Published on: December 9, 2025
ವಂದೇ ಮಾತರಂಗೆ 150 ವರ್ಷ: ರಾಷ್ಟ್ರೀಯ ಗೀತೆಯ ಇತಿಹಾಸ ಮತ್ತು ಮಹತ್ವ
ವಂದೇ ಮಾತರಂಗೆ 150 ವರ್ಷ: ರಾಷ್ಟ್ರೀಯ ಗೀತೆಯ ಇತಿಹಾಸ ಮತ್ತು ಮಹತ್ವ
ಸುದ್ದಿ – ಭಾರತವು ತನ್ನ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ನ 150 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ವಂದೇ ಮಾತರಂನ ಉಗಮ:
- ಬಂಕಿಮ್ ಚಂದ್ರ ಚಟರ್ಜಿ ಅವರು ಸಂಸ್ಕೃತದಲ್ಲಿ ರಚಿಸಿದ ‘ವಂದೇ ಮಾತರಂ’ ಗೀತೆಯು, ಮೊದಲ ಬಾರಿಗೆ 1882 ರಲ್ಲಿ ಪ್ರಕಟವಾದ ‘ಆನಂದಮಠ’ ಕಾದಂಬರಿಯಲ್ಲಿ ಕಾಣಿಸಿಕೊಂಡಿತು.
- ‘ಆನಂದಮಠ’ ಕಾದಂಬರಿಯು 1769–73 ರ ಬಂಗಾಳ ಕ್ಷಾಮ ಮತ್ತು ಸನ್ಯಾಸಿ ದಂಗೆಯ ಹಿನ್ನೆಲೆಯನ್ನು ಹೊಂದಿದೆ.
- 1896 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಠಾಗೋರ್ ಅವರು ಈ ಗೀತೆಯನ್ನು ಮೊಟ್ಟಮೊದಲ ಬಾರಿಗೆ ಹಾಡಿದರು, ಇದು ಗೀತೆಗೆ ರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟಿತು.
- ಈ ಗೀತೆಯು ಮಾತೃಭೂಮಿಯನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಸಾಕಾರ ರೂಪವೆಂದು ಬಣ್ಣಿಸುತ್ತದೆ ಮತ್ತು ಭಾರತದ ಜಾಗೃತವಾಗುತ್ತಿರುವ ರಾಷ್ಟ್ರೀಯ ಪ್ರಜ್ಞೆಗೆ ಕಾವ್ಯಾತ್ಮಕ ಧ್ವನಿಯನ್ನು ನೀಡಿತು.
ರಾಷ್ಟ್ರೀಯ ಪ್ರಜ್ಞೆಯ ಉದಯ:
- 1905 ರ ಸ್ವದೇಶಿ ಚಳವಳಿಯ ಸಮಯದಲ್ಲಿ, ‘ವಂದೇ ಮಾತರಂ’ ನಾಗರಿಕ ಪ್ರತಿರೋಧದ ಗೀತೆಯಾಗಿ ಹೊರಹೊಮ್ಮಿತು. 1905 ರ ಆಗಸ್ಟ್ 7 ರಂದು ಮೊದಲ ಬಾರಿಗೆ ರಾಜಕೀಯ ಘೋಷಣೆಯಾಗಿ ‘ವಂದೇ ಮಾತರಂ’ ಅನ್ನು ಬಳಸಲಾಯಿತು.
- ಮರಣದಂಡನೆಯನ್ನು ಎದುರಿಸುತ್ತಿದ್ದ ಅನೇಕ ಯುವ ಕ್ರಾಂತಿಕಾರಿಗಳಿಗೆ, ‘ವಂದೇ ಮಾತರಂ’ ಹುತಾತ್ಮರಾಗುವ ಮುನ್ನ ಹೇಳುವ ಕೊನೆಯ ಘೋಷಣೆಯಾಯಿತು (Last chant). ಈ ಮೂಲಕ ಈ ಗೀತೆಯು ತ್ಯಾಗದ ಸಂಕೇತವಾಗಿ ಮಾರ್ಪಟ್ಟಿತು.
- 1907 ರಲ್ಲಿ, ಮೇಡಂ ಭಿಕಾಜಿ ಕಾಮ ಅವರು ಬರ್ಲಿನ್‌ನ ಸ್ಟಟ್‌ಗಾರ್ಟ್‌ನಲ್ಲಿ ಮೊದಲ ಬಾರಿಗೆ ಭಾರತದ ಹೊರಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಆ ಧ್ವಜದ ಮೇಲೆ ‘ವಂದೇ ಮಾತರಂ’ ಎಂಬ ಪದಗಳನ್ನು ಬರೆಯಲಾಗಿತ್ತು.
- ಮಾತೃಭೂಮಿಯನ್ನು ಒಂದು ಧ್ಯೇಯ ಮತ್ತು ಧಾರ್ಮಿಕ ಭಾವನೆಯಾಗಿ ಉತ್ತೇಜಿಸಲು 1905 ರ ಅಕ್ಟೋಬರ್‌ನಲ್ಲಿ ಉತ್ತರ ಕಲ್ಕತ್ತಾದಲ್ಲಿ ‘ಬಂದೇ ಮಾತರಂ ಸಂಪ್ರದಾಯ’ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು.
- 1906 ರಲ್ಲಿ, ಬಿಪಿನ್ ಚಂದ್ರ ಪಾಲ್ ಅವರ ಸಂಪಾದಕತ್ವದಲ್ಲಿ ‘ಬಂದೇ ಮಾತರಂ’ ಎಂಬ ಇಂಗ್ಲಿಷ್ ದೈನಿಕವನ್ನು ಪ್ರಾರಂಭಿಸಲಾಯಿತು, ನಂತರ ಅರವಿಂದೋ ಅವರು ಇದರ ಜಂಟಿ ಸಂಪಾದಕರಾಗಿ ಸೇರಿಕೊಂಡರು.
ರಾಷ್ಟ್ರೀಯ ಗೀತೆ
- ಸ್ವಾತಂತ್ರ್ಯದ ನಂತರ, ಸಂವಿಧಾನ ರಚನಾ ಸಭೆಯು ‘ವಂದೇ ಮಾತರಂ’ ಗೀತೆಯ ಸ್ಥಾನಮಾನದ ಬಗ್ಗೆ ಚರ್ಚಿಸಿತು.
- 1950 ರ ಜನವರಿ 24 ರಂದು, ಈ ಗೀತೆಯ ಮೊದಲ ಎರಡು ಚರಣಗಳನ್ನು ಭಾರತದ ರಾಷ್ಟ್ರೀಯ ಗೀತೆಯಾಗಿ ಅಂಗೀಕರಿಸಲಾಯಿತು.
ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ಕುರಿತು
- ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು ಆಧುನಿಕ ಭಾರತೀಯ ಸಾಹಿತ್ಯದ ಶಿಲ್ಪಿಗಳಲ್ಲಿ ಒಬ್ಬರಾಗಿದ್ದಾರೆ.
- ಪ್ರಸಿದ್ಧ ಕಾದಂಬರಿಕಾರ, ಕವಿ ಮತ್ತು ಪ್ರಬಂಧಕಾರರಾಗಿದ್ದ ಇವರು, ಆಧುನಿಕ ಬಂಗಾಳಿ ಗದ್ಯದ ಬೆಳವಣಿಗೆ ಮತ್ತು ಉದಯೋನ್ಮುಖ ಭಾರತೀಯ ರಾಷ್ಟ್ರೀಯತೆಯ ಅಭಿವ್ಯಕ್ತಿಯ ಮೇಲೆ ಮಹತ್ವದ ಪ್ರಭಾವ ಬೀರಿದರು.
- ಇತರ ಕೃತಿಗಳು: ದುರ್ಗೇಶನಂದಿನಿ (1865), ಕಪಾಲಕುಂಡಲ (1866) ಮತ್ತು ದೇವಿ ಚೌಧುರಾಣಿ (1884).
