಕಳಿಂಗ ದಂಡಯಾತ್ರೆ ಕುರಿತು ಜಯಗೊಂಡರನು ಕಲಿಂಗತುಪ್ಪರಾಣಿಯನ್ನು ರಚಿಸಿದನು. ತಿರುಕ್ಕ್ ದೇವರ ರಚಿಸಿದ ಜೀವಕ ಚಿಂತಾಮಣಿ ತಮಿಳು ಅದ್ವಿತೀಯ ಕಾವ್ಯ ಎಂಬ ಹೆಸರು ಪಡೆದಿದೆ.
ಕಲೆ ಮತ್ತು ವಾಸ್ತು ಶಿಲ್ಪ
- ಚೋಳರು ಕಲಾಭಿಮಾನಿಗಳು ಮಹಾನ್ ನಿರ್ಮಾಪಕರು ದ್ರಾವಿಡ ವಾಸ್ತುಶಿಲ್ಪದ ಪರಮ ಪೋಷಕರು. ಪಲ್ಲವರ ದ್ರಾವಿಡ ಶೈಲಿಯನ್ನು ಹಲವು ಮಾರ್ಪಾಡುಗಳೊಂದಿಗೆ ಮುಂದುವರಿಸಿದರು. ದೇವಾಲಯ ಆವರಣಕ್ಕೆ ಮಹಾದ್ವಾರ ಉಳ್ಳ ಗೋಪುರಗಳ ರಚನೆಯೇ ಆ ಮಾರ್ಪಾಟು ಅನಂತರದ ಕಾಲದಲ್ಲಿ ವಿಪುಲ ಕೆತ್ತನೆಗಳುಳ್ಳ ಕಂಬಗಳಿಂದ ಕೂಡಿದ ಸಭಾಂಗಣ ಅಥವಾ ಮಂಟಪ ಮತ್ತು ಸ್ತಂಭಗಳನ್ನು ರಚಿಸಲಾಯಿತು. ಗೋಪುರಗಳು ಬೃಹದಾಕಾರವಾಗಿದ್ದು ಹಲವು ಸ್ತರಗಳನ್ನು ಹೊಂದಿವೆ ಪ್ರಾಕಾರ ಅರ್ಧ ಮಂಟಪ, ವಿಮಾನ, ಸಭಾ ಮಂಟಪ, ಅಂತರಾಳ ಗರ್ಭಗುಡಿ, ಇವು ಚೋಳ ದೇವಾಲಯಗಳ ಮುಖ್ಯ ರಚನೆಗಳು ಶಿಖರಗಳು ಕಲಶಗಳನ್ನು ಹೊಂದಿರುತ್ತವೆ.
- ಚೋಳರ ಕಾಲದಲ್ಲಿ ಅದರಲ್ಲೂ ವಿಶೇಷವಾಗಿ ರಾಜರಾಜ ಮತ್ತು ಒಂದನೇ ರಾಜೇಂದ್ರನ ಕಾಲದಲ್ಲಿ ಚೋಳರ ಕಲೆ ಉತ್ತುಂಗ ಶಿಖರವನ್ನು ತಲುಪಿತು ತಂಜಾವೂರಿನ ಬೃಹದೇಶ್ವರ ಮತ್ತು ಗಂಗೈಕೊಂಡ ಚೋಳಪುರಂಗಳ ಭವ್ಯ ಶಿವಾಲಯಗಳು ಉದಾಹರಣೆಯಾಗಿವೆ.
ಬೃಹದೇಶ್ವರ ದೇವಾಲಯ ತಂಜಾವೂರು ಕ್ರಿ.ಶ 1010
- ತಂಜಾವೂರಿನ ಬೃಹದೇಶ್ವರ ದೇವಾಲಯ ಅಥವಾ ರಾಜರಾಜೇಶ್ವರ ದೇವಾಲಯವು ಚೋಳರ ಕಲೆಗೆ ಅತ್ಯುತ್ತಮ ಉದಾಹರಣೆ ಇದು ದಕ್ಷಿಣ ಭಾರತದ ದೇವಾಲಯಗಳಲ್ಲಿ ಅತ್ಯಮೋಘವಾದುದು. ಇದು ಭಾರತದ ಅತಿ ದೊಡ್ಡ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ. ಈ ದೇವಾಲಯ ದ್ರಾವಿಡ ವಾಸ್ತುಶಿಲ್ಪದ ಉತ್ತಮ ಮಾದರಿಯದಾಗಿದೆ.
ಬೃಹದೇಶ್ವರ ದೇವಾಲಯ ಗಂಗೈಕೊಂಡ ಚೋಳಪುರಂ ಕ್ರಿಸ್ತಶಕ 1025 ರಿಂದ 1030
- ಒಂದನೇ ರಾಜೇಂದ್ರ ಚೋಳನು ತನ್ನ ಉತ್ತರ ಭಾರತದ ದಿಗ್ವಿಜಯದ ನೆನಪಿಗಾಗಿ ಗಂಗೈಕೊಂಡ ಚೋಳಪುರಂ ಎಂಬ ಹೊಸ ರಾಜಧಾನಿಯನ್ನು ನಿರ್ಮಿಸಿದನು . ಇಲ್ಲಿ ಅವನು ನಿರ್ಮಿಸಿದ ಮಹದೇಶ್ವರ ದೇವಾಲಯವಿದೆ.
- ಈ ಎರಡು ದೇವಾಲಯಗಳು ಚೋಳರ ಮೇರು ಕೃತಿಗಳು ತಂಜಾವೂರಿನಬೃಹದೇಶ್ವರ ದೇವಾಲಯ ಶಕ್ತಿಯ ಸಂಕೇತವಾಗಿದೆ ಗಂಗೈಕೊಂಡ ಚೋಳಪುರಂ ಶಿವಾಲಯ ಸೌಂದರ್ಯದ ಗಣಿಯಾಗಿದೆ.
- ಚೋಳರ ಕಾಲದ ಶಿಲ್ಪಿಗಳು ತಾಮ್ರ ಮತ್ತು ಕಂಚಿನ ವಿಗ್ರಹಗಳ ನಿರ್ಮಾಣದಲ್ಲಿ ಸಿದ್ದಹಸ್ತರಾಗಿದ್ದರು ಇದಕ್ಕೆ ನಾಗೇಶ್ವರ ದೇವಾಲಯದಲ್ಲಿ ದೊರೆತಿರುವ ನಟರಾಜನ ಕಂಚಿನ ವಿಗ್ರಹ ಸಾಕ್ಷಿಯಾಗಿದೆ.
ಚಿತ್ರಕಲೆ
- ಚೋಳರು ಚಿತ್ರಕಲೆಯನ್ನು ಸಹ ಪ್ರೋತ್ಸಾಹಿಸಿದ್ದರು. ಶಿವಪುರಾಣ ಕಥೆಗಳು ಅವರ ಚಿತ್ರಕಲೆಯ ಸಾರ. ಅವರ ಚಿತ್ರಕಲೆಯನ್ನು ತಂಜಾವೂರಿನ ಬೃಹದೇಶ್ವರ ದೇವಾಲಯದಲ್ಲಿ ಕಾಣಬಹುದು. ಇದರ ಗರ್ಭಗುಡಿಯ ಪ್ರದಕ್ಷಿಣ ಪತದ ಸುತ್ತ ಧಾರ್ಮಿಕ ಜೀವನಕ್ಕೆ ಸಂಬಂಧಿಸಿದ ಚಿತ್ರ ಕಲೆ ಇದೆ. ಇಲ್ಲಿ ಶಿವನ ಒಡ್ಡೋಲಗ, ತ್ರಿಪುರಾಂತಕ, ಪ್ರಾಣಿ ಪಕ್ಷಿಗಳ ವರ್ಣ ಚಿತ್ರಗಳಿವೆ. ವಿಜಯಲಯ ಚೋಳೇಶ್ವರ ದೇವಾಲಯದಲ್ಲಿ ನಟರಾಜ, ಮಹಾಕಾಳಿ ಚಿತ್ರಗಳಿವೆ. ನಂಬಿ ಮತ್ತು ನಾತಮುನಿಗಳು ಸಂಗೀತವನ್ನು ಬೆಳೆಸಿದರು. ಸಂತ ಸಂಬಂಧರರ ಪ್ರಸಿದ್ಧ ಸಂಗೀತಗಾರನು ಅವನು ತಮಿಳು ಸಂಗೀತ ಬೆಳವಣಿಗೆ ನಾಂದಿ ಹಾಕಿದನು. ನಾತಮುನಿ 400 ಭಕ್ತಿಗೀತೆಗಳನ್ನು ಸಂಪಾದಿಸಿ ಅವನ್ನು ಸಂಗೀತ ಅಳವಡಿಸಿದನು ಇವರು ತೇವಾರಂ ಮತ್ತು ನಾಲಯಾರ ಪ್ರಬಂಧ ಗೀತೆಗಳನ್ನು ಸಂಗೀತಕ್ಕೆ ಅಳವಡಿಸಿದರು.
ಉಪಸಂಹಾರ
ಇವರ ಕಾಲದ ಅವಧಿಯಲ್ಲಿ ಚೋಳರ ಕಲೆ ಮತ್ತು ವಾಸ್ತುಶಿಲ್ಪದ ನಿರಂತರ ಸುಧಾರಣೆ ಮತ್ತು ಪರಿಷ್ಕರಣೆಗೆ ಕಾರಣವಾಯಿತೆಂದು ಹೇಳಬಹುದು. ಇದಕ್ಕೆ ಚೋಳರ ಪ್ರೋತ್ಸಾಹ, ತಾಂತ್ರಿಕ ಪರಿಣತಿ ಮತ್ತು ಸಾಂಸ್ಕೃತಿಕ ವಿನಿಮಯ. ಅವರ ಕಲಾ ಸಾಧನೆಗಳಿಗೆ ಸಾಕ್ಷಿಯಾಗಿ ನಿಂತಿವೆ. ವೈಭವದ ಚೋಳ ಸಂಸ್ಕೃತಿಯು ತಮಿಳು ಸಮಾಜದ ಮೇಲೆ ಬಹಳ ದೊಡ್ಡ ಪ್ರಭಾವವನ್ನು ಬೀರಿತು ಮತ್ತು ಭಕ್ತಿಯಂತಹ ಸಾಂಸ್ಕೃತಿಕ ಮೌಲ್ಯಗಳನ್ನು ತುಂಬಿತು.