Published on: September 8, 2025
ಭಾರತ-EFTA ವ್ಯಾಪಾರ ಒಪ್ಪಂದ: ಸುಸ್ಥಿರ ಬೆಳವಣಿಗೆಯತ್ತ ಮಹತ್ವದ ಹೆಜ್ಜೆ
ಭಾರತ-EFTA ವ್ಯಾಪಾರ ಒಪ್ಪಂದ: ಸುಸ್ಥಿರ ಬೆಳವಣಿಗೆಯತ್ತ ಮಹತ್ವದ ಹೆಜ್ಜೆ
ಸುದ್ದಿ – ಭಾರತ ಮತ್ತು ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ (EFTA) ನಡುವಿನ ಮುಕ್ತ ವ್ಯಾಪಾರ ಒಪ್ಪಂದ (FTA)ವು 2025ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಈ ಒಪ್ಪಂದವು ಕೇವಲ ವಾಣಿಜ್ಯ ಸಂಬಂಧಗಳನ್ನು ಸುಧಾರಿಸುವುದಲ್ಲದೆ, ಪರಿಸರ ಸಂರಕ್ಷಣೆ, ಕಾರ್ಮಿಕ ಮತ್ತು ಮಾನವ ಹಕ್ಕುಗಳ ಕುರಿತ ನಿಯಮಾವಳಿಗಳನ್ನು ಕಾನೂನುಬದ್ಧವಾಗಿ ಒದಗಿಸುವ ಭಾರತದ ಮೊದಲ ಒಪ್ಪಂದವಾಗಿದೆ. ಸುಸ್ಥಿರ ಅಭಿವೃದ್ಧಿಯ ಗುರಿಗಳ (SDGs) ಯೊಂದಿಗೆ ಭಾರತದ ವ್ಯಾಪಾರ ನೀತಿಯನ್ನು ಜೋಡಿಸುವ ಪ್ರಮುಖ ಹೆಜ್ಜೆಯಾಗಿದೆ. ಭಾರತದಲ್ಲಿ USD 100 ಬಿಲಿಯನ್ ಹೂಡಿಕೆ ಮತ್ತು 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆಯನ್ನು ನೀಡಿದೆ.
ಪ್ರಮುಖಾಂಶಗಳು:
- ಒಪ್ಪಂದದ ಪ್ರಾರಂಭ: ಭಾರತ ಮತ್ತು EFTA ನಡುವಿನ ವ್ಯಾಪಾರ ಒಪ್ಪಂದವು ಅಕ್ಟೋಬರ್ 1, 2025 ರಿಂದ ಜಾರಿಗೆ ಬರಲಿದೆ.
- ಹೂಡಿಕೆ ಬದ್ಧತೆ: EFTA ಯ ಸದಸ್ಯ ರಾಷ್ಟ್ರಗಳಾದ ಐಸ್ಲ್ಯಾಂಡ್, ಲೀಚನ್ಸ್ಟೈನ್, ನಾರ್ವೆ ಮತ್ತು ಸ್ವಿಟ್ಜರ್ಲ್ಯಾಂಡ್ ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ USD 100 ಬಿಲಿಯನ್ ಹೂಡಿಕೆ ಮಾಡುವುದಾಗಿ ಬದ್ಧತೆ ನೀಡಿವೆ.
- ಉದ್ಯೋಗ ಸೃಷ್ಟಿ: ಈ ಹೂಡಿಕೆಯ ಫಲವಾಗಿ ಸುಮಾರು 10 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
- ಸುಸ್ಥಿರತೆಯ ನಿಯಮಾವಳಿಗಳು: ಈ ಒಪ್ಪಂದವು ಪರಿಸರ ಸಂರಕ್ಷಣೆ, ಕಾರ್ಮಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಕುರಿತಾದ ಕಾನೂನುಬದ್ಧ ನಿಯಮಗಳನ್ನು ಹೊಂದಿರುವ ಭಾರತದ ಮೊದಲ ವ್ಯಾಪಾರ ಒಪ್ಪಂದವಾಗಿದೆ.
- ರಫ್ತು ಮತ್ತು ಸುಂಕ ಕಡಿತ: ಭಾರತವು ಸ್ವಿಟ್ಜರ್ಲ್ಯಾಂಡ್ಗೆ ತನ್ನ 94.7% ರಫ್ತು ಉತ್ಪನ್ನಗಳಿಗೆ ಪ್ರವೇಶ ನೀಡುತ್ತದೆ. ಬದಲಾಗಿ, ಸ್ವಿಟ್ಜರ್ಲ್ಯಾಂಡ್ನಿಂದ ಆಮದಾಗುವ ಗಡಿಯಾರಗಳು, ಚಾಕೊಲೇಟ್ಗಳು ಮತ್ತು ವಜ್ರಗಳ ಮೇಲಿನ ಸುಂಕಗಳನ್ನು ಭಾರತ ಕಡಿಮೆ ಅಥವಾ ರದ್ದುಗೊಳಿಸಲಿದೆ.
ಮಹತ್ವ:
- ಆರ್ಥಿಕ ಪ್ರಗತಿ: ಭಾರತಕ್ಕೆ ಒಂದು ಮಹತ್ವದ ಆರ್ಥಿಕ ಹೆಜ್ಜೆಯಾಗಿದ್ದು, ವಿದೇಶಿ ನೇರ ಹೂಡಿಕೆ (FDI) ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ನೆರವಾಗಲಿದೆ.
- ಜಾಗತಿಕ ಮೌಲ್ಯ ಸರಪಳಿಗೆ ಏಕೀಕರಣ: ಈ ಒಪ್ಪಂದವು ಔಷಧಿಗಳು, ಯಂತ್ರೋಪಕರಣಗಳು ಮತ್ತು ಪ್ರಕ್ರಿಯೆಗೊಳಿಸಿದ ಕೃಷಿ ಉತ್ಪನ್ನಗಳಂತಹ ವಲಯಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತದೆ, ಇದರಿಂದ ಭಾರತವು ಜಾಗತಿಕ ಮೌಲ್ಯ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುತ್ತದೆ.
- ಸುಸ್ಥಿರತೆಯ ಮಾದರಿ: ಈ ಒಪ್ಪಂದವು ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ (SDGs) ಹೊಂದಿಕೆಯಾಗಿದ್ದು, ಭವಿಷ್ಯದ ವಾಣಿಜ್ಯ ಒಪ್ಪಂದಗಳಿಗೆ ಒಂದು ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.
- ಕಾನೂನುಬದ್ಧ ಭರವಸೆ: ಪರಿಸರ ಮತ್ತು ಕಾರ್ಮಿಕ ಕಾನೂನುಗಳ ಅನುಸರಣೆಗೆ ಸಂಬಂಧಿಸಿದ ನಿಯಮಗಳು ಹೂಡಿಕೆದಾರರಿಗೆ ಹೆಚ್ಚಿನ ಸ್ಥಿರತೆ ಮತ್ತು ಭರವಸೆಯನ್ನು ನೀಡುತ್ತವೆ.
