Published on: December 10, 2021
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ
ಸುದ್ಧಿಯಲ್ಲಿ ಏಕಿದೆ ? ನಾಗಾಲ್ಯಾಂಡ್ನಲ್ಲಿ ಉಗ್ರರು ಎಂದು ತಪ್ಪಾಗಿ ಭಾವಿಸಿ ಗಣಿ ಕಾರ್ಮಿಕರ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ 14 ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಫ್ಎಸ್ಪಿಎ (AFSPA) ಕುರಿತಾದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಏನಿದು ಎಎಫ್ಪಿಎಸ್ಎ?
- ಆಂತರಿಕ ಗಲಭೆಗಳು, ಅಡ್ಡಿಗಳನ್ನು ನಿಭಾಯಿಸಲು ಸಮರ್ಥವಲ್ಲದ ರಾಜ್ಯ ಸರ್ಕಾರಗಳಿಗೆ ನೆರವು ನೀಡುವ ಉದ್ದೇಶದಿಂದ ಎಎಫ್ಎಸ್ಪಿಎ ಯನ್ನು ಜಾರಿಗೆ ತರಲಾಗಿತ್ತು. ಸರ್ಕಾರವು ‘ಗೊಂದಲಪೀಡಿತ’ ಎಂದು ಗುರುತಿಸಿದ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿದಾರಿಗೆ ತರಲು ಎಎಫ್ಎಸ್ಪಿಎ ಕಾಯ್ದೆಯು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಹಾಗೂ ಕಾನೂನಿನ ರಕ್ಷಣೆಯನ್ನು ನೀಡುತ್ತದೆ.
- ತೊಂದರೆಗೊಳಗಾದ ಪ್ರದೇಶಗಳ (ವಿಶೇಷ ನ್ಯಾಯಾಲಯಗಳು) ಕಾಯ್ದೆ 1976ರ ಅಡಿ ಸಮಸ್ಯೆಗೆ ಒಳಗಾಗಿರುವ ಎಂದು ಸರ್ಕಾರ ಗುರುತಿಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ಕೇಂದ್ರ ಅರೆಸೇನಾ ಪಡೆಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಧಿಕಾರ ನೀಡುವ ಸಂಸತ್ತಿನ ಕಾಯ್ದೆ ಇದು.
- ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾರ ಮೇಲೆಯಾದರೂ ಗುಂಡು ಹಾರಿಸುವ ಅಧಿಕಾರವನ್ನು ಈ ಕಾಯ್ದೆ ನೀಡುತ್ತದೆ. ಯಾರನ್ನೇ ಆದರೂ ವಾರಂಟ್ ಇಲ್ಲದೆ ಬಂಧಿಸಲು, ಯಾವುದೇ ವಾಹನ ಅಥವಾ ಹಡಗನ್ನು ತಡೆಯಲು ಮತ್ತು ಪರಿಶೀಲಿಸಲು ಹಾಗೂ ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿಷೇಧಿಸುವುದು ಈ ಕಾಯ್ದೆಯ ಕೆಲವು ‘ವಿಶೇಷ’ ಅಧಿಕಾರಗಳಲ್ಲಿ ಸೇರಿವೆ.
- ನಾಗರಿಕರು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ಕೂಡ ಎಫ್ಎಸ್ಪಿಎ ನಿರ್ಬಂಧಿಸಿದೆ. ಜತೆಗೆ ಆಯೋಗದ ನಿಯಮಗಳಿಗೆ ಒಳಪಡದ ಅಧಿಕಾರಿಗಳಿಗೆ ವಿಶೇಷ ಅಧಿಕಾರವನ್ನು ಕೂಡ ನೀಡುತ್ತದೆ.
- ಒಮ್ಮೆ ಒಂದು ಪ್ರದೇಶದ ಮೇಲೆ ಎಎಫ್ಎಸ್ಪಿಎ ಜಾರಿಯಾದರೆ, ಯಾವುದೇ ವ್ಯಕ್ತಿ ಏನೇ ಕೃತ್ಯ ಮಾಡಿದ್ದರೂ ಅಥವಾ ಮಾಡಲು ಉದ್ದೇಶಿಸಿದ್ದರೂ ಅವರ ವಿರುದ್ಧ ಕೇಂದ್ರ ಸರ್ಕಾರ ಈ ಹಿಂದೆ ನಿರ್ಬಂಧಗಳನ್ನು ವಿಧಿಸಿದ್ದರ ಹೊರತಾಗಿ ವಿಚಾರಣೆ ಇಲ್ಲದೆ, ಮೊಕದ್ದಮೆ ಅಥವಾ ಕಾನೂನು ಪ್ರಕ್ರಿಯೆಯನ್ನು ನಡೆಸದೆ ಈ ಕಾಯ್ದೆಯ ಅಡಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.
ಎಎಫ್ಎಸ್ಪಿಎ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ?
- ವಾಸ್ತವವಾಗಿ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಬ್ರಿಟಿಷ್ ವಸಾಹತು ಆಡಳಿತದಲ್ಲಿ ಈ ಕಠಿಣ ಕಾಯ್ದೆ ಜಾರಿಗೆ ಬಂದಿತ್ತು. 1942ರಲ್ಲಿ ಮಹಾತ್ಮ ಗಾಂಧಿ ಅವರು ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದ ಹಿನ್ನೆಲೆಯಲ್ಲಿ ಬ್ರಿಟಿಷರು ಸುಗ್ರೀವಾಜ್ಞೆ ರೂಪದಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅಂದರೆ, ತಮ್ಮ ವಿರುದ್ಧ ಸಿಡಿದೇಳುವ ಭಾರತೀಯರನ್ನು ಹತ್ತಿಕ್ಕಲು ಬ್ರಿಟಿಷರು ಬಳಸಿದ್ದ ಮತ್ತೊಂದು ಅಸ್ತ್ರವಿದು.
- ಸ್ವಾತಂತ್ರ್ಯಾನಂತರ ಪ್ರಧಾನಿ ಜವಹರಲಾಲ್ ನೆಹರೂ ಅವರು ಅಸ್ಸಾಂ ಮತ್ತು ಮಣಿಪುರಗಳಲ್ಲಿನ ಉಗ್ರಗಾಮಿ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಕಾನೂನು ಮುಂದುವರಿಸಲು ನಿರ್ಧರಿಸಿದರು. ಸಶಸ್ತ್ರ ಪಡೆಗಳ (ಅಸ್ಸಾಂ ಮತ್ತು ಮಣಿಪುರ) ವಿಶೇಷ ಅಧಿಕಾರ ಸುಗ್ರೀವಾಜ್ಞೆ 1958ಕ್ಕೆ ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ 1958ರ ಮೇ 22ರಂದು ಅನುಮೋದನೆ ನೀಡಿದ್ದರು.
- ಇದು 1958ರ ಸೆಪ್ಟೆಂಬರ್ 11ರಂದು ಕಾಯ್ದೆಯಾಗಿ, ಸಶಸ್ತ್ರ ಪಡೆಗಳ (ಅಸ್ಸಾಂ ಮತ್ತು ಮಣಿಪುರ) ವಿಶೇಷ ಅಧಿಕಾರ ಕಾಯ್ದೆ, 1958 ಎಂದು ಬದಲಾಯಿತು.
ಎಎಫ್ಎಸ್ಪಿಎ ಈಗ ಎಲ್ಲೆಲ್ಲಿ ಜಾರಿಯಲ್ಲಿದೆ?
- 2015ರಲ್ಲಿ ತ್ರಿಪುರಾ, ಮಿಜೋರಾಂ ಮತ್ತು 2018ರಲ್ಲಿ ಮೇಘಾಲಯದಿಂದ ಎಎಫ್ಎಸ್ಪಿಎ ಹಿಂದಕ್ಕೆ ಪಡೆಯಲಾಗಿತ್ತು. ಈಗ ನಾಗಾಲ್ಯಾಂಡ್ ಅಲ್ಲದೆ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಮಣಿಪುರ (ಇಂಫಾಲ ಹೊರತುಪಡಿಸಿ) ಮತ್ತು ಅರುಣಾಚಲ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿದೆ. ಅರುಣಾಚಲ ಪ್ರದೇಶ ಮೂರು ಜಿಲ್ಲೆಗಳಲ್ಲಿನ ಎಂಟು ಪೊಲೀಸ್ ಠಾಣೆಗಳು ಇದರ ವ್ಯಾಪ್ತಿಯಲ್ಲಿದೆ.
ಎಎಫ್ಎಸ್ಪಿಎ ಏಕೆ ವಿವಾದಾತ್ಮಕ?
- ಸಶಸ್ತ್ರ ಪಡೆಗಳ ವಿಶೇಷ ಅಧಿಕಾರದಡಿ, ಸರ್ಕಾರವು ‘ತೊಂದರೆಗೀಡಾದ ಪ್ರದೇಶಗಳು’ ಎಂದು ಗುರುತಿಸಿರುವ ಕಡೆಗಳಲ್ಲಿ ಭದ್ರತಾ ಪಡೆಗಳು ನಕಲಿ ಎನ್ಕೌಂಟರ್ಗಳು ಹಾಗೂ ಇತರೆ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮಾಡಿವೆ ಎಂದು ಅನೇಕ ಆರೋಪಗಳಿವೆ.
- ಸುಪ್ರೀಂಕೋರ್ಟ್ನಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಪ್ರಕಾರ, ಮಣಿಪುರ ಒಂದರಲ್ಲೇ 2000 – 2012ರ ನಡುವೆ ನ್ಯಾಯಾಂಗದ ವ್ಯಾಪ್ತಿಗೆ ಸೇರದ ಕನಿಷ್ಠ 1528 ಹತ್ಯೆಗಳು ನಡೆದಿವೆ. ಇವುಗಳಲ್ಲಿ ಹೆಚ್ಚಿನ ಸಾವುಗಳಲ್ಲಿ ಸಂತ್ರಸ್ತರು ಭದ್ರತಾ ಪಡೆಗಳ ವಶದಲ್ಲಿ ಇರುವಾಗ ಮತ್ತು ವಿಪರೀತ ಚಿತ್ರಹಿಂಸೆ ನೀಡಿದ ಕ್ರೂರ ಕೊಲೆಗಳಾಗಿವೆ ಎಂದು ಆರೋಪಿಸಲಾಗಿದೆ.
- ಭದ್ರತಾ ಪಡೆಗಳು ಈ ಭಾಗದಲ್ಲಿನ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗಿರುವ ಆರೋಪವೂ ಇದೆ.
ಭಾರತೀಯ ಸೇನೆ ಹೇಳುವುದೇನು?
- ಎಎಫ್ಎಸ್ಪಿಎ ಇನ್ನೂ ಮಾನವೀಯಗೊಳ್ಳಬೇಕು ಎಂದು ಸಶಸ್ತ್ರ ಪಡೆಗಳು ಒಪ್ಪಿಕೊಳ್ಳುತ್ತವೆ. ಆದರೆ ಅದನ್ನು ರದ್ದುಗೊಳಿಸಬಾರದು ಎಂದೂ ವಾದಿಸುತ್ತಿವೆ. ಎಎಫ್ಎಸ್ಪಿಎ ಕಠಿಣ ಅಧಿಕಾರಗಳನ್ನು ನೀಡುತ್ತದೆ. ಆದರೆ ಕೆಲವೊಮ್ಮೆ ಕಠಿಣ ಸಂದರ್ಭಗಳಿಗೆ ಕಠಿಣ ಕ್ರಮಗಳು ಅನಿವಾರ್ಯ. ಯಾವುದೇ ಯುದ್ಧದಲ್ಲಿ ನಾಗರಿಕರು ಗಾಯಗೊಳ್ಳಬಹುದು ಅಥವಾ ಸಾಯಬಹುದು. ಇದಕ್ಕೆ ಸೇನೆಯನ್ನು ದೂಷಿಸಲಾಗದು