Published on: September 10, 2025
ಚುಟುಕು ಸಮಾಚಾರ: 7-10 ಸೆಪ್ಟೆಂಬರ್ 2025
ಚುಟುಕು ಸಮಾಚಾರ: 7-10 ಸೆಪ್ಟೆಂಬರ್ 2025
ಕ್ರೀಡಾ ಸುದ್ದಿಗಳು:
- ಮ್ಯಾಕ್ಸ್ ವರ್ಸ್ಟಪ್ಪೆನ್ ಇಟಾಲಿಯನ್ ಗ್ರಾಂಡ್ ಪ್ರಿಕ್ಸ್ 2025 ಗೆಲುವು: ಮ್ಯಾಕ್ಸ್ ವರ್ಸ್ಟಪ್ಪೆನ್ ಅವರು 2025ರ ಇಟಾಲಿಯನ್ ಗ್ರಾಂಡ್ ಪ್ರಿಕ್ಸ್ ಅನ್ನು ಗೆದ್ದಿದ್ದಾರೆ. ಇದು ಫಾರ್ಮುಲಾ 1 ಇತಿಹಾಸದಲ್ಲಿಯೇ ಅತ್ಯಂತ ವೇಗದ ಗ್ರಾಂಡ್ ಪ್ರಿಕ್ಸ್ ಓಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅವರು ತಮ್ಮ ಪ್ರತಿಸ್ಪರ್ಧಿಗಳಾದ ಲ್ಯಾಂಡೋ ನಾರಿಸ್ ಮತ್ತು ಆಸ್ಕರ್ ಪಿಯಾಸ್ತ್ರಿ ಅವರನ್ನು ಸೋಲಿಸಿದರು. ಈ ಗೆಲುವಿನೊಂದಿಗೆ ಮ್ಯಾಕ್ಸ್ ಪೋಲ್ ಸ್ಥಾನದಲ್ಲೂ ಮೊದಲ ಸ್ಥಾನ ಗಳಿಸಿದ್ದಾರೆ. ಫೆರಾರಿಯ ಚಾರ್ಲ್ಸ್ ಲೆಕ್ಲೆರ್ಕ್ ನಾಲ್ಕನೇ ಸ್ಥಾನ ಪಡೆದರೆ, ಲೂಯಿಸ್ ಹ್ಯಾಮಿಲ್ಟನ್ ಆರನೇ ಸ್ಥಾನ ಗಳಿಸಿದರು. ಇದು ರೆಡ್ ಬುಲ್ ತಂಡದ ಪ್ರಾಬಲ್ಯವನ್ನು ಮತ್ತಷ್ಟು ದೃಢಪಡಿಸಿದೆ.
- ಹಾಕಿ ಏಷ್ಯಾಕಪ್ 2025: ಭಾರತಕ್ಕೆ ಎಂಟು ವರ್ಷಗಳ ಬಳಿಕ ಕಿರೀಟ: ಭಾರತದ ಪುರುಷರ ಹಾಕಿ ತಂಡವು ಎಂಟು ವರ್ಷಗಳ ಬಳಿಕ ಹಾಕಿ ಏಷ್ಯಾಕಪ್ 2025 ಅನ್ನು ಗೆದ್ದಿದೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 4-1 ಗೋಲುಗಳ ಅಂತರದಲ್ಲಿ ಸೋಲಿಸಿ ಭಾರತವು ಒಟ್ಟಾರೆಯಾಗಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಗೆಲುವಿನೊಂದಿಗೆ ಭಾರತ ತಂಡವು 2026ರಲ್ಲಿ ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ಗೆ ನೇರ ಪ್ರವೇಶ ಪಡೆದುಕೊಂಡಿದೆ. ಪಂದ್ಯದಲ್ಲಿ ದಿಲ್ಪ್ರೀತ್ ಸಿಂಗ್ ಅವರು ಎರಡು ಗೋಲುಗಳನ್ನು ಗಳಿಸಿ ಜಯಕ್ಕೆ ಪ್ರಮುಖ ಕಾರಣರಾದರು.
- ಯುಎಸ್ ಓಪನ್ 2025: ಸಬಲೆಂಕಾ ಸತತ ಎರಡನೇ ಬಾರಿ ಚಾಂಪಿಯನ್: ಯುಎಸ್ ಓಪನ್ 2025ರ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಬೆಲಾರಸ್ನ ವಿಶ್ವ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಅವರು ಅಮೆರಿಕದ ಅಮಾಂಡಾ ಅನಿಸಿಮೋವಾ ಅವರನ್ನು 6-3, 7-6(7/3) ಅಂಕಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದರು. ಇದು ಸಬಲೆಂಕಾ ಅವರ ಒಟ್ಟಾರೆ ನಾಲ್ಕನೇ ಗ್ರ್ಯಾನ್ಸ್ಲಾಮ್ ಕಿರೀಟವಾಗಿದೆ. ಈ ಗೆಲುವಿನೊಂದಿಗೆ ಅವರು 11 ವರ್ಷಗಳ ನಂತರ ಯುಎಸ್ ಓಪನ್ನಲ್ಲಿ ಸತತ ಎರಡು ಬಾರಿ ಗೆದ್ದ ಮೊದಲ ಆಟಗಾರ್ತಿ ಎನಿಸಿಕೊಂಡರು. ಈ ಹಿಂದೆ, 2012-14ರ ಅವಧಿಯಲ್ಲಿ ಸೆರೆನಾ ವಿಲಿಯಮ್ಸ್ ಮಾತ್ರ ಈ ಸಾಧನೆ ಮಾಡಿದ್ದರು.
- CAFA ನೇಷನ್ಸ್ ಕಪ್ 2025: ಉಜ್ಬೇಕಿಸ್ತಾನ್ಗೆ ಕಿರೀಟ, ಭಾರತಕ್ಕೆ ಕಂಚಿನ ಪದಕ: CAFA ನೇಷನ್ಸ್ ಕಪ್ 2025 ರ 2ನೇ ಆವೃತ್ತಿಯ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಆತಿಥೇಯ ಉಜ್ಬೇಕಿಸ್ತಾನ್ ಫೈನಲ್ನಲ್ಲಿ ಇರಾನ್ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಈ ಮಧ್ಯೆ, ಟೂರ್ನಿಗೆ ಚೊಚ್ಚಲ ಪ್ರವೇಶ ಮಾಡಿದ ಭಾರತ ತಂಡವು ಓಮನ್ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 3-2 ಗೋಲುಗಳಿಂದ ಸೋಲಿಸಿ ಕಂಚಿನ ಪದಕವನ್ನು ಪಡೆಯಿತು. ಅಂತರಾಷ್ಟ್ರೀಯ ಫುಟ್ಬಾಲ್ನಲ್ಲಿ ಓಮನ್ ವಿರುದ್ಧ ಭಾರತಕ್ಕೆ ಇದು ಮೊದಲ ಐತಿಹಾಸಿಕ ಗೆಲುವಾಗಿದೆ.
- ಕಾರ್ಲೋಸ್ ಅಲ್ಕರಾಜ್ಗೆ ಎರಡನೇ ಯುಎಸ್ ಓಪನ್ ಪ್ರಶಸ್ತಿ: ಸೆಪ್ಟೆಂಬರ್ 7, 2025 ರಂದು, ಕಾರ್ಲೋಸ್ ಅಲ್ಕರಾಜ್ ಅವರು ಯುಎಸ್ ಓಪನ್ 2025ರ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಜನ್ನಿಕ್ ಸಿನ್ನರ್ ಅವರನ್ನು ಸೋಲಿಸಿ ತಮ್ಮ ಎರಡನೇ ಯುಎಸ್ ಓಪನ್ ಪ್ರಶಸ್ತಿ ಗೆದ್ದರು. ಈ ಗೆಲುವಿನೊಂದಿಗೆ ಅವರು ಪುರುಷರ ಟೆನಿಸ್ನಲ್ಲಿ ನಂ. 1 ಶ್ರೇಯಾಂಕವನ್ನು ಮರಳಿ ಪಡೆದರು. ಕೇವಲ 22 ವರ್ಷದ ಅಲ್ಕರಾಜ್ ಇದುವರೆಗೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದು, 23 ವರ್ಷ ತುಂಬುವ ಮುನ್ನ ಮೂರು ವಿಭಿನ್ನ ಮೇಲ್ಮೈಗಳಲ್ಲಿ ಬಹು ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇತರೆ ಪ್ರಚಲಿತ ಘಟನೆಗಳು:
- ಸೆಪ್ಟೆಂಬರ್ 8: ಅಂತರರಾಷ್ಟ್ರೀಯ ಸಾಕ್ಷರತಾ ದಿನ: ಪ್ರತಿ ವರ್ಷ ಸೆಪ್ಟೆಂಬರ್ 8 ಅನ್ನು ಅಂತರರಾಷ್ಟ್ರೀಯ ಸಾಕ್ಷರತಾ ದಿನ ಎಂದು ಆಚರಿಸಲಾಗುತ್ತದೆ. ಈ ದಿನವು ಶಿಕ್ಷಣದ ಪ್ರಾಮುಖ್ಯತೆ, ಶಾಂತಿಯುತ ಮತ್ತು ಸುಸ್ಥಿರ ಸಮಾಜವನ್ನು ನಿರ್ಮಿಸಲು ಸಾಕ್ಷರತೆಯ ಅಗತ್ಯವನ್ನು ಒತ್ತಿಹೇಳುತ್ತದೆ. 2025ರ ಸಾಕ್ಷರತಾ ದಿನದ ಥೀಮ್ “ಬಹುಭಾಷಾ ಶಿಕ್ಷಣವನ್ನು ಉತ್ತೇಜಿಸುವುದು: ಪರಸ್ಪರ ತಿಳುವಳಿಕೆ ಮತ್ತು ಶಾಂತಿಗಾಗಿ ಸಾಕ್ಷರತೆ” ಎಂಬುದು. ಈ ದಿನವನ್ನು ಯುನೆಸ್ಕೋ 1966ರಲ್ಲಿ ಸ್ಥಾಪಿಸಿತು. ವ್ಯಕ್ತಿಗಳು, ಸಮುದಾಯಗಳು ಮತ್ತು ಸಮಾಜಗಳಿಗೆ ಸಾಕ್ಷರತೆಯ ಮಹತ್ವವನ್ನು ನೆನಪಿಸುವುದು ಇದರ ಪ್ರಮುಖ ಉದ್ದೇಶ.
- ಅನುಪರ್ಣಾ ರಾಯ್ಗೆ ವೆನಿಸ್ನ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ: ಅನುಪರ್ಣಾ ರಾಯ್ ನಿರ್ದೇಶನದ ಹಿಂದಿ ಚಲನಚಿತ್ರ ‘Songs of Forgotten Trees’ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಯನ್ನು ಗಳಿಸಿದೆ. ನಿರ್ದೇಶಕಿ ರಾಯ್ ಅವರು ಈ ಪ್ರಶಸ್ತಿಯನ್ನು ಸಮಾಜದಲ್ಲಿ ನಿರ್ಲಕ್ಷಿಸಲ್ಪಟ್ಟ ಮಹಿಳೆಯರಿಗೆ ಅರ್ಪಿಸಿದ್ದಾರೆ. ಅನುರಾಗ್ ಕಶ್ಯಪ್ ಅವರು ಪ್ರಸ್ತುತಪಡಿಸಿರುವ ಈ ಚಿತ್ರವು ಹೊಸ ಕಲ್ಪನೆ ಮತ್ತು ಯುವ ಪ್ರತಿಭೆಗಳನ್ನು ಗುರುತಿಸುವ ‘ಒರಿಯೋಂಟಿ’ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಈ ಚಲನಚಿತ್ರವು ವಲಸೆ ಬಂದ ನಟಿ ಧೂಯಾಳ ಬದುಕು ಮತ್ತು ಅವಳ ಕನಸುಗಳ ಹೋರಾಟವನ್ನು ಒಳಗೊಂಡಿದೆ.
- ಸೆಪ್ಟೆಂಬರ್ 7 – ಸ್ವಚ್ಛ ಗಾಳಿ ಮತ್ತು ನೀಲಿ ಆಕಾಶಕ್ಕಾಗಿ ಅಂತರರಾಷ್ಟ್ರೀಯ ದಿನ: ಪ್ರತಿ ವರ್ಷ ಸೆಪ್ಟೆಂಬರ್ 7ರಂದು ವಿಶ್ವಸಂಸ್ಥೆಯು ‘ಸ್ವಚ್ಛ ಗಾಳಿ ಮತ್ತು ನೀಲಿ ಆಕಾಶಕ್ಕಾಗಿ ಅಂತರರಾಷ್ಟ್ರೀಯ ದಿನ’ ವನ್ನು ಆಚರಿಸುತ್ತದೆ. 2025ರ ಈ ದಿನದ ಥೀಮ್ “ಗಾಳಿಗಾಗಿ ಓಟ. ಪ್ರತಿ ಉಸಿರು ಅಮೂಲ್ಯ” ಎಂಬುದಾಗಿದೆ. ಈ ದಿನವನ್ನು ಡಿಸೆಂಬರ್ 19, 2019 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಮೂಲಕ ಘೋಷಿಸಲಾಯಿತು. ಈ ದಿನದ ಮುಖ್ಯ ಉದ್ದೇಶವು ವಾಯುಮಾಲಿನ್ಯದ ಆರೋಗ್ಯ ಮತ್ತು ಪರಿಸರ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಈ ಸಮಸ್ಯೆಯನ್ನು ನಿವಾರಿಸಲು ಜಾಗತಿಕ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದು.
ಪರಿಸರ ಅಧ್ಯಯನ:
- ಹಿಮಾಲಯದಲ್ಲಿ ವಿರಳ ‘ಪಲ್ಲಾಸ್ ಕ್ಯಾಟ್’ ಪತ್ತೆ: ಪ್ರಮುಖ ವನ್ಯಜೀವಿ ದಾಖಲೆ: ಅರುಣಾಚಲ ಪ್ರದೇಶದ ಹಿಮಾವೃತ ಹಿಮಾಲಯ ಶ್ರೇಣಿಯಲ್ಲಿ, 4,200 ಮೀಟರ್ಗಳಿಗಿಂತ ಹೆಚ್ಚಿನ ಎತ್ತರದಲ್ಲಿ, ಇದೇ ಮೊದಲ ಬಾರಿಗೆ ವಿರಳ ಜಾತಿಯ ‘ಪಲ್ಲಾಸ್ ಕ್ಯಾಟ್’ (Otocolobus manul) ಕಾಡುಬೆಕ್ಕು ಪತ್ತೆಯಾಗಿದೆ. ಈ ಆವಿಷ್ಕಾರವು ಹಿಮಾಲಯದಲ್ಲಿ ಒಟ್ಟು 6 ಜಾತಿಯ ಕಾಡುಬೆಕ್ಕುಗಳ ಅಸ್ತಿತ್ವವನ್ನು ದೃಢಪಡಿಸಿದೆ. WWF ಇಂಡಿಯಾ ನಡೆಸಿದ ಈ ಸಮೀಕ್ಷೆಯು ದೇಶದ ವನ್ಯಜೀವಿ ದಾಖಲೆಗಳಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಜೀವವೈವಿಧ್ಯ ಸಂರಕ್ಷಣೆ ಮತ್ತು ಎತ್ತರದ ಪ್ರದೇಶಗಳ ಪರಿಸರ ಅಧ್ಯಯನಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ.
- ಬಯೋಚಾರ್: ಕೃಷಿಯಲ್ಲಿ ಸುಸ್ಥಿರತೆಗೆ ಒಂದು ಮಹತ್ವದ ಹೆಜ್ಜೆ: ಜೈವಿಕ ವಸ್ತುಗಳಿಂದ ತಯಾರಿಸುವ ಬಯೋಚಾರ್ ಮಣ್ಣಿನ ಗುಣಮಟ್ಟ, ನೀರು ಮತ್ತು ಪೋಷಕಾಂಶಗಳ ನಿರ್ವಹಣೆಯನ್ನು ಸುಧಾರಿಸುತ್ತದೆ. ಈ ತಂತ್ರಜ್ಞಾನವನ್ನು ಉತ್ತೇಜಿಸಲು, ಡೆನ್ಮಾರ್ಕ್ನ ಮಾಷ್ ಮೇಕ್ ಸಂಸ್ಥೆ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ₹100 ಕೋಟಿ ಹೂಡಿಕೆಯೊಂದಿಗೆ ಭಾರತದ ಮೊದಲ ಆಧುನಿಕ ಬಯೋಚಾರ್ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಇದು ಕೃಷಿ ಉತ್ಪಾದಕತೆ ಹೆಚ್ಚಿಸಿ, ರಾಸಾಯನಿಕ ಗೊಬ್ಬರ ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ಪರಿಸರ ಸ್ನೇಹಿ ಸುಸ್ಥಿರ ಕೃಷಿಗೆ ಮಾದರಿಯಾಗಿದೆ.
ಅಂತರರಾಷ್ಟ್ರೀಯ ವಿಷಯಗಳು:
- ಚೀನಾ ತನ್ನ ಮೊದಲ ವಾಯು-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿ (JL-1) ಅನಾವರಣ: ಚೀನಾದ ಸೇನೆಯ ವಾಯುಪಡೆಯು ತನ್ನ ಜಿಂಗ್ಲೇ-1 (JL-1) ಹೆಸರಿನ ವಾಯು-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (ALBM) 2025ರ ಚೀನಾ ವಿಜಯ ದಿನದ ಮಿಲಿಟರಿ ಪರೇಡ್ನಲ್ಲಿ ಅನಾವರಣಗೊಳಿಸಿತು. H-6N ಸ್ಟ್ರಾಟೆಜಿಕ್ ಬಾಂಬರ್ ನಿಂದ ಉಡಾಯಿಸಬಹುದಾದ ಈ ಕ್ಷಿಪಣಿಯ ವ್ಯಾಪ್ತಿ ಸುಮಾರು 8,000 ಕಿಲೋಮೀಟರ್. ಇದು ಚೀನಾದ ಪರಮಾಣು ತ್ರಿವಳಿ (ನೆಲ, ಸಮುದ್ರ ಮತ್ತು ವಾಯು) ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಚೀನಾ ಸಾಧಿಸಿರುವ ಪ್ರಗತಿಯನ್ನು ಎತ್ತಿ ತೋರಿಸುತ್ತದೆ.
- ಭಾರತ – ಇಸ್ರೇಲ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದ: ಭಾರತ ಮತ್ತು ಇಸ್ರೇಲ್ ದೆಹಲಿಯಲ್ಲಿ ಹೊಸ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ (BIA) ಸಹಿ ಹಾಕಿವೆ. ಇದು 2017ರಲ್ಲಿ ರದ್ದುಗೊಂಡಿದ್ದ 1996ರ ಹಿಂದಿನ ಒಪ್ಪಂದದ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಪರಿಷ್ಕೃತ ಹೂಡಿಕೆ ಒಪ್ಪಂದದ ಚೌಕಟ್ಟಿನಡಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ OECD ಸದಸ್ಯ ರಾಷ್ಟ್ರ ಇಸ್ರೇಲ್ ಆಗಿದೆ. ಈ ಒಪ್ಪಂದವು ಪ್ರಸ್ತುತ USD 800 ಮಿಲಿಯನ್ ಇರುವ ದ್ವಿಪಕ್ಷೀಯ ಹೂಡಿಕೆಗಳನ್ನು ಹೆಚ್ಚಿಸಿ, ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ನಿರೀಕ್ಷೆಯಿದೆ.
