ಒಂದು ರಾಷ್ಟ್ರ ಒಂದು ಚುನಾವಣೆ
ಒಂದು ರಾಷ್ಟ್ರ ಒಂದು ಚುನಾವಣೆ
ಒಂದು ರಾಷ್ಟ್ರ, ಒಂದು ಚುನಾವಣೆಯ ಪ್ರಯೋಜನಗಳು ಮತ್ತು ಸವಾಲುಗಳ ಕುರಿತು ಟಿಪ್ಪಣಿ ಬರೆಯಿರಿ
- 2024 ರಲ್ಲಿ ವರ್ಷದ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಈ ಸಂದರ್ಭದಲ್ಲೇ 'ಒಂದು ರಾಷ್ಟ್ರ, ಒಂದು ಚುನಾವಣೆ' ಪರಿಕಲ್ಪನೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ.
- 2023 ರ ನವೆಂಬರ್-ಡಿಸೆಂಬರ್ ವೇಳೆಗೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ ಮತ್ತು ಮುಂದಿನ ವರ್ಷದ ಮೇ-ಜೂನ್ನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.
ಏನಿದು ಒಂದು ದೇಶ ಒಂದು ಚುನಾವಣಾ (ಜಮಿಲಿ ಚುನಾವಣೆ)?
- ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವುದು ಇದರ ಉದ್ದೇಶ. ಅಂದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ಮತದಾನವನ್ನು ಏಕಕಾಲದಲ್ಲಿ ನಡೆಸುವುದು. ಪ್ರಸ್ತುತ, ವಿಧಾನಸಭೆ ಮತ್ತು ಸಂಸತ್ತಿಗೆ ಪ್ರತ್ಯೇಕ ಚುನಾವಣೆ ನಡೆಯುತ್ತಿದೆ.
ಯಾವೆಲ್ಲ ಸಾಂವಿಧಾನಿಕ ತಿದ್ದುಪಡಿಗಳ ಅವಶ್ಯಕತೆ ಇದೆ?
- ವಿಧಿ 83 (2) ಸಂಸತ್ತಿನ ಸದನಗಳ ಅವಧಿಯನ್ನು ವಿಸ್ತರಿಸುವ- ಇಲ್ಲವೆ ಕಡಿತಗೊಳಿಸುವುದು
- ವಿಧಿ 85 (2) (ಬಿ) ರಾಷ್ಟ್ರಪತಿಯವರಿಂದ ಲೋಕಸಭೆ ವಿಸರ್ಜನೆ ಮಾಡುವ ತಿದ್ದುಪಡಿ
- ವಿಧಿ 172 (1) ರಾಜ್ಯ ವಿಧಾನಸಭೆಗಳ ಅವಧಿ ವಿಸ್ತರಿಸುವ ಅಥವಾ ಕತಗೊಳಿಸುವುದು
- ವಿಧಿ 174 (2) (ಬಿ) ರಾಜ್ಯ ವಿಧಾನಸಭೆಗಳ ವಿಸರ್ಜನೆ
- ವಿಧಿ 356 ಮೂಲಕ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಧಿಸುವುದು.
- ಪ್ರಜಾಪ್ರತಿನಿಧಿ ಕಾಯಿದೆ ಹಾಗೂ ಸಂಬಂಧಿತ ಸಂಸದೀಯ ಕಾರ್ಯವಿಧಾನಕ್ಕೂ ತಿದ್ದುಪಡಿ ತರಬೇಕಾಗುತ್ತದೆ.
ಈ ಮಸೂದೆಯನ್ನು ಅಂಗೀಕರಿಸಲು ಬೇಕಾಗುವ ಬೆಂಬಲ
- ಲೋಕಸಭೆಯ 543 ಸ್ಥಾನಗಳಲ್ಲಿ ಕನಿಷ್ಠ 67 ಪ್ರತಿಶತದಷ್ಟು ಜನರು ಈ ತಿದ್ದುಪಡಿಗಳ ಪರವಾಗಿ ಮತ ಚಲಾಯಿಸಬೇಕು. ಜತೆಗೆ ರಾಜ್ಯಸಭೆಯ 245 ಸ್ಥಾನಗಳಲ್ಲಿ ಶೇ.67ರಷ್ಟು ಜನ ಬೆಂಬಲ ನೀಡಬೇಕು.
- ದೇಶದ ಕನಿಷ್ಠ ಅರ್ಧದಷ್ಟು ರಾಜ್ಯ ವಿಧಾನಸಭೆಗಳು ತಮ್ಮ ಅನುಮೋದನೆಯನ್ನು ನೀಡಬೇಕು. ಅಂದರೆ 14 ರಾಜ್ಯಗಳು ಈ ಮಸೂದೆಯ ಪರವಾಗಿ ನಿಲ್ಲಬೇಕಾಗುತ್ತದೆ.
ಸಂಯೋಜಿತ ಚುನಾವಣೆಯ ಪ್ರಯೋಜನಗಳು
- ಚುನಾವಣೆಗಳನ್ನು ನಡೆಸಲು ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತದೆ: ಪ್ರತಿ ರಾಜ್ಯ ಚುನಾವಣೆಗೆ ಸರಕಾರ 250ರಿಂದ 500 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. 2019ರ ಲೋಕಸಭೆ ಚುನಾವಣೆಗೆ ಆಯಾ ಪಕ್ಷಗಳ ಖರ್ಚು 60 ಸಾವಿರ ಕೋಟಿ ರೂ.ವರೆಗೆ ಇತ್ತು ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಎಂಬ ಸಂಸ್ಥೆ ಆ ವೇಳೆ ಬಹಿರಂಗಪಡಿಸಿತ್ತು.
- ಸರಕಾರಿ ಯಂತ್ರವನ್ನು ಸಮರ್ಥವಾಗಿ ಬಳಸಿಕೊಳ್ಳಲು ಅವಕಾಶವಿದೆ. ಸಾಮಾನ್ಯ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿದ್ದರೆ, ಆಡಳಿತ ನಿಧಾನವಾಗುತ್ತದೆ. ಹಾಗಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಚುನಾವಣೆ ಏಕಕಾಲಕ್ಕೆ ನಡೆಯುವುದರಿಂದ ಸಮಯ ಉಳಿತಾಯವಾಗುತ್ತದೆ ಮತ್ತು ಆಡಳಿತದತ್ತ ಗಮನ ಹರಿಸಲು ಅವಕಾಶ ಸಿಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಅಡೆತಡೆಗಳ ಸಾಧ್ಯತೆಗಳು ಚುನಾವಣಾ ನೀತಿ ಸಂಹಿತೆಗಳ ರೂಪದಲ್ಲಿ ಕಡಿಮೆಯಾಗುತ್ತವೆ.
- ಚುನಾವಣಾ ನೀತಿ ಸಂಹಿತೆಯಿಂದಾಗಿ ಹೊಸ ಯೋಜನೆಗಳ ಆರಂಭ ಮುಂದೂಡುವ ಸಾಧ್ಯತೆ ಇಲ್ಲ. ಒಂದೇ ಚುನಾವಣೆಯಿಂದಾಗಿ ಎಲ್ಲ ರೀತಿಯ ಮತದಾನ ಒಂದೇ ಸಮಯದಲ್ಲಿ ನಡೆಯುವುದರಿಂದ ಮತದಾರರಿಗೆ ಅನುಕೂಲವಾಗಲಿದೆ. ಇದರಿಂದ ಮತದಾನದ ಪ್ರಮಾಣ ಹೆಚ್ಚಾಗಲಿದೆ ಎಂದು ಕಾನೂನು ಆಯೋಗ ಹೇಳಿದೆ.
- ಕುದುರೆ ವ್ಯಾಪಾರದ ಅಂತ್ಯ: ನಿರ್ದಿಷ್ಟ ಅವಧಿಗಳಲ್ಲಿ ಚುನಾವಣೆಗಳನ್ನು ನಡೆಸುವುದರಿಂದ ಚುನಾಯಿತ ಪ್ರತಿನಿಧಿಗಳು ಕುದುರೆ ವ್ಯಾಪಾರವನ್ನು ಕಡಿಮೆ ಮಾಡಬಹುದು, ಇದು ಪಕ್ಷಾಂತರ-ವಿರೋಧಿ ಕಾನೂನು ಜಾರಿಯಲ್ಲಿದ್ದರೂ ಸಹ ಇದು ಕಳವಳಕಾರಿಯಾಗಿದೆ. ನಿಗದಿತ ಅಂತರದಲ್ಲಿ ಚುನಾವಣೆಗಳನ್ನು ನಡೆಸುವುದರಿಂದ ಪಕ್ಷಗಳನ್ನು ಬದಲಾಯಿಸಲು ಅಥವಾ ವೈಯಕ್ತಿಕ ಲಾಭಕ್ಕಾಗಿ ಮೈತ್ರಿ ಮಾಡಿಕೊಳ್ಳಲು ಅವರಿಗೆ ಕಷ್ಟವಾಗಬಹುದು.
- ಭದ್ರತಾ ಪಡೆಗಳ ನಿಯೋಜನೆ ಕಡಿಮೆ: ಚುನಾವಣೆಗಳು ಶಾಂತಿಯುತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳು ತೊಡಗಿಸಲಾಗುತ್ತದೆ. ಇದು ದೊಡ್ಡ ವೆಚ್ಚವನ್ನು ಒಳಗೊಂಡಿರುತ್ತದೆ. ಇದು ಪ್ರಮುಖ ಕಾನೂನು ಜಾರಿ ಸಿಬ್ಬಂದಿಯನ್ನು ಅವರ ನಿರ್ಣಾಯಕ ಕಾರ್ಯಗಳಿಂದ ಬೇರೆಡೆಗೆ ತೊಡಗಿಸಲಾಗುತ್ತದೆ. ಏಕಕಾಲದ ಚುನಾವಣೆಗಳೊಂದಿಗೆ ಇಂತಹ ನಿಯೋಜನೆಯನ್ನು ಮೊಟಕುಗೊಳಿಸಬಹುದು.
- ಉಚಿತ ಯೋಜನೆಗಳಲ್ಲಿ ಕಡಿತಗೊಳಿಸಲು ಮತ್ತು ರಾಜ್ಯ ಹಣಕಾಸು ಸುಧಾರಣೆ: ಪದೇ ಪದೇ ಚುನಾವಣೆಗಳು ಪ್ರತಿ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ಸರ್ಕಾರಗಳು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಇದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದಿದ್ದರೂ, ಸರ್ಕಾರಗಳು ಉಚಿತ ಯೋಜನೆಗಳನ್ನು ಘೋಷಿಸುವ ಆವರ್ತನವು ಕಡಿಮೆಯಾಗುತ್ತದೆ.
- ಪದೇ ಪದೇ ಚುನಾವಣೆಗಳು ನಡೆಯುವುದರಿಂದ ಹಲವು ರಾಜ್ಯ ಸರ್ಕಾರಗಳು ಒಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ಸಂಖ್ಯೆಯ ಚುನಾವಣೆಗಳೊಂದಿಗೆ, ರಾಜ್ಯಗಳ ಹಣಕಾಸು ಉತ್ತಮ ಸ್ಥಿತಿಯಲ್ಲಿಡಲು ಪ್ರಯತ್ನಿಸಬಹುದು.
ಸಮಸ್ಯೆಗಳೇನು?
- ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಗೂ ಅವಕಾಶ ಕಲ್ಪಿಸಲು ಸಂವಿಧಾನ ತಿದ್ದುಪಡಿ ತರಬೇಕು. ಪ್ರಜಾಪ್ರತಿನಿಧಿ ಕಾಯ್ದೆ ಸೇರಿದಂತೆ ಇತರ ಸಂಸದೀಯ ಕಾರ್ಯವಿಧಾನಗಳಿಗೆ ತಿದ್ದುಪಡಿ ತರಬೇಕಾಗುತ್ತದೆ. ಇದಕ್ಕೆ ರಾಜ್ಯಗಳ ಒಪ್ಪಿಗೆಯೂ ಅತೀ ಅಗತ್ಯ.
- ಜಮಿಲಿ ಚುನಾವಣೆಯಿಂದಾಗಿ ರಾಷ್ಟ್ರೀಯ ಅಂಶಗಳು ಪ್ರಚಾರದ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡರೆ ಸ್ಥಳೀಯ ಅಂಶಗಳ ಪಾತ್ರ ಕಡಿಮೆಯಾಗಲಿದೆ ಎಂದು ಪಕ್ಷಗಳು ಹೆದರುತ್ತಿವೆ. ಅದರಲ್ಲೂ ಸ್ಥಳೀಯ ಪಕ್ಷಗಳಲ್ಲಿ ಈ ಭಯ ಹೆಚ್ಚಿದೆ. ಚುನಾವಣಾ ವೆಚ್ಚದಲ್ಲಿಯೂ ಸ್ಥಳೀಯ ಪಕ್ಷಗಳು ರಾಷ್ಟ್ರೀಯ ಪಕ್ಷಗಳೊಂದಿಗೆ ಪೈಪೋಟಿ ನಡೆಸಬೇಕಾಗುವುದು ಅನುಮಾನ.
- 2015ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಜಮಿಲಿ ಚುನಾವಣೆ ವೇಳೆ ಶೇ.77 ರಷ್ಟು ಜನರು ಒಂದೇ ಪಕ್ಷ ಅಥವಾ ಮೈತ್ರಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಆರು ತಿಂಗಳ ಅಂತರದಲ್ಲಿ ಒಂದೇ ವಿಧಾನಸಭೆ ಮತ್ತು ಸಂಸತ್ ಚುನಾವಣೆ ನಡೆದರೆ ಅದೇ ಪಕ್ಷವನ್ನು ಆಯ್ಕೆ ಮಾಡುವ ಸಾಧ್ಯತೆ ಶೇ.61ಕ್ಕೆ ಇಳಿಕೆಯಾಗಲಿದೆ.
- ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ಎಲ್ಲ ರಾಜಕೀಯ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವುದು ಕಷ್ಟ.
- ಲೋಕಸಭೆಯ ಅವಧಿಯೊಂದಿಗೆ ರಾಜ್ಯ ವಿಧಾನಸಭೆಗಳ ಅವಧಿಯನ್ನು ಸಂಯೋಜಿಸಲು, ರಾಜ್ಯ ಶಾಸಕಾಂಗ ಸಭೆಗಳ ಅವಧಿಯನ್ನು ಕಡಿಮೆ ಮಾಡಬಹುದು ಮತ್ತು ಅದಕ್ಕೆ ಅನುಗುಣವಾಗಿ ಹೆಚ್ಚಿಸಬಹುದು. ಉದಾ: ಲೋಕಸಭೆ ಚುನಾವಣೆಯು 2024ರಲ್ಲಿ ನಡೆಯಲಿದೆ ಆದರೆ ಕರ್ನಾಟಕ ವಿಧಾನ ಸಭೆ ಚುನಾವಣೆ 2023ರಲ್ಲಿ ನಡೆದಿದೆ.
ಸೌಲಭ್ಯಗಳ ಸವಾಲು
- ಪ್ರಸ್ತುತ ಪ್ರತಿ ಮತಗಟ್ಟೆಯಲ್ಲಿ ಮತದಾನಕ್ಕೆ ಒಂದೊಂದು ಮತಯಂತ್ರವನ್ನು ಬಳಸಲಾಗುತ್ತಿದೆ. ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು, ಇವಿಎಂಗಳು ಮತ್ತು ವಿವಿಪ್ಯಾಟ್ಗಳ ಅವಶ್ಯಕತೆಗಳು ದ್ವಿಗುಣಗೊಳ್ಳುತ್ತವೆ, ಏಕೆಂದರೆ ಪ್ರತಿ ಮತಗಟ್ಟೆಗೆ, ಚುನಾವಣಾ ಆಯೋಗ ಎರಡು ಸೆಟ್ಗಳನ್ನು ಒದಗಿಸಬೇಕು (ಒಂದು ವಿಧಾನಸಭೆಗೆ ಚುನಾವಣೆಗೆ ಮತ್ತು ಎರಡನೆಯದು ಲೋಕಸಭೆಗೆ).
- ಮತಗಟ್ಟೆ ಸಿಬ್ಬಂದಿಯ ಹೆಚ್ಚುವರಿ ಅವಶ್ಯಕತೆಯೂ ಇರುತ್ತದೆ.
- ಮತಗಟ್ಟೆಗಳಿಗೆ ಸಾಮಗ್ರಿಗಳನ್ನು ಸಾಗಿಸಲು ತೊಂದರೆಯಾಗಲಿದೆ.
- ಏಕಕಾಲದಲ್ಲಿ ನಡೆಯುವ ಚುನಾವಣೆಗಳಿಗೆ ಉತ್ತಮ ಭದ್ರತಾ ವ್ಯವಸ್ಥೆಗಳ ಅಗತ್ಯವಿದ್ದು, ಅದಕ್ಕೆ ತಕ್ಕಂತೆ ಕೇಂದ್ರ ಪೊಲೀಸ್ ಪಡೆಗಳನ್ನು ಹೆಚ್ಚಿಸಬೇಕಾಗುತ್ತದೆ.
- ಚುನಾವಣೆಯ ನಂತರ ಇವಿಎಂಗಳನ್ನು ಸಂಗ್ರಹಿಸುವಲ್ಲಿ ಚುನಾವಣಾ ಆಯೋಗ ಈಗಾಗಲೇ ಸಮಸ್ಯೆಯನ್ನು ಎದುರಿಸುತ್ತಿದೆ.
ಜಮಿಲಿ ಚುನಾವಣೆಯ ಇತಿಹಾಸ:
- 1967 ರವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಆದರೆ, ಕೆಲವು ರಾಜ್ಯಗಳ ಅಸೆಂಬ್ಲಿಗಳ ವಿಸರ್ಜನೆ ಮತ್ತು 1970 ರಲ್ಲಿ ಲೋಕಸಭೆಯ ಒಂದು ವರ್ಷದ ಮೊದಲು ವಿಸರ್ಜನೆಯೊಂದಿಗೆ ಈ ನೀತಿಯನ್ನು ಮುಂದುವರಿಸಲಾಗಲಿಲ್ಲ. 1983 ರಲ್ಲಿ, ಚುನಾವಣಾ ಆಯೋಗವು ಮತ್ತೊಮ್ಮೆ ಜಮಿಲಿ ಚುನಾವಣಾ ಪ್ರಸ್ತಾಪವನ್ನು ತಂದಿತು. ಆದರೆ, ಆಗ ಸರ್ಕಾರ ಆಸಕ್ತಿ ವಹಿಸಿರಲಿಲ್ಲ. 1999ರಲ್ಲಿ ಕಾನೂನು ಆಯೋಗದ ವರದಿ ಇದನ್ನು ಮತ್ತೊಮ್ಮೆ ಎತ್ತಿ ಹಿಡಿದಿತ್ತು. 2016ರಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಈ ವಿಚಾರ ಪ್ರಸ್ತಾಪಿಸಿದ್ದರು. 2017ರಲ್ಲಿ ನೀತಿ ಆಯೋಗ ಈ ಬಗ್ಗೆ ಕಸರತ್ತು ನಡೆಸಿತ್ತು. 2019ರಲ್ಲಿ ಈ ವಿಚಾರವಾಗಿ ವಿವಿಧ ಪಕ್ಷಗಳ ಮುಖಂಡರ ಜೊತೆ ಪ್ರಧಾನಿ ಸಭೆ ಏರ್ಪಡಿಸಿದ್ದರು.