Published on: August 12, 2025

ಚುಟುಕು ಸಮಾಚಾರ – 11 ಆಗಸ್ಟ್‌ 2025

ಚುಟುಕು ಸಮಾಚಾರ – 11 ಆಗಸ್ಟ್‌ 2025

  • ಕಲಬುರಗಿಯ ಮಿಷನ್ ಸುರಕ್ಷಾಮಾದರಿ ಮತ್ತು ಬಾಲ್ಯ ವಿವಾಹ ತಡೆ: ಮಕ್ಕಳ ರಕ್ಷಣಾ ನಿರ್ದೇಶನಾಲಯವು ಕಲಬುರಗಿಯ ಯಶಸ್ವಿ ಮಿಷನ್ ಸುರಕ್ಷಾ ಮಾದರಿಯನ್ನು ಆಧರಿಸಿ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು ರಾಜ್ಯಾದ್ಯಂತ ಕಡ್ಡಾಯ ಕಾರ್ಯವಿಧಾನದ ಸುತ್ತೋಲೆ ಹೊರಡಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ ಕರ್ನಾಟಕವನ್ನು ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿ ಮಾಡುವುದು. ಬಾಲ್ಯ ವಿವಾಹ ತಡೆಗೆ ಶಾಶ್ವತ ಪರಿಹಾರ ನೀಡುವುದರ ಜೊತೆಗೆ, ಮಕ್ಕಳ ಹಕ್ಕುಗಳ ರಕ್ಷಣೆ, ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ.
  • ವೈಸ್ಲಾವ್ ಮಾನಿಯಾಕ್ ಸ್ಮಾರಕದಲ್ಲಿ ಭಾರತದ ಅನ್ನು ರಾಣಿಗೆ ಚಿನ್ನ: ಭಾರತದ ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಪೋಲೆಂಡ್‌ನ ವೈಸ್ಲಾವ್ ಮಾನಿಯಾಕ್ ಸ್ಮಾರಕದಲ್ಲಿ 62.59 ಮೀ. ಎಸೆದು ಚಿನ್ನದ ಪದಕ ಗೆದ್ದರು. ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ 32ರ ಹರೆಯದ ಅನ್ನು ರಾಣಿ ಈ ಸಾಧನೆಯೊಂದಿಗೆ ವಿಶ್ವದ ಅಗ್ರ 15 ಮಹಿಳಾ ಜಾವೆಲಿನ್ ಎಸೆತಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
  • ವರ್ಕ್ ಫಾರ್ ವಿಕಸಿತ್ ಭಾರತ್ ಪೋರ್ಟಲ್: ನೀತಿ ಆಯೋಗವು ವರ್ಕ್ ಫಾರ್ ವಿಕಸಿತ್ ಭಾರತ್ ಎಂಬ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದು ಉದ್ಯೋಗದಾತರು ಮತ್ತು ಕೌಶಲ್ಯ ಹೊಂದಿದ ಉದ್ಯೋಗಾಕಾಂಕ್ಷಿಗಳನ್ನು ನೇರವಾಗಿ ಸಂಪರ್ಕಿಸುವ ವೇದಿಕೆಯಾಗಿದೆ. ಈ ಉಪಕ್ರಮವು ಭಾರತದ ಮೇಕ್ ಇನ್ ಇಂಡಿಯಾ ಮತ್ತು ಕೌಶಲ್ಯ ಅಭಿವೃದ್ಧಿ ಮಿಷನ್‌ಗಳನ್ನು ಬೆಂಬಲಿಸುವ ಮೂಲಕ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿ ಹೊಂದಿದೆ. ಅರ್ಥಶಾಸ್ತ್ರ, ಹವಾಮಾನ ಬದಲಾವಣೆ, ಮೂಲಸೌಕರ್ಯ ಮತ್ತು ಐಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೇಮಕಾತಿಯನ್ನು ಸುಗಮಗೊಳಿಸುತ್ತದೆ.
  • ಸ್ಕೈರೂಟ್ ಏರೋಸ್ಪೇಸ್: ವಿಕ್ರಮ್-1 ರಾಕೆಟ್ ಎಂಜಿನ್ ಪರೀಕ್ಷೆ ಯಶಸ್ವಿ: ಭಾರತದ ಖಾಸಗಿ ಬಾಹ್ಯಾಕಾಶ ಕಂಪನಿಯಾದ ಸ್ಕೈರೂಟ್ ಏರೋಸ್ಪೇಸ್, ತನ್ನ ವಿಕ್ರಮ್-1 ರಾಕೆಟ್ಗಾಗಿ KALAM-1200 ಎಂಜಿನ್ ಸ್ಥಿರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಯಶಸ್ಸು ಭಾರತದ ಖಾಸಗಿ ಬಾಹ್ಯಾಕಾಶ ವಲಯದಲ್ಲಿನ ಪ್ರಮುಖ ಮೈಲಿಗಲ್ಲು. ಇದು ದೇಶದ ಬಾಹ್ಯಾಕಾಶ ತಂತ್ರಜ್ಞಾನ ಸಾಮರ್ಥ್ಯಗಳನ್ನು ಹೆಚ್ಚಿಸುವುದರ ಜೊತೆಗೆ, ಬಾಹ್ಯಾಕಾಶ ಯೋಜನೆಗಳಲ್ಲಿ ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಈ ಪ್ರಗತಿಯು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆಗೆ ದಾರಿ ಮಾಡಿಕೊಡುತ್ತದೆ.
  • ಸಿಬಿಎಸ್‌ಇ ಅನುಮೋದಿತ ಮುಕ್ತ ಪುಸ್ತಕ ಪರೀಕ್ಷೆಗಳು: ಸಿಬಿಎಸ್‌ಇ 2026-27ನೇ ಸಾಲಿನಿಂದ 9ನೇ ತರಗತಿಗೆ ಮುಕ್ತ ಪುಸ್ತಕ ಪರೀಕ್ಷೆಗಳನ್ನು ಪರಿಚಯಿಸಲು ಅನುಮೋದಿಸಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ತತ್ವಗಳಿಗೆ ಅನುಗುಣವಾಗಿದ್ದು, ವಿದ್ಯಾರ್ಥಿಗಳ ಕಲಿಕೆಯ ಒತ್ತಡ ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶ. ಕಂಠಪಾಠದ ಬದಲು ಜ್ಞಾನದ ಪ್ರಾಯೋಗಿಕ ಅನ್ವಯ ಮತ್ತು ಸಾಮರ್ಥ್ಯಆಧಾರಿತ ಕಲಿಕೆಗೆ ಉತ್ತೇಜನ ನೀಡುವುದು ಇದರ ಗುರಿಯಾಗಿದೆ.ಶಾಲೆಗಳಿಗೆ ಇದನ್ನು ಅಳವಡಿಸಿಕೊಳ್ಳುವುದು ಐಚ್ಛಿಕವಾಗಿದ್ದು, ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದಂತಹ ವಿಷಯಗಳನ್ನು ಇದು ಒಳಗೊಂಡಿದೆ.