Published on: April 30, 2023
ಸಂವಿಧಾನದ ತಿದ್ದುಪಡಿಗಳು
ಸಂವಿಧಾನದ ತಿದ್ದುಪಡಿಗಳು
ಭಾರತದ ಸಂವಿಧಾನವು ದೇಶದ ಸ್ಥಿತಿಗತಿ, ಬೇಡಿಕೆಗೆ ಅನುಗುಣವಾಗಿ ಕೂಡ ತಿದ್ದುಪಡಿ ಮಾಡಲು ಸಂವಿಧಾನ ರಚನಾಕಾರರು ಅವಕಾಶ ಕಲ್ಪಿಸಿದ್ದಾರೆ. ಭಾರತದ ಸಂವಿಧಾನವು ಜೂನ್ 1951 ರಿಂದ ತಿದ್ದುಪಡಿಯಾಗುತ್ತ ಬಂದಿದೆ.
ಮುಖ್ಯಾಂಶಗಳು
- ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವಿದೆ.
- ಜನರ ಆಶೋತ್ತರನುಗುಣವಾಗಿ ಸಂವಿಧಾನದಲ್ಲಿ ಬದಲಾವಣೆ ಯಾಗಬೇಕು ಆದರೆ ಪದೇ ಪದೇ ಆಗಬಾರದು, ಪದೇ ಪದೇ ಅಂತಹ ಬದಲಾವಣೆಗಳಾದರೆ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ಬರುತ್ತದೆ. ಸಂವಿಧಾನದ ಮೂಲ ರಚನೆಗೆ ಧಕ್ಕೆ ತರಬಾರದೆಂದು, ಸುಪ್ರೀಂ ಕೋರ್ಟ್ ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಸಂಸತ್ತಿಗೆ ನಿರ್ದೇಶಿಸಿದೆ.
ಸಂವಿಧಾನ ತಿದ್ದುಪಡಿ ಮಾಡುವ ವಿಧಾನ
- ಭಾರತದ ಸಂವಿಧಾನವನ್ನು ಸಂಸತ್ತು ತಿದ್ದುಪಡಿ ಮಾಡಬಹುದು ಆದರೆ ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡುವ ವಿಧಾನಗಳು ಬ್ರಿಟನ್ ಸಂವಿಧಾನವನ್ನು ತಿದ್ದುಪಡಿ ಮಾಡುವಷ್ಟು ಸುಲಭವೂ ಅಲ್ಲ ಅಮೇರಿಕ ಸಂವಿಧಾನವನ್ನು ತಿದ್ದುಪಡಿ ಮಾಡುವಷ್ಟು ಕಠಿಣವೂ ಅಲ್ಲ, ಆದುದ್ದರಿಂದ ಭಾರತದ ಸಂವಿಧಾನವನ್ನು ನಮ್ಯ ಹಾಗೂ ಅನಮ್ಯ ಸಂವಿಧಾನ ಎನ್ನುವರು.
- ಭಾರತದ ಸಂವಿಧಾನದ ತಿದ್ದುಪಡಿ ವಿಧಿ ವಿಧಾನಗಳನ್ನು ದಕ್ಷಿಣ ಆಫ್ರಿಕಾದ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
ತಿದ್ದುಪಡಿಯ ವಿಧಾನಗಳು
- ಉದ್ದೇಶಕ್ಕಾಗಿ ನಿಗದಿಪಡಿಸಿದ ಕಾರ್ಯವಿಧಾನಕ್ಕೆ ಅನುಗುಣವಾಗಿ ಯಾವುದೇ ನಿಬಂಧನೆಯ ಸೇರ್ಪಡೆ, ಬದಲಾವಣೆ ಅಥವಾ ರದ್ದುಗೊಳಿಸುವ ಮೂಲಕ ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಎಂದು ಅದು ಹೇಳುತ್ತದೆ.
- ತಿದ್ದುಪಡಿಯ ವಿಧಿ ವಿಧಾನಗಳನ್ನು ಸಂವಿಧಾನದ 20ನೇ ಭಾಗದಲ್ಲಿ ವಿವರಿಸಲಾಗಿದೆ. ಈ ಭಾಗದಲ್ಲಿ 2 ವಿಧದಲ್ಲಿ ಸಂವಿಧಾನದ ತಿದ್ದುಪಡಿಯ ಬಗ್ಗೆ ಹೇಳುತ್ತದೆ.
- ಸರಳ ಬಹುಮತ ದಿಂದ ಸಂವಿಧಾನದ ತಿದ್ದುಪಡಿ: ಸರಳ ಬಹುಮತವಾಗಿದ್ದು ಇದಕ್ಕೆ 368 ನೇ ವಿಧಿ ಅನ್ವಯವಾಗುವುದಿಲ್ಲ
- ವಿಶೇಷ ಬಹುಮತ ದಿಂದ- ಸಂವಿಧಾನದ ತಿದ್ದುಪಡಿ.
- 368ನೇ ವಿಧಿ ಅನ್ವಯ 2 ವಿಧದಲ್ಲಿ ಮಾಡಲಾಗುತ್ತದೆ.
- ವಿಶೇಷ ಬಹುಮತ
- ವಿಶೇಷ ಬಹುಮತ +ಅರ್ಧದಷ್ಟು ರಾಜ್ಯಗಳ ಶಾಸಕಾಂಗಗಳು ಸರಳ ಬಹುಮತದಿಂದ ಅಂಗೀಕರಿಸುವುದು.
ಸರಳ ಬಹುಮತ ಎಂದರೇನು?
- ಸಂವಿಧಾನದಲ್ಲಿನ ಹಲವಾರು ನಿಬಂಧನೆಗಳನ್ನು ವಿಧಿ 368 ರ ವ್ಯಾಪ್ತಿಯಿಂದ ಹೊರಗಿರುವ ಸಂಸತ್ತಿನ ಎರಡು ಸದನಗಳ ಸರಳ ಬಹುಮತದಿಂದ ತಿದ್ದುಪಡಿ ಮಾಡಬಹುದು.
ಸರಳ ಬಹುಮತದಿಂದ ತಿದ್ದುಪಡಿ ಮಾಡಬಹುದಾದ ವಿಷಯಗಳು
- ಹೊಸ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ,
- ರಾಜ್ಯಗಳ ಗಡಿ ಬದಲಾವಣೆ, ವಿಸ್ತೀರ್ಣ, ಹೆಸರುಗಳ ಬದಲಾಯಿಸುವುದು,
- ರಾಜ್ಯಗಳಲ್ಲಿ ವಿಧಾನ ಪರಿಷತ್ತನ್ನು ಸ್ಥಾಪಿಸುವ ಅಥವಾ ವಜಾಗೊಳಿಸುವುದು,
- ಅಧಿಕೃತ ಭಾಷೆಯ ಬಳಕೆ ಬಗ್ಗೆ,
- ಪೌರತ್ವ – ಪಡೆಯುವ ಮತ್ತು ಕಳೆದುಕೊಳ್ಳುವ ಬಗ್ಗೆ,
- ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಚುನಾವಣೆಗಳು,
- ಐದನೇ ಅನುಸೂಚಿ – ಪರಿಶಿಷ್ಟ ಪ್ರದೇಶಗಳು ಮತ್ತು ಪರಿಶಿಷ್ಟ ಪಂಗಡಗಳ ಆಡಳಿತ,
- ಆರನೇ ಅನುಸೂಚಿ ಬಗ್ಗೆ – ಬುಡಕಟ್ಟು ಪ್ರದೇಶಗಳ ಆಡಳಿತ.
ವಿಶೇಷ ಬಹುಮತ ಎಂದರೇನು?
- ಈ ವಿಧಾನದಲ್ಲಿ ಸಂವಿಧಾನದ ವಿಧಿ 368(2) ಅಡಿಯಲ್ಲಿ ಕೆಲವು ವಿಧಿಗಳನ್ನು ಸಂಸತ್ತಿನ ಉಭಯ ಸದನಗಳಲ್ಲಿ ಹಾಜರಿದ್ದ ಸದಸ್ಯರಲ್ಲಿ 2/3 ರಷ್ಟು ಬಹುಮತ (ಒಟ್ಟು ಸದನದ ಸದಸ್ಯರ ಶೇಕಡಾ 50ಕ್ಕಿಂತ ಹೆಚ್ಚಾಗಿರಬೇಕು) ವನ್ನು ಪಡೆದು ತಿದ್ದುಪಡಿ ಮಾಡಲಾಗುತ್ತದೆ
ಈ ವಿಶೇಷ ಬಹು ಮತದ ಮೂಲಕ ತಿದ್ದುಪಡಿ ಮಾಡುವ ವಿಷಯಗಳೆಂದರೆ
- ಮೂಲಭೂತ ಹಕ್ಕುಗಳು
- ರಾಜ್ಯ ನಿರ್ದೇಶಕ ತತ್ವಗಳು
- ಮೊದಲ ಮತ್ತು ಮೂರನೇ ವರ್ಗದಲ್ಲಿ ಸೇರದ ವಿಷಯಗಳಿಗೆ ಸಂಬಂಧಿಸಿದಂತಹ ವಿಷ್ಯಗಳನ್ನು ತಿದ್ದುಪಡಿ ಮಾಡಲಾಗುವುದು, ಆದರೆ ತಿದ್ದುಪಡಿಗಳು ಸಂವಿಧಾನದ ಮೂಲಭೂತ ರಚನೆಯೊಳಗೆ ಇರಬೇಕು.
ಅರ್ಧ ರಾಜ್ಯಗಳ ಒಪ್ಪಿಗೆಯೊಂದಿಗೆ ವಿಶೇಷ ಬಹುಮತ:
- ಸಂವಿಧಾನದ ಸಂವಿಧಾನದ ನಿಬಂಧನೆಗಳು ಫೆಡರಲ್ ರಚನೆಗೆ ಸಂಬಂಧಿಸಿವೆ ಸಂಸತ್ತಿನ ವಿಶೇಷ ಬಹುಮತದಿಂದ ಮತ್ತು ಸರಳ ಬಹುಮತದಿಂದ ಅರ್ಧದಷ್ಟು ರಾಜ್ಯ ಶಾಸಕಾಂಗಗಳ ಒಪ್ಪಿಗೆಯೊಂದಿಗೆ ಮಾತ್ರ ತಿದ್ದುಪಡಿ ಮಾಡಬಹುದು.
- ರಾಜ್ಯಗಳ ಅಂಗೀಕಾರದ ಅಗತ್ಯವಿರುವ ಪ್ರಮುಖ ನಿಬಂಧನೆಗಳೆಂದರೆ ರಾಷ್ಟ್ರಪತಿ(54, 55 ನೇ ವಿಧಿ) ಚುನಾವಣೆ, ಸುಪ್ರೀಂ ಕೋರ್ಟ್ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಚುನಾವಣೆ, ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯ, 7ನೇ ಅನುಸೂಚಿ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಕಾರ್ಯಂಗಿಯ ಅಧಿಕಾರಗಳ ಹಂಚಿಕೆ ಮತ್ತು ಕೇಂದ್ರ ಮತ್ತು ರಾಜ್ಯಗಳ ಕಾರ್ಯಕಾರಿ ಅಧಿಕಾರದ ಪ್ರಮಾಣ.
- ಬಹು ಮುಖ್ಯವಾಗಿ, 368 ನೇ ವಿಧಿಯ ತಿದ್ದುಪಡಿಗೆ ರಾಜ್ಯಗಳ ಅನುಮೋದನೆಯ ಅಗತ್ಯವಿದೆ.
ಸಂಸತ್ತಿನ ತಿದ್ದುಪಡಿ ಅಧಿಕಾರಕ್ಕೆ ನಿರ್ಬಂಧಗಳು ಯಾವುವು?
- 1973 ರ ಕೇಶವಾನಂದ ಭಾರತಿ ಪ್ರಕರಣದಲ್ಲಿ, ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವಿದೆ ಆದರೆ ಅದು “ಸಂವಿಧಾನದ ಮೂಲ ರಚನೆಯನ್ನು” ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
- ಮೂಲಭೂತ ರಚನೆಯ ಘಟಕಗಳನ್ನು ನ್ಯಾಯಾಲಯವು ಸ್ಪಷ್ಟವಾಗಿ ವ್ಯಾಖ್ಯಾನಿಸುವುದಿಲ್ಲ. ಆದಾಗ್ಯೂ, ಜಾತ್ಯತೀತತೆ, ಸಮಾನತೆ, ಫೆಡರಲಿಸಂ, ಅಧಿಕಾರದ ಪ್ರತ್ಯೇಕತೆ, ಸ್ವಾತಂತ್ರ್ಯ ನ್ಯಾಯಾಂಗ, ಕಾನೂನಿನ ಆಳ್ವಿಕೆಯಂತಹ ಪ್ರಸ್ತಾವನೆಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಂತಹ ನಿಬಂಧನೆಗಳಿಗೆ ಇದನ್ನು ವ್ಯಾಖ್ಯಾನಿಸಲಾಗಿದೆ.
ತಿದ್ದುಪಡಿಯ ಕ್ರಮ
ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಈ ಕೆಳಗಿನ ಕ್ರಮಗಳನ್ನು 368 ನೇ ವಿಧಿಯಲ್ಲಿ ತಿಳಿಸಲಾಗಿದೆ.
- ಸದನದಲ್ಲಿ (ರಾಜ್ಯಸಭೆ/ ಲೋಕಸಭೆ) ಮಸೂದೆ ಮಂಡನೆ
- ಸಂಸತ್ತಿನಲ್ಲಿ(ಉಭಯ ಸದನಗಳ) ಅನೊಮೋದನೆ
- ರಾಷ್ಟ್ರಪತಿಗಳ ಅಂಗೀಕಾರ
- ಕಾಯಿದೆ
ನಿಮಗಿದು ತಿಳಿದಿರಲಿ
- ತಿದ್ದುಪಡಿ ಮಾಡಲು ಸಂಸತ್ತಿಗೆ ಮಾತ್ರ ಅಧಿಕಾರವಿದೆ. ಆದರೆ ರಾಜ್ಯ ಶಾಸನ ಸಭೆಗಳಿಗೆ ಅಧಿಕಾರವಿಲ್ಲ
- ರಾಜ್ಯಕ್ಕೆ ಸಂಬಂದಿಸಿದ ಹಾಗೂ ಸಂಯುಕ್ತ ವಿಷಯಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲು ರಾಜ್ಯಗಳ ಅಭಿಪ್ರಾಯ ಪಡೆಯಬೇಕು
- ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ ನಂತರ ರಾಷ್ಟ್ರಪತಿಯವರ ಅಂಗೀಕಾರಕ್ಕೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಯವರು ಅಂಗೀಕಾರ ನೀಡಲೇಬೇಕಾಗುತ್ತದೆ. ಸಾಮಾನ್ಯ ಕಾನೂನು ಸಂಬಂಧಿಸಿದ ಮಸೂದೆಗಳಂತೆ ತಮ್ಮ ಸಮ್ಮತಿ ತಡೆಯುವುದಕ್ಕಾಗಲಿ ಪುನರ್ ಪರಿಶೀಲನೆಗೆಂದು ಸಂಸತ್ತಿಗೆ ಹಿಂದಿರಿಸುವುದಕ್ಕಾಗಲಿ ಅವಕಾಶವಿಲ್ಲ ಈ ವಿಷಯದಲ್ಲಿ ಇವರಿಗೆ ವಿಟೋ ಅಧಿಕಾರವಿಲ್ಲ. ಸಂವಿಧಾನದ 24 ನೆ ತಿದ್ದುಪಡಿ(1971)ಅನ್ವಯ 368 ನೆ ವಿಧಿಯ 2ನೆ ಉಪವಿಧಿಗೆ ಅವರು ಒಪ್ಪಿಗೆ ನೀಡಬೇಕು (Shall give his assent) ಎಂಬ ಪದಗಳನ್ನು ಸೇರಿಸಿರುವುದರಿಂದ ರಾಷ್ಟ್ರಪತಿ ಅಂಕಿತ ಹಾಕಲೇಬೇಕು. ಮಸೂದೆಯು ರಾಷ್ಟ್ರಪತಿಗಳ ಅಂಗೀಕಾರ ದೊರೆತ ನಂತರ ಕಾಯ್ದೆ ಆಗುವುದು.