Published on: November 1, 2022

ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಸುದ್ದಿಯಲ್ಲಿ ಏಕಿದೆ?

“೨೦೨೧-೨೨ನೇ ಸಾಲಿನ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು  67 ಸಾಧಕರು ಹಾಗೂ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ಆದೇಶಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳನ್ನು 67ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ ಆಯ್ಕೆ ಮಾಡಲಾಗಿದೆ.

ಮುಖ್ಯಾಂಶಗಳು

  • 2022ನೇ ಸಾಲಿನ ಕನ್ನಡ ರಾಜೋತ್ಸವ ಪ್ರಶಸ್ತಿಗೆ ಅರ್ಹ ಮಹನೀಯರನ್ನುಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವವಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಾನಾ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿತ್ತು.
  • ಪ್ರಶಸ್ತಿ: ಪುರಸ್ಕೃತರಿಗೆ ತಲಾ ರೂ. 5 ಲಕ್ಷ ನಗದು, 25 ಗ್ರಾಂ. ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
  • ಈ ಬಾರಿಯ ವಿಶೇಷತೆ: ಹಿರಿಯ ನಾಗರಿಕರಾಗಿರುವ ದೈವನರ್ತಕರಿಗೆ ಕಾಂತಾರ ಸಿನೆಮಾದಿಂದ ಪ್ರಭಾವಗೊಂಡು ಸರ್ಕಾರ ಮಾಸಾಶನವನ್ನು ಘೋಷಿಸಿತ್ತು. ಇದರ ಬೆನ್ನಿಗೇ ಇದೇ ಪ್ರಥಮ ಬಾರಿಗೆ ದೈವನರ್ತಕರೊಬ್ಬರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಆಗಿದ್ದಾರೆ. ಸಿನಿಮಾದ ಮೂಲಕ ದೈವನರ್ತಕರು ಹಾಗೂ ಅವರ ಬದುಕು ದೊಡ್ಡಮಟ್ಟದಲ್ಲಿ ಅನಾವರಣಗೊಂಡಿದ್ದರಿಂದ ರಾಜ್ಯೋತ್ಸವ ಪ್ರಶಸ್ತಿಗೂ ಅವರನ್ನು ಪರಿಗಣಿಸಲಾಗಿದೆ ಎನ್ನಲಾಗಿದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ದೈವನರ್ತಕ ಗುಡ್ಡ ಪಾಣಾರ ಆಯ್ಕೆ ಆಗಿದ್ದಾರೆ.

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ 

ಪ್ರತಿ ವರ್ಷದ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು  (ಈಗಿನ ಕರ್ನಾಟಕ)1956ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.

ಇತಿಹಾಸ

  • ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪ ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.
  • 1956 ರ ನವೆಂಬರ್ 1 ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
  • ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ 1, 1973 ರಂದು “ಕರ್ನಾಟಕ” ಎಂದು ಬದಲಾಯಿತು.
  • ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ