Published on: December 3, 2025

ಚುಟುಕು ಸಮಾಚಾರ: 02 ಡಿಸೆಂಬರ್‌ 2025

ಚುಟುಕು ಸಮಾಚಾರ: 02 ಡಿಸೆಂಬರ್‌ 2025

ಡಿಜಿಟಲ್ ಅರೆಸ್ಟ್ ಹಗರಣ: ಸುಪ್ರೀಂ ಕೋರ್ಟ್ ಸೂಚನೆಗಳು ಮತ್ತು ತನಿಖೆ: ಡಿಜಿಟಲ್ ಅರೆಸ್ಟ್ ಎನ್ನುವುದು ವಂಚಕರು ತನಿಖಾ ಸಂಸ್ಥೆಗಳ ಹೆಸರಿನಲ್ಲಿ ನಾಗರಿಕರಿಗೆ ಕರೆ ಮಾಡಿ ಅಪರಾಧ ಆರೋಪಗಳನ್ನು ಮಾಡುತ್ತಾರೆ ಮತ್ತು ಹಣ ವಸೂಲು ಮಾಡುವ ಗಂಭೀರ ಸೈಬರ್ ಹಗರಣ. ಸುಪ್ರೀಂ ಕೋರ್ಟ್ ಈ ಹಗರಣದ ಅಖಿಲ ಭಾರತ ತನಿಖೆಯನ್ನು ಸಿಬಿಐಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಬ್ಯಾಂಕ್‌ಗಳು ಮತ್ತು ಐಟಿ ಸೇವಾ ಪೂರೈಕೆದಾರರಿಗೆ ಸಹಕಾರದ ಆದೇಶ ನೀಡಲಾಗಿದೆ. RBI ಯನ್ನು ಪ್ರತಿವಾದಿಯಾಗಿ ಸೇರಿಸಿ ವಂಚನೆ ಖಾತೆಗಳನ್ನು ಗುರುತಿಸಲು ಬಳಸುವ ಕೃತಕ ಬುದ್ಧಿಮತ್ತೆ ಸಾಧನಗಳ ವಿವರ ಕೋರಲಾಗಿದೆ. ಕೆಲವು ರಾಜ್ಯಗಳು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಯ ಸೆಕ್ಷನ್ 6 ಅಡಿಯಲ್ಲಿ ಒಪ್ಪಿಗೆ ನೀಡಬೇಕು ಎಂದು ಸೂಚಿಸಲಾಗಿದೆ.

ರಾಷ್ಟ್ರೀಯ ಆರ್ಥಿಕ ಸೇರ್ಪಡೆ ಕಾರ್ಯತಂತ್ರ 2025–30 (NSFI 2025–30): ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಉಪ-ಸಮಿತಿಯು ದೇಶದಾದ್ಯಂತ ಹಣಕಾಸು ಸೇವೆಗಳ ಕೊನೆಯ ಹಂತದ ಪ್ರವೇಶ ಮತ್ತು ಪರಿಣಾಮಕಾರಿ ಬಳಕೆಯನ್ನು ಸುಧಾರಿಸಲು NSFI 2025–30 ರ ಕಾರ್ಯತಂತ್ರಕ್ಕೆ ಅನುಮೋದನೆ ನೀಡಿದೆ. ಈ ಕಾರ್ಯತಂತ್ರವು ಪಂಚ-ಜ್ಯೋತಿ ಎಂಬ ಐದು ಪ್ರಮುಖ ಗುರಿಗಳನ್ನು ಒಳಗೊಂಡಿದ್ದು, ಒಟ್ಟು 47 ಕ್ರಿಯಾ ಅಂಶಗಳೊಂದಿಗೆ ಜಾರಿಗೊಳ್ಳಲಿದೆ. ಗುರಿಗಳು – ಸಮಾನ ಮತ್ತು ಕೈಗೆಟುಕುವ ಹಣಕಾಸು ಸೇವೆಗಳು, ಮಹಿಳಾ ನೇತೃತ್ವದ ಆರ್ಥಿಕ ಸೇರ್ಪಡೆ, ಜೀವನೋಪಾಯ-ಕೌಶಲ್ಯ-ಸೇರ್ಪಡೆ ಸಂಯೋಜನೆ, ಹಣಕಾಸು ಶಿಕ್ಷಣದ ಉತ್ತೇಜನ ಮತ್ತು ಗ್ರಾಹಕ ರಕ್ಷಣೆ. RBI ಯ FI-Index ಕೂಡ 2021 ರಿಂದ 2025 ರವರೆಗೆ ಮಹತ್ವದ ಏರಿಕೆಯನ್ನು ತೋರಿಸಿದೆ. PMJDY, JAM ಮತ್ತು ಡಿಜಿಟಲ್ ಇಂಡಿಯಾ ಈ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತವೆ.

WHO ಯ ಬೊಜ್ಜು ನಿರ್ವಹಣೆಗೆ GLP-1 ಚಿಕಿತ್ಸೆಯ ಷರತ್ತುಬದ್ಧ ಶಿಫಾರಸು: ವಿಶ್ವ ಆರೋಗ್ಯ ಸಂಸ್ಥೆ (WHO) ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಮತ್ತು ವೃತ್ತಿಪರ ವೈದ್ಯಕೀಯ ಬೆಂಬಲದೊಂದಿಗೆ GLP-1 ಚಿಕಿತ್ಸೆಯನ್ನು ಬೊಜ್ಜಿನ ದೀರ್ಘಕಾಲೀನ ನಿರ್ವಹಣೆಗೆ ಷರತ್ತುಬದ್ಧವಾಗಿ ಶಿಫಾರಸು ಮಾಡಿದೆ. ಮಾರ್ಗಸೂಚಿಗಳು ಲಿರಾಗ್ಲುಟೈಡ್, ಸೆಮಾಗ್ಲುಟೈಡ್ ಮತ್ತು ಟಿರ್ಜೆಪಟೈಡ್ ಎಂಬ ಮೂರು GLP-1 ಅಗೊನಿಸ್ಟ್‌ಗಳ ಬಳಕೆಯನ್ನು ಒಳಗೊಂಡಿವೆ. ಈ ಔಷಧಗಳು GLP-1 ಹಾರ್ಮೋನ್ ಅನ್ನು ಅನುಕರಿಸಿ ಇನ್ಸುಲಿನ್ ಹೆಚ್ಚಿಸುವುದು, ಗ್ಲುಕಗನ್ ಕಡಿಮೆ ಮಾಡುವುದು, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವುದು ಮತ್ತು ಹಸಿವು ನಿಯಂತ್ರಿಸುವ ಮೂಲಕ ತೂಕ ನಷ್ಟಕ್ಕೆ ಸಹಕಾರಿಯಾಗುತ್ತವೆ. BMI ≥ 30 ಇರುವುದು ಬೊಜ್ಜಿನ ಮಾನದಂಡ ಮತ್ತು NFHS-5 ಪ್ರಕಾರ ಭಾರತದಲ್ಲಿ ಮಹಿಳೆಯರಲ್ಲಿ 24% ಮತ್ತು ಪುರುಷರಲ್ಲಿ 23% ಬೊಜ್ಜು ಕಂಡುಬರುತ್ತದೆ.

ಭಾರತದಲ್ಲಿ HIV–AIDS ನಿಯಂತ್ರಣ: ರಾಷ್ಟ್ರೀಯ ಪ್ರಯತ್ನಗಳು ಮತ್ತು WHO ಗುರಿಗಳು: ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) 1992 ರಿಂದ ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತಿದೆ. HIV ಒಂದು ರೆಟ್ರೋವೈರಸ್ ಆಗಿದ್ದು CD4 ರೋಗನಿರೋಧಕ ಕೋಶಗಳನ್ನು ಹಾನಿಗೊಳಿಸಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಆರಂಭಿಕ ಪರೀಕ್ಷೆ ಮತ್ತು ಆಂಟಿರೆಟ್ರೋವೈರಲ್ ಥೆರಪಿ (ART) ವೈರಲ್ ಲೋಡ್ ನಿಗ್ರಹಿಸಲು ಸಹಾಯಕ. ಭಾರತದಲ್ಲಿ HIV ಹರಡುವಿಕೆ 0.20% ಇರುವುದರಿಂದ ಜಾಗತಿಕ ಸರಾಸರಿಗಿಂತ ಕಡಿಮೆ. 2010–2024 ರಲ್ಲಿ ಹೊಸ ಸೋಂಕುಗಳು 48.7% ಮತ್ತು AIDS ಸಂಬಂಧಿತ ಸಾವುಗಳು 81.4% ಕಡಿಮೆಯಾಗಿದೆ. ಸರ್ಕಾರದ NACP-V, 95-95-95 ಗುರಿ, ಮಿಷನ್ ಸಂಪರ್ಕ್ ಮತ್ತು HIV/AIDS ಕಾಯ್ದೆ 2017 ಪ್ರಮುಖ ಕ್ರಮಗಳಾಗಿವೆ.

ಸಂಸತ್ತಿನ ಪರಿಣಾಮಕಾರಿತ್ವದ ಕುಸಿತ — ಸ್ಥಿತಿಗತಿ ಮತ್ತು ಅಗತ್ಯವಾದ ಸುಧಾರಣೆಗಳು: ಇತ್ತೀಚಿನ ಅಧಿವೇಶನಗಳಲ್ಲಿ ನಿರಂತರ ಸಭಾತ್ಯಾಗಗಳು, ಕಡಿಮೆ ಕಲಾಪದ ದಿನಗಳು ಮತ್ತು ಕುಸಿತಗೊಂಡ ಪ್ರಶ್ನೋತ್ತರ ಅವಧಿಯಿಂದಾಗಿ ಸಂಸತ್ತಿನ ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವವು ತೀವ್ರವಾಗಿ ಕುಸಿದಿದೆ. 2025ರ ಮುಂಗಾರು ಅಧಿವೇಶನದಲ್ಲಿ ಲೋಕಸಭೆ 29% ಮತ್ತು ರಾಜ್ಯಸಭೆ 34% ರಷ್ಟು ಮಾತ್ರ ಕಾರ್ಯನಿರ್ವಹಿಸಿವೆ. ಮಸೂದೆಗಳನ್ನು ಸಮಿತಿಗಳಿಗೆ ಉಲ್ಲೇಖಿಸುವ ಪ್ರಮಾಣ 60% ರಿಂದ ಕೇವಲ 20% ಗೆ ಇಳಿದಿದೆ. 16, 17 ಹಾಗೂ 18ನೇ ಲೋಕಸಭೆಗಳಲ್ಲಿ ಉಪಸಭಾಪತಿ ನೇಮಕವಾಗದಿರುವುದೂ ಗಂಭೀರ ವಿಚಾರ. UK/ಕೆನಡಾ ಮಾದರಿಯಲ್ಲಿ ಸಂವಾದ, ವಿಪ್ ನಿಯಂತ್ರಣ, ಸಮಿತಿಗಳ ಬಲವರ್ಧನೆ ಮತ್ತು ವಾರ್ಷಿಕ 100–120 ಕಲಾಪದ ದಿನಗಳ ಶಾಸನಬದ್ಧ ವ್ಯವಸ್ಥೆ ಪ್ರಮುಖ ಸುಧಾರಣೆಗಳಾಗಿ ಸೂಚಿಸಲಾಗಿದೆ. ಸಂವಿಧಾನದ ವಿಧಿ 85 ಪ್ರಕಾರ ರಾಷ್ಟ್ರಪತಿಗೆ ಅಧಿವೇಶನ ಕರೆಯುವ ಅಧಿಕಾರವಿದೆ ಮತ್ತು ಅಧಿವೇಶನಗಳ ನಡುವೆ 6 ತಿಂಗಳಿಗಿಂತ ಹೆಚ್ಚು ಅಂತರ ಇರಬಾರದು.

ಅಟಲ್ ಪಿಂಚಣಿ ಯೋಜನೆ (APY) – ದಶಕದ ಒಳಗೊಂಡ ಸಾಮಾಜಿಕ ಭದ್ರತಾ ಸಾಧನೆ: 2015ರಲ್ಲಿ ಆರಂಭಗೊಂಡ ಅಟಲ್ ಪಿಂಚಣಿ ಯೋಜನೆ (APY) ಅಸಂಘಟಿತ ವಲಯದ ಕಾರ್ಮಿಕರಿಗೆ ಖಾತರಿಯ ನಿವೃತ್ತಿ ಪಿಂಚಣಿಯನ್ನು ಒದಗಿಸುವ ಕೇಂದ್ರ ವಲಯದ ಪ್ರಮುಖ ಯೊಜನೆಯಾಗಿದೆ. ಇದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಚೌಕಟ್ಟಿನಲ್ಲಿ PFRDA ಮೂಲಕ ನಿರ್ವಹಿಸಲ್ಪಡುತ್ತದೆ. 18–40 ವರ್ಷದ ಮಾನ್ಯ ಬ್ಯಾಂಕ್ ಖಾತೆಯುಳ್ಳ, ಆದಾಯ ತೆರಿಗೆ ಪಾವತಿಸದವರಿಗೆ ಇದು ಲಭ್ಯ. 20 ವರ್ಷಗಳ ಕನಿಷ್ಠ ಚಂದಾದಾರಿಕೆಯಿಂದ 60ರ ನಂತರ 1,000 ರಿಂದ 5,000 ರೂ. ಮಾಸಿಕ ಪಿಂಚಣಿ ದೊರೆಯುತ್ತದೆ. ಕುಟುಂಬ ಭದ್ರತೆಯಲ್ಲಿ ಸಂಗಾತಿಗೆ ಪಿಂಚಣಿ ಮತ್ತು ಮರಣಾನಂತರ ನಾಮಿನಿಗೆ ಪೂರ್ಣ ಮೊತ್ತ ಲಭ್ಯ. ಆಗಸ್ಟ್ 2025ರ ವೇಳೆಗೆ 8.11 ಕೋಟಿ ನೋಂದಾಯಣೆಗಳು ನಡೆದಿದ್ದು, ಮಹಿಳೆಯರು 48% ರಷ್ಟಿದ್ದಾರೆ.

ನಾಗಾಲ್ಯಾಂಡ್ – ರಕ್ಷಿತ ಪ್ರದೇಶ ಪರವಾನಗಿ ನೀತಿ ಮತ್ತು ಹಾರ್ನ್‌ಬಿಲ್ ಉತ್ಸವದ ವಿವಾದ: ಕೇಂದ್ರ ಸರ್ಕಾರವು ರಕ್ಷಿತ ಪ್ರದೇಶ ಪರವಾನಗಿ (Protected Area Permit) ನಿಯಮಗಳಲ್ಲಿ ತಾತ್ಕಾಲಿಕ ಸಡಿಲಿಕೆ ನೀಡಿದ್ದರೂ, ನಾಗಾಲ್ಯಾಂಡ್ ಮರು-ಜಾರಿಗೊಳಿಸಿದ ನಿಬಂಧನೆಗಳನ್ನು ಪ್ರವಾಸೋದ್ಯಮಕ್ಕೆ ಅಡ್ಡಿಯಾಗುತ್ತವೆ ಎಂದು ವಿರೋಧಿಸಿದೆ. ವಿಶೇಷವಾಗಿ ಡಿಸೆಂಬರ್ 1–10 ರವರೆಗೆ ನಡೆಯುವ ರಾಜ್ಯದ ಅತಿದೊಡ್ಡ ಹಾರ್ನ್‌ಬಿಲ್ ಉತ್ಸವದಲ್ಲಿ ವಿದೇಶಿ ಪ್ರವಾಸಿಗರ ಆಗಮನ ಕಡಿಮೆಯಾಗುವ ಭೀತಿ ವ್ಯಕ್ತವಾಗಿದೆ. ಹಾರ್ನ್‌ಬಿಲ್ ಉತ್ಸವವನ್ನು 2000 ರಲ್ಲಿ ನಾಗಾ ಸಂಸ್ಕೃತಿ, ಅಸ್ಮಿತೆ ಮತ್ತು ಬುಡಕಟ್ಟು ಏಕತೆ ಕಾಪಾಡಲು ಪ್ರಾರಂಭಿಸಲಾಗಿದ್ದು, ‘ಉತ್ಸವಗಳ ಉತ್ಸವ’ವಾಗಿ ಡಿಸೆಂಬರ್ 1 ರಂದು ರಾಜ್ಯೋತ್ಸವ ದಿನದಂದೇ ಪ್ರಾರಂಭವಾಗುತ್ತದೆ. ಕಿಸಾಮಾದ ನಾಗಾ ಹೆರಿಟೇಜ್ ವಿಲೇಜ್‌ನಲ್ಲಿ ನಡೆಯುವ ಈ ಉತ್ಸವವು 1.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸಾಂಸ್ಕೃತಿಕ–ಪರ್ಯಟನ ಕಾರ್ಯಕ್ರಮವಾಗಿದೆ.

 ಜೈವಿಕ ಅಸ್ತ್ರಗಳ ಸಮಾವೇಶ (BWC) – 50 ವರ್ಷಗಳು: ಜೈವಿಕ ಭಯೋತ್ಪಾದನೆ ವಿರುದ್ಧ ಭಾರತ ಎಚ್ಚರಿಕೆ: ಜೈವಿಕ ಅಸ್ತ್ರಗಳ ಸಮಾವೇಶದ 50 ವರ್ಷಗಳ ಪೂರೈಕೆಯನ್ನು ಗುರುತಿಸಿರುವ ಸಂದರ್ಭದಲ್ಲಿ, ಭಾರತದ ವಿದೇಶಾಂಗ ಸಚಿವರು ಜೈವಿಕ ಭಯೋತ್ಪಾದನೆ ಈಗ ದೂರದ ಭೀತಿ ಅಲ್ಲವೆಂದು ಎಚ್ಚರಿಸಿದರು. ಜೈವಿಕ ಏಜೆಂಟ್‌ಗಳ ದುರುಪಯೋಗ ತಡೆಯಲು ಜಾಗತಿಕ ಆಡಳಿತ, ಪರಿಶೀಲನಾ ವ್ಯವಸ್ಥೆಗಳು ಮತ್ತು ಅನುಸರಣಾ ವ್ಯವಸ್ಥೆಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಒತ್ತಿಹೇಳಲಾಯಿತು. ಜೈವಿಕ ಅಸ್ತ್ರಗಳನ್ನು ನಿಷೇಧಿಸುವ ಮೊದಲ ಬಹುಪಕ್ಷೀಯ ನಿರಸ್ತ್ರೀಕರಣ ಒಪ್ಪಂದವಾದ BWC 1975 ರಲ್ಲಿ ಜಾರಿಗೆ ಬಂತು, 188 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ತಂತ್ರಜ್ಞಾನ ಸುಲಭೀಕರಣ, ದ್ವಂದ್ವ ಬಳಕೆಯ ಅಪಾಯಗಳು, ಪ್ರಯೋಗಾಲಯಗಳ ಮೇಲ್ವಿಚಾರಣಾ ಕೊರತೆ ಮತ್ತು ನಾನ್-ಸ್ಟೇಟ್ ಅಕ್ಟರ್‌ಗಳ ಪ್ರವೇಶದಿಂದ ಜೈವಿಕ ಭಯೋತ್ಪಾದನೆಯ ಅಪಾಯ ಹೆಚ್ಚಾಗಿದೆ. ಭಾರತವು WMD ಕಾಯ್ದೆ, SCOMET ನಿಯಂತ್ರಣಗಳು ಮತ್ತು ರಾಷ್ಟ್ರೀಯ ಜೈವಿಕ ಸುರಕ್ಷತೆ ನಿಯಮಗಳ ಮೂಲಕ ತಡೆಗಟ್ಟುವಿಕೆಯನ್ನು ಬಲಪಡಿಸಿದೆ.