ಡಿಜಿಟಲ್ ರೂಪಾಯಿ
ಡಿಜಿಟಲ್ ರೂಪಾಯಿ
ಡಿಜಿಟಲ್ ರೂಪಾಯಿ ಎಂದರೇನು ? ಅದರ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಸಂಕ್ಷಿಪ್ತವಾಗಿ ವಿವರಿಸಿ
ಸುದ್ಧಿಯಲ್ಲಿ ಏಕಿದೆ ? ನೂತನ 'ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ 'ಯನ್ನು (ಸಿಬಿಡಿಸಿ) ಬಿಡುಗಡೆಗೊಳಿಸಲು ಆರ್ಬಿಐ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಪ್ರಾಯೋಗಿಕ ಪರೀಕ್ಷೆ ಸಾಧ್ಯತೆ ಇದೆ
- ಡಿಜಿಟಲ್ ಕರೆನ್ಸಿ ಬಗ್ಗೆ ಕೂಲಂಕಷ ಪರಿಶೀಲನೆ ಅಗತ್ಯ. ಸಮಗ್ರ ಸಮಾಲೋಚನೆ ನಿರ್ಣಾಯಕ. ಹೀಗಿದ್ದರೂ ಸಗಟು ಮತ್ತು ರಿಟೇಲ್ ವಲಯದಲ್ಲಿಪ್ರಾಯೋಗಿಕವಾಗಿ ಶೀಘ್ರ ಬಿಡುಗಡೆ ಸಾಧ್ಯತೆ ಇದೆ
ಏನಿದು ಸಿಬಿಡಿಸಿ?
- ಉದ್ದೇಶಿತ 'ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ)' ವರ್ಚುವಲ್ ಕರೆನ್ಸಿ ಅಥವಾ ಕ್ರಿಪ್ಟೊಕರೆನ್ಸಿಯಾಗಿದ್ದು, ಆರ್ಬಿಐ ಬಿಡುಗಡೆಗೊಳಿಸಲಿದೆ. ರೂಪಾಯಿ ಕರೆನ್ಸಿಗೆ ಪರ್ಯಯವಾಗಿ ಇದನ್ನು ಬಳಸಬಹುದು. ಖಾಸಗಿ ಕ್ರಿಪ್ಟೊ ಕರೆನ್ಸಿಗಳಂತಿರದೆ, ಸರಕಾರಿ ಡಿಜಿಟಲ್ ಕರೆನ್ಸಿ ಇದಾಗಲಿದೆ. ಮಾತ್ರವಲ್ಲದೆ ಕ್ರಿಪ್ಟೊ ಕರೆನ್ಸಿಗಳಿಂದ ಆರ್ಥಿಕತೆಗೆ ಸಂಭವನೀಯ ಅಪಾಯವನ್ನು ಕನಿಷ್ಠಗೊಳಿಸಲಿದೆ.
- ಸಿಬಿಡಿಸಿಯಿಂದ ನಗದಿನ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಕರೆನ್ಸಿ ಮುದ್ರಣ ವೆಚ್ಚದಲ್ಲಿ ಉಳಿತಾಯವಾಗಲಿದೆ. ಹಣಕಾಸು ವರ್ಗಾವಣೆಗಳಿಗೆ ಅನುಕೂಲವಾಗಲಿದೆ. ಚೀನಾ, ರಷ್ಯಾ ಮತ್ತು ಬ್ರಿಟನ್ನಲ್ಲಿ ಡಿಜಿಟಲ್ ಕರೆನ್ಸಿಯ ಪ್ರಯೋಗಗಳು ನಡೆಯುತ್ತಿವೆ. ಭಾರತವೂ ಇದೇ ಸಾಲಿಗೆ ಸೇರ್ಪಡೆಯಾಗಲಿದೆ.
ಅನುಕೂಲಗಳು
- ಇದು ಡಿಜಿಟಲ್ ಸ್ವರೂಪದಲ್ಲಿ ಇರುವ ಕಾರಣ, ಕರೆನ್ಸಿ ನೋಟುಗಳನ್ನು ಮುದ್ರಿಸುವ ಅವಶ್ಯಕತೆ ಇಲ್ಲ. ಇದರಿಂದ ಮುದ್ರಣ, ಸಂಗ್ರಹ, ಸಾಗಣೆ ಮತ್ತು ವಿತರಣೆ ವೆಚ್ಚವನ್ನು ಪೂರ್ಣ ಪ್ರಮಾಣದಲ್ಲಿ ಉಳಿಸಬಹುದಾಗಿದೆ. ಇದು ಡಿಜಿಟಲ್ ಕರೆನ್ಸಿಯ ಪ್ರಧಾನ ಅನುಕೂಲಗಳಲ್ಲಿ ಒಂದು
- ಡಿಜಿಟಲ್ ಕರೆನ್ಸಿಯನ್ನು ಕರೆನ್ಸಿ ನೋಟಿನಂತೆಯೇ ಬ್ಯಾಂಕ್ ಮೂಲಕ ವಿತರಣೆ ಮಾಡಲಾಗುತ್ತದೆ. ಡಿಜಿಟಲ್ ಕರೆನ್ಸಿ ಖಾತೆಯಿಂದಲೇ ಎಲ್ಲವನ್ನೂ ನಿರ್ವಹಣೆ ಮಾಡಬಹುದು. ಡಿಜಿಟಲ್ ಕರೆನ್ಸಿ ವಹಿವಾಟನ್ನು ಬ್ಯಾಂಕ್ ಖಾತೆಯ ಮೂಲಕ ನಿರ್ವಹಿಸುವ ಅವಶ್ಯಕತೆ ಇಲ್ಲ. ಈ ವಹಿವಾಟಿಗೆ ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ ಪಡೆಯುವ ಅವಶ್ಯಕತೆ ಇಲ್ಲ. ಕರೆನ್ಸಿ ನೋಟು ವ್ಯವಹಾರದಂತೆಯೇ ಇದನ್ನು ನಿರ್ವಹಣೆ ಮಾಡಬಹುದು
- ಡಿಜಿಟಲ್ ಕರೆನ್ಸಿಯನ್ನು ವಿದೇಶಿ ವಿನಿಮಯಕ್ಕೆ ಸುಲಭವಾಗಿ, ಸರಳವಾಗಿ ಮತ್ತು ತಕ್ಷಣವೇ ಬಳಸಿಕೊಳ್ಳಬಹುದು. ವಿದೇಶಿ ವಿನಿಮಯಕ್ಕಾಗಿ ಕಮಿಷನ್ ನೀಡುವ ಅವಶ್ಯಕತೆ ಇಲ್ಲ. ವಿನಿಮಯದ ಕ್ಷಣದಲ್ಲಿನ ದರದ ಮೌಲ್ಯದಲ್ಲಿಯೇ ವಿನಿಮಯ ಮಾಡಿಕೊಳ್ಳಬಹುದು
- ಇದನ್ನು ಬ್ಯಾಂಕ್ ಖಾತೆಗಳಲ್ಲಿಯೂ ಠೇವಣಿ ರೂಪದಲ್ಲಿ ಇಡಬಹುದು. ಬ್ಯಾಂಕ್ ದಿವಾಳಿಯಾಗುತ್ತಿದೆ, ವಂಚನೆ ನಡೆದಿದೆ ಎನ್ನಬಹುದಾದ ಸಂದರ್ಭದಲ್ಲಿ ಅಷ್ಟೂ ಹಣವನ್ನು ಸುಲಭವಾಗಿ ವಾಪಸ್ ಪಡೆಯಬಹುದು. ಬ್ಯಾಂಕ್ನಲ್ಲಿ ನಗದು ನೋಟು ಲಭ್ಯವಿಲ್ಲ ಎಂಬ ಆತಂಕವಿರುವುದಿಲ್ಲ
- ಕರೆನ್ಸಿ ನೋಟುಗಳ ವ್ಯವಹಾರದ ಅವಶ್ಯಕತೆಯನ್ನು ಡಿಜಿಟಲ್ ಕರೆನ್ಸಿ ಕಡಿಮೆ ಮಾಡುತ್ತದೆ. ಹಣಕಾಸು ವ್ಯವಹಾರಗಳ ಲೆಕ್ಕಪತ್ರ ನಿರ್ವಹಣೆ ಸುಲಭವಾಗುತ್ತದೆ ಮತ್ತು ಸರಳವಾಗುತ್ತದೆ
ಜಾಗತಿಕವಾಗಿ ಶೇ 10ರಷ್ಟು ಕೇಂದ್ರೀಯ ಬ್ಯಾಂಕುಗಳು 3 ವರ್ಷಗಳಲ್ಲಿ ಮತ್ತು ಶೇ 20ರಷ್ಟು ಕೇಂದ್ರೀಯ ಬ್ಯಾಂಕ್ಗಳು ಮುಂದಿನ 6 ವರ್ಷಗಳಲ್ಲಿ ಸಿಬಿಡಿಸಿ ಅನುಷ್ಠಾನಗೊಳಿಸಲಿವೆ ಎಂದು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟ್ಲ್ಮೆಂಟ್ಸ್ ತಿಳಿಸಿದೆ.
ಅನನುಕೂಲಗಳು
ಡಿಜಿಟಲ್ ಕರೆನ್ಸಿಯಿಂದಾಗಬಹುದಾದ ಅನುಕೂಲಗಳಂತೆಯೇ ಅನನುಕೂಲಗಳು ಆರ್ಬಿಐ ಗುರುತಿಸಿದೆ. ಹೀಗೆ ಗುರುತಿಸಲಾದ ಅನನುಕೂಲಗಳಲ್ಲಿ ಕೆಲವು ಅಪಾಯಕಾರಿಯೂ ಹೌದು ಎಂದು ಆರ್ಬಿಐ ಅಭಿಪ್ರಾಯಪಟ್ಟಿದೆ.
- ಡಿಜಿಟಲ್ ಕರೆನ್ಸಿಯನ್ನು ದೇಶವ್ಯಾಪಿ ಬಳಕೆಗೆ ತರಲು ತಂತ್ರಜ್ಞಾನದ ಅಳವಡಿಕೆ ಅತ್ಯಂತ ಮುಖ್ಯ. ಇದಕ್ಕಾಗಿ ದೇಶದ ಎಲ್ಲೆಡೆ ವೇಗದ ಇಂಟರ್ನೆಟ್ ಸೇವೆ ಲಭ್ಯವಿರಬೇಕು. ಅತಿಹೆಚ್ಚು ಜನರು ಸ್ಮಾರ್ಟ್ ಫೋನ್ಗಳನ್ನು ಬಳಸಬೇಕು. ಡಿಜಿಟಲ್ ಕರೆನ್ಸಿ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಯಾವ ಸಿದ್ಧತೆಗಳನ್ನೂ ಮಾಡಿಕೊಳ್ಳದೆ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಿದರೆ, ಅದು ಯಶಸ್ವಿಯಾಗುವ ಸಾಧ್ಯತೆ ಕಡಿಮೆ
- ಡಿಜಿಟಲ್ ಕರೆನ್ಸಿಯನ್ನು ನಿರ್ವಹಣೆ ಮಾಡಲು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನೂ ಮೇಲ್ದರ್ಜೆಗೆ ಏರಿಸುವುದು ಅನಿವಾರ್ಯ. ಕರೆನ್ಸಿ ನೋಟು ಬ್ಯಾಂಕಿಂಗ್ ಮತ್ತು ಡಿಜಿಟಲ್ ಕರೆನ್ಸಿ ಬ್ಯಾಂಕಿಂಗ್ ವ್ಯವಸ್ಥೆಗಳು ಸಮಾನಾಂತರವಾಗಿ ಕಾರ್ಯನಿರ್ವಹಿಸಬೇಕು. ಈ ವ್ಯವಸ್ಥೆಯನ್ನು ರೂಪಿಸಲು ಸಾಕಷ್ಟು ಬಂಡವಾಳ ಹೂಡಿಕೆಯ ಅವಶ್ಯಕತೆ ಇದೆ. ಇದು ಬ್ಯಾಂಕಿಂಗ್ ವ್ಯವಸ್ಥೆಗೆ ಆರಂಭಿಕ ಹೊರೆಯಾಗುವ ಸಾಧ್ಯತೆ ಇದೆ. ಡಿಜಿಟಲ್ ಕರೆನ್ಸಿ ಜಾರಿಗೆ ತಂದರೆ, ಈ ಸ್ವರೂಪದ ಬಂಡವಾಳ ಹೂಡಿಕೆ ಅನಿವಾರ್ಯ. ಅದರ ಹೊರೆ ಗ್ರಾಹಕರಿಗೆ ವರ್ಗವಾಗುವ ಸಾಧ್ಯತೆಯೂ ಇದೆ
- ಆನ್ಲೈನ್ ಬ್ಯಾಂಕಿಂಗ್ನಲ್ಲಿ ಇರುವ ಹ್ಯಾಕಿಂಗ್ನಂತಹ ಸೈಬರ್ ಅಪರಾಧಗಳ ಅಪಾಯ ಡಿಜಿಟಲ್ ಕರೆನ್ಸಿಯಲ್ಲಿಯೂ ಇದೆ
- ಡಿಜಿಟಲ್ ಕರೆನ್ಸಿಯನ್ನು ವಿದೇಶಿ ವಿನಿಮಯಕ್ಕೆ ನೇರವಾಗಿ ಬಳಸುವುದಾದರೆ, ವಿನಿಮಯ ಮಾಡಿಕೊಳ್ಳಬೇಕಿರುವ ವಿದೇಶಿ ಕರೆನ್ಸಿಯೂ ಸಹ ಡಿಜಿಟಲ್ ಸ್ವರೂಪದಲ್ಲಿ ಇರಬೇಕು. ಆಗ ಮಾತ್ರ ವಿದೇಶಿ ವಿನಿಮಯಕ್ಕೆ ಇದನ್ನು ಬಳಸಬಹುದು. ಇಲ್ಲದಿದ್ದರೆ ಸಾಂಪ್ರದಾಯಿಕ ರೂಪದಲ್ಲೇ ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ