Published on: December 16, 2021
‘ವಿಜಯ ದಿವಸ್’
‘ವಿಜಯ ದಿವಸ್’
ಸುದ್ಧಿಯಲ್ಲಿ ಏಕಿದೆ ? ಪಾಕಿಸ್ತಾನ ವಿರುದ್ಧ 1971ರ ಯುದ್ಧದಲ್ಲಿ ಗೆಲುವು ಸಾಧಿಸಿದ ದಿನವು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಹಾಗಾಗಿಯೇ ಪ್ರತಿ ವರ್ಷದ ಡಿ.16ರಂದು ‘ವಿಜಯ ದಿವಸ್’ ಆಚರಿಸಲಾಗುತ್ತಿದೆ. ಅದರಲ್ಲೂ, ಭಾರತವೇ ಮುಂದೆ ನಿಂತು ಬಾಂಗ್ಲಾದೇಶವನ್ನು ಸೃಷ್ಟಿಸಿದ, ಪಾಕಿಸ್ತಾನವನ್ನು ಬಗ್ಗುಬಡಿದ ದಿನಕ್ಕೆ ಇಂದು ಸುವರ್ಣ ಮಹೋತ್ಸವ ಸಂಭ್ರಮ.
ಏಕೆ ನಡೆಯಿತು ಯುದ್ಧ?
- ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ)ದಲ್ಲಿ ಪಾಕ್ ಸೈನಿಕರ ದೌರ್ಜನ್ಯ, ಆಂತರಿಕ ಬಿಕ್ಕಟ್ಟಿನಿಂದಾಗಿ ಜನ ತಮ್ಮ ದೇಶದ ವಿರುದ್ಧವೇ ದಂಗೆಯೆದ್ದರು. ಅಲ್ಲದೆ, ಪೂರ್ವ ಪಾಕಿಸ್ತಾನದಿಂದ ಲಕ್ಷಾಂತರ ಜನ ಭಾರತಕ್ಕೆ ಬಂದು, ಆಶ್ರಯಕ್ಕಾಗಿ ಕೈಚಾಚಿ ನಿಂತರು. ಆಗ, ವಿವಾದ ಬಗೆಹರಿಸಿಕೊಳ್ಳಲು ಪಾಕಿಸ್ತಾನ ನಿರಾಕರಿಸಿತು. ಹಾಗಾಗಿ ಉಭಯ ರಾಷ್ಟ್ರಗಳ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಯಿತು. ಇದೇ ಬಿಕ್ಕಟ್ಟು ಯುದ್ಧಕ್ಕೆ ಮುನ್ನುಡಿ ಬರೆಯಿತು.
ಇಂದಿರಾ ಗಾಂಧಿ ದಿಟ್ಟತನ
- ಪೂರ್ವ ಪಾಕಿಸ್ತಾನದವರ ವಲಸೆಯಿಂದ ಚಿಂತೆಗೀಡಾಗಿದ್ದ ಪ್ರಧಾನಿ ಇಂದಿರಾ ಗಾಂಧಿಯವರು ಯಾವ ಕ್ರಮಕ್ಕೂ ಸಿದ್ಧ ಎಂಬ ಸುದ್ದಿ ತಿಳಿದಿದ್ದ ಪಾಕ್ ಸೇನಾ ಸರ್ವಾಧಿಕಾರಿ ಜನರಲ್ ಯಾಹ್ಯಾ ಖಾನ್ ಕುಪಿತಗೊಂಡಿದ್ದ. ಅಲ್ಲದೆ, ವಿದೇಶಿ ಪತ್ರಕರ್ತರೆದುರು ”ಆಕೆ (ಇಂದಿರಾ ಗಾಂಧಿ) ಬಯಸಿದರೆ ಯುದ್ಧಕ್ಕೆ ಸಿದ್ಧ,” ಎಂದಿದ್ದ. ಅತ್ತ, ಅಮೆರಿಕದಿಂದಲೂ ಭಾರತದ ಮೇಲೆ ಒತ್ತಡ ಇತ್ತು. ಆದರೆ, ಇದಾವುದಕ್ಕೂ ಲೆಕ್ಕಿಸದ ಇಂದಿರಾ ಗಾಂಧಿ ದಿಟ್ಟತನ ಮೆರೆದರು. ಅಮೆರಿಕದ ಒತ್ತಡಕ್ಕೂ ಮಣಿಯದೆ ಸೇನೆಗೆ ಸ್ವಾತಂತ್ರ್ಯ ನೀಡಿದರು. ಬಳಿಕ ‘ಉಕ್ಕಿನ ಮಹಿಳೆ’ ಎಂದು ಖ್ಯಾತರಾದರು.
- ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ನೇತೃತ್ವದಲ್ಲಿ 1971ರ ಡಿ.3ರಂದು ಪಾಕಿಸ್ತಾನದ ಜನರ ಹಕ್ಕುಗಳ ರಕ್ಷಣೆಗಾಗಿ ಭಾರತ ಯುದ್ಧ ಘೋಷಿಸಿತು. ಯುದ್ಧದ ವೇಳೆ ಭಾರತದ ನೌಕಾಪಡೆಯು ಕರಾಚಿ ಬಂದರಿನ ಮೇಲೆ ದಾಳಿ ಮಾಡಿತು. ಡಿ.14ರಂದು ವಾಯುಪಡೆಯು ಪೂರ್ವ ಪಾಕಿಸ್ತಾನದ ಗವರ್ನರ್ ನಡೆಸುತ್ತಿದ್ದ ಸಭೆಯ ಕಟ್ಟಡದ ಮೇಲೆಯೇ ದಾಳಿ ಮಾಡಿತು. ಕೊನೆಗೆ ಡಿ.16ರಂದು ಪಾಕ್ ಸೈನಿಕರು ಢಾಕಾದಲ್ಲಿಭಾರತಕ್ಕೆ ಶರಣಾದರು. ಆಗಲೇ ಬಾಂಗ್ಲಾದೇಶವೊಂದು ಉದಯಿಸಿತು.
ಭಾರತ–ಬಾಂಗ್ಲಾ: ಅರ್ಧ ಶತಮಾನದ ಬಂಧ
- ಬಾಂಗ್ಲಾ ವಿಮೋಚನೆಯ 50ನೇ ವರ್ಷಾಚರಣೆಯ ಸಂಭ್ರಮದಲ್ಲಿ, ಭಾರತ–ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಮೈತ್ರಿಗೆ ಅರ್ಧ ಶತಮಾನ ಸಂದಿರುವ ಮೈಲಿಗಲ್ಲೂ ಸೇರಿಕೊಂಡಿದೆ. 1971ರ ಡಿಸೆಂಬರ್ 6ರಂದು ಬಾಂಗ್ಲಾದೇಶವನ್ನು ಸಾರ್ವಭೌಮ ದೇಶ ಎಂದು ಮೊದಲು ಪರಿಗಣಿಸಿದ್ದು ಭಾರತ. ಐತಿಹಾಸಿಕ ಮತ್ತು ಭೌಗೋಳಿಕ ದೃಷ್ಟಿಯಿಂದ ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಸಾಮಾಜಿಕ, ಸಾಂಸ್ಕೃತಿಕ, ಭಾಷಿಕ ಅಂಶಗಳಲ್ಲಿ ನಂಟಿದೆ.
- ವಿಮೋಚನೆಯ ನಂತರ ಬಾಂಗ್ಲಾದೇಶಕ್ಕೆ ಪೆಟ್ಟು ನೀಡಿದ್ದು 1975ರಲ್ಲಿ ನಡೆದ ಶೇಕ್ ಮುಜೀಬರ್ ರಹಮಾನ್ ಅವರ ಹತ್ಯೆ. ಇದು ಭಾರತಕ್ಕೂ ಆಘಾತ ನೀಡಿತು. ವಿವಿಧ ರಾಜಕೀಯ ಬದಲಾವಣೆಗಳ ಬಳಿಕ, ಬಾಂಗ್ಲಾದೇಶವು ಸೇನಾ ಆಡಳಿತಕ್ಕೊಳಪಟ್ಟಿದ್ದರಿಂದ ಮೈತ್ರಿ ಮೇಲೆ ಗಂಭೀರ ಪರಿಣಾಮ ಉಂಟಾಯಿತು. 1990ರ ದಶಕದಲ್ಲಿ ಬಾಂಗ್ಲಾ ದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆ, ನಂತರದ ದಿನಗಳಲ್ಲಿ ತೆಗೆದುಕೊಂಡ ಪಕ್ವ ನಿರ್ಧಾರಗಳು ಮತ್ತು ಆರ್ಥಿಕತೆಯಲ್ಲಿ ಕಂಡುಬಂದ ಚೇತರಿಕೆ ಮೊದಲಾದ ಅಂಶಗಳು ಢಾಕಾ ಮತ್ತು ದೆಹಲಿ ನಡುವಿನ ಸಂಬಂಧಗಳಲ್ಲಿ ಹೊಸಯುಗಕ್ಕೆ ಕಾರಣವಾದವು.
- ಕೋವಿಡ್ ನಿಯಂತ್ರಿಸುವ ಲಸಿಕೆಗಳು ಸಿದ್ಧವಾದ ತಕ್ಷಣ ಬಾಂಗ್ಲಾ ಸೇರಿದಂತೆ ಅಕ್ಕಪಕ್ಕದ ದೇಶಗಳಿಗೆ ಆದ್ಯತೆ ನೀಡುವುದಾಗಿ ಭಾರತ ಘೋಷಿಸಿತ್ತು
- 2015ರ ಭೂ ಗಡಿ ಒಪ್ಪಂದವು (ಎಲ್ಬಿಎ) ಉಭಯ ದೇಶಗಳ ಗಾಢ ಮೈತ್ರಿಗೆ ಪ್ರಮುಖ ನಿದರ್ಶನ. ಪ್ರಾದೇಶಿಕ ಭದ್ರತೆ ಹಾಗೂ ಅಭಿವೃದ್ಧಿಯಲ್ಲಿ ಇದರ ಪಾತ್ರ ಮಹತ್ವದ್ದು
- ಭಾರತದ 72ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ಬಾಂಗ್ಲಾದೇಶ ಸೇನೆ ಭಾಗಿಯಾಗಿತ್ತು. ಈವರೆಗೆ ಪರೇಡ್ನಲ್ಲಿ ಫ್ರಾನ್ಸ್ ಮತ್ತು ಯುಎಇ ಸೇನೆ ಮಾತ್ರ ಭಾಗಿಯಾದ ಶ್ರೇಯ ಹೊಂದಿದ್ದವು
- ಉಭಯ ದೇಶಗಳು ಹಲವು ಬಾರಿ ಜಂಟಿ ಸೇನಾ (ಸಂಪ್ರೀತಿ) ಮತ್ತು ನೌಕಾ ಕಸರತ್ತು (ಮಿಲಾನ್) ನಡೆಸಿವೆ
- ಎರಡೂ ದೇಶಗಳು 54 ನದಿಗಳಲ್ಲಿ ಪಾಲು ಹೊಂದಿವೆ. ದ್ವಿಪಕ್ಷೀಯ ಜಂಟಿ ನದಿ ಆಯೋಗವು (ಜೆಆರ್ಸಿ) ನದಿ ವ್ಯವಸ್ಥೆಯಲ್ಲಿ ಉಭಯ ದೇಶಗಳಿಗೂ ಗರಿಷ್ಠ ಪ್ರಯೋಜನಗಳನ್ನು ಒದಗಿಸುವ ಸಂಪರ್ಕ ಕೊಂಡಿಯಾಗಿ 1972ರಿಂದಲೂ ಕೆಲಸ ಮಾಡುತ್ತಿದೆ
- 2011ರಿಂದ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ವಲಯ (ಎಸ್ಎಎಫ್ಟಿಎ) ಒಪ್ಪಂದದಡಿ ಭಾರತದ ಜೊತೆ ಸುಂಕರಹಿತ ವ್ಯಾಪಾರ ಮಾಡಲು ಬಾಂಗ್ಲಾಕ್ಕೆ ಅವಕಾಶ ಮಾಡಿಕೊಡಲಾಗಿದೆ
- ಭಾರತದ ಹಲ್ದಿಬಾಡಿ ಮತ್ತು ಬಾಂಗ್ಲಾದ ಚಿಲಾಹಟಿ ನಡುವೆ ರೈಲ್ವೆ ಸಂಪರ್ಕ ಯೋಜನೆಯನ್ನು ಜಂಟಿಯಾಗಿ ಉದ್ಘಾಟಿಸಲಾಯಿತು
- ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಚುನಾವಣೆಯಲ್ಲಿ ಭಾರತವನ್ನು ಬಾಂಗ್ಲಾದೇಶ ಬೆಂಬಲಿಸಿದೆ