Published on: November 12, 2021
ಸಂಸದರ ನಿಧಿ
ಸಂಸದರ ನಿಧಿ
ಸುದ್ಧಿಯಲ್ಲಿ ಏಕಿದೆ ? ಕೋವಿಡ್ ಕಾರಣಕ್ಕೆ ಅಮಾನತಿನಲ್ಲಿಟ್ಟಿದ್ದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ(ಎಂ.ಪಿ. ಲ್ಯಾಡ್ಸ್) ಪುನಃ ಚಾಲನೆ ಕೊಟ್ಟು ಮುಂದುವರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಯೋಜನೆಯ ವಿವರಗಳು:
- ಎಂ.ಪಿ.ಲ್ಯಾಡ್ಸ್ ಕೇಂದ್ರ ವಲಯದ ಯೋಜನೆಯಾಗಿದ್ದು, ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ನೀಡಲಾಗುತ್ತದೆ. ಕುಡಿಯುವ ನೀರು, ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ರಸ್ತೆಗಳು ಮುಂತಾದ ಕ್ಷೇತ್ರಗಳಲ್ಲಿ ದೀರ್ಘಕಾಲ ಬಾಳಿಕೆ ಬರುವ ಸಾಮುದಾಯಿಕ ಸ್ವತ್ತುಗಳ ಸೃಷ್ಟಿಗೆ ಒತ್ತು ನೀಡುವ ಅಭಿವೃದ್ಧಿ ಸ್ವರೂಪದ ಕೆಲಸಗಳನ್ನು ಶಿಫಾರಸು ಮಾಡಲು ಸಂಸದರಿಗೆ ಅನುವು ಮಾಡಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ.
- ಪ್ರತಿ ಸಂಸದರ (ಎಂಪಿ) ಕ್ಷೇತ್ರಕ್ಕೆ ವಾರ್ಷಿಕ ಎಂಪಿ ಲಾಡ್ಸ್ ನಿಧಿಯು 5 ಕೋಟಿ ರೂ.ಗಳಾಗಿರುತ್ತದೆ, ಎಂಪಿ ಲಾಡ್ಸ್ ಮಾರ್ಗಸೂಚಿಗಳ ಪ್ರಕಾರ ಷರತ್ತುಗಳ ಈಡೇರಿಕೆಗೆ ಒಳಪಟ್ಟು ತಲಾ 2.5 ಕೋಟಿ ರೂ.ಗಳ ಎರಡು ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ.
- ಸಮಾಜದಲ್ಲಿ ಕೋವಿಡ್ -19ರ ಆರೋಗ್ಯ ಮತ್ತು ಪ್ರತಿಕೂಲ ಪರಿಣಾಮಗಳನ್ನು ನಿರ್ವಹಿಸಲು, 2020-21 ಮತ್ತು 2021-22 ನೇ ಹಣಕಾಸು ವರ್ಷದಲ್ಲಿ ಎಂಪಿ ಲಾಡ್ಸ್ ಅನ್ನು ನಿರ್ವಹಿಸದಿರಲು ಮತ್ತು ಕೋವಿಡ್ -19 ಸಾಂಕ್ರಾಮಿಕದ ಪರಿಣಾಮಗಳನ್ನು ನಿರ್ವಹಿಸಲು ಹಣಕಾಸು ಸಚಿವಾಲಯದ ಬಳಿ ನಿಧಿ ಇಟ್ಟುಕೊಳ್ಳಲು ಸಂಪುಟವು 2020ರ ಏಪ್ರಿಲ್ 6 ರಂದು ನಡೆದ ಸಭೆಯಲ್ಲಿ ನಿರ್ಧರಿಸಿತ್ತು.
- ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿಯೊಬ್ಬ ಸಂಸದರ ಕ್ಷೇತ್ರಕ್ಕೆ ₹2 ಕೋಟಿಯಷ್ಟು ಅನುದಾನ ಸಿಗಲಿದೆ. ಮುಂದಿನ ಹಣಕಾಸು ವರ್ಷದಿಂದ ಯಥಾಪ್ರಕಾರ ₹5 ಕೋಟಿಯಷ್ಟು ಅನುದಾನ ಒದಗಿಸಲಾಗುವುದು ಎಂದೂ ಸರ್ಕಾರ ಪ್ರಕಟಿಸಿದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:
- ಎಂಪಿ ಲಾಡ್ ಯೋಜನೆಯು ಮಾರ್ಗಸೂಚಿಗಳ ಒಂದು ಸಮೂಹದಿಂದ ನಿಯಂತ್ರಿಸಲ್ಪಡುತ್ತದೆ, ಅವುಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ.
- ಎಂಪಿ ಲಾಡ್ಸ್ ಅಡಿಯಲ್ಲಿ ಪ್ರಕ್ರಿಯೆಯು ಸಂಸದರು ನೋಡಲ್ ಜಿಲ್ಲಾ ಪ್ರಾಧಿಕಾರಕ್ಕೆ ಕಾಮಗಾರಿಗಳನ್ನು ಶಿಫಾರಸು ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಸಂಬಂಧಪಟ್ಟ ನೋಡಲ್ ಜಿಲ್ಲೆಯು ಸಂಸದರು ಶಿಫಾರಸು ಮಾಡಿದ ಅರ್ಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮತ್ತು ಕಾರ್ಯಗತಗೊಳಿಸಿದ ವೈಯಕ್ತಿಕ ಕಾಮಗಾರಿಗಳ ವಿವರಗಳನ್ನು ಮತ್ತು ಯೋಜನೆಯಡಿ ಖರ್ಚು ಮಾಡಿದ ಮೊತ್ತವನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸುತ್ತದೆ.
ಪರಿಣಾಮ:
- ಎಂಪಿ ಲಾಡ್ಸ್ ನ ಮರುಸ್ಥಾಪನೆ ಮತ್ತು ಮುಂದುವರಿಕೆಯು ಎಂಪಿ ಲಾಡ್ಸ್ ಅಡಿಯಲ್ಲಿ ಹಣದ ಕೊರತೆಯಿಂದಾಗಿ ನಿಲ್ಲಿಸಲಾದ / ಸ್ಥಗಿತವಾದ ಕ್ಷೇತ್ರದಲ್ಲಿನ ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು / ಕಾರ್ಯಗಳನ್ನು ಪುನರಾರಂಭಿಸುತ್ತವೆ.
- ಇದು ಸ್ಥಳೀಯ ಸಮುದಾಯದ ಆಕಾಂಕ್ಷೆಗಳು ಮತ್ತು ಅಭಿವೃದ್ಧಿಯ ಅವಶ್ಯಕತೆಗಳನ್ನು ಪೂರೈಸಲು ಮತ್ತು ಬಾಳಿಕೆ ಬರುವ ಸ್ವತ್ತುಗಳ ಸೃಷ್ಟಿಯನ್ನು ಪುನರಾರಂಭಿಸುತ್ತದೆ, ಇದು ಎಂಪಿ ಲಾಡ್ಸ್ ನ ಪ್ರಾಥಮಿಕ ಉದ್ದೇಶವಾಗಿದೆ.
- ಇದು ಸ್ಥಳೀಯ ಆರ್ಥಿಕತೆಯನ್ನು ಪುನರುಜ್ಜೀವಗೊಳಿಸುವಲ್ಲಿಯೂ ಸಹಾಯ ಮಾಡುತ್ತದೆ.
ಯೋಜನೆಯಲ್ಲಿನ ಲೋಪಗಳು
- ವಾಸ್ತವವಾಗಿ ಈ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆಯ ಕೊರತೆ ತೀವ್ರವಾಗಿದ್ದು, ಅನುದಾನ ಬಳಕೆಯ ಸ್ವರೂಪದ ಕುರಿತು ಮೊದಲಿನಿಂದಲೂ ಅಪಸ್ವರಗಳು ಕೇಳಿಬರುತ್ತಿವೆ.
- ಹಣ ದುರ್ಬಳಕೆ, ಅಪವ್ಯಯ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ಕೆಸರು ಈ ಯೋಜನೆಗೆ ಮೆತ್ತಿಕೊಂಡಿರುವುದು ಮಹಾಲೇಖಪಾಲರ (ಸಿಎಜಿ) ವರದಿಗಳಲ್ಲಿ ಮೇಲಿಂದ ಮೇಲೆ ವ್ಯಕ್ತವಾಗುತ್ತಲೇ ಇದೆ.
- ಕುಡಿಯುವ ನೀರು, ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಹಾಗೂ ರಸ್ತೆ ಸೌಕರ್ಯ ಒದಗಿಸುವಂತಹ ಮಹತ್ವದ ಯೋಜನೆಗಳಿಗೆ ಈ ನಿಧಿಯನ್ನು ಬಳಕೆ ಮಾಡಬೇಕೆಂದು ಆದ್ಯತಾ ವಲಯಗಳನ್ನೇನೋ ಗುರುತಿಸಲಾಗಿದೆ. ಆದರೆ, ಮತ ತರುವಂತಹ ಸಮುದಾಯ ಭವನಗಳ ನಿರ್ಮಾಣಕ್ಕೇ ಈ ಹಣ ಬಳಕೆಯಾಗಿದ್ದು ಹೆಚ್ಚು.
- ಕೆಲವು ಸಂಸದರು ಜಾತಿವಾರು ಸೌಲಭ್ಯಗಳಿಗೆ ಅನುದಾನ ಹಂಚಿಕೆ ಮಾಡಿದ ದೂರುಗಳೂ ಇಲ್ಲದಿಲ್ಲ. ಅನುದಾನ ಹಂಚಿಕೆಯ ವಿವೇಚನಾಧಿಕಾರವನ್ನು ಹೊಂದಿರುವ ಸಂಸದರಿಗೆ ಉತ್ತರದಾಯಿತ್ವದ ಹೊಣೆಗಾರಿಕೆ ಇಲ್ಲದಿರುವುದು ಯೋಜನೆಯ ಅನುಷ್ಠಾನದಲ್ಲಿನ ಲೋಪಗಳಿಗೆ ಬಹುಮುಖ್ಯ ಕಾರಣ.
- ರಾಜಕೀಯವಾಗಿ, ನೈತಿಕವಾಗಿ ತಪ್ಪು ಹೆಜ್ಜೆ ಎನಿಸಿರುವ ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ಸಾರ್ವಜನಿಕ ಹಣಕಾಸು ನಿರ್ವಹಣೆಯ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ.
- ಕಾರ್ಯಾಂಗ ಮತ್ತು ಶಾಸಕಾಂಗದ ನಡುವಣ ಕಾರ್ಯವ್ಯಾಪ್ತಿ ಸ್ಪಷ್ಟವಾಗಿರಬೇಕು ಎಂಬ ತತ್ವಕ್ಕೆ ಈ ಯೋಜನೆ ಬದ್ಧವಾಗಿಲ್ಲ.
- ಕಾರ್ಯಗತ ಆಗಬೇಕಿರುವ ಯೋಜನೆಗಳು ಯಾವುವು ಎಂಬುದನ್ನು ಸಂಸದರು ಆಯ್ಕೆ ಮಾಡುವುದು ಕಾರ್ಯಾಂಗದ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ನಡೆಸಿದಂತೆ ಎಂಬ ಟೀಕೆಗಳಲ್ಲಿನ ಸತ್ಯಾಂಶವನ್ನು ಗ್ರಹಿಸಿ, ಈ ಯೋಜನೆಯ ಅಗತ್ಯದ ಬಗ್ಗೆ, ಸ್ವರೂಪದ ಬಗ್ಗೆ, ಹಣದ ವರ್ಗಾವಣೆ ಬಗ್ಗೆ ಸರ್ಕಾರ ಪುನರ್ ಪರಿಶೀಲನೆ ನಡೆಸಬೇಕು.
ಏನು ಮಾಡಬೇಕು ?
- ಸಾರ್ವಜನಿಕರ ಹಣ ಪೋಲಾಗುವುದನ್ನು ತಪ್ಪಿಸಬೇಕು. ಆದ್ಯತೆಯ ಕೆಲಸಗಳಿಗೆ ಮಾತ್ರ ಅದು ಬಳಕೆಯಾಗುವಂತೆ ನೋಡಿಕೊಳ್ಳಬೇಕು.