Published on: November 28, 2025

ಭಾರತದಲ್ಲಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಜಾರಿ

ಭಾರತದಲ್ಲಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಜಾರಿ

ಸುದ್ದಿ –   2020 ರಲ್ಲಿ ರೂಪಿಸಲಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು (Labour Codes) ರಾಷ್ಟ್ರವ್ಯಾಪಿ ಅನುಷ್ಠಾನಗೊಳಿಸಲಾಗಿದೆ. ಉದ್ಯೋಗದಾತರ ಅನುಸರಣೆಯನ್ನು ಸರಳಗೊಳಿಸಲು, ಏಕರೂಪದ ವೇತನವನ್ನು ಖಚಿತಪಡಿಸಲು ಮತ್ತು ಭಾರತದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಇವು ಹಿಂದಿನ 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಬದಲಾಯಿಸುತ್ತವೆ.

ನಾಲ್ಕು ಕಾರ್ಮಿಕ ಸಂಹಿತೆಗಳ ವಿವರ:

  1. ವೇತನ ಸಂಹಿತೆ, 2019 (Code on Wages, 2019)
  • ಏಕೀಕೃತ ವ್ಯಾಖ್ಯಾನ: ಕಾನೂನು ವ್ಯಾಜ್ಯಗಳು ಮತ್ತು ನಿಯಮಗಳ ಪಾಲನೆಯ ಹೊರೆಗಳನ್ನು ಕಡಿಮೆ ಮಾಡಲು, ವೇತನದ ಏಕೈಕ ವ್ಯಾಖ್ಯಾನವನ್ನು ಸ್ಥಾಪಿಸಲು ಇದು ನಾಲ್ಕು ಕಾನೂನುಗಳನ್ನು ಒಂದುಗೂಡಿಸುತ್ತದೆ. ಸವಲತ್ತುಗಳು ಮತ್ತು ಸಾಮಾಜಿಕ ಭದ್ರತಾ ಕೊಡುಗೆಗಳಿಗೆ ಆಧಾರವಾಗಿರುವ ಮೂಲ ವೇತನ, ತುಟ್ಟಿಭತ್ಯೆ ಮತ್ತು ಉಳಿಸಿಕೊಳ್ಳುವ ಭತ್ಯೆಯನ್ನು ‘ವೇತನ’ ಒಳಗೊಂಡಿರುತ್ತದೆ.
  • ಕನಿಷ್ಠ ವೇತನ: ಹಿಂದೆ ಇದ್ದ ಕೇವಲ ‘ನಿಗದಿತ ಉದ್ಯೋಗಗಳಿಗೆ’ ಸೀಮಿತವಾಗಿದ್ದ ನಿಯಮವನ್ನು ಬದಲಿಸಿ, ಎಲ್ಲಾ ವಲಯಗಳ ಎಲ್ಲಾ ಕಾರ್ಮಿಕರಿಗೂ ಶಾಸನಬದ್ಧ ಕನಿಷ್ಠ ವೇತನದ ಹಕ್ಕನ್ನು ಇದು ವಿಸ್ತರಿಸುತ್ತದೆ.
  • ವೇತನದ ತಳಮಟ್ಟ: ಏಕರೂಪದ ಜೀವನ ಮಟ್ಟವನ್ನು ಖಚಿತಪಡಿಸಲು ಮತ್ತು ಪ್ರಾದೇಶಿಕ ವೇತನದ ಅಂತರವನ್ನು ಕಡಿಮೆ ಮಾಡಲು ರಾಜ್ಯಗಳು ಅನುಸರಿಸಲೇಬೇಕಾದ ‘ರಾಷ್ಟ್ರೀಯ ಕನಿಷ್ಠ ವೇತನದ ಮಿತಿಯನ್ನು’ (National Floor Wage) ಇದು ಪರಿಚಯಿಸುತ್ತದೆ.
  • ಪಾವತಿ ನಿಯಮಗಳು: ಇದು ವೇತನ ಪಾವತಿಯ ಕಾಲಮಿತಿಯನ್ನು ನಿಗದಿಪಡಿಸುತ್ತದೆ ಮತ್ತು ಉತ್ತರದಾಯಿತ್ವವನ್ನು ಸುಧಾರಿಸಲು ಭೌತಿಕ ಅಥವಾ ಡಿಜಿಟಲ್ ವೇತನ ಚೀಟಿಗಳನ್ನು ನೀಡುವುದನ್ನು ಕಡ್ಡಾಯಗೊಳಿಸುತ್ತದೆ.
  • ಲಿಂಗ ಸಮಾನತೆ: “ಸಮಾನ ಕೆಲಸಕ್ಕೆ ಸಮಾನ ವೇತನ” ತತ್ವವನ್ನು ಉತ್ತೇಜಿಸಲು ಲಿಂಗ ಆಧಾರಿತ ವೇತನ ತಾರತಮ್ಯವನ್ನು ಇದು ನಿಷೇಧಿಸುತ್ತದೆ.
  1. ಸಾಮಾಜಿಕ ಭದ್ರತಾ ಸಂಹಿತೆ, 2020 (Code on Social Security, 2020)
  • ಕಾನೂನು ಮಾನ್ಯತೆ: ಇದು ಒಂಬತ್ತು ಸಾಮಾಜಿಕ ಭದ್ರತಾ ಕಾನೂನುಗಳನ್ನು ವಿಲೀನಗೊಳಿಸುತ್ತದೆ ಮತ್ತು ಇದೇ ಮೊದಲ ಬಾರಿಗೆ, ‘ಗಿಗ್ ವರ್ಕರ್ಸ್’ ಮತ್ತು ‘ಪ್ಲಾಟ್‌ಫಾರ್ಮ್ ವರ್ಕರ್ಸ್’ ಅನ್ನು ಕಾನೂನಾತ್ಮಕವಾಗಿ ವ್ಯಾಖ್ಯಾನಿಸುತ್ತದೆ.
  • ಏಕೀಕೃತ ಪ್ರವೇಶ: ಅಸಂಘಟಿತ, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತಾ ನಿಧಿಗಳನ್ನು ಕಡ್ಡಾಯಗೊಳಿಸುತ್ತದೆ ಮತ್ತು ಆಧಾರ್-ಸಂಯೋಜಿತ ಗುರುತಿನೊಂದಿಗೆ ರಾಷ್ಟ್ರೀಯ ಪೋರ್ಟಲ್ ಅನ್ನು ರಚಿಸುತ್ತದೆ.
  • ವಿಸ್ತೃತ ವ್ಯಾಪ್ತಿ: ಇದು ಹೆಚ್ಚಿನ ಸಂಸ್ಥೆಗಳು ಮತ್ತು ಪ್ರದೇಶಗಳಿಗೆ EPFO ಮತ್ತು ESIC ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಹಾಗೂ ಅಪಾಯಕಾರಿ ಉದ್ಯೋಗಗಳಿಗೆ ಕಡ್ಡಾಯ ವ್ಯಾಪ್ತಿಯನ್ನು ಒಳಗೊಂಡಿದೆ.
  1. ಕೈಗಾರಿಕಾ ಸಂಬಂಧಗಳ ಸಂಹಿತೆ, 2020 (Industrial Relations Code, 2020)
  • ಕಾರ್ಮಿಕರ ವ್ಯಾಖ್ಯಾನ: ಇದು ಹಿಂದಿನ ಮೂರು ಕಾನೂನುಗಳನ್ನು ಬದಲಾಯಿಸುತ್ತದೆ ಮತ್ತು ₹18,000 ಕ್ಕಿಂತ ಕಡಿಮೆ ಗಳಿಸುವ ಉದ್ಯೋಗಿಗಳನ್ನು ಸೇರಿಸಲು ‘ಕಾರ್ಮಿಕರ’ ವ್ಯಾಖ್ಯಾನವನ್ನು ವಿಸ್ತರಿಸುತ್ತದೆ.
  • ಲೇಆಫ್ ಮಿತಿ: ಕಾರ್ಯಚರಣೆಯ ನಮ್ಯತೆಯನ್ನು ಹೆಚ್ಚಿಸಲು, ಲೇಆಫ್‌ಗಳು (ಕೆಲಸದಿಂದ ತಾತ್ಕಾಲಿಕ ವಜಾ), ಉದ್ಯೋಗ ಕಡಿತಗಳು ಮತ್ತು ಮುಚ್ಚುವಿಕೆಗಳಿಗೆ ಸರ್ಕಾರದ ಪೂರ್ವಾನುಮತಿ ಅಗತ್ಯವಿರುವ ಮಿತಿಯನ್ನು 100 ರಿಂದ 300 ಕಾರ್ಮಿಕರಿಗೆ ಹೆಚ್ಚಿಸಲಾಗಿದೆ.
  • ನಿಗದಿತ ಅವಧಿಯ ಉದ್ಯೋಗ: ಇದು ವೇತನ ಮತ್ತು ಸವಲತ್ತುಗಳ ಸಮಾನತೆಯೊಂದಿಗೆ ‘ನಿಗದಿತ ಅವಧಿಯ ಉದ್ಯೋಗ’ವನ್ನು ಪರಿಚಯಿಸುತ್ತದೆ ಮತ್ತು ಒಂದು ವರ್ಷದ ನಿರಂತರ ಸೇವೆಯ ನಂತರ ಗ್ರಾಚ್ಯುಟಿ (ಉಪಧನ) ಸಿಗುವುದನ್ನು ಖಚಿತಪಡಿಸುತ್ತದೆ.
  • ಮುಷ್ಕರ ನಿಯಂತ್ರಣ: ಇದು ಮುಷ್ಕರದ ನೋಟಿಸ್ ಅವಶ್ಯಕತೆಗಳನ್ನು ವಿಸ್ತರಿಸುತ್ತದೆ ಮತ್ತು ಅರ್ಧಕ್ಕಿಂತ ಹೆಚ್ಚು ಉದ್ಯೋಗಿಗಳು ಸಾಮೂಹಿಕ ಸಾಂದರ್ಭಿಕ ರಜೆ ತೆಗೆದುಕೊಳ್ಳುವುದನ್ನು ಒಳಗೊಳ್ಳುವಂತೆ ‘ಮುಷ್ಕರದ’ ವ್ಯಾಖ್ಯಾನವನ್ನು ವಿಸ್ತರಿಸುತ್ತದೆ.
  1. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020 (OSH Code, 2020)
  • ಸುರಕ್ಷತಾ ವಿಸ್ತರಣೆ: 10 ಕ್ಕೂ ಹೆಚ್ಚು ಕಾರ್ಮಿಕರಿರುವ ಎಲ್ಲಾ ಕೆಲಸದ ಸ್ಥಳಗಳಿಗೆ ಹಾಗೂ ಎಲ್ಲಾ ಗಣಿಗಳು ಮತ್ತು ಡಾಕ್‌ಗಳಿಗೆ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ ನಿಯಮಗಳನ್ನು ವಿಸ್ತರಿಸಲು ಇದು 13 ಕಾನೂನುಗಳನ್ನು ಕ್ರೋಢೀಕರಿಸುತ್ತದೆ.
  • ಆರೋಗ್ಯ ವ್ಯವಸ್ಥೆ: 40 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಮತ್ತು ದೊಡ್ಡ ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ಸಮಿತಿಗಳನ್ನು ಇದು ಕಡ್ಡಾಯಗೊಳಿಸುತ್ತದೆ.
  • ರಾತ್ರಿ ಪಾಳಿ: ಮಹಿಳೆಯರ ಒಪ್ಪಿಗೆ ಮತ್ತು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಇದು ಅನುಮತಿಸುತ್ತದೆ.
  • ವಲಸಿಗರ ಮರುವ್ಯಾಖ್ಯಾನ: ನೇರವಾಗಿ ನೇಮಕಗೊಂಡ ಮತ್ತು ಸ್ವಯಂ-ವಲಸೆ ಹೋಗುವ ಕಾರ್ಮಿಕರನ್ನು ಒಳಗೊಳ್ಳಲು ಇದು ‘ಅಂತರ-ರಾಜ್ಯ ವಲಸೆ ಕಾರ್ಮಿಕರ’ ವ್ಯಾಖ್ಯಾನವನ್ನು ವಿಸ್ತರಿಸುತ್ತದೆ.
  • ಪಾರದರ್ಶಕತೆ: ಉದ್ಯೋಗದ ಪಾತ್ರಗಳು ಮತ್ತು ಸಾಮಾಜಿಕ ಭದ್ರತಾ ಹಕ್ಕುಗಳ ಬಗ್ಗೆ ಸ್ಪಷ್ಟತೆಯನ್ನು ಖಚಿತಪಡಿಸಲು ಎಲ್ಲಾ ಉದ್ಯೋಗಿಗಳಿಗೆ ಲಿಖಿತ ನೇಮಕಾತಿ ಪತ್ರಗಳನ್ನು ನೀಡುವುದನ್ನು ಇದು ಕಡ್ಡಾಯಗೊಳಿಸುತ್ತದೆ.