Published on: October 25, 2021

ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ

ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ

ಸುದ್ಧಿಯಲ್ಲಿ ಏಕಿದೆ?  ರೈತರಿಗೆ ನೀಡಿರುವ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸೌಲಭ್ಯವನ್ನು ಶೀಘ್ರವೇ ಮೀನುಗಾರರಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಖಾತೆ ಸಹಾಯಕ ಸಚಿವ ಎಲ್‌.ಮುರುಗನ್‌ ತಿಳಿಸಿದ್ದಾರೆ.

  • ಕಡಲ ಆಹಾರ ರಫ್ತು ಹೆಚ್ಚಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ದೇಶದ ಐದು ಪ್ರಮುಖ ಮೀನುಗಾರಿಕೆ ಬಂದರುಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟ ಹಾಗೂ ಅತ್ಯಾಧುನಿಕ ಸಂಸ್ಕರಣಾ ಘಟಕಗಳೊಂದಿಗೆ ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ

ಏನಿದು ಯೋಜನೆ?

  • ಅಲ್ಪಾವಧಿಯ ಔಪಚಾರಿಕ ಸಾಲ ನೀಡುವ ಸಲುವಾಗಿ ಕೇಂದ್ರ ಸರಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು 1998 ರಲ್ಲಿ ಪರಿಚಯಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉತ್ತರ ಪ್ರದೇಶದ ಚಿತ್ರಕೂಟಿನಲ್ಲಿ ಪ್ರಧಾನಿ ಕಿಸಾನ್ ಯೋಜನೆ ಅಡಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನ ಎಲ್ಲಾ ಫಲಾನುಭವಿಗಳಿಗೆ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಡಿ 25 ಲಕ್ಷಕ್ಕೂ ಹೆಚ್ಚು ಕಿಸಾನ್‌ ಕ್ರೆಡಿಟ್‌ ಕಾರ್ಡ್ (ಕೆಸಿಸಿ) ಒದಗಿಸಲಾಗಿದ್ದು, ರೈತರಿಗೆ ಕೆಸಿಸಿ ಒದಗಿಸುವ ಕಾರ್ಯವನ್ನು 2 ಸಾವಿರಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳಿಗೆ ವಹಿಸಲಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಯಾರು ಅರ್ಹರು?

  • ಎಲ್ಲಾ ರೈತರು, ವ್ಯಕ್ತಿಗಳು / ಜಂಟಿ ರೈತರು, ಗುತ್ತಿಗೆ ರೈತರು, ಹತ್ತು ರೈತರು ಒಳಗೊಂಡಿರುವ ಜಂಟಿ ಹೊಣೆಗಾರಿಕೆ ಗುಂಪುಗಳು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಸಾಲ ಪಡೆಯಬಹುದು. ಇವರು ಒಂದು ಅವಧಿಗೆ ಗರಿಷ್ಠ 3 ಲಕ್ಷ ರೂಪಾಯಿ ವರೆಗೆ ಸಾಲ ಪಡೆಯಬಹುದು. ಕೆಸಿಸಿ ಸಾಲ ಪಡೆದ ರೈತರ ಬೆಳೆಗಳಿಗೆ ಬೆಳ ವಿಮೆ ಕೂಡ ಲಭ್ಯವಿರುತ್ತದೆ.

ಸೀವೀಡ್‌ ಪಾರ್ಕ್‌

  • ತಮಿಳುನಾಡಿನಲ್ಲಿ ಸೀವೀಡ್‌ ಪಾರ್ಕ್‌ ನಿರ್ಮಾಣವಾಗಲಿದೆ. ಅಲ್ಲದೆ ದೇಶದ ಕರಾವಳಿಯುದ್ದಕ್ಕೂ ಹಲವು ಸೀವೀಡ್‌ ಪಾರ್ಕ್‌ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಯಡಿ ಮೀನುಗಾರರ ಸಬಲೀಕರಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದರು.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ

  • ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್.ವೈ) ದೇಶದ ಮೀನುಗಾರಿಕೆ ವಲಯದ ಸುಸ್ಥಿರ ಅಭಿವೃದ್ಧಿಗೆ ಗಮನಹರಿಸಿದ 20,050 ಕೋಟಿ  ರೂ. ಅಂದಾಜು ಹೂಡಿಕೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆತ್ಮ ನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ 2020-21ರಿಂದ 2024-25ರ ಆರ್ಥಿಕ ವರ್ಷದ ನಡುವೆ 5 ವರ್ಷಗಳಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಾಗಲಿದೆ. ಪಿಎಂಎಂಎಸ್.ವೈ. ಅಡಿಯಲ್ಲಿ 20,050 ಕೋಟಿ ರೂ. ಹೂಡಿಕೆ ಮೀನುಗಾರಿಕೆ ವಲಯದಲ್ಲಿ ಈವರೆಗಿನ ಅತ್ಯಧಿಕ ಹೂಡಿಕೆಯಾಗಿದೆ. ಈ ಪೈಕಿ 12,340 ಕೋಟಿ ರೂ. ಹೂಡಿಕೆಯನ್ನು ಸಾಗರ, ಒಳನಾಡ ಮೀನುಗಾರಿಕೆ ಮತ್ತು ಜಲಚರಗಳ ಕ್ಷೇತ್ರದ ಫಲಾನುಭವಿ ಆಧಾರಿತ ಚಟುವಟಿಕೆಗಳಿಗೆ ಉದ್ದೇಶಿಸಿದ್ದರೆ, ಮೀನುಗಾರಿಕೆ ಮೂಲಸೌಕರ್ಯದಲ್ಲಿ ಸುಮಾರು 7710 ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ.
  • ಪಿಎಂಎಂಎಸ್.ವೈ ಮೀನು ಉತ್ಪಾದನೆಯನ್ನು 2024-25ರ ಹೊತ್ತಿಗೆ ಹೆಚ್ಚುವರಿಯಾಗಿ 70 ಲಕ್ಷ ಟನ್ ಹೆಚ್ಚಳ ಮಾಡುವ, 2024-25ರ ಹೊತ್ತಿಗೆ ಮೀನುಗಾರಿಕೆಯ ರಫ್ತಿನ ಗಳಿಕೆಯನ್ನು 1,00,000 ಕೋಟಿ ರೂ.ಗಳಿಗೆ ಹೆಚ್ಚಿಸುವ, ಮೀನುಗಾರರ ಮತ್ತು ಮೀನುಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ಹಾಗೂ ಕೊಯ್ಲು ನಂತರದ ನಷ್ಟವನ್ನು ಶೇ.20-25ರಿಂದ ಶೇ.10ಕ್ಕೆ ತಗ್ಗಿಸುವ ಮತ್ತು ಹೆಚ್ಚುವರಿಯಾಗಿ 55 ಲಕ್ಷ ನೇರ ಮತ್ತು ಪರೋಕ್ಷ ಲಾಭದಾಯಕ ಉದ್ಯೋಗಾವಕಾಶವನ್ನು ಮೀನುಗಾರಿಕೆ ಮತ್ತು ಅದರ ಪೂರಕ ಚಟುವಟಿಕೆ ವಲಯದಲ್ಲಿ ಸೃಷ್ಟಿಸುವ ಗುರಿ ಹೊಂದಿದೆ.
  • ಪಿಎಂಎಂಎಸ್.ವೈ. ಅನ್ನು ಮೀನು ಉತ್ಪಾದನೆ ಮತ್ತು ಉತ್ಪಾದಕತೆ, ಗುಣಮಟ್ಟ, ತಾಂತ್ರಿಕತೆ, ಕೊಯ್ಲೋತ್ತರ ಮೂಲಸೌಕರ್ಯ ಮತ್ತು ನಿರ್ವಹಣೆ, ಆಧುನೀಕರಣ ಹಾಗೂ ಮೌಲ್ಯ ಸರಪಳಿಯ ಬಲವರ್ಧನೆ, ಪತ್ತೆ, ಚೈತನ್ಯಶೀಲ ಮೀನುಗಾರಿಕೆ ನಿರ್ವಹಣಾ ಚೌಕಟ್ಟು ಸ್ಥಾಪನೆ ಮತ್ತು ರೈತರ ಕಲ್ಯಾಣದ ನಡುವಿನ ಪ್ರಮುಖ ಕಂದಕವನ್ನು ನಿವಾರಿಸಲು ವಿನ್ಯಾಸಗೊಳಿಸಲಾಗಿದೆ.
  • ಪಿಎಂಎಂಎಸ್.ವೈ ಪ್ರಾಥಮಿಕವಾಗಿ ಕ್ಲಸ್ಟರ್ ಅಥವಾ ಪ್ರದೇಶ ಆಧಾರಿತ ವಿಧಾನಗಳನ್ನು ಮತ್ತು ಮೀನುಗಾರಿಕಾ ಕ್ಲಸ್ಟರ್ ಗಳನ್ನು ಹಿಂದುಳಿದ ಮತ್ತು ಮುಂದುವರಿದ ಸಂಪರ್ಕದೊಂದಿಗೆ ಅಳವಡಿಸಿಕೊಳ್ಳುವುದಕ್ಕೆ ಗಮನ ನೀಡುತ್ತದೆ. ಅಲಂಕಾರಿಕ ಮೀನು ಕೃಷಿ ಮತ್ತು ಸಮುದ್ರ ಕಳೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಗೂ ವಿಶೇಷ ಗಮನ ಹರಿಸುತ್ತದೆ. ಗುಣಮಟ್ಟದ, ಬೀಜ ಮತ್ತು ಮೇವು, ಜಾತಿಗಳ ವೈವಿಧ್ಯೀಕರಣದ ಬಗ್ಗೆ ವಿಶೇಷ ಗಮನಹರಿಸಿ, ನಿರ್ಣಾಯಕ ಮೂಲಸೌಕರ್ಯ, ಮಾರುಕಟ್ಟೆ ಜಾಲ ಇತ್ಯಾದಿಗಳಿಗೆ ಇದು ಒತ್ತು ನೀಡುತ್ತದೆ.