ಪಶ್ಚಿಮ ಘಟ್ಟಗಳು
ಪಶ್ಚಿಮ ಘಟ್ಟಗಳು
ಪಶ್ಚಿಮ ಘಟ್ಟಗಳೆಂದರೆ ಆ ಘಟ್ಟ ಪ್ರದೇಶದ ನಿವಾಸಿಗಳ ಆಸ್ತಿ ಅಷ್ಟೇ ಅಲ್ಲ. ಅದು ರಾಜ್ಯದ ಆಸ್ತಿ, ದೇಶದ ಆಸ್ತಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಅದು ಜಾಗತಿಕ ಆಸ್ತಿ. ಕಳೆದ 350 ಕೋಟಿ ವರ್ಷಗಳಿಂದ ನಿಸರ್ಗದ ಐದೂ ಶಕ್ತಿಗಳು ಒಂದಾಗಿ ಕಡೆದು ನಿಲ್ಲಿಸಿದ ಅಪರೂಪದ ಜೀವಶಿಲ್ಪ ಅದು.
ಪಶ್ಚಿಮ ಘಟ್ಟಗಳು
- ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿ ಪರ್ವತ ಶ್ರೇಣಿ ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಪೂರಾತನ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಸಹ್ಯಾದ್ರಿ ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ.
- ಮಹಾರಾಷ್ಟ್ರ-ಗುಜರಾತ್ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಕನ್ಯಾಕುಮಾರಿಯವರೆಗೆ ಇರುವುದು. ಒಟ್ಟು ಸುಮಾರು ೧೬೦೦ ಕಿ.ಮೀ. ಉದ್ದವಿರುವ ಸಹ್ಯಾದ್ರಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ಣಾಟಕದಲ್ಲಿಯೇ ಇದೆ. ಪಶ್ಚಿಮ ಘಟ್ಟಗಳು ಒಟ್ಟು ೬೦೦೦೦ ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ. ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ೪೦% ಭಾಗವನ್ನು ಆವರಿಸಿವೆ.
ಪಶ್ಚಿಮ ಘಟ್ಟಗಳ ಕೊಡುಗೆ
ಪಶ್ಚಿಮ ಘಟ್ಟಗಳ ಕೊಡುಗೆ ಭೂಗ್ರಹಕ್ಕೆ ಮೂರು ವಿಧವಾದದ್ದು.
- ಒಂದು, ಅದೊಂದು ಅಪರೂಪದ ಜೀವಖಜಾನೆ.
- ಎರಡನೆಯದಾಗಿ, ಏಳು ರಾಜ್ಯಗಳಿಗೆ ಅದೊಂದು ಜಲಖಜಾನೆ.
- ಮೂರನೆಯದಾಗಿ ಅದು ಇಡೀ ದಕ್ಷಿಣ ಭಾರತದ ಹವಾಗುಣವನ್ನು ಪ್ರಭಾವಿಸುತ್ತಿದೆ, ನಿರ್ಧರಿಸುತ್ತಿದೆ. ಬರುತ್ತಿರುವ ಭೂಜ್ವರದ ಸನ್ನಿವೇಶದಲ್ಲಿ ಅದರ ಪಾತ್ರ ಇನ್ನಷ್ಟು ಮಹತ್ವದ್ದಾಗುತ್ತಿದೆ. ಹಾಗಾಗಿ ಈ ರಕ್ಷಾಕವಚವನ್ನು ನಾವು ರಕ್ಷಿಸಿಕೊಳ್ಳಬೇಕು.ಪಶ್ಚಿಮಘಟ್ಟಗಳೆಂಬ ಈ ಅಪರೂಪದ ಜಾಗತಿಕ ಖಜಾನೆಯ ಅತಿ ದೊಡ್ಡ ಭಾಗ (ಶೇಕಡಾ 65 ಪಾಲು) ನಮ್ಮ ರಾಜ್ಯದಲ್ಲೇ ಇದೆ.
ಪಶ್ಚಿಮ ಘಟ್ಟಕ್ಕೆ ಸಂಕಷ್ಟ
- ಏರುತ್ತಿರುವ ಜನಸಂಖ್ಯೆ ಹಾಗೂ ಅಭಿವೃದ್ಧಿಯ ಸುನಾಮಿ ಎರಡೂ ಅದನ್ನು ಕಂಡಕಂಡಲ್ಲಿ ಘಾಸಿ ಮಾಡುತ್ತಿವೆ.
ಸಂಕಷ್ಟ ತಪ್ಪಿಸಲು ನೀಡಿದ ವರದಿಗಳು
- ಘಟ್ಟನಿವಾಸಿಗಳ ಬದುಕುವ ಹಕ್ಕುಗಳಿಗೆ ಧಕ್ಕೆ ಆಗದಂತೆ, ಆದರೆ ಘಟ್ಟದ ಲಗ್ಗೆಗೆ ಮಿತಿ ಹಾಕಬಲ್ಲ ಕೆಲವು ಶಿಫಾರಸುಗಳನ್ನು ಅವು ಮಾಡಿವೆ. ಈಗಿರುವ ಅರಣ್ಯ ರಕ್ಷಣಾ ಕಾನೂನುಗಳ ಅಡಿಯಲ್ಲಿ ಕೆಲವು ಪ್ರದೇಶಗಳು (ತಕ್ಕಮಟ್ಟಿಗೆ) ಸುರಕ್ಷಿತ ಇವೆ ನಿಜ. ಅದರಾಚೆಗೂ ಕೆಲವು ನಿರ್ಬಂಧ ಹಾಕಬೇಕೆಂದು ವರದಿ ಹೇಳುತ್ತದೆ.
- ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ ನೀಡಿದ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಲೂ ಇಲ್ಲ, ತಿರಸ್ಕರಿಸಿದ್ದೇವೆ ಎಂದೂ ಹೇಳಲಿಲ್ಲ. ಹಾಗಾಗಿ, ಗಾಡ್ಗೀಳ್ ಹಾಗೂ ಕಸ್ತೂರಿರಂಗನ್ ವರದಿಗಳಿಗೆ ಪರಸ್ಪರ ಸಂಬಂಧವಿದೆ ಎಂಬುದನ್ನು ಒಪ್ಪಬೇಕು. ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಒಂಬತ್ತು ಜನರ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ 2012ರ ಆಗಸ್ಟ್ 17ರಂದು ನೇಮಿಸಿತು. ಈ ಸಮಿತಿಯು ಕ್ಷೇತ್ರಕಾರ್ಯ, ಭೌತಿಕ ಪರಿಶೀಲನೆ ನಡೆಸದೇ ವಾಸ್ತವ ಪರಿಸ್ಥಿತಿ ನೋಡದೇ ಕೇವಲ ಎಂಟೇ ತಿಂಗಳಿನಲ್ಲಿ ವರದಿ ಸಲ್ಲಿಸಿತು.
- ಕಸ್ತೂರಿರಂಗನ್ ವರದಿಯು ಪಶ್ಚಿಮ ಘಟ್ಟವನ್ನು ಎರಡು ವಿಭಾಗದಲ್ಲಿ ಗುರುತಿಸಿ ಹೆಚ್ಚು ಜನವಸತಿ ಇರುವ ಶೇ 63ರಷ್ಟು ಭಾಗವನ್ನು ಕಲ್ಚರಲ್ ಲ್ಯಾಂಡ್ ಸ್ಕೇಪ್ ಎಂದೂ ಜನವಸತಿ ಕಡಿಮೆ ಇರುವ ಅರಣ್ಯ ಹೆಚ್ಚಾಗಿರುವಂತೆ ಕಂಡ ಉಪಗ್ರಹ ಆಧಾರಿತ ಭೂ ಭಾಗವನ್ನು ನ್ಯಾಚುರಲ್ ಲ್ಯಾಂಡ್ ಸ್ಕೇಪ್ ಎಂದೂ ಗುರುತಿಸಿದೆ. ನ್ಯಾಚುರಲ್ ಲ್ಯಾಂಡ್ ಸ್ಕೇಪ್ ಎಂದು ಗುರುತಿಸಿದ ಪ್ರದೇಶದಲ್ಲಿ ರಕ್ಷಿತಾರಣ್ಯ, ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ, ಹುಲಿ ಯೋಜನೆಯ ಮೀಸಲು – ಘೋಷಿತ ಹಾಗೂ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶಗಳು ಇವೆ.
ಈ ವರದಿಯಲ್ಲಿ ಗ್ರಾಮಸ್ಥರನ್ನು ಅವರ ನೆಲೆಯಿಂದ ಹೊರದೂಡುವ ಪ್ರಸ್ತಾವ ಇಲ್ಲ. ಅವರ ನಿತ್ಯ ಜೀವನಕ್ಕೆ ಯಾವುದೇ ತೊಂದರೆ ಉಂಟುಮಾಡುವ ಕ್ರಮಗಳೂ ಇಲ್ಲ. ನಿರ್ಬಂಧಿತ ಏನೇನೆಂದರೆ
(1) ವಾಣಿಜ್ಯ ಉದ್ದೇಶಕ್ಕಾಗಿ ಮರಳು ಮತ್ತು ಕಲ್ಲಿನ ಗಣಿಗಾರಿಕೆಗೆ ಅನುಮತಿ ಇಲ್ಲ (ಆದರೆ ಸ್ವಂತಕ್ಕೆ ಅಂಥ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು; ಕಿರು ಜಲವಿದ್ಯುತ್, ಗಾಳಿಯಂತ್ರ, ಸೋಲಾರ್ ಸ್ಥಾಪಿಸಬಹುದು). (2) ಪರಿಸರಕ್ಕೆ ಅಪಾಯ ತರಬಲ್ಲ (ಅಂದರೆ ಈಗಾಗಲೇ ‘ಕೆಂಪು ಪಟ್ಟಿ’ಗೆ ಸೇರಿದ) ಉದ್ಯಮಗಳು- ಅಂದರೆ ರಸಗೊಬ್ಬರ, ಕೀಟನಾಶಕಗಳ ತಯಾರಿಕೆ ಹಾಗೂ ಕಚ್ಚಾತೈಲ ಸಂಸ್ಕರಣೆ ಮಾಡುವಂತಿಲ್ಲ;
(3) ನೀರಿಗೆ ಕೊಳೆ ಸೇರಿಸುವ ಕಾಫಿ ಪಲ್ಪಿಂಗ್, ಗೋಡಂಬಿ-ಕಿತ್ತಳೆ, ಅನಾನಸ್ ಮತ್ತಿತರ ಆಹಾರ ಸಂಸ್ಕರಣೆಗೆ ಮುಕ್ತ ಅವಕಾಶ ಇಲ್ಲ. ಗ್ರಾಮಸಭೆ ಒಪ್ಪಿದರೆ ಮಾತ್ರ ಅನುಮತಿ.
(4) 20 ಸಾವಿರ ಚ.ಮೀ. ಮೀರಿದ ಭಾರೀ ಕಟ್ಟಡ ಕಟ್ಟುವಂತಿಲ್ಲ; 50 ಹೆಕ್ಟೇರ್ ಮೀರಿದ ಪಟ್ಟಣ ವಿಸ್ತರಣೆ ಇಲ್ಲ.
ಇತರೆ ರಾಜ್ಯದಲ್ಲಿ ವರದಿಯ ಸ್ಥಿತಿ ಗತಿ
- ಕೇರಳದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಮಲೆಯಾಳಂ ಭಾಷೆಗೆ ಅನುವಾದಿಸಿ, ವಿವಾದಿತ ಸ್ಥಳಗಳನ್ನು ಗುರುತಿಸಿ, ಸ್ಥಳೀಯ ಜನರ ಜೊತೆ ಸಮಾಲೋಚನೆ ನಡೆಸಿ ಕೆಲವು ಸ್ಥಳಗಳನ್ನು ಕೈಬಿಡಲು ನಿರ್ಧರಿಸಲಾಗಿದೆ.