Published on: September 28, 2023
ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ
ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ
ಸುದ್ದಿಯಲ್ಲಿ ಏಕಿದೆ? ರಾಷ್ಟ್ರಧ್ವಜಕ್ಕೆ ಬೇಕಾಗುವ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಮೊದಲ ಖಾದಿ ಗ್ರಾಮೋದ್ಯೋಗ ಸಂಸ್ಥೆ ಖ್ಯಾತಿಯ ಧಾರವಾಡ ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘವು, ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಭಾಜನವಾಗಿದೆ.
ಮುಖ್ಯಾಂಶಗಳು
- ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ಶಿಫಾರಸ್ಸನ್ನು ಸರ್ಕಾರ ಅಂಗೀಕರಿಸಿ ಆದೇಶ ಹೊರಡಿಸಿದೆ.
- ಪ್ರಶಸ್ತಿ: 5 ಲಕ್ಷ ರೂ. ನಗದು, ಗಾಂಧಿ ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ.
ಭಾರತದ ರಾಷ್ಟ್ರಧ್ವಜ ತಯಾರಿಕೆಗೆ ಪೂರ್ಣ ಪ್ರಮಾಣದ ಅನುಮತಿ:
- ಧಾರವಾಡ ಸಮೀಪದ ಗರಗ ಗ್ರಾಮಮದಲ್ಲಿರುವ ಗರಗ ಕ್ಷೇತ್ರೀಯ ಸೇವಾ ಸಂಘ ಹಲವು ದಶಕಗಳಿಂದ ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟ ಕಾರ್ಯದಲ್ಲಿ ನಿರತವಾಗಿದೆ.
- ಇತ್ತೀಚೆಗೆ ಸಂಪೂರ್ಣ ರಾಷ್ಟ್ರಧ್ವಜ ತಯಾರಿಸುವ ಪರವಾನಿಗೆಯನ್ನು ಪಡೆದಿದೆ. ಇದುವರೆಗೆ ಖಾದಿ ಗ್ರಾಮೋದ್ಯೋಗ ಆಯೋಗದ ಪ್ರಮಾಣಿತ ಗರಗ ಕೇಂದ್ರದಲ್ಲಿ ತಿರಂಗಾಕ್ಕೆ ಬಟ್ಟೆ ತಯಾರು ಮಾಡಿ ಬಣ್ಣಕ್ಕಾಗಿ ಮುಂಬೈಯ ಖಾದಿ ಡೈಯರ್ ಆ್ಯಂಡ್ ಪ್ರಿಂಟರ್‌ಗೆ ಕಳುಹಿಸಿ, ನಂತರ ಇಲ್ಲಿ ಮಾರಾಟ ಮಾಡಲಾಗುತ್ತಿತ್ತು.
- 2023ರ ಜೂನ್ ನಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) 2:3 ಅಡಿ ತ್ರಿವರ್ಣ ಧ್ವಜ ತಯಾರಿಕೆಗೆ ಅನುಮತಿ ನೀಡಿದೆ. ಇದರಿಂದಾಗಿ ಗರಗ ಕೇಂದ್ರದಲ್ಲಿಯೇ ನೂಲುವುದು, ನೇಯುವುದು, ಬಟ್ಟೆ ತಯಾರಿಕೆ ಜೊತೆಗೆ ಬಣ್ಣಗಳ ಮುದ್ರಣ ಮಾಡುವ ಕಾರ್ಯದೊಂದಿಗೆ ಸಂಪೂರ್ಣ ತಿರಂಗಾ ಧ್ವಜ ಇಲ್ಲಿಯೇ ರೂಪುಗೊಳ್ಳಲಿದೆ.
ಗರಗ ಸೇವಾ ಸಂಘದ ಕಿರು ಪರಿಚಯ:
- 1956ರಲ್ಲಿ ಧಾರವಾಡ ತಾಲೂಕು ಸೇವಾ ಸಂಘವೆಂದು ಆರಂಭವಾಗಿ ನಿರಂತರವಾಗಿ ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟವನ್ನು ಮಾಡುತ್ತಾ ಬರಲಾಗಿದೆ.
- 1989-90ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದವರ ಆದೇಶದಂತೆ ಮಾತೃ ಸಂಘವನ್ನು 4 ಸಣ್ಣ ಸಂಸ್ಥೆಗಳಾಗಿ ವಿಕೇಂದ್ರೀಕರಿಸಲಾಯಿತು. ಅದರಂತೆ ಮಾತೃಸಂಸ್ಥೆ ಧಾರವಾಡ ತಾಲೂಕು ಸೇವಾ ಸಂಘ, ಗರಗ ಕ್ಷೇತ್ರಿಯ ಸೇವಾ ಸಂಘ, ಹೆಬ್ಬಳ್ಳಿ ಕ್ಷೇತ್ರೀಯ ಸೇವಾ ಸಂಘ ಮತ್ತು ಅಮ್ಮಿನಬಾವಿ ಕ್ಷೇತ್ರೀಯ ಸೇವಾ ಸಂಘವೆಂದು ನಾಮಕರಣಗೊಳಿಸಲಾಯಿತು.
- ರಾಷ್ಟ್ರಧ್ವಜವನ್ನು ಧಾರವಾಡ ಜಿಲ್ಲೆಯ ಗರಗ, ಹೆಬ್ಬಳ್ಳಿ, ಬೆಂಗೇರಿ ಗ್ರಾಮಗಳಲ್ಲಿ ತಯಾರಿಸಲಾಗುತ್ತದೆ. ರಾಷ್ಟ್ರಧ್ವಜಕ್ಕೆ ಬೇಕಾಗುವ ಖಾದಿ ಬಟ್ಟೆಯನ್ನು ತಯಾರಿಸುವ ಭಾರತದ ಪ್ರಪ್ರಥಮ ಖಾದಿ ಗ್ರಾಮೋದ್ಯೋಗ ಘಟಕವಿರುವ ಗ್ರಾಮ ಗರಗ.
- ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿಸಿಕೊಂಡಿವೆ.