ಮಾನನಷ್ಟದ ಅಪರಾಧೀಕರಣ: ಮರುಚಿಂತನೆಗೆ ಸುಪ್ರೀಂ ಕೋರ್ಟ್ ಸೂಚನೆ
ಮಾನನಷ್ಟದ ಅಪರಾಧೀಕರಣ: ಮರುಚಿಂತನೆಗೆ ಸುಪ್ರೀಂ ಕೋರ್ಟ್ ಸೂಚನೆ
ಸುದ್ದಿ – ಮಾನನಷ್ಟವನ್ನು ಅಪರಾಧಮುಕ್ತಗೊಳಿಸುವ ಸಮಯ ಬಂದಿದೆ: ಸುಪ್ರೀಂ ಕೋರ್ಟ್ (SC) ಇತ್ತೀಚಿನ ವಿಚಾರಣೆಯೊಂದರಲ್ಲಿ, ಸುಪ್ರೀಂ ಕೋರ್ಟ್, ಮಾನನಷ್ಟವನ್ನು ಅಪರಾಧಮುಕ್ತಗೊಳಿಸುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದೆ.
ಮಾನನಷ್ಟ ಎಂದರೇನು: ಮಾನನಷ್ಟ ಎಂದರೆ ವ್ಯಕ್ತಿ, ಗುಂಪು ಅಥವಾ ವ್ಯಕ್ತಿಯ ಹತ್ತಿರದ ಸಂಬಂಧಿಕರ ಖ್ಯಾತಿಗೆ ಹಾನಿಯುಂಟುಮಾಡುವ ಸುಳ್ಳು ಮಾಹಿತಿಯನ್ನು ಮಾತನಾಡುವುದು, ಬರೆಯುವುದು ಅಥವಾ ಪ್ರಕಟಿಸುವುದು. ಇದನ್ನು ಸ್ಥೂಲವಾಗಿ ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ:
- ಲೇಖಿತ ನಿಂದನೆ (Libel): ಬರಹ, ಚಿತ್ರಗಳು, ಅಥವಾ ಪ್ರಕಟಿತ ಕೃತಿ.
- ಮೌಖಿಕ ನಿಂದನೆ (Slander): ಮಾತನಾಡಿದ ಮಾಹಿತಿ.
ಭಾರತದಲ್ಲಿನ ನಿಬಂಧನೆಗಳು/ಸ್ಥಾನಮಾನ:
ಭಾರತೀಯ ಕಾನೂನಿನ ಅಡಿಯಲ್ಲಿ, ದಾವೆದಾರ / ಫಿರ್ಯಾದಿದಾರರು (plaintiff) ಮಾನನಷ್ಟವನ್ನು ಕ್ರಿಮಿನಲ್ ಅಪರಾಧ ಮತ್ತು/ಅಥವಾ ನಾಗರಿಕ ತಪ್ಪು/ದಿವಾಣಿ ಅಪಕೃತ (Civil offence) ಅಪರಾಧವೆಂದು ಮೊಕದ್ದಮೆ ಹೂಡಲು ಆಯ್ಕೆ ಮಾಡಬಹುದು. ಪ್ರಸ್ತುತ, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 356 ಮಾನನಷ್ಟವನ್ನು ಅಪರಾಧವೆಂದು ಪರಿಗಣಿಸುತ್ತದೆ. ಇದು ಹಿಂದಿನ ಭಾರತೀಯ ದಂಡ ಸಂಹಿತೆಯ (Indian Penal Code – IPC) ಸೆಕ್ಷನ್ 499 ನ್ನು ಬದಲಿಸಿದೆ.
ಮಾನನಷ್ಟವನ್ನು ಅಪರಾಧಮುಕ್ತಗೊಳಿಸುವ ಅಗತ್ಯವೇಕೆ:
- ವಾಕ್ ಸ್ವಾತಂತ್ರ್ಯದ ಉಲ್ಲಂಘನೆ: ಕ್ರಿಮಿನಲ್ ಮಾನನಷ್ಟದ ನಿಯಮಗಳು ಸಂವಿಧಾನದ 19(1)(a) ವಿಧಿಯ ಅಡಿಯಲ್ಲಿ ಬರುವ ಹಕ್ಕುಗಳನ್ನು ನಿರ್ಬಂಧಿಸಬಹುದು. ಕಾನೂನು ಕ್ರಮದ ಭಯವು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವುದನ್ನು ತಡೆಯಬಹುದು.
- ಭಿನ್ನಾಭಿಪ್ರಾಯವನ್ನು ಹತ್ತಿಕ್ಕುತ್ತದೆ: ಖಾಸಗಿ ವ್ಯಕ್ತಿಗಳು ತಮ್ಮ ವಿಮರ್ಶಕರನ್ನು ಬೆದರಿಸಲು ಇದನ್ನು ಬಳಸಬಹುದು.
- ಇತರೆ: ಪತ್ರಿಕಾ ಸ್ವಾತಂತ್ರ್ಯಕ್ಕೆ ಬೆದರಿಕೆ, ಇತ್ಯಾದಿ.
ಮಾನನಷ್ಟಕ್ಕೆ ಸಂಬಂಧಿಸಿದ ಶಿಫಾರಸುಗಳು ಮತ್ತು ತೀರ್ಪುಗಳು:
- ಕಾನೂನು ಆಯೋಗದ ವರದಿ (285ನೇ ವರದಿ): ಸಂವಿಧಾನದ 21ನೇ ವಿಧಿಯ ಪ್ರಮುಖ ಅಂಶವಾದ ‘ಖ್ಯಾತಿ‘ಯನ್ನು (reputation), ಇತರರ ಭಾವನೆಗಳಿಗೆ ಧಕ್ಕೆ ತರುವ ಮೂಲಕ ಮತ್ತೊಬ್ಬರ ವಾಕ್ ಸ್ವಾತಂತ್ರ್ಯಕ್ಕಾಗಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದೆ.
- ಸುಬ್ರಮಣಿಯನ್ ಸ್ವಾಮಿ ವಿ. ಭಾರತ ಸರ್ಕಾರ (2016) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ವಾಕ್ ಸ್ವಾತಂತ್ರ್ಯ ಮತ್ತು ಖ್ಯಾತಿಯನ್ನು ರಕ್ಷಿಸುವ ಹಕ್ಕಿನ ನಡುವೆ ಸಮತೋಲನ ಸಾಧಿಸಿ, ಕ್ರಿಮಿನಲ್ ಮಾನನಷ್ಟವನ್ನು ಎತ್ತಿಹಿಡಿದಿದೆ.
- ಗುಜರಾತ್ ರಾಜ್ಯ v/s ಗುಜರಾತ್ನ ಗೌರವಾನ್ವಿತ ಹೈಕೋರ್ಟ್ (1998): ಕಳೆದುಹೋದ ಗೌರವ ಅಥವಾ ಕಸಿದುಕೊಂಡ ಜೀವವನ್ನು ಮರುಪಾವತಿಸಲು (recompensed) ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
