ಭಾರತದಲ್ಲಿ ನಗರೀಕರಣ
ಭಾರತದಲ್ಲಿ ನಗರೀಕರಣ
-
ಭಾರತದಲ್ಲಿ ನಗರೀಕರಣದ ವಿನ್ಯಾಸದ ಕುರಿತು ಟಿಪ್ಪಣಿ ಬರೆಯಿರಿ ಮತ್ತು ನಗರೀಕರಣದಿಂದ ಭಾರತಕ್ಕೆ ಎದುರಾಗಬಹುದಾ ಸವಾಲುಗಳನ್ನು ಪಟ್ಟಿ ಮಾಡಿ.
- 2050ರ ವೇಳೆಗೆ ಭಾರತದ ಬಹುಪಾಲು ಜನರು ನಗರವಾಸಿಗಳಾಗಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ.
- 2011ರ ಜನಸಂಖ್ಯೆಯ ಪ್ರಕಾರ ದೇಶದ ಶೇ 31ರಷ್ಟು ಜನರು ನಗರ ಪ್ರದೇಶಗಳಲ್ಲಿ ಇದ್ದರು. ಈಗ ಈ ಪ್ರಮಾಣವು ಗಣನೀಯ ಮಟ್ಟದಲ್ಲಿ ಏರಿಕೆಯಾಗಿದೆ. 2036ರ ವೇಳೆಗೆ ಈ ಪ್ರಮಾಣವು ಶೇ 73ಕ್ಕೆ ಏರಿಕೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
- ಭಾರತದ ನಗರಗಳು ಈಗಾಗಲೇ, ಗರಿಷ್ಠ ನಗರೀಕರಣಕ್ಕೆ ಒಳಗಾಗಿರುವ ದೇಶಗಳಿಗಿಂತ ಹೆಚ್ಚು ಜನರನ್ನು ನಿಭಾಯಿಸುತ್ತಿವೆ. ಮುಂದಿನ ದಶಕಗಳಲ್ಲಿ ಈ ನಗರೀಕರಣ ಮತ್ತು ನಗರ ಜನಸಂಖ್ಯೆಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಲಿದೆ
ನಗರೀಕರಣದ ವಿನ್ಯಾಸ
- ಭಾರತದ ನಗರೀಕರಣವು ಸಂಕೀರ್ಣ ಮತ್ತು ವೈವಿಧ್ಯತೆಯಿಂದ ಕೂಡಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಿನ್ನವಾಗಿದೆ. ಗೋವಾ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಶೇ 40ರಷ್ಟು ನಗರೀಕರಣ ಗುರುತಿಸಬಹುದು. ಬಿಹಾರ, ಒಡಿಶಾ, ಅಸ್ಸಾಂ, ಉತ್ತರ ಪ್ರದೇಶಗಳು ರಾಷ್ಟ್ರೀಯ ಸರಾಸರಿಯಾದ ಶೇ 31ಕ್ಕಿಂತ ಕಡಿಮೆಯಿವೆ.
- ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಗುಜರಾತ್, ಕರ್ನಾಟಕ ಹಾಗೂ ಮಧ್ಯಪ್ರದೇಶ – ಈ 10 ರಾಜ್ಯಗಳಲ್ಲಿ ಶೇ 75ಕ್ಕಿಂತ ಹೆಚ್ಚು ನಗರೀಕರಣ ಕೇಂದ್ರೀಕೃತವಾಗಿದೆ.
- ರಾಷ್ಟ್ರೀಯ ರಾಜಧಾನಿ ದೆಹಲಿ, ಕೇಂದ್ರಾಡಳಿತ ಪ್ರದೇಶಗಳಾದ ದಮನ್ ದಿಯು, ಚಂಡೀಗಡ ಮತ್ತು ಲಕ್ಷದ್ವೀಪಗಳು ಶೇ 75ರಷ್ಟು ನಗರೀಕರಣ ದಾಖಲಿಸಿವೆ ಎಂದು 2011ರ ಜನಗಣತಿ ಉಲ್ಲೇಖಿಸಿದೆ.
ನಗರದ ಜನವಸತಿಯನ್ನು ಮೂರು ಹಂತಗಳಲ್ಲಿ ವಿಭಾಗಿಸಲಾಗಿದೆ.
- ಶಾಸನಬದ್ಧ ಪಟ್ಟಣಗಳು: ಪುರಸಭೆಯಂತಹ ಸ್ಥಳೀಯ ಆಡಳಿತದೊಂದಿಗೆ ಆಯಾ ರಾಜ್ಯ ಸರ್ಕಾರಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ಕಾನೂನಿನ ಅಡಿಯಲ್ಲಿ ಅಧಿಸೂಚನೆಗೊಂಡ ಜನವಸತಿ ಪ್ರದೇಶಗಳು.
- ಜನಗಣತಿ ಪಟ್ಟಣಗಳು: ಜನಗಣತಿಯಲ್ಲಿ ಈ ಜನವಸತಿ ಪ್ರದೇಶಗಳನ್ನು ‘ನಗರ’ ಎಂಬುದಾಗಿ ವರ್ಗೀಕರಿಸಲಾಗಿರುತ್ತದೆ. ಕನಿಷ್ಠ 5,000 ಜನಸಂಖ್ಯೆ ಇರುವ, ಶೇ 75ರಷ್ಟು ಪುರುಷ ಮುಖ್ಯ ಕೆಲಸಗಾರರು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಪ್ರತಿ ಚದರ ಕಿ.ಮೀಗೆ ಕನಿಷ್ಠ 400 ವ್ಯಕ್ತಿಗಳ ಜನಸಾಂದ್ರತೆ ಹೊಂದಿರುವ ಮಾನದಂಡಗಳನ್ನು ಇವು ಪೂರೈಸಿರುತ್ತವೆ. ಹಳ್ಳಿಗಳ ರೀತಿಯಲ್ಲೇ ಇವುಗಳ ಆಡಳಿತ ನಡೆಸಲಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳನ್ನು ಇವು ಹೊಂದಿರುವುದಿಲ್ಲ.
- ನಗರವು ಹೊರವಲಯಗಳಿಗೆ ವಿಸ್ತರಣೆಗೊಂಡ ಪ್ರದೇಶ: ಪಕ್ಕಾ ರಸ್ತೆ, ವಿದ್ಯುತ್ ಸಂಪರ್ಕ ಮೊದಲಾದ ನಗರದ ಸವಲತ್ತು ಮತ್ತು ಮೂಲಸೌಕರ್ಯಗಳನ್ನು ಹೊಂದಿರುತ್ತವೆ. ನಗರ ಸಮುಚ್ಚಯದ ಪ್ರಮುಖ ಭಾಗದೊಂದಿಗೆ ಈ ಪ್ರದೇಶ ಭೌತಿಕವಾಗಿ ಹೊಂದಿಕೊಂಡಿರುತ್ತದೆ.
ಹಳ್ಳಿಯಿಂದ ನಗರಕ್ಕೆ ವಲಸೆ:
- ಗ್ರಾಮಗಳಿಂದ ಪಟ್ಟಣಗಳಿಗೆ ಸಹಜವಾಗಿ ಆಗುವ ವಲಸೆಯು ಜನಗಣತಿ ಪಟ್ಟಣಗಳ ಜನಸಂಖ್ಯೆಯನ್ನು ಹೆಚ್ಚಿಸಿದೆ. ನಗರ ಜನಸಂಖ್ಯೆ ಹೆಚ್ಚಳದಲ್ಲಿ ವಲಸೆಯ ಪಾಲು ಶೇ 22.8ರಷ್ಟು, ಜನಗಣತಿ ಪಟ್ಟಣಗಳು ಭಾರತದ ಪ್ರಸ್ತುತ ನಗರೀಕರಣದ ಅವಿಭಾಜ್ಯ ಅಂಗವಾಗಿವೆ. ಒಟ್ಟು ನಗರ ಜನಸಂಖ್ಯೆಯಲ್ಲಿ ಜನಗಣತಿ ಪಟ್ಟಣಗಳ ಒಟ್ಟು ಪಾಲು 2001ರಲ್ಲಿ ಶೇ 7.3ರಷ್ಟಿದ್ದು, ಅದು 2011ರ ವೇಳೆಗೆ ಶೇ 14.4ಕ್ಕೆ ಏರಿತು. ಈ ಅವಧಿಯಲ್ಲಿ ಜನಗಣತಿ ಪಟ್ಟಣಗಳ ಸಂಖ್ಯೆ ಬೆಳೆಯುತ್ತಾ ಹೋಯಿತು. ಕರ್ನಾಟಕದಲ್ಲಿ 44ರಿಂದ 127ಕ್ಕೆ ಹೆಚ್ಚಿದವು.
ನಗರೀಕರಣದ ಸವಾಲುಗಳು
- ನಗರೀಕರಣವನ್ನು ನಿರ್ವಹಿಸಲು ಯೋಜನೆ ನಿರ್ಣಾಯಕ. ಭೂಮಿ, ವಿಸ್ತರಣೆ ಮತ್ತು ಭವಿಷ್ಯದಲ್ಲಿ ಅವುಗಳ ಬಳಕೆಯನ್ನು ನಿಯಂತ್ರಿಸಲು ಹಾಗೂ ಮುಂದಿನ 25 ವರ್ಷಗಳ ದೂರದೃಷ್ಟಿಯಲ್ಲಿ ನಗರಗಳನ್ನು ಕಟ್ಟುವ ಯಾವುದೇ ಉದ್ದೇಶ ಇಲ್ಲದೇ ಶಾಸನಬದ್ಧ ಪಟ್ಟಣಗಳು ಬೆಳೆಯುತ್ತಿವೆ.
- ಜನಗಣತಿ ಪಟ್ಟಣಗಳಲ್ಲಿ ಆರ್ಥಿಕ ಚಟುವಟಿಕೆಗಳು ವೇಗವಾಗಿ ಬೆಳೆಯುತ್ತಿವೆ. ಆದರೆ ಮೂಲಸೌಕರ್ಯ ಅಭಿವೃದ್ಧಿಯ ಹೊಣೆಯನ್ನು ಸ್ಥಳೀಯ ಸಂಸ್ಥೆಗಳು ಸರಿಯಾಗಿ ನಿಭಾಯಿಸುತ್ತಿಲ್ಲ. ಜನಗಣತಿ ಪಟ್ಟಣಗಳನ್ನು ಹಳ್ಳಿ ಆಡಳಿತದ ರೀತಿ ನಿರ್ವಹಿಸಲಾಗುತ್ತಿದೆ.
- ನಗರದ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳುವ ಸವಾಲು ಸ್ಥಳೀಯಾಡಳಿತಗಳ ಮುಂದಿದೆ. ರೈಲ್ವೆ, ಬಂದರು ಮೊದಲಾದ ಸರ್ಕಾರಿ ಸಂಸ್ಥೆಗಳು ಸ್ವಂತ ಜಮೀನುಗಳನ್ನು ಹೊಂದಿವೆ. ಮೂಲಸೌಕರ್ಯ ಅಭಿವೃದ್ಧಿ ವಿಚಾರ ಬಂದಾಗ ಇದು ತೊಡಕೆನಿಸುತ್ತದೆ. ಭೂಸ್ವಾಧೀನ ಎಂಬುದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಹೀಗಾಗಿ ಒಂದೇ ಏಜೆನ್ಸಿ ಬಳಿ ಭೂಮಿಗೆ ಸಂಬಂಧಪಟ್ಟ ಕೆಲಸಗಳು ಆಗುವಂತಿದ್ದರೆ ಮೂಲಸೌಕರ್ಯಗಳಿಗೆ ವೇಗ ಸಿಗುತ್ತದೆ.
- 2011ರ ಜನಗಣತಿ ಪ್ರಕಾರ, ಶೇ 17.3ರಷ್ಟು ನಗರದ ಜನಸಂಖ್ಯೆಯು ಕೊಳೆಗೇರಿಗಳಲ್ಲಿ ವಾಸಿಸುತ್ತಿದೆ. ಶೇ 70ರಷ್ಟು ಕೊಳೆಗೇರಿಗಳು 6 ರಾಜ್ಯಗಳಲ್ಲಿ ಕೇಂದ್ರೀಕೃತವಾಗಿವೆ. ಇವುಗಳನ್ನು ಗುಣಮಟ್ಟದ ಜನವಸತಿಗಳಾಗಿ ಪರಿವರ್ತಿಸುವ ಸವಾಲಿದೆ.
- ಭಾರತದ ನಗರಗಳು ನೀರಿನ ಕೊರತೆಯ ಗಂಭೀರ ಅಪಾಯ ಎದುರಿಸುತ್ತಿವೆ ಎಂದು ಹಲವು ಅಧ್ಯಯನಗಳು ಬೊಟ್ಟು ಮಾಡಿವೆ. ಬೆಂಗಳೂರು ಸೇರಿದಂತೆ ದೇಶದ 30 ನಗರಗಳು ಮುಂದಿನ ಕೆಲವು ದಶಕಗಳಲ್ಲಿ ತೀವ್ರ ನೀರಿನ ಅಭಾವ ಎದುರಿಸಲಿವೆ.
- ನಗರಗಳ ಯೋಜನೆ, ಅಭಿವೃದ್ಧಿ ಜೊತೆಗೆ ನಿರ್ವಹಣೆಯೂ ಮುಖ್ಯ. ನಗರಕ್ಕೆ ಎದುರಾಗುವ ವಿಪತ್ತುಗಳನ್ನು ನಿರ್ವಹಿಸಲು ನಮ್ಮ ನಗರಗಳು ಸಿದ್ಧವಾಗಬೇಕಿದೆ. 2015ರಲ್ಲಿ ಚೆನ್ನೈನಲ್ಲಿ ಉಂಟಾದ ಪ್ರವಾಹ ಇದಕ್ಕೊಂದು ನಿದರ್ಶನ. ಕೆರೆಗಳ ಒತ್ತುವರಿ, ಕಿರಿದಾಗುತ್ತಿರುವ ಜಲಾನಯನ ಪ್ರದೇಶಗಳ ವ್ಯಾಪ್ತಿ ಹಾಗೂ ಮಳೆಯ ವಿನ್ಯಾಸದಲ್ಲಿ ಆದ ಬದಲಾವಣೆಗಳಿಂದ ನಗರದಲ್ಲಿ ಪ್ರವಾಹ ಉಂಟಾಗುತ್ತಿದೆ. ಕರಾವಳಿ ತಟದಲ್ಲಿರುವ ನಗರಗಳಲ್ಲೂ ಈ ಅಪಾಯ ಹೆಚ್ಚು.