Published on: March 27, 2026
ಪಿತೃತ್ವ ರಜೆ: ಸಾಮಾಜಿಕ ಭದ್ರತೆಯ ಹಕ್ಕು – ಸುಪ್ರೀಂ ಕೋರ್ಟ್
ಪಿತೃತ್ವ ರಜೆ: ಸಾಮಾಜಿಕ ಭದ್ರತೆಯ ಹಕ್ಕು – ಸುಪ್ರೀಂ ಕೋರ್ಟ್
ಸುದ್ದಿ – ಪಿತೃತ್ವ ರಜೆ ಇದು ಮಗುವಿನ ಜನನ ಅಥವಾ ದತ್ತು ಸ್ವೀಕಾರದ ನಂತರ ತಂದೆಗೆ ನೀಡಲಾಗುವ ವೇತನ ಸಹಿತ ಅಥವಾ ವೇತನ ರಹಿತ ರಜೆಯ ಅವಧಿಯನ್ನು ಸೂಚಿಸುತ್ತದೆ. ಇದು ತಂದೆಯು ಆರಂಭಿಕ ಶಿಶುಪಾಲನೆಯಲ್ಲಿ ಪಾಲ್ಗೊಳ್ಳಲು ಮತ್ತು ಹೆರಿಗೆಯ ನಂತರದ ತಕ್ಷಣದ ಹಂತದಲ್ಲಿ ತಾಯಿಯನ್ನು ಬೆಂಬಲಿಸಲು ಅನುವು ಮಾಡಿಕೊಡುತ್ತದೆ.
- ಭಾರತದಲ್ಲಿನ ಸ್ಥಿತಿ: ಭಾರತವು ಪಿತೃತ್ವ ರಜೆಯನ್ನು ಕಡ್ಡಾಯವಾಗಿ ಗುರುತಿಸದಿದ್ದರೂ, ಈ ಪರಿಕಲ್ಪನೆಯು ಸಂಪೂರ್ಣವಾಗಿ ಅಸ್ತಿತ್ವದಲ್ಲಿಲ್ಲ ಎಂದೇನಿಲ್ಲ.
- ಕೇಂದ್ರ ನಾಗರಿಕ ಸೇವಾ (ರಜೆ) ನಿಯಮಗಳು: ಪುರುಷ ಸರ್ಕಾರಿ ಉದ್ಯೋಗಿಗಳಿಗೆ 15 ದಿನಗಳ ಪಿತೃತ್ವ ರಜೆಯನ್ನು ಒದಗಿಸುತ್ತದೆ.
- ಪಿತೃತ್ವ ಮತ್ತು ಪೋಷಕರ ಪ್ರಯೋಜನ ಮಸೂದೆ, 2025 (Paternity And Parental Benefit Bill, 2025): ಇದು ಖಾಸಗಿ ಸದಸ್ಯರ ಮಸೂದೆಯಾಗಿದ್ದು, 8 ವಾರಗಳ ಪಿತೃತ್ವ ರಜೆಯನ್ನು ಪ್ರಸ್ತಾಪಿಸಿದೆ.
ಪಿತೃತ್ವ ರಜೆಯನ್ನು ಪರಿಚಯಿಸುವ ಅಗತ್ಯತೆ:
- ಪೋಷಕತ್ವದ ಸ್ವರೂಪ (Nature of Parenthood): ಮಕ್ಕಳ ಪಾಲನೆ ಜಂಟಿ ಜವಾಬ್ದಾರಿಯಾಗಿದೆ. ಮಗುವಿನ ಆರಂಭಿಕ ಬೆಳವಣಿಗೆಯ ವರ್ಷಗಳಲ್ಲಿ ತಂದೆಯ ಗೈರುಹಾಜರಿಯನ್ನು ಸಹಜ ಅಥವಾ ಅತ್ಯಲ್ಪ ಎಂದು ಪರಿಗಣಿಸಲಾಗುವುದಿಲ್ಲ.
- ಅಗೋಚರ ಅನ್ಯಾಯ (Invisible Injustice): ಸಮಾಜವು ಐತಿಹಾಸಿಕವಾಗಿ ಕಾಳಜಿ ಮತ್ತು ಪೋಷಣೆಯ ಜವಾಬ್ದಾರಿಗಳನ್ನು ಕೇವಲ ತಾಯಂದಿರಿಗೆ ಮಾತ್ರ ಸೀಮಿತಗೊಳಿಸಿದೆ, ತಂದೆಯ ಸಮಾನವಾದ ಮತ್ತು ಮಹತ್ವದ ಪಾತ್ರವನ್ನು ಕಡೆಗಣಿಸಿದೆ. ಈ ಊಹೆಯು “ಸಹಜ ಕ್ರಮ” (natural order of things) ಎಂದು ಬಿಂಬಿತವಾಗಿ, ಅದು ಅನ್ಯಾಯವೆಂಬ ಭಾವನೆಯೇ ಮಾಯವಾಗಿದೆ.
- ಮಕ್ಕಳ ಕಲ್ಯಾಣ: ಎರಡೂ ಪೋಷಕರಿಂದ ಮಗುವಿಗೆ ಭಾವನಾತ್ಮಕ ಬೆಂಬಲ ಮತ್ತು ಸರಿಯಾದ ಆರೈಕೆ ದೊರೆಯುತ್ತದೆ.
ಪಿತೃತ್ವ ರಜೆಯನ್ನು ವಿಸ್ತರಿಸುವಲ್ಲಿನ ಪ್ರಮುಖ ಸವಾಲುಗಳು:
- ಸಾಂಸ್ಕೃತಿಕ ಬದಲಾವಣೆಯ ಅಗತ್ಯ: ಪಿತೃತ್ವ ರಜೆ ತೆಗೆದುಕೊಳ್ಳುವುದಕ್ಕೆ ಸಮಾಜದಲ್ಲಿರುವ ಕಳಂಕದಿಂದಾಗಿ (stigma) ಪುರುಷರು ರಜೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ.
- ವೃತ್ತಿಜೀವನದ ಪರಿಣಾಮಗಳ ಭಯ: ಸ್ಪರ್ಧಾತ್ಮಕ ಕೆಲಸದ ವಾತಾವರಣದಲ್ಲಿ ಸುದೀರ್ಘ ರಜೆಗಳನ್ನು ತೆಗೆದುಕೊಳ್ಳುವುದು ಒಬ್ಬರ ವೃತ್ತಿಜೀವನದ ಭವಿಷ್ಯವನ್ನು ಕುಗ್ಗಿಸಬಹುದು ಎಂಬ ಭಯವಿದೆ.
- ಅಸಂಘಟಿತ ಕಾರ್ಮಿಕರು (Informal Workforce): ಭಾರತದ ಬಹುಪಾಲು ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದಾರೆ, ಇದು ಅವರನ್ನು ಇಂತಹ ಕಾರ್ಮಿಕ ಕಾನೂನುಗಳ ವ್ಯಾಪ್ತಿಯಿಂದ ಹೊರಗಿಡುತ್ತದೆ.
ಮುಂದಿನ ಹಾದಿ:
- ಪಿತೃಪ್ರಭುತ್ವದ ಮನಸ್ಥಿತಿಯನ್ನು ಬದಲಾಯಿಸುವುದರ ಜೊತೆಗೆ, ಪೋಷಕರ ನಡುವೆ ಹಂಚಿಕೊಳ್ಳಲು 480 ದಿನಗಳ ವೇತನ ಸಹಿತ ಪೋಷಕರ ರಜೆಯನ್ನು (paid parental leave) ನೀಡುವ ಸ್ವೀಡನ್ನಂತಹ (Sweden) ಜಾಗತಿಕ ಮಾದರಿಗಳನ್ನು ಪರಿಗಣಿಸಬಹುದು.
