Published on: February 10, 2023
ಲಿಥಿಯಂ ನಿಕ್ಷೇಪ ಪತ್ತೆ
ಲಿಥಿಯಂ ನಿಕ್ಷೇಪ ಪತ್ತೆ
ಸುದ್ಧಿಯಲ್ಲಿ ಏಕಿದೆ? ದೇಶದಲ್ಲಿ ಇದೇ ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಸರ್ಕಾರ ಹೇಳಿದೆ.
ಮುಖ್ಯಾಂಶಗಳು
- ಲಿಥಿಯಂ ಎಂಬುದು ಒಂದು ನಾನ್-ಫೆರಸ್ ಲೋಹ ಇ.ವಿ ಬ್ಯಾಟರಿಗಳ ತಯಾರಿಕೆಗೆ ಲಿಥಿಯಂ ಪ್ರಮುಖ ವಸ್ತುವಾಗಿದೆ.
- ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ನಡೆಸಿದ ಶೋಧನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್- ಹೈಮಾನ ಎಂಬಲ್ಲಿ 59 ಲಕ್ಷ ಟನ್ಗಳಷ್ಟು ಲಿಥಿಯಂ ನಿಕ್ಷೇಪವಿರುವುದು ಕಂಡುಬಂದಿವೆ.
- ಲಿಥಿಯಂ ಮತ್ತು ಚಿನ್ನ ಸೇರಿರುವಂತಹ 51 ಖನಿಜ ಬ್ಲಾಕ್ಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ.
- ಈ 51 ಖನಿಜ ಬ್ಲಾಕ್ಗಳಲ್ಲಿ, 5 ಬ್ಲಾಕ್ಗಳು ಚಿನ್ನ ಮತ್ತು ಇತರ ಬ್ಲಾಕ್ಗಳು ಪೊಟ್ಯಾಶ್, ಮಾಲಿಬ್ಡಿನಮ್, ಮೂಲ ಲೋಹಗಳು ಮುಂತಾದ ಸರಕುಗಳಿಗೆ ಸಂಬಂಧಿಸಿದೆ.
- ಜಮ್ಮು ಮತ್ತು ಕಾಶ್ಮೀರ (ಕೇಂದ್ರಾಡಳಿತ ಪ್ರದೇಶ), ಆಂಧ್ರಪ್ರದೇಶ, ಛತ್ತೀಸ್ಗಢ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕ ಸೇರಿ 11 ರಾಜ್ಯಗಳಲ್ಲಿ ಹರಡಿವೆ.
ಖನಿಜ ಪೂರೈಕೆಯನ್ನು ಬಲಪಡಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳು
- ತಾಂತ್ರಿಕ ಕ್ಷೇತ್ರಕ್ಕೆ ನಿರ್ಣಾಯಕ ಖನಿಜ ಪೂರೈಕೆಯನ್ನು ಬಲಪಡಿಸಲು, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ಲಿಥಿಯಂ ಸೇರಿದಂತೆ ಖನಿಜಗಳನ್ನು ಪಡೆಯಲು ಸರ್ಕಾರವು ಹಲವಾರು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಮಧ್ಯೆ ಜಮ್ಮು ಕಾಶ್ಮೀ ರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದು ಆಶಾದಾಯಕ ಬೆಳವಣಿಗೆ ಎನಿಸಿದೆ.
- ಪ್ರಸ್ತುತ, ಭಾರತವು ಲಿಥಿಯಂ, ನಿಕಲ್ ಮತ್ತು ಕೋಬಾಲ್ಟ್ನಂತಹ ಅನೇಕ ಖನಿಜಗಳನ್ನು ಆಮದು ಮಾಡಿಕೊಳ್ಳುತ್ತಿದೆ.
- ಭಾರತದ ಭೂವೈಜ್ಞಾನಿಕ ಸಮೀಕ್ಷೆಯು ಕಾರ್ಯತಂತ್ರ ಮತ್ತು ನಿರ್ಣಾಯಕ ಖನಿಜಗಳ ಮೇಲೆ 115 ಯೋಜನೆಗಳನ್ನು ಮತ್ತು ರಸಗೊಬ್ಬರ ಖನಿಜಗಳ ಮೇಲೆ 16 ಯೋಜನೆಗಳನ್ನು ರೂಪಿಸಿದೆ.
ಮುಂದಿನ ಹಾದಿ
- ಸ್ವಾವಲಂಬಿಯಾಗಲು ದೇಶವು ನಿರ್ಣಾಯಕ ಖನಿಜಗಳನ್ನು ಕಂಡುಹಿಡಿಯುವುದು ಮತ್ತು ಅದನ್ನು ಸಂಸ್ಕರಿಸುವುದು ಬಹಳ ಮುಖ್ಯ
ಏನಿದು, ಲಿಥಿಯಮ್ ಎಂದರೆ?
- ಲಿಥಿಯಮ್ ಬೆಳ್ಳಿಯಂತೆ ಬಿಳಿಯಾದ ಮೃದುವಾದ ಲೋಹ. ಅದನ್ನು ರಸಾಯನ ಶಾಸ್ತ್ರದಲ್ಲಿ ಲಿ ಎಂದು ಗುರುತಿಸುತ್ತಾರೆ. ಪ್ರಪಂಚದ ಅತ್ಯಂತ ಹಗುರವಾದ ಲೋಹ. ಇತರ ಎಲ್ಲ ಆಲ್ಕಲಿ ಲೋಹಗಳಂತೆ ಲಿಥಿಯಮ್ ದಹ್ಯ ವಸ್ತು. ಈ ಕಾರಣದಿಂದಲೇ ಲಿಥಿಯಮ್ಅನ್ನು ಸೀಮೆ ಎಣ್ಣೆಯಲ್ಲಿ (ಖನಿಜ ತೈಲ) ರಕ್ಷಿಸಿರುತ್ತಾರೆ. ಅದನ್ನು ಚಾಕುವಿನಲ್ಲಿ ಕತ್ತರಿಸಿದರೆ ಲೋಹದ ಹೊಳಪನ್ನು ತೋರುತ್ತದೆ. ಆದರೆ ತೇವೇಂಶ ಉಳ್ಳ ಗಾಳಿಗೆ ಒಡ್ಡಿದರೆ ತಕ್ಷಣ ತುಕ್ಕು ಹಿಡಿದು ತನ್ನ ಹೊಳಪನ್ನು ಕಳೆದುಕೊಂಡು ಬೂದು, ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಗುಣದಿಂದಾಗಿ ಲಿಥಿಯಮ್ ಪ್ರಕೃತಿಯಲ್ಲಿ ಸ್ವತಂತ್ರ ರೂಪದಲ್ಲಿ ದೊರೆಯುವುದಿಲ್ಲ. ಅದರ ಕಾಂಪೌಂಡ್ಗಳ ರೂಪದಲ್ಲಿ ಲಭ್ಯವಿರುತ್ತದೆ.
- ಲಿಥಿಯಮ್ ವಿದ್ಯುದ್ವಾಹಿ ಕಣವಾಗಿದ್ದು, ನೀರಿನಲ್ಲಿ ಕರಗಬಲ್ಲ ಗುಣವನ್ನು ಹೊಂದಿರುವುದರಿಂದ ಸಮುದ್ರ ನೀರಿನಲ್ಲಿ ಹಾಗೂ ಜೇಡಿಮಣ್ಣಿನಲ್ಲಿ ಇದು ಲಭ್ಯ. ಲಿಥಿಯಮ್ ಕ್ಲೋರೈಡ್ ಮತ್ತು ಪೆÇಟ್ಯಾಶಿಯಮ್ ಕ್ಲೋರೈಡ್ ಗಳಿಂದ ಲಿಥಿಯಮ್ ಅನ್ನು ಎಲೆಕ್ಟ್ರೋಲೈಟ್ ರೂಪದಲ್ಲಿ ಬೇರ್ಪಡಿಸುತ್ತಾರೆ.
- ಲಿಥಿಯಮ್ ನೀರಿನಲ್ಲಿ ತೇಲುತ್ತದೆ ಹಾಗೂ ನೀರಿನೊಂದಿಗೆ ಪ್ರತಿಕ್ರಿಯಿಸುತ್ತದೆ. ಹೀಗಾಗಿ ಇದನ್ನು ಸಾಧಾರಣವಾಗಿ ಪೆಟ್ರೋಲಿಯಮ್ ಜೆಲ್ಲಿಯಲ್ಲಿ ರಕ್ಷಿಸಿಡುತ್ತಾರೆ.
- ಲಿಥಿಯಮ್ಮನ್ನು ಬೆಂಕಿಯ ಮುಂದಿಟ್ಟಾಗ ವಿಶಿಷ್ಠವಾದ ಕೆಂಪು ಬಣ್ಣವನ್ನು ಹೊಮ್ಮಿಸುತ್ತದೆ. ಆದರೆ ಅದು ಸುಟ್ಟಾಗ ಪ್ರಖರವಾದ ಬೆಳ್ಳಿ ಬಣ್ಣವನ್ನು ತಳೆಯುತ್ತದೆ. ನೀರು ಅಥವಾ ಆವಿಯ ಎದುರಿನಲ್ಲಿ ಆಮ್ಲಜನಕದೊಂದಿಗೆ ಲಿಥಿಯಮ್ ಸಂಪರ್ಕಗೊಂಡಾಗ ಅದು ಹತ್ತಿ ಉರಿಯುತ್ತದೆ. ಲಿಥಿಯಮ್ ದಹ್ಯವಸ್ತುವಾಗಿದ್ದು, ಗಾಳಿಗೂ ನೀರಿಗೂ ಸೋಕಿದಾಗ ಆಸ್ಫೋಟಗೊಳ್ಳಬಹುದು
ನಿಮಗಿದು ತಿಳಿದಿರಲಿ
ಲಿಥಿಯಮ್ ಅಸ್ಥಿರವಾದ ನ್ಯೂಕ್ಲಿಯಸ್ ಹೊಂದಿರುವುದರಿಂದ ಅಣು ವಿಜ್ಞಾನಕ್ಕೆ ನಿಕಟವಾಗಿ ಸಂಬಂಧಿಸಿದೆ. 1932ರಲ್ಲಿ ಲಿಥಿಯಂ ಆಟಂಗಳನ್ನು ಹೀಲಿಯಂ ಆಟಂಗಳಾಗಿ ಪರಿವರ್ತನೆ ಮಾಡಿದುದು ಮೊಟ್ಟಮೊದಲ ಬಾರಿಗೆ ಮಾನವ ನಿರ್ಮಿತ ಅಣು-ಪರಿಣಾಮವೆನಿಸಿದೆ. ಪರಮಾಣು ಶಕ್ತಿಯ ನಿರ್ಮಾಣದಲ್ಲಿ ಇದರ ಪಾತ್ರ ದೊಡ್ಡದು.
ಲಿಥಿಯಮ್ ಮತ್ತು ಅದರ ಕಾಂಪೌಂಡುಗಳಿಂದ ಅನೇಕ ಕೈಗಾರಿಕಾ ಪ್ರಯೋಜನಗಳಿವೆ.
- ಶಾಖವನ್ನು ತಡೆದುಕೊಳ್ಳ ಬಲ್ಲ ಗಾಜು, ಪಿಂಗಾಣಿ, ವಿಮಾನಗಳನ್ನು ನಿರ್ಮಿಸಲು ಬೇಕಾಗುವ ಹಗುರ ಹಾಗೂ ಶಕ್ತಿಶಾಲಿ ಮಿಶ್ರಲೋಹಗಳ ಉತ್ಪಾದನೆ, ಲಿಥಿಯಮ್-ಅಯಾನ್ ಬ್ಯಾಟರಿಗಳ ನಿರ್ಮಾಣದಲ್ಲಿ ಇವು ಉಪಯುಕ್ತ.
- ಗಮನಾರ್ಹ ಪ್ರಮಾಣದಲ್ಲಿ ಎಲ್ಲ ಜೀವರಾಶಿಗಳಲ್ಲೂ ಲಿಥಿಯಮ್ ಅಂಶವಿರುತ್ತದೆ. ಆದರೆ ಅದು ಇಲ್ಲದಿದ್ದರೂ ಮನುಷ್ಯ ಸಂಪೂರ್ಣವಾಗಿ ಆರೋಗ್ಯವಾಗಿರಬಲ್ಲ. ಹೀಗಾಗಿ, ಅದರ ಅಸ್ತಿತ್ವ ಯಾವ ನಿರ್ದಿಷ್ಟ ಜೀವಕ್ರಿಯೆಗೂ ಸಂಬಂಧಿಸಿಲ್ಲ. ಆದರೆ ಮನುಷ್ಯನ ದೇಹಕ್ಕೆ ಲಿಥಿಯಮ್ ಅಯಾನುಗಳನ್ನು ನೀಡಿ ಮನಸ್ಥಿತಿಯನ್ನು ಸ್ಥಿಮಿತಕ್ಕೆ ತರಲು ಸಾಧ್ಯವಿದೆ. ಲಿಥಿಯಮ್ ನರಮಂಡಲದ ಮೇಲೆ ಪ್ರಭಾವಬೀರಬಲ್ಲದು.
ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ (ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ) ಬಗ್ಗೆ
- ರೈಲ್ವೇಗಳಿಗೆ ಕಲ್ಲಿದ್ದಲು ನಿಕ್ಷೇಪಗಳನ್ನು ಕಂಡುಹಿಡಿಯಲು 1851 ರಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ಅನ್ನು ಸ್ಥಾಪಿಸಲಾಯಿತು. ವರ್ಷಗಳಲ್ಲಿ, ಜಿಎಸೈ ದೇಶದ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಿರುವ ಭೂ-ವಿಜ್ಞಾನದ ಮಾಹಿತಿಯ ಭಂಡಾರವಾಗಿ ಬೆಳೆದಿದೆ. ಅದೇ ರೀತಿ ಅಂತಾರಾಷ್ಟ್ರೀಯ ಖ್ಯಾತಿಯ ಭೌಗೋಳಿಕ-ವೈಜ್ಞಾನಿಕ ಸಂಸ್ಥೆಯ ಸ್ಥಾನಮಾನವನ್ನು ಸಹ ಪಡೆದುಕೊಂಡಿದೆ.
- ರಾಷ್ಟ್ರೀಯ ಭೂವೈಜ್ಞಾನಿಕ ಮಾಹಿತಿ ಮತ್ತು ಖನಿಜ ಸಂಪನ್ಮೂಲ ಮೌಲ್ಯಮಾಪನವನ್ನು ರಚಿಸುವುದು ಮತ್ತು ನವೀಕರಿಸುವುದು ಇದರ ಮುಖ್ಯ ಕಾರ್ಯಗಳು.
- ಈ ಉದ್ದೇಶಗಳನ್ನು ನೆಲದ ಸಮೀಕ್ಷೆಗಳು, ವಾಯುಗಾಮಿ ಮತ್ತು ಸಾಗರ ಸಮೀಕ್ಷೆಗಳು, ಖನಿಜ ಶೋಧನೆ ಮತ್ತು ತನಿಖೆಗಳು, ಬಹು-ಶಿಸ್ತಿನ ಭೂವೈಜ್ಞಾನಿಕ, ಭೂ-ತಾಂತ್ರಿಕ, ಭೂ-ಪರಿಸರ ಮತ್ತು ನೈಸರ್ಗಿಕ ಅಪಾಯಗಳ ಅಧ್ಯಯನಗಳು, ಗ್ಲೇಶಿಯಾಲಜಿ, ಸಿಸ್ಮೋ-ಟೆಕ್ಟೋನಿಕ್ ಅಧ್ಯಯನ ಮತ್ತು ಮೂಲಭೂತ ಸಂಶೋಧನೆಗಳ ಮೂಲಕ ಸಾಧಿಸಲಾಗುತ್ತದೆ.
- ಜಿಎಸ್ಐಯ ಮುಖ್ಯ ಪಾತ್ರವು ವಸ್ತುನಿಷ್ಠ, ನಿಷ್ಪಕ್ಷಪಾತ ಮತ್ತು ನವೀಕೃತ ಭೌಗೋಳಿಕ ಪರಿಣತಿ ಮತ್ತು ಎಲ್ಲಾ ರೀತಿಯ ಭೂವೈಜ್ಞಾನಿಕ ಮಾಹಿತಿಯನ್ನು ಒದಗಿಸುವುದನ್ನು ಒಳಗೊಂಡಿರುತ್ತದೆ, ನೀತಿ-ನಿರ್ಮಾಣ ನಿರ್ಧಾರಗಳು ಮತ್ತು ವಾಣಿಜ್ಯ ಮತ್ತು ಸಾಮಾಜಿಕ-ಆರ್ಥಿಕ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತದೆ
ಪ್ರಶ್ನೆ
- ಜಾಗತಿಕವಾಗಿ ಲಿಥಿಯಂ ನಿಕ್ಷೇಪಗಳು ಎಲ್ಲೆಲ್ಲಿ ಕಂಡು ಬರುತ್ತವೆ ಎಂಬುದನ್ನು ವಿವರಿಸಿ ಮತ್ತು ಭಾರತದಲ್ಲಿ ಲಿಥಿಯಂ ಯಾವ ಸ್ಥಳದಲ್ಲಿ ಕಂಡುಬಂದಿದೆ ಎಂಬುದನ್ನು ತೋರಿಸಿ
- ಲಿಥಿಯಂ ಲೋಹದ ಗುಣ ವಿಶೇಷತೆಗಳನ್ನು ವಿವರಿಸಿ ಮತ್ತು ಅದರ ಕೈಗಾರಿಕಾ ಪ್ರಯೋಜನಗಳ ಕುರಿತು ಟಿಪ್ಪಣಿ ಬರೆಯಿರಿ