Published on: December 28, 2022

ಚುಟುಕು ಸಮಾಚಾರ – 28 ಡಿಸೆಂಬರ್ 2022

ಚುಟುಕು ಸಮಾಚಾರ – 28 ಡಿಸೆಂಬರ್ 2022

  • ರಾಜ್ಯದಲ್ಲಿ ಆರು ಹೊಸ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯ ಮಸೂದೆಗಳಿಗೆ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬೆಂಗಳೂರಿನಲ್ಲಿ ಸಪ್ತಗಿರಿ ವಿಶ್ವವಿದ್ಯಾಲಯ, ಟಿ.ಜಾನ್‌ ವಿಶ್ವವಿದ್ಯಾಲಯ, ಆಚಾರ್ಯ ವಿಶ್ವವಿದ್ಯಾಲಯ, ರಾಜ್ಯ ಒಕ್ಕಲಿಗರ ಸಂಘದಿಂದ ವಿಶ್ವವಿದ್ಯಾಲಯ, ದಾವಣಗೆರೆಯಲ್ಲಿ ಜಿ.ಎಂ ವಿಶ್ವವಿದ್ಯಾಲಯ, ಬಳ್ಳಾರಿಯಲ್ಲಿ ಕಿಷ್ಕಿಂದಾ ವಿಶ್ವವಿದ್ಯಾಲಯಗಳ ಸ್ಥಾಪನೆಯ ಮಸೂದೆ ಮಂಡನೆಗೆ ಒಪ್ಪಿಗೆ ನೀಡಲಾಗಿದೆ.
  • ಬಂಡೂರು ಕುರಿಗಳ ಸಂರಕ್ಷಣೆಗಾಗಿ ಹರಿಯಾಣದ ಕರ್ನಾಲ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) – ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ‘ತಳಿ ಸಂರಕ್ಷಣೆ ಪ್ರಶಸ್ತಿ’ ಕಾರ್ಯಕ್ರಮದಲ್ಲಿ ಮೈಸೂ ರಿನ   ಯಡಹಳ್ಳಿ ಗ್ರಾಮದ ಯಶೋಧವನ ಗೋಟ್ ಫಾರ್ಮ್‌ನ ಮಾಲೀಕ ಯು.ಕೆ. ಶ್ರೀನಿವಾಸ್ ಆಚಾರ್ಯ ವೈಯಕ್ತಿಕ ವಿಭಾಗದಲ್ಲಿ ಮೂರನೇ ಬಹುಮಾನ ಪಡೆದಿದ್ದಾರೆ.
  • ಗ್ರಾಮಸ್ಥರು ಮತ್ತು ಆನೆಗಳ(ಮಾನವ-ಆನೆ ಸಂಘರ್ಷ) ನಡುವಿನ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆಯ ಚಿಕ್ಕಮಗಳೂರು ವಿಭಾಗ ವಿನೂತನ ಯೋಜನೆ ರೂಪಿಸಿದೆ. ಮೂಡಿಗೆರೆ ತಾಲೂಕಿನ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಕಾಡಾನೆಗಳ ಚಲನವಲನದ ಬಗ್ಗೆ ಎಚ್ಚರಿಕೆ ನೀಡಲು ಡಿಜಿಟಲ್ ಡಿಸ್ಪ್ಲೇ ಬೋರ್ಡ್‌ಗಳನ್ನು ಅಳವಡಿಸಿ ಮತ್ತು ಎಸ್‌ಎಂಎಸ್ ಸೇವೆಯನ್ನು ಪ್ರಾರಂಭಿಸುವ ಮೂಲಕ ತಂತ್ರಜ್ಞಾನದ ಸಹಾಯವನ್ನು ಪಡೆಯಲು ನಿರ್ಧರಿಸಲಾಗಿದೆ.
  • ಅಗ್ನಿಪಥ’ ಯೋಜನೆಯಡಿ ಭಾರತೀಯ ವಾಯುಪಡೆಯಲ್ಲಿ ‘ಅಗ್ನಿವೀರವಾಯು’ ಹುದ್ದೆಗೆ ಆಯ್ಕೆಯಾದ ಮೊದಲ ತಂಡಕ್ಕೆ ತರಬೇತಿ ನೀಡಲು ಸಾಂಬ್ರಾದ ಏರ್‌ಮೆನ್‌ ತರಬೇತಿ ಶಾಲೆ (ಎಟಿಎಸ್‌) ಸನ್ನದ್ಧವಾಗಿದೆ.ಸಾಂಬ್ರಾದ ಏರ್‌ಮೆನ್‌ ತರಬೇತಿ ಶಾಲೆ ‘ಅಗ್ನಿವೀರವಾಯು’ ಹುದ್ದೆಗೆ ಆಯ್ಕೆಯಾದವರಿಗೆ ತರಬೇತಿ ನೀಡುವ ದೇಶದ ಏಕೈಕ ಕೇಂದ್ರವಾಗಿದೆ.
  • ರಾಜಸ್ಥಾನದ ‘ಚೋಖಿ ಧನಿ’ ಮಾದರಿಯಲ್ಲಿ, ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಮಲ್ಲತ್ತಹಳ್ಳಿಯ ಕಲಾಗ್ರಾಮವನ್ನು ಅಭಿವೃದ್ಧಿಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.
  • ಸಶಸ್ತ್ರ ಪಡೆಗಳ ಪಿಂಚಣಿದಾರರು/ಕುಟುಂಬ ಪಿಂಚಣಿದಾರರ ಒನ್ ರ್ಯಾಂ ಕ್ ಒನ್ ಪೆನ್ಶನ್(ಒಆರ್ ಒಪಿ) ಅನ್ನು ಪರಿಷ್ಕರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆ ಜಾರಿಗೆಯಿಂದ 25 ಲಕ್ಷಕ್ಕೂ ಹೆಚ್ಚು ಯೋಧರ ಕುಟುಂಬಗಳಿಗೆ ಸೌಲಭ್ಯ ಸಿಗಲಿದೆ.
  • 2022ರಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ಮಹಾರಾಷ್ಟ್ರದಲ್ಲಿ (3,46,318) ವರದಿಯಾಗಿವೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ. ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ತಮಿಳುನಾಡು (3,30,264) ಮತ್ತು ಆಂಧ್ರಪ್ರದೇಶ (1,69,378) ರಾಜ್ಯಗಳಿವೆ.
  • ಕೆನಡಾದ ಮೊಂಟ್ರಿಯಾಲನಲ್ಲಿ ನಡೆದ ಜೀವವೈವಿಧ್ಯ ಸಂರಕ್ಷಣೆ ಕುರಿತ 15ನೇ ಸಮಾವೇಶವು ಮಹತ್ವದ ಒಪ್ಪಂದದೊಂದಿಗೆ ಅಂತ್ಯಗೊಂಡಿತು. ನಾಲ್ಕು ವರ್ಷಗಳ ಮಾತುಕತೆಯ ನಂತರ ನಿಸರ್ಗ ಮತ್ತು ಪರಿಸರ ವ್ಯವಸ್ಥೆಯನ್ನು ಕಾಪಾಡುವ ಐತಿಹಾಸಿಕ ಒಪ್ಪಂದಕ್ಕೆ 196 ದೇಶಗಳು ಅನುಮೋದನೆ ನೀಡಿವೆ.