Published on: April 4, 2026

ಖೇಲೊ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026: ಪದಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ

ಖೇಲೊ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026: ಪದಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ

ಸುದ್ದಿ –  ಛತ್ತೀಸ್‌ಗಢದಲ್ಲಿ 2026 ರ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಅದ್ಧೂರಿಯಾಗಿ ನಡೆದ ‘ಖೇಲೊ ಇಂಡಿಯಾ ಬುಡಕಟ್ಟು ಕ್ರೀಡಾಕೂಟ’ (Khelo India Tribal Games) ಕರ್ನಾಟಕದ ಭರ್ಜರಿ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿದೆ. 30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಮಾರು 3,800 ಕ್ರೀಡಾಪಟುಗಳು ಭಾಗವಹಿಸಿದ್ದ ಈ ಕ್ರೀಡಾಕೂಟದ ಸಮಾರೋಪ ಸಮಾರಂಭವು ರಾಯ್‌ಪುರದಲ್ಲಿ ಜರುಗಿತು. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ, ಖ್ಯಾತ ಬಾಕ್ಸರ್ ಮೇರಿ ಕೋಮ್ ಮತ್ತು ಫುಟ್‌ಬಾಲ್ ತಾರೆ ಭೈಚುಂಗ್ ಭುಟಿಯಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ರಾಜ್ಯಗಳು:

  1. ಕರ್ನಾಟಕ: ಚಿನ್ನ: 23 | ಬೆಳ್ಳಿ: 08 | ಕಂಚು: 07 | ಒಟ್ಟು: 38
  2. ಒಡಿಶಾ: ಚಿನ್ನ: 21 | ಬೆಳ್ಳಿ: 15 | ಕಂಚು: 21 | ಒಟ್ಟು: 57
  3. ಜಾರ್ಖಂಡ್: ಚಿನ್ನ: 16 | ಬೆಳ್ಳಿ: 08 | ಕಂಚು: 11 | ಒಟ್ಟು: 35
  4. ಛತ್ತೀಸ್‌ಗಢ: ಚಿನ್ನ: 03 | ಬೆಳ್ಳಿ: 10 | ಕಂಚು: 06 | ಒಟ್ಟು: 19

ಕ್ರೀಡಾಕೂಟದ ಪ್ರಮುಖ ಆಕರ್ಷಣೆಗಳು:

  • ಫುಟ್‌ಬಾಲ್: ಪುರುಷರ ಫುಟ್‌ಬಾಲ್ ಫೈನಲ್‌ನಲ್ಲಿ ಪಶ್ಚಿಮ ಬಂಗಾಳವು ಆತಿಥೇಯ ಛತ್ತೀಸ್‌ಗಢವನ್ನು 1-0 ಗೋಲುಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು.
  • ಬಿಲ್ಲುಗಾರಿಕೆ: ಬಿಲ್ಲುಗಾರಿಕೆಯಲ್ಲಿ ಜಾರ್ಖಂಡ್‌ನ ಕೋಮಲಿಕಾ ಬಾರಿ ಮಹಿಳಾ ವಿಭಾಗದಲ್ಲಿ ಚಿನ್ನ ಗೆದ್ದರೆ, ಒಡಿಶಾದ ಅರ್ಜುನ್ ಖರಾ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು.
  • ಸ್ಪರ್ಧಾತ್ಮಕ ಕ್ರೀಡೆಗಳು: ಈ ಕೂಟದಲ್ಲಿ ಒಟ್ಟು 7 ಕ್ರೀಡೆಗಳನ್ನು ಅಳವಡಿಸಲಾಗಿತ್ತು: ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಫುಟ್‌ಬಾಲ್, ಹಾಕಿ, ಈಜು, ಭಾರ ಎತ್ತುವಿಕೆ ಮತ್ತು ಕುಸ್ತಿ.
  • ಪ್ರದರ್ಶನ ಕ್ರೀಡೆಗಳು: ಭಾರತೀಯ ಸಾಂಪ್ರದಾಯಿಕ ಕ್ರೀಡೆಗಳಾದ ಮಲ್ಲಕಂಬ ಮತ್ತು ಕಬಡ್ಡಿಯನ್ನು ಪ್ರದರ್ಶನ ಕ್ರೀಡೆಗಳಾಗಿ ಸೇರಿಸಲಾಗಿತ್ತು.

ಬುಡಕಟ್ಟು ಯುವಜನತೆಯಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸಲು ಈ ಕ್ರೀಡಾಕೂಟವು ಉತ್ತಮ ವೇದಿಕೆಯಾಗಿದೆ. ಕರ್ನಾಟಕವು ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಮಾತ್ರವಲ್ಲದೆ, ಒಟ್ಟಾರೆ ಕ್ರೀಡಾ ಕ್ಷೇತ್ರದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿರುವುದು ಅತ್ಯಂತ ಶ್ಲಾಘನೀಯ.