Published on: November 12, 2021
ಬ್ಯಾಟರಿ ವಾಹನದ ಪರೋಕ್ಷ ಮಾಲಿನ್ಯ
ಬ್ಯಾಟರಿ ವಾಹನದ ಪರೋಕ್ಷ ಮಾಲಿನ್ಯ
ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲಿ ಬ್ಯಾಟರಿಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚುತ್ತಿದೆ. ಆದರೆ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಉಷ್ಣ ವಿದ್ಯುತ್ ಸ್ಥಾವರಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಕಾರಣ ಇವಿಗಳಿಂದಲೂ ಹೆಚ್ಚು ವಾಯುಮಾಲಿನ್ಯವಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಬ್ಯಾಟರಿಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚಾಗಲು ಪ್ರಮುಖ ಕಾರಣ
- ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶ ಮತ್ತು ಪೆಟ್ರೋಲ್–ಡೀಸೆಲ್ ವಾಹನಗಳಿಗಿಂತ ಕಡಿಮೆ ವೆಚ್ಚ ಎಂಬುದು ಇವಿಗಳ ಬಳಕೆ ಹೆಚ್ಚಾಗಲು ಪ್ರಮುಖ ಕಾರಣ.
- ಸರ್ಕಾರವೂ ಇವಿಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಇವಿಗಳ ಖರೀದಿಗೆ ಸಹಾಯಧನವನ್ನೂ ನೀಡುತ್ತಿದೆ. ಭಾರತದಲ್ಲಿ ಇವಿಗಳ ಬಳಕೆಯಿಂದ ಪರೋಕ್ಷವಾಗಿ ವಿದ್ಯುತ್ಗೆ ಬೇಡಿಕೆ ಹೆಚ್ಚುತ್ತದೆ. ದೇಶದಲ್ಲಿ ಒಟ್ಟು ಬಳಕೆಯ ಶೇ 60ರಷ್ಟು ವಿದ್ಯುತ್ ಅನ್ನು ಪಳೆಯುಳಿಕೆ ಇಂಧನದಿಂದ (ಕಲ್ಲಿದ್ದಲು, ಡೀಸೆಲ್, ನೈಸರ್ಗಿಕ ಅನಿಲ) ಉತ್ಪಾದಿಸಲಾಗುತ್ತದೆ. ಹೀಗಾಗಿ ವಿದ್ಯುತ್ ಚಾಲಿತ ವಾಹನಗಳು ಚಲಿಸುವಾಗ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುವುದಿಲ್ಲ. ಆದರೆ, ಚಾರ್ಜಿಂಗ್ ಮಾಡಲು ಬಳಸುವ ವಿದ್ಯುತ್ನ ಉತ್ಪಾದನೆ ವೇಳೆ ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ.
ಬ್ಯಾಟರಿ ವಾಹನದ ಪರೋಕ್ಷ ಮಾಲಿನ್ಯ
- ಈಗಿನ ಸ್ಥಿತಿಯಲ್ಲಿ ಭಾರತದಲ್ಲಿ ಇವಿಗಳ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದಿಲ್ಲ. ನವೀಕರಿಸಬಹುದಾದ ಇಂಧನ ಮೂಲಗಳು, ಜಲವಿದ್ಯುತ್ ಮತ್ತು ಅಣು ವಿದ್ಯುತ್ನ ಪ್ರಮಾಣವನ್ನು ಹೆಚ್ಚಿಸಿದರೆ, ಇವಿಗಳಿಂದಾಗುವ ಪರೋಕ್ಷ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು.
- 2070ರ ವೇಳೆಗೆ ಭಾರತವು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಶೇ 99.9ರಷ್ಟು ತಗ್ಗಿಸುವ ಗುರಿ ಹಾಕಿಕೊಂಡಿದೆ. ಅಲ್ಲಿಯವರೆಗೆ ಇವಿ ಚಾರ್ಜಿಂಗ್ ಮಾಡುವಾಗ, ಪರೋಕ್ಷವಾಗಿ ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತಿರುತ್ತದೆ. ಆದರೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾದಂತೆ, ಇವಿಗಳಿಂದಾಗುವ ಪರೋಕ್ಷ ವಾಯುಮಾಲಿನ್ಯದ ಪ್ರಮಾಣವೂ ಕಡಿಮೆಯಾಗುತ್ತದೆ.
ಬ್ಯಾಟರಿಗಳಿಂದಲೂ ಹಾನಿ
- ಇವಿಗಳಲ್ಲಿ ಈಗ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತಿದೆ. ಈ ಸ್ವರೂಪದ ಬ್ಯಾಟರಿಗಳಲ್ಲಿ ಲಿಥಿಯಂ, ನಿಕ್ಕಲ್ ಮತ್ತು ಕೋಬಾಲ್ಟ್ಗಳನ್ನು ಬಳಸಲಾಗುತ್ತದೆ. ಈ ಮೂರು ರಾಸಾಯನಿಕ ವಸ್ತುಗಳು ಭೂಮಿಯಲ್ಲಿ ಖನಿಜ ರೂಪದಲ್ಲಿ ದೊರೆಯುತ್ತವೆ. ವಿಶ್ವದಲ್ಲಿ ಈಗ ಬಳಕೆಯಾಗುತ್ತಿರುವ ಬಹುಪಾಲು ಲಿಥಿಯಂ ಚೀನಾದಿಂದ ಪೂರೈಕೆಯಾಗುತ್ತದೆ.
- ಲಿಥಿಯಂ ಅನ್ನು ಗಣಿಗಳಿಂದ ಹೊರತೆಗೆಯುವಾಗ ವಾತಾವರಣಕ್ಕೆ ಅಪಾಯಕಾರಿ ರಾಸಾಯನಿಕ ವಸ್ತುಗಳು ಬಿಡುಗಡೆಯಾಗುತ್ತವೆ. ವಿಶ್ವದ ಶೇ 70ರಷ್ಟು ಕೋಬಾಲ್ಟ್ ಅನ್ನು ಕಾಂಗೋ ಪೂರೈಸುತ್ತದೆ. ಲಿಥಿಯಂ ಅಯಾನ್ ಬ್ಯಾಟರಿಯಲ್ಲಿ ಇದು ಅತ್ಯಂತ ಪ್ರಮುಖವಾದ ರಾಸಾಯನಿಕ ವಸ್ತು. ಇದನ್ನು ಭೂಮಿಯಿಂದ ಹೊರತೆಗೆಯುವಾಗ ವಿಷಕಾರಿ ರಾಸಾಯನಿಕ ವಸ್ತುಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಈ ಕಾರಣದಿಂದ ಇವಿಗಳ ಬಳಕೆ ಹೆಚ್ಚಿದರೆ, ಪರೋಕ್ಷವಾಗಿ ಪರಿಸರಕ್ಕೆ ಹಾನಿಯಾಗುತ್ತದೆ.
- ಲಿಥಿಯಂ ಅಯಾನ್ ಬ್ಯಾಟರಿಗಳ ಕಾರ್ಯಕ್ಷಮತೆ ಕುಸಿದಾಗ ಅವನ್ನು ಬದಲಿಸಬೇಕಾಗುತ್ತದೆ. ಹೀಗೆ ಬದಲಿಸಿದ ಹಳೆಯ ಬ್ಯಾಟರಿಗಳಲ್ಲಿ ಮರುಬಳಕೆ ಆಗುತ್ತಿರುವ ಬ್ಯಾಟರಿಗಳ ಪ್ರಮಾಣ ಶೇ 5 ಮಾತ್ರ. ಉಳಿದ ಶೇ 95ರಷ್ಟು ಹಳೆಯ ಬ್ಯಾಟರಿಗಳನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಪರಿಸರಕ್ಕೆ ಅಪಾಯಕಾರಿ ರಾಸಾಯನಿಕ ವಸ್ತುಗಳು ಬಿಡುಗಡೆಯಾಗುತ್ತವೆ.
ಮುಂದಿರುವ ಸವಾಲುಗಳು
- ವಿದ್ಯುತ್ ಉತ್ಪಾದನೆಗೆ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕಿದೆ. ಅಂದರೆ ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರ, ಡೀಸೆಲ್ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರ ಮತ್ತು ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರಗಳ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು.
- ಇದಕ್ಕೆ ಪರ್ಯಾಯವಾಗಿ ಜಲವಿದ್ಯುತ್, ಸೌರವಿದ್ಯುತ್, ಪವನ ವಿದ್ಯುತ್ ಮತ್ತು ಅಣುವಿದ್ಯುತ್ ಸ್ಥಾವರಗಳ ಸಂಖ್ಯೆ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಅಗತ್ಯವಿರುವ ವಿದ್ಯುತ್ನ ಶೇ 100ರಷ್ಟನ್ನೂ ಈ ಮೂಲಗಳಿಂದಲೇ ಪೂರೈಸುವಂತಾದರೆ, ಇವಿಗಳಿಂದಾಗುವ ವಾಯುಮಾಲಿನ್ಯವನ್ನು ಸಂಪೂರ್ಣವಾಗಿ ತಗ್ಗಿಸಲು ಸಾಧ್ಯವಿದೆ. ಆದರೆ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳ ಅವಲಂಬನೆಯನ್ನು ಸಂಪೂರ್ಣವಾಗಿ ತಗ್ಗಿಸಲು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು 2050ರವರೆಗಿನ ಗಡುವು ಹಾಕಿಕೊಂಡಿವೆ.
- ರಷ್ಯಾ 2060, ಭಾರತವು 2070ರಲ್ಲಿ ಈ ಗುರಿಯನ್ನು ಮುಟ್ಟುವ ಪ್ರತಿಜ್ಞೆ ಮಾಡಿವೆ. ಇದಕ್ಕಾಗಿ ಅಪಾರ ಪ್ರಮಾಣದ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಭಾರತವು ಹಾಕಿಕೊಂಡಿರುವ ಗುರಿಯನ್ನು 2070ರ ಒಳಗೆ ಮುಟ್ಟಲು ಸಾಧ್ಯವಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
- ಬ್ಯಾಟರಿಗಳಿಂದಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲೂ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಕಡಿಮೆ ಹಾನಿಕಾರಕ ರಾಸಾಯನಿಕ ವಸ್ತುಗಳ ಸಂಯೋಜನೆಯ ಬ್ಯಾಟರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಿದೆ.
- ಬ್ಯಾಟರಿಗಳ ಮರುಬಳಕೆಯನ್ನು ಉತ್ತೇಜಿಸಬೇಕಿದೆ. ಅಲ್ಲದೆ, ಹಳೆಯ ಬ್ಯಾಟರಿಗಳ ವೈಜ್ಞಾನಿಕ ವಿಲೇವಾರಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ.
- ವಿದ್ಯುತ್ ತಯಾರಿಕೆಯನ್ನು ಇಂಗಾಲಮುಕ್ತಗೊಳಿಸುವ ಹಾಗೂ ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಿದ ಇಂಧನವನ್ನು ದಾಸ್ತಾನು ಮಾಡುವ ಉತ್ತಮ ಮಾರ್ಗಗಳನ್ನು ಕಂಡುಕೊಳ್ಳುವ ಸವಾಲು ವಾಹನ ಉದ್ಯಮದ ಮುಂದಿದೆ.
- ಲಿಥಿಯಂ ಅಯಾನ್ ಬ್ಯಾಟರಿಗಳು ಕೇವಲ 4 ಗಂಟೆಗಳವರೆಗೆ ಪೂರ್ಣ ಸಾಮರ್ಥ್ಯದಲ್ಲಿ ವಿದ್ಯುತ್ ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅಂದರೆ ಹಗಲಿನಲ್ಲಿ ಗಮನಾರ್ಹ ಪ್ರಮಾಣದ ಸೌರ ಮತ್ತು ಪವನ ಶಕ್ತಿಯನ್ನು ಉತ್ಪಾದಿಸುವ ದೇಶಗಳು, ರಾತ್ರಿಯ ವೇಳೆ ಇಂಗಾಲ ಆಧಾರಿತ ವಿದ್ಯುತ್ ಮೂಲಗಳ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿ ಇದೆ.
- ದೇಶಗಳು ಹೊಂದಿರುವ ವಿದ್ಯುತ್ ಉತ್ಪಾದನಾ ಮೂಲಗಳು ಯಾವುವು ಎಂಬುದರ ಮೇಲೆ, ಸಾರಿಗೆಯನ್ನು ಪೂರ್ಣ ವಿದ್ಯುದೀಕರಣಗೊಳಿಸುವ ಅಂಶ ಅವಲಂಬಿತವಾಗಿದೆ. ಇವಿ ಯಶಸ್ವಿಯಾಗಬೇಕಾದರೆ, ಇಂಗಾಲಮುಕ್ತ ವಿದ್ಯುತ್ ಕಾರ್ಯ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು.