Published on: December 1, 2025
ICDS ಯೋಜನೆ 50 ವರ್ಷ – ಭಾರತದಲ್ಲಿ ಮಕ್ಕಳ ಸಮಗ್ರ ಪೋಷಣೆಯ ಅಧ್ಯಾಯ
ICDS ಯೋಜನೆ 50 ವರ್ಷ – ಭಾರತದಲ್ಲಿ ಮಕ್ಕಳ ಸಮಗ್ರ ಪೋಷಣೆಯ ಅಧ್ಯಾಯ
ಸುದ್ದಿ – ಭಾರತ ಸರ್ಕಾರದ ಪ್ರಮುಖ ಮಹತ್ವಾಕಾಂಕ್ಷಿ ಯೋಜನೆಯಾದ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (Integrated Child Development Services – ICDS), 2025 ರಲ್ಲಿ ತನ್ನ 50 ನೇ ವಾರ್ಷಿಕೋತ್ಸವವನ್ನು ಪೂರೈಸಿದೆ.
ICDS ಯೋಜನೆಯ ಬಗ್ಗೆ:
- ಪ್ರಾರಂಭ: ಇದನ್ನು 1975 ರಲ್ಲಿ ಪ್ರಾರಂಭಿಸಲಾಯಿತು. ಇದು ಪ್ರಪಂಚದ ಅತ್ಯಂತ ವಿಸ್ತೃತವಾದ ಸಮುದಾಯ ಆಧಾರಿತ ಬಾಲ್ಯದ ಆರೈಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮವಾಗಿದೆ. ಪ್ರಸ್ತುತ ಇದನ್ನು ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 (Poshan 2.0) ಎಂದು ಮರುರೂಪಿಸಲಾಗಿದೆ.
- ಆಡಳಿತ: ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಪುರಸ್ಕೃತ ಯೋಜನೆ ಆಗಿದೆ.
- ಉದ್ದೇಶ: 0-6 ವಯಸ್ಸಿನ ಮಕ್ಕಳ ಪೌಷ್ಟಿಕಾಂಶ ಮತ್ತು ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು, ಅವರ ಸಮಗ್ರ ಬೆಳವಣಿಗೆಗೆ ಬೆಂಬಲ ನೀಡುವುದು ಹಾಗೂ ಮರಣ ಪ್ರಮಾಣ ಮತ್ತು ಅಪೌಷ್ಟಿಕತೆಯನ್ನು ಕಡಿಮೆ ಮಾಡುವುದು.
- ಸಮಗ್ರ ಸೇವೆಗಳು: ICDS ಯೋಜನೆಯು ಆರು ಪ್ರಮುಖ ಸೇವೆಗಳನ್ನು ಒದಗಿಸುತ್ತದೆ: ಪೂರಕ ಪೋಷಣೆ, ಶಾಲಾ ಪೂರ್ವ ಅನೌಪಚಾರಿಕ ಶಿಕ್ಷಣ, ಪೌಷ್ಟಿಕಾಂಶ ಮತ್ತು ಆರೋಗ್ಯ ಶಿಕ್ಷಣ, ಲಸಿಕೆ ನೀಡಿಕೆ, ಆರೋಗ್ಯ ತಪಾಸಣೆ ಮತ್ತು ರೆಫರಲ್ ಸೇವೆಗಳು.
- ಅನುಷ್ಠಾನ: ದೇಶಾದ್ಯಂತ ಇರುವ ಅಂಗನವಾಡಿ ಕೇಂದ್ರಗಳ (AWC) ಜಾಲದ ಮೂಲಕ ಇದನ್ನು ಜಾರಿಗೊಳಿಸಲಾಗುತ್ತಿದೆ.
ಪ್ರಮುಖ ಸಾಧನೆಗಳು:
- ವ್ಯಾಪ್ತಿ: ICDS ಯೋಜನೆಯು ದೇಶಾದ್ಯಂತ ಸುಮಾರು 1.4 ಮಿಲಿಯನ್ ಅಂಗನವಾಡಿ ಕೇಂದ್ರಗಳ ಜಾಲವನ್ನು ಹೊಂದಿದ್ದು, 9 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ತಲುಪಿದೆ.
- ಪೌಷ್ಟಿಕಾಂಶದ ಬೆಂಬಲ: ICDS ಅಡಿಯಲ್ಲಿ ನೋಂದಾಯಿತರಾದ ಸುಮಾರು 95% ಮಕ್ಕಳು ಪೂರಕ ಪೋಷಣೆಯನ್ನು ಪಡೆಯುತ್ತಿದ್ದಾರೆ.
- ಸಕಾರಾತ್ಮಕ ಫಲಿತಾಂಶಗಳು: ಮಕ್ಕಳಲ್ಲಿನ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯದಲ್ಲಿ ಸುಧಾರಣೆ ಕಂಡುಬಂದಿರುವುದನ್ನು ಅಧ್ಯಯನಗಳು ದೃಢಪಡಿಸಿವೆ.
ಪ್ರಮುಖ ಸವಾಲುಗಳು:
- ಅನುದಾನದ ಒತ್ತಡ: ಕೇಂದ್ರ ಮತ್ತು ರಾಜ್ಯಗಳ ನಡುವಿನ ಅನುದಾನ ಹಂಚಿಕೆಯ ಮಾದರಿಯು ಪರಿಷ್ಕರಣೆಯಾಗಿದ್ದು (ಹಿಂದಿನ 90:10 ರಿಂದ ಪ್ರಸ್ತುತ 60:40 ಕ್ಕೆ), ಇದು ರಾಜ್ಯಗಳ ಮೇಲೆ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ. ಇದರಿಂದಾಗಿ ಅನುಷ್ಠಾನದಲ್ಲಿ ತಾರತಮ್ಯ ಉಂಟಾಗುತ್ತಿದೆ.
- ಮೂಲಸೌಕರ್ಯದ ಕೊರತೆ: ಅನೇಕ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳು, ಸುಸಜ್ಜಿತ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳ ಕೊರತೆಯಿದೆ.
- ಸಿಬ್ಬಂದಿ ಕೊರತೆ: ಅಂಗನವಾಡಿ ಕಾರ್ಯಕರ್ತೆಯರು ಕಡಿಮೆ ಗೌರವಧನ, ಕೆಲಸದ ಅತಿಯಾದ ಒತ್ತಡ ಮತ್ತು ICDS ಅಲ್ಲದ ಇತರೆ ಕರ್ತವ್ಯಗಳಿಗೆ ನಿಯೋಜನೆಗೊಳ್ಳುವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
- ತಾಂತ್ರಿಕ ಸಮಸ್ಯೆಗಳು: ಪೋಷಣ್ ಟ್ರ್ಯಾಕರ್ ಮತ್ತು ಮುಖ ಗುರುತಿಸುವಿಕೆ ವ್ಯವಸ್ಥೆಗಳಲ್ಲಿ (FRS) ಕಂಡುಬರುತ್ತಿರುವ ದೋಷಗಳಿಂದಾಗಿ, ಅರ್ಹ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯುವ ಅಪಾಯವಿದೆ.
- ಪೌಷ್ಟಿಕಾಂಶದ ಕಾಳಜಿಗಳು: ಪೂರಕ ಪೋಷಣೆಯ ಗುಣಮಟ್ಟ ಮತ್ತು ಸಮರ್ಪಕತೆಯ ಬಗ್ಗೆ ಸಮಸ್ಯೆಗಳು ಮುಂದುವರೆದಿದ್ದು, ಇದು ಮಕ್ಕಳಲ್ಲಿನ ಕುಂಠಿತ ಬೆಳವಣಿಗೆ (Stunting – 35.5%) ಮತ್ತು ಕ್ಷೀಣಿಸುವಿಕೆ ಅಂದರೆ ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವ (Wasting – 18.7%) ಹೆಚ್ಚಿನ ದರಗಳಲ್ಲಿ ಪ್ರತಿಫಲಿಸುತ್ತಿದೆ.
ಮಾದರಿಯಾಗಿ ಕರ್ನಾಟಕದ ICDS ನಾವೀನ್ಯತೆಗಳು:
- ವ್ಯವಸ್ಥೆಯ ವಿಸ್ತರಣೆ: ಕರ್ನಾಟಕವು ICDS ಯೋಜನೆಯನ್ನು ಪ್ರಾಯೋಗಿಕ ಹಂತದಿಂದ 204 ಬ್ಲಾಕ್‌ಗಳಿಗೆ ವಿಸ್ತರಿಸುವ ಮೂಲಕ ಯೋಜಿತ ಆಡಳಿತಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ.
- ಮೂಲಸೌಕರ್ಯ ಉನ್ನತೀಕರಣ: ರಾಜ್ಯದಲ್ಲಿ 47,720 ಕ್ಕೂ ಹೆಚ್ಚು ಅಂಗನವಾಡಿಗಳು ಅಡುಗೆ ಕೋಣೆ, ಶೌಚಾಲಯ, ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳನ್ನು ಒಳಗೊಂಡ ಸರ್ಕಾರಿ ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
- ಶಾಲಾ ಪೂರ್ವ ಶಿಕ್ಷಣ ಸುಧಾರಣೆ: 250 ಕೇಂದ್ರಗಳನ್ನು ಸರ್ಕಾರಿ ಮಾಂಟೆಸ್ಸರಿ ಘಟಕಗಳಾಗಿ ಪರಿವರ್ತಿಸುವ ಮೂಲಕ, ರಚನಾತ್ಮಕ, ದ್ವಿಭಾಷಾ ಮತ್ತು ಚಟುವಟಿಕೆ ಆಧಾರಿತ ಕಲಿಕೆಯನ್ನು ಒದಗಿಸಲಾಗುತ್ತಿದೆ.
- ಪಠ್ಯಕ್ರಮದ ಮಾನಕೀಕರಣ: ‘ಚಿಲಿಪಿಲಿ’ ಪಠ್ಯಕ್ರಮವು ಸಾಪ್ತಾಹಿಕ ವಿಷಯಗಳು (Themes) ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ಒದಗಿಸುವ ಮೂಲಕ ಮಕ್ಕಳ ಬೌದ್ಧಿಕ ಸನ್ನದ್ಧತೆಯನ್ನು ಹೆಚ್ಚಿಸುತ್ತಿದೆ.
- ಶಿಶುಪಾಲನಾ ವ್ಯಾಪ್ತಿ: ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ, ಅಂಗನವಾಡಿ ಸಂಪರ್ಕಿತ ‘ಕೂಸಿನ ಮನೆ’ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ 0-3 ವಯಸ್ಸಿನ ಮಕ್ಕಳ ಆರೈಕೆಯ ಕೊರತೆಯನ್ನು ನೀಗಿಸಲಾಗುತ್ತಿದೆ.
- ಪೌಷ್ಟಿಕಾಂಶ ಹಸ್ತಕ್ಷೇಪ: ‘ಚಿಗುರು’ ಕಾರ್ಯಕ್ರಮವು ಸಮುದಾಯ ಆಧಾರಿತ ಪೌಷ್ಟಿಕಾಂಶ ಆಪ್ತಸಮಾಲೋಚನೆಯೊಂದಿಗೆ ಮಕ್ಕಳ ಬೆಳವಣಿಗೆಯ ಮೇಲ್ವಿಚಾರಣೆಯನ್ನು ಸಂಯೋಜಿಸಿದೆ.
- ಸಿಬ್ಬಂದಿ ಕಲ್ಯಾಣ: ಹೆಚ್ಚುವರಿ ರಾಜ್ಯ ಗೌರವಧನ ಮತ್ತು ಕಲ್ಯಾಣ ಕ್ರಮಗಳು ಅಂಗನವಾಡಿ ಕಾರ್ಯಕರ್ತೆಯರ ಸೇವಾ ಬದ್ಧತೆಯನ್ನು ಸುಧಾರಿಸಿವೆ.
