Published on: October 15, 2023

ಚುಟುಕು ಸಮಾಚಾರ:13 ಅಕ್ಟೋಬರ್ 2023

ಚುಟುಕು ಸಮಾಚಾರ:13 ಅಕ್ಟೋಬರ್ 2023

  • ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಸಾಧನವನ್ನು ರಾಜ್ಯದ 19 ಜಿಲ್ಲಾಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಜಿಲ್ಲಾಆಸ್ಪತ್ರೆಗಳಲ್ಲಿ ಒಂದು ವರ್ಷಗಳ ಕಾಲ  ಉಚಿತವಾಗಿ ಸೇವೆ ಒದಗಿಸಲು ಆರೋಗ್ಯ ಇಲಾಖೆಯೊಂದಿಗೆ ಅಷ್ಟ್ರಾಜೆನಿಕಾ ಇಂಡಿಯಾ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ.
  • ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ: ಪ್ರಸಕ್ತ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿಗೆ ಬೆಂಗಳೂರಿನ ಪದ್ಮಾಮೂರ್ತಿ ಆಯ್ಕೆಯಾಗಿದ್ದಾರೆ. ಪದ್ಮಾ ಅವರು ಸಂಗೀತಾಭ್ಯಾಸ, ವೀಣಾವಾದನ ಕಲಿತಿದ್ದಾರೆ. ‘ಸಂಗೀತದಲ್ಲಿ ಮನೋವಿಜ್ಞಾನ’ ಕುರಿತು ಪಿಎಚ್.ಡಿ. ಪದವಿ ಪಡೆದಿರುವ ಅವರು ಆಕಾಶವಾಣಿ ಬೆಂಗಳೂರು ಕೇಂದ್ರದ ‘ಬಿ–ಹೈ ’ ಕಲಾವಿದರು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರಾಗಿದ್ದರು. ಮದ್ರಾಸ್ ಸಂಗೀತ ಅಕಾಡೆಮಿ ತಜ್ಞರ ಸಮಿತಿ ಸದಸ್ಯರೂ ಆಗಿದ್ದರು. ‘ಕರ್ನಾಟಕ ಸಂಗೀತ ಲಕ್ಷಣ ಸಂಗ್ರಹ’ ಎಂಬ ಎರಡು ಸಂಪುಟಗಳ ಕೃತಿ ಬರೆದಿದ್ದಾರೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕಲಾಶ್ರೀ ಪ್ರಶಸ್ತಿಯೂ ಅವರಿಗೆ ದೊರೆತಿದೆ. ಪ್ರಶಸ್ತಿ: ರೂ. 5 ಲಕ್ಷ ನಗದು, ಸರಸ್ವತಿ ವಿಗ್ರಹದ ಸ್ಮರಣಿಕೆ ಒಳಗೊಂಡಿದೆ’.
  • ಸಂಜನಾ ಹಿರೇಮಠ : ಹುಬ್ಬಳ್ಳಿಯ ಸಂಜನಾ ಹಿರೇಮಠ ಬೆಂಗಳೂರಿನಲ್ಲಿ ಒಂದು ದಿನದ ಮಟ್ಟಿಗೆ ಬ್ರಿಟಿಷ್ ರಾಯಬಾರಿಯಾಗಿ ಕಾರ್ಯನಿರ್ವಹಿಸಿದರು.   ಪ್ರತೀ ವರ್ಷ ಅಕ್ಟೋಬರ್ 11ರಂದು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನ್ 2017 ರಿಂದ ಪ್ರತಿ ವರ್ಷ ‘ಹೈ ಕಮಿಷನರ್ ಫಾರ್ ಎ ಡೇ'(ಒಂದು ದಿನದ ರಾಯಬಾರಿ) ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಸ್ಪರ್ಧೆಯಲ್ಲಿ 180 ಯುವತಿಯರು ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಸಂಜನಾ ಹಿರೇಮಠ್ ಆಯ್ಕೆಯಾಗಿದ್ದು, ಅವರು ಮಾಧ್ಯಮ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸದ್ಯ ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್‌ನಲ್ಲಿ (LSEG) ಉದ್ಯೋಗಿಯಾಗಿದ್ದಾರೆ.
  • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ವೀರಾಂಗಣ ದುರ್ಗಾವತಿ ಎಂಬ ಹೊಸ ಹುಲಿ ಸಂರಕ್ಷಿತ ಪ್ರದೇಶವನ್ನು ಘೋಷಿಸಿದೆ. ಟೈಗರ್ ಪ್ರಾಜೆಕ್ಟ್ 1973ರ ಅಡಿಯಲ್ಲಿ ಸ್ಥಾಪಿಸಲಾಗಿದೆ ಇದು ಮಧ್ಯಪ್ರದೇಶದಲ್ಲಿದೆ. ಇದು ಈ ರಾಜ್ಯದ ಏಳನೇ ಮತ್ತು ದೇಶದಲ್ಲಿ 54 ನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ.
  • ಕೇರಳದ ಮೊದಲ 3ಡಿ-ಮುದ್ರಿತ ಕಟ್ಟಡ ‘ಅಮೇಜ್ 28’ ತಿರುವನಂತಪುರದ ಪಿಟಿಆರ್ ನಗರದ ನಿರ್ಮಿತಿ ಕೇಂದ್ರದ ಆವಣರಣದಲ್ಲಿನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಿಸಲು ಕೇವಲ 28 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಚೆನೈ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆ ‘ತ್ವಾಸ್ತ’ ಈ ಕಟ್ಟಡವನ್ನು ನಿರ್ಮಾಣದ ಜವಾಬ್ದಾರಿಯನ್ನು ತೆಗೆದುಕೊಂಡಿತ್ತು.
  • ಫೋಬ್ಸ್ ನಿಯತಕಾಲಿಕ ಪ್ರಕಟಿಸಿರುವ 2023ರ ಭಾರತದ 100 ಸಿರಿವಂತರ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಸಂಪತ್ತುಮೌಲ್ಯವು 7.63 ಲಕ್ಷ ಕೋಟಿಗೆ ತಲುಪುವ ಮೂಲಕ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಉದ್ಯಮಿ ಗೌತಮ್ ಅದಾನಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
  • ಏಕತೆ ಮತ್ತು ಜಾಗತಿಕ ಸಹಯೋಗಕ್ಕಿರುವ ಭಾರತದ ಬದ್ಧತೆಯನ್ನು ಬಿಂಬಿಸುವ ಸಲುವಾಗಿ ‘ವಸುಧೈವ ಕುಟುಂಬಕಂ ’ ಎಂಬ ಬರಹವಿರುವ ಫಲಕವನ್ನು ವಿಶ್ವ ಸಂಸ್ಥೆಯಲ್ಲಿರುವ ಭಾರತದ ಕಾಯಂ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿದೆ. ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು (ಐಸಿಸಿಆರ್) ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ಮತ್ತು ವಿಶ್ವ ಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೊಜ್ ಅವರು ಫಲಕವನ್ನು ಅನಾವರಣಗೊಳಿಸಿದರು. ಚಿನ್ನದ ಬಣ್ಣದ ಫಲಕದಲ್ಲಿ ‘ವಸುಧೈವ ಕುಟುಂಬಕಂ ’ ಪದವನ್ನು ಹಿಂದಿಯಲ್ಲಿ ಬರೆಯಲಾಗಿದೆ. ‘ವಿಶ್ವವೇ ಒಂದು ಕುಟುಂಬ’ ಎಂದು ಇಂಗ್ಲಿಷ್ನಲ್ಲೂ ಬರೆಯಲಾಗಿದೆ. 2023 ರ G20 ಯ ಅಧ್ಯಕ್ಷತೆಯನ್ನು ಭಾರತ ವಹಿಸಿತ್ತು.  ಈ  G20 ಯ ಲೋಗೋ ‘ವಸುಧೈವ ಕುಟುಂಬಕಂ’ ಆಗಿತ್ತು ಇದು  ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಎಂಬ ಪ್ರಾಚೀನ ಭಾರತೀಯ ಬುದ್ಧಿವಂತಿಕೆಯನ್ನು ಪುನರುಚ್ಚರಿಸುತ್ತದೆ.
  • ಅಫ್ಗಾನಿಸ್ತಾನ ಎದುರಿನ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ಶ್ರೇಯಕ್ಕೆ ಭಾಜನರಾದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಈವರೆಗೆ ವೆಸ್ಟ್ ಇಂಡೀಸ್ನ ಬ್ಯಾಟರ್ ಕ್ರಿಸ್ ಗೇಲ್ ಅವರ ಹೆಸರಿನಲ್ಲಿತ್ತು.
  • ‘ವರ್ಷದ ವಿಶ್ವ ಶ್ರೇಷ್ಠ ಅಥ್ಲೀಟ್’: ವಿಶ್ವ ಅಥ್ಲೆಟಿಕ್ಸ್ನ ಎಲ್ಲ ಆರು ಖಂಡಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಅಥ್ಲಿಟಿಕ್ ತಜ್ಞರ ಅಂತರರಾಷ್ಟ್ರೀಯ ಸಮಿತಿಯು11 ಕ್ರೀಡಾಪಟುಗಳ ಹೆಸರುಗಳನ್ನು ಅಂತಿಮಗೊಳಿಸಿದೆ. ಅದರಲ್ಲಿ ಭಾರತದ ಶ್ರೇಷ್ಠ ಆಟಗಾರ ನೀರಜ್ ಚೋಪ್ರಾ (ಜಾವೆಲಿನ್ ಥ್ರೋ) ಕೂಡ ನಾಮ ನಿರ್ದೇಶಗೊಂಡಿದ್ದಾರೆ. ಬುಡಾಪೆಸ್ಟ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಸಾಧಿಸಿದ ಅತ್ಯುತ್ತಮ ಪ್ರದರ್ಶನವನ್ನು ಈ ನಾಮನಿರ್ದೇಶನದಲ್ಲಿ ಪರಿಗಣಿಸಲಾಗುತ್ತದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ನೀರಜ್ ಚಿನ್ನ ಸಾಧನೆಮಾಡಿದ್ದರು.
  • ಸದಸ್ಯ ರಾಷ್ಟ್ರ ಉಕ್ರೇನ್ನ ಮೇಲೆ ಆಕ್ರಮಣ ನಡೆಸಿದ್ದಕ್ಕೆ ರಷ್ಯಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ) ಅಮಾನತುಗೊಳಿಸಿದೆ.