Published on: July 15, 2021
ಪರ್ಯಾಯ ಇಂಧನಗಳ ಅಭಿವೃದ್ಧಿ
ಪರ್ಯಾಯ ಇಂಧನಗಳ ಅಭಿವೃದ್ಧಿ
ಸುದ್ಧಿಯಲ್ಲಿ ಏಕಿದೆ ? ದಿನ ನಿತ್ಯ ಪೆಟ್ರೋಲ್ ದರ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಪರ್ಯಾಯ ಇಂಧನಗಳ ಅಭಿವೃದ್ಧಿಗೆ ಒತ್ತಡ ಹೆಚ್ಚಿದೆ.
- ಪೆಟ್ರೋಲ್ ದರ ಶತಕ ದಾಟಿರುವ ಸಂದರ್ಭದಲ್ಲಿ ಪರ್ಯಾಯ ಇಂಧನಗಳ ಅಭಿವೃದ್ಧಿಗೆ ಒತ್ತಡ ಸೃಷ್ಟಿಯಾಗಿದೆ. ಭಾರತ 2025ರೊಳಗೆ ಪೆಟ್ರೋಲ್ಗೆ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿ ಹೊಂದಿದೆ. ಆದರೂ, ಎಥೆನಾಲ್ ಉತ್ಪಾದನೆಯ ಕೊರತೆ ಇದೆ.
ಈ ಸವಾಲನ್ನು ಪರಿಹರಿಸುವುದು ಹೇಗೆ? ಜೈವಿಕ ಇಂಧನ ವಲಯದಲ್ಲಿನ ಇತ್ತೀಚಿನ ಬೆಳವಣಿಗೆ ಏನು? ಇಲ್ಲಿದೆ ವಿವರ.
ಎಥೆನಾಲ್ ಹಿನ್ನೆಲೆ
- ಭಾರತದಲ್ಲಿ ಪ್ರತಿ ವರ್ಷ ಬೇಡಿಕೆಗಿಂತಲೂ ಅಧಿಕ ಕಬ್ಬು ಬೆಳೆಯಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳೂ ಬೇಡಿಕೆಗಿಂತ ಹೆಚ್ಚು ಉತ್ಪಾದನೆಯಾಗುವ ಸಕ್ಕರೆಗೆ ಮಾರುಕಟ್ಟೆ ಕಂಡುಕೊಳ್ಳಲಾಗದೆ, ರೈತರಿಗೆ ಕೊಡಬೇಕಾಗಿರುವ ಬಾಕಿ ಮೊತ್ತ ಸಾವಿರಾರು ಕೋಟಿ ರೂ.ಗಳ ಲೆಕ್ಕದಲ್ಲಿದೆ.
- ಸಕ್ಕರೆ ಪೂರೈಕೆಗೆ ಕೊರತೆಯಾಗದಂತೆ ಎಥೆನಾಲ್ ಅನ್ನು ಹೇರಳವಾಗಿ ಉತ್ಪಾದಿಸಲು ಎಲ್ಲ ಅವಕಾಶಗಳೂ ಇವೆ. ಭಾರತಕ್ಕೆ ಪರ್ಯಾಯ ಇಂಧನದ ತುರ್ತು ಅಗತ್ಯ ಇದ್ದರೂ, ಈ ದಿಶೆಯಲ್ಲಿ ಕಳೆದ ಕೆಲ ವರ್ಷಗಳ ತನಕ ಪ್ರಗತಿ ಉಂಟಾಗಿರಲಿಲ್ಲ. ಹೀಗಾಗಿ 2030 ಬದಲಿಗೆ 5 ವರ್ಷ ಮೊದಲೇ, ಅಂದರೆ 2025ರೊಳಗೆ ಪೆಟ್ರೋಲ್ ಜತೆ ಶೇ.20ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನುಪೂರ್ಣಗೊಳಿಸಬಹುದು ಸಾಧಿಸಬಹುದು
ರಾಷ್ಟ್ರೀಯ ನೀತಿ
- ಜೈವಿಕ ಇಂಧನದ ಬಳಕೆಯನ್ನು ಉತ್ತೇಜಿಸಲು 2009ರಲ್ಲಿ ರಾಷ್ಟ್ರೀಯ ನೀತಿಯನ್ನು ಪರಿಚಯಿಸಲಾಯಿತು. 2018ರಲ್ಲಿ ಪರಿಷ್ಕೃತ ರಾಷ್ಟ್ರೀಯ ನೀತಿಯೂ ಬಂದಿತು. ಅದರಲ್ಲಿ 2030ರ ವೇಳೆಗೆ ಪೆಟ್ರೋಲ್ ಜತೆ ಶೇ.20ರಷ್ಟು ಹಾಗೂ ಡೀಸೆಲ್ ಜತೆ ಶೇ.5ರಷ್ಟು ಎಥೆನಾಲ್ ಬಳಸುವ ಗುರಿಯನ್ನು ನಿಗದಿಪಡಿಸಲಾಯಿತು. ಈ ಗುರಿ 2025ರಲ್ಲೇ ಪೂರ್ಣವಾಗುವ ಸಾಧ್ಯತೆ ಇದೆ ಎನ್ನುವುದು ಈಗಿನ ನಿರೀಕ್ಷೆ.
- ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ನಿಗದಿತ ಗಡುವಿಗೂ 1 ವರ್ಷ ಮೊದಲೇ, ಅಂದರೆ 2018ರಲ್ಲಿಸಾಧಿಸಲಾಗಿತ್ತು. ಮುಂಬರುವ 2022ರೊಳಗೆ 175 ಗಿಗಾವ್ಯಾಟ್ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ ವೃದ್ಧಿಸುವುದು, ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವುದು ಕೂಡ ತೈಲಾವಲಂಬನೆ ತಗ್ಗಿಸಲು ಪೂರಕ ನೀತಿಗಳಾಗಿವೆ.
- ನಮ್ಮಲ್ಲಿ2014ರಲ್ಲಿಶೇ.1ರಷ್ಟಿದ್ದ ಎಥೆನಾಲ್ ಮಿಶ್ರಣ 2020ರ ಅಂತ್ಯಕ್ಕೆ ಶೇ.2ಕ್ಕೆ ಏರಿಕೆಯಾಗಿದೆ. ಕೆಲ ರಾಜ್ಯಗಳು ಈಗಾಗಲೇ ಶೇ.10ರಷ್ಟು ಮಿಶ್ರಣ ಮಾಡುತ್ತಿವೆ.
ಸಂಪೂರ್ಣ ಎಥೆನಾಲ್ ಬಳಕೆ ಸಾಧ್ಯವೇ?
- ಅಮೆರಿಕ, ಬ್ರೆಜಿಲ್, ಕೆನಡಾದಲ್ಲಿ ಸಂಪೂರ್ಣ ಎಥೆನಾಲ್ನಿಂದಲೇ ಚಾಲನೆಯಾಗುವ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಅವುಗಳನ್ನು ಇ-100 ವಾಹನಗಳೆನ್ನುತ್ತಾರೆ. ಫ್ಲೆಕ್ಸ್ ಫ್ಯಯೆಲ್ ಎಂಜಿನ್ಗಳಲ್ಲಿ ಇ-20ರಿಂದ ಇ-100ರ ಅನುಪಾತದಲ್ಲಿ ಎಥೆನಾಲ್ ಬಳಕೆಗೆ ಸಾಧ್ಯವಿದೆ. ಪುಣೆಯಲ್ಲಿ ಇ-100 ಕುರಿತ ಪ್ರಯೋಗ ನಡೆಯುತ್ತಿದೆ.
- ಟಿವಿಎಸ್ ಮೊದಲ ಬಾರಿಗೆ ಎಥೆನಾಲ್ ಬಳಸಬಹುದಾದ ಅಪಾಚೆ ಬೈಕ್ ಅನ್ನು ಬಿಡುಗಡೆಗೊಳಿಸಿದೆ.
ರಾಷ್ಟ್ರೀಯ ನೀತಿ ಏನೆನ್ನುತ್ತದೆ?
- 2018ರ ರಾಷ್ಟ್ರೀಯ ಜೈವಿಕ ಇಂಧನ ನೀತಿಯಲ್ಲಿ ಇಂಧನ ಮತ್ತು ಸಾರಿಗೆ ವಲಯದಲ್ಲಿ ಜೈವಿಕ ಮೂಲಗಳನ್ನು ಹೆಚ್ಚು ಬಳಸಲು ಒತ್ತು ನೀಡಲಾಗಿದೆ. ಇದಕ್ಕಾಗಿ ತಂತ್ರಜ್ಞಾನ ಸುಧಾರಣೆಗೂ ಉತ್ತೇಜಿಸಿದೆ. ಜೈವಿಕ ಇಂಧನಗಳ ಮೂಲಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
- ಮೊದಲನೆಯದಾಗಿ ಪ್ರಾಥಮಿಕ ಜೈವಿಕ ಇಂಧನಗಳ ವಿಭಾಗ. ಇದರಲ್ಲಿ ಎಥೆನಾಲ್, ಬಯೊ ಡೀಸೆಲ್, ಅತ್ಯಾಧುನಿಕ ಇಂಧನಗಳು ಬರುತ್ತವೆ. ಇವುಗಳು ಪ್ರಥಮ ದರ್ಜೆಯದ್ದು. ಎರಡನೆಯದಾಗಿ ಘನ ತ್ಯಾಜ್ಯ ಮೂಲದ ಜೈವಿಕ ಇಂಧನ ಹಾಗೂ ಮೂರನೆಯದಾಗಿ ಜೈವಿಕ ಸಿಎನ್ಜಿ. ಕಬ್ಬಿನ ಹಾಲು, ಧಾನ್ಯಗಳು, ಜೋಳ, ಮಾನವ ಬಳಕೆಗೆ ಯೋಗ್ಯವಲ್ಲದ ಗೋಧಿ, ಅಕ್ಕಿ, ಆಲೂಗಡ್ಡೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸಬಹುದು ಎಂದು 2018ರ ನೀತಿಯಲ್ಲಿ ಅನುಮತಿ ಕಲ್ಪಿಸಲಾಗಿದೆ.
- ಈ ಹಿಂದೆ ಕಬ್ಬಿನ ರಸದಿಂದ ಎಥೆನಾಲ್ ತಯಾರಿಕೆಗೆ ಅನುಮತಿ ಇರಲಿಲ್ಲ. ಉಪ ಉತ್ಪನ್ನ ಕಾಕಂಬಿಯಿಂದ ಮಾತ್ರ ಎಥೆನಾಲ್ ತಯಾರಿಸಬಹುದಿತ್ತು. ಅಡುಗೆಗೆ ಬಳಸಲು ಯೋಗ್ಯವಲ್ಲದ ಸಸ್ಯ ಮೂಲದ ತೈಲಗಳು, ಅಡುಗೆಯಲ್ಲಿ ಬಳಸಿದ ನಂತರ ಉಳಿಯುವ ತೈಲದಿಂದ ಬಯೊಡೀಸೆಲ್, ಆಹಾರ, ಪ್ಲಾಸ್ಟಿಕ್ ಮತ್ತು ಕೈಗಾರಿಕಾ ತ್ಯಾಜ್ಯಗಳಿಂದ ಇಂಧನ ತಯಾರಿಕೆಗೂ ಬೆಂಬಲಿಸಿದೆ. ಈ ಪೈಕಿ ಮೊದಲ ಸಾಲಿನಲ್ಲಿ ಬರುವ ಎಥೆನಾಲ್ ಮಿಶ್ರಣದ ಬಗ್ಗೆ ಹೆಚ್ಚು ಚರ್ಚೆ ಚಾಲ್ತಿಯಲ್ಲಿದೆ. ಮೊದಲು ಈ ಗುರಿಯನ್ನು ಸಾಧಿಸಬೇಕು ಎನ್ನುತ್ತಾರೆ ತಜ್ಞರು.
ನೀತಿ ಆಯೋಗದ ವರದಿ
- ನೀತಿ ಆಯೋಗದ ತಜ್ಞರು 2025ಕ್ಕೆ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಬಗ್ಗೆ ವರದಿ ಸಿದ್ಧಪಡಿಸಿದ್ದಾರೆ. ಅದರ ಮುಖ್ಯಾಂಶಗಳು ಇಂತಿವೆ.
- ಭಾರತ 2020-21ರಲ್ಲಿ 185 ಮೆಟ್ರಿಕ್ ಟನ್ ಪೆಟ್ರೋಲಿಯಂ ಆಮದು ಮಾಡಿತ್ತು. ಇದರ ವೆಚ್ಚ 55 ಶತಕೋಟಿ ಡಾಲರ್. ಬಹುತೇಕ ಪೆಟ್ರೋಲಿಯಂ ಸಾರಿಗೆಗೆ ಬಳಸಲಾಗುತ್ತದೆ. ಆದ್ದರಿಂದ ಪೆಟ್ರೋಲ್ಗೆ ಶೇ.20 ಎಥೆನಾಲ್ ಮಿಶ್ರಣ ಮಾಡಿದರೆ ವರ್ಷಕ್ಕೆ ಅಂದಾಜು 30,000 ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಲಿದೆ.
- ಎಥೆನಾಲ್ ಉತ್ಪಾದನೆಯ ಈಗಿನ ಸಾಮರ್ಥ್ಯ 700 ಕೋಟಿ ಲೀಟರ್. ಇದನ್ನು 2022ರ ವೇಳೆಗೆ 1,500 ಕೋಟಿ ಲೀಟರ್ಗೆ ವೃದ್ಧಿಸಬೇಕು.
- ಕೇಂದ್ರ ಸಚಿವಾಲಯಗಳು, ರಾಜ್ಯ ಸರಕಾರಗಳು, ವಾಹನ ಉತ್ಪಾದಕರು 2025ರೊಳಗೆ ಪೆಟ್ರೋಲ್ನಲ್ಲಿ ಶೇ.20 ಎಥೆನಾಲ್ ಮಿಶ್ರಣ ಮಾಡಲು ನಿರ್ದಿ ಷ್ಟ ಜವಾಬ್ದಾರಿ ವಹಿಸಬೇಕು.
- ಸಾರ್ವಜನಿಕ ತೈಲ ಕಂಪನಿಗಳು ಮತ್ತು ಆಟೊಮೊಬೈಲ್ ಉತ್ಪಾದಕರು ಸಿದ್ಧತೆ ನಡೆಸಬೇಕು. ಎಥೆನಾಲ್ ಬಳಕೆ ಬಗ್ಗೆ ರಾಷ್ಟ್ರವ್ಯಾಪಿಯಾಗಿ ಜನ ಜಾಗೃತಿ ಅಭಿಯಾನ ನಡೆಸಬೇಕು.
- ಕಬ್ಬು ಮತ್ತು ಧಾನ್ಯ ಆಧಾರಿತ ಎಥೆನಾಲ್ ತಯಾರಿಸುವ ಡಿಸ್ಟಿಲರಿಗಳಿಗೆ ಬಡ್ಡಿ ರಿಯಾಯಿತಿ ಯೋಜನೆ ಕಲ್ಪಿಸಬೇಕು.
- ಕಡಿಮೆ ನೀರು ಬಳಸುವ ಜೋಳದ ಉತ್ಪಾದನೆಗೆ ಉತ್ತೇಜಿಸಬಹುದು. ಇದರಿಂದಲೂ ಎಥೆನಾಲ್ ಸಾಧ್ಯ.
ಕರ್ನಾಟಕದಲ್ಲೂ ಸಿದ್ಧತೆ:
- ಎಲ್ಲೆಲ್ಲಿ ಡಿಸ್ಟಿಲರಿ ಇದೆಯೋ, ಅಂಥ ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ತಯಾರಿಸಬಹುದು. ಹೀಗಾಗಿ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ಹೇರಳ ಅವಕಾಶ ಇದೆ. ಕಾಕಂಬಿ ಮಾತ್ರವಲ್ಲದೆ ಕಬ್ಬಿನ ಹಾಲನ್ನು ಬಳಸಿಯೂ ಎಥೆನಾಲ್ ತಯಾರಿಕೆಗೆ ಅವಕಾಶ ಇದೆ. ಯಾವಾಗ ಬೇಡಿಕೆಗಿಂತ ಹೆಚ್ಚು ಕಬ್ಬು ಉತ್ಪಾದನೆಯಾಗುವುದೋ ಅದನ್ನು ಎಥೆನಾಲ್ ತಯಾರಿಕೆಗೆ ಬಳಸಬಹುದು.
- ರಾಜ್ಯದಲ್ಲಿ 63 ಸಕ್ಕರೆ ಕಾರ್ಖಾನೆಗಳಿಗೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚು ಕಾರ್ಖಾನೆಗಳಿವೆ. ಶೇ.80ರಷ್ಟು ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಗೆ ಸಜ್ಜಾಗಿವೆ.
- ಕಬ್ಬಿನ ಹಾಲಿನಿಂದ ನೇರವಾಗಿ ಎಥೆನಾಲ್ ತಯಾರಿಸಿದರೆ ಪ್ರತಿ ಲೀಟರ್ಗೆ 62 ರೂ. ದರ ಸಿಗುತ್ತದೆ. ಕಾಕಂಬಿಯಿಂದ ತಯಾರಿಸಿದರೆ ಲೀಟರ್ಗೆ 58 ರೂ. ಸಿಗುತ್ತದೆ. ಸಿ ಗ್ರೇಡ್ ಕಾಕಂಬಿಯಲ್ಲಿ ತಯಾರಿಸಿದರೆ 56 ರೂ. ಆದಾಯವಿದೆ. ರೈತರಿಗೂ ಸಕ್ಕರೆ ಕಾರ್ಖಾನೆಗಳಿಗೂ ಸಕಾರಾತ್ಮಕ. ಕೇವಲ ಸಕ್ಕರೆಯನ್ನೇ ಅವಲಂಬಿಸಿದರೆ ರೈತರಿಗೆ ಹಣ ಪಾವತಿಸುವುದು ಅಸಾಧ್ಯ
ಸರಕಾರ ಏನು ಮಾಡಬೇಕು?
- ಎಥೆನಾಲ್ ಬಳಕೆ ಹೆಚ್ಚಿಸುವುದರಿಂದ ಸರಕಾರಕ್ಕೆ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ. ಈ ಉಳಿತಾಯವನ್ನು ಬಳಸಿ ಪೆಟ್ರೋಲ್ನ ರಿಟೇಲ್ ದರವನ್ನು ಸರಕಾರ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಜನ ಸಾಮಾನ್ಯರಿಗೆ ನೇರವಾಗಿ ಪ್ರಯೋಜನ ಸಿಗದು.