Published on: March 3, 2023

ಚುನಾವಣಾ ಆಯೋಗದ ಆಯುಕ್ತರ ನೇಮಕ ಸಮಿತಿ

ಚುನಾವಣಾ ಆಯೋಗದ ಆಯುಕ್ತರ ನೇಮಕ ಸಮಿತಿ


ಸುದ್ದಿಯಲ್ಲಿ ಏಕಿದೆ? ಚುನಾವಣಾ ಆಯೋಗದ ಆಯುಕ್ತರನ್ನು ಹಾಲಿ ಇರುವ ಪ್ರಕ್ರಿಯೆಯಂತೆ ನೇಮಕ ಮಾಡುವಂತಿಲ್ಲ. ಬದಲಾಗಿ ಪ್ರಧಾನಿ, ಸಿಜೆಐ ಮತ್ತು ವಿಪಕ್ಷ ನಾಯಕರನ್ನು ಒಳಗೊಂಡ ಸಮಿತಿ ಶಿಫಾರಸಿನ ಆಧಾರದಲ್ಲಿ ಅವರನ್ನು ನೇಮಿಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.


ಮುಖ್ಯಾಂಶಗಳು

  • ಸಮಿತಿಯು ರಾಷ್ಟ್ರಪತಿ ಅವರಿಗೆ ತಮ್ಮ ಶಿಫಾರಸುಗಳನ್ನು ರವಾನಿಸಲಿದ್ದು, ಸಿಇಸಿ ಮತ್ತು ಇಸಿ ನೇಮಕಾತಿಗೆ ಸಂಬಂಧಿಸಿದ ಆದೇಶವನ್ನು ಅವರು ಹೊರಡಿಸಲಿದ್ದಾರೆ.
  • ಚುನಾವಣಾ ಆಯೋಗದ ಮುಖ್ಯಸ್ಥರ ನೇಮಕಾತಿ ಸಂಬಂಧ ಕಾನೂನು ಜಾರಿಯಾಗುವವರೆಗೂ ಈ ಸಮಿತಿ ಮುಂದುವರಿಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ವೇಳೆ ‘ಚುನಾವಣೆಗಳ ಪರಿಶುದ್ಧತೆಯನ್ನು ಕಾಪಾಡುವ’ ಗುರಿಯನ್ನು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ.
  • ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಸರ್ವಾನುಮತದ ತೀರ್ಪು ನೀಡಿದೆ.
  • ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕರು ಒಂದು ವೇಳೆ ಇಲ್ಲದೇ ಹೋದರೆ, ಸಂಸತ್‌ನ ಅತಿ ದೊಡ್ಡ ವಿರೋಧ ಪಕ್ಷದ ನಾಯಕರು ಸಿಇಸಿ ಮತ್ತು ಇಸಿ ನೇಮಕಾತಿ ಸಮಿತಿಯ ಭಾಗವಾಗಲಿದ್ದಾರೆ ಎಂದು ಪೀಠ ತಿಳಿಸಿದೆ.

ಹಿನ್ನೆಲೆ

  • ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಆಯುಕ್ತರುಗಳ ನೇಮಕಾತಿಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಇರುವಂತೆ ಕೊಲಿಜಿಯಂ ಮಾದರಿ ವ್ಯವಸ್ಥೆಯನ್ನು ಜಾರಿಗೆ ತರುವುದು, ಭಾರತದ ಸಂವಿಧಾನದ 324 (2)ನೇ ವಿಧಿಯನ್ನು ಉಲ್ಲಂಘಿಸಿ ನೇಮಕಾತಿ ಮಾಡುವ ಅಧಿಕಾರ ಮತ್ತು ಸಿಬಿಐ ನಿರ್ದೇಶಕರು ಅಥವಾ ಲೋಕಪಾಲ್ ನೇಮಕಾತಿಗಳ ರೀತಿಯಲ್ಲಿ ಚುನಾವಣಾ ಆಯೋಗವಲ್ಲ. ಆಯೋಗದ ಸದಸ್ಯರನ್ನು ಕೇಂದ್ರವು ಏಕಪಕ್ಷೀಯವಾಗಿ ನೇಮಿಸುತ್ತದೆ. ಆದರೆ ಇದರಲ್ಲಿ ವಿರೋಧ ಪಕ್ಷಗಳ ನಾಯಕರು ಮತ್ತು ನ್ಯಾಯಾಂಗದ ಪಾಲ್ಗೊಳ್ಳುವಿಕೆಯೂ ಅಗತ್ಯವಾಗಿದೆ ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಒಂದುಗೂಡಿಸಿ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿತ್ತು ಈವರೆಗೂ ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಆಯುಕ್ತರನ್ನು ನೇಮಕ ಮಾಡುತ್ತಿತ್ತು. ಕಾನೂನಿನ ನಿಯಮವನ್ನು ಖಾತರಿಪಡಿಸದ ಚುನಾವಣಾ ಆಯೋಗವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಅದರ ವ್ಯಾಪಕವಾದ ಅಧಿಕಾರಗಳಲ್ಲಿ ಕಾನೂನುಬಾಹಿರವಾಗಿ ಅಥವಾ ಅಸಾಂವಿಧಾನಿಕವಾಗಿ ನಡೆದುಕೊಂಡರೆ ಅದು ರಾಜಕೀಯ ಪಕ್ಷಗಳ ಫಲಿತಾಂಶಗಳ ಮೇಲೆ ಪರಿಣಾಮ ಬೀರಲಿದೆ.

ಚುನಾವಣಾ ಆಯೋಗಕ್ಕೆ ಅನುಕೂಲ

  • ಈ ತೀರ್ಪಿನ ಪ್ರಕಾರ, ಚುನಾವಣಾ ಆಯೋಗವು ಸ್ವತಂತ್ರ ಕಾರ್ಯಾಲಯ, ನಿಯಮ ರೂಪಿಸುವ ಅಧಿಕಾರ, ಸ್ವತಂತ್ರ ಆಯವ್ಯಯ ಮತ್ತು ವಾಗ್ದಂಡನೆಯಿಂದ ಸಮಾನ ರಕ್ಷಣೆಯನ್ನು ಕೂಡ ಪಡೆದುಕೊಳ್ಳಲಿದೆ.
  • ಭಾರತೀಯ ಏಕೀಕೃತ ನಿಧಿಯಿಂದ ನೇರವಾಗಿ ಅನುದಾನಗಳನ್ನು ಚುನಾವಣಾ ಆಯೋಗ ಪಡೆದುಕೊಳ್ಳಬಹುದು. ಈಗಿನಂತೆ ಅದು ಅನುದಾನ ಹಾಗೂ ಅನುಮೋದನೆಗಳಿಗಾಗಿ ಪ್ರಧಾನಿ ಕಾರ್ಯಾಲಯ ಮತ್ತು ಕಾನೂನು ಸಚಿವಾಲಯಗಳಿಗೆ ಮನವಿ ಮಾಡುವುದು ಅಗತ್ಯವಿಲ್ಲ.

ಆದೇಶದಲ್ಲೇನಿದೆ?

  • ಚುನಾವಣಾ ಆಯೋಗವು ಸ್ವತಂತ್ರವಾಗಿರಬೇಕು, ರಾಜ್ಯಕ್ಕೆ ಬಾಧ್ಯತೆಯ ಸ್ಥಿತಿಯಲ್ಲಿರುವ ವ್ಯಕ್ತಿಯು ಸ್ವತಂತ್ರ ಮನಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಸ್ವತಂತ್ರ ವ್ಯಕ್ತಿ ಅಧಿಕಾರದಲ್ಲಿರುವವರಿಗೆ ಅಕ್ರಮ ನಡೆಯುವುದಿಲ್ಲ. ಹಲವಾರು ದಶಕಗಳು ಕಳೆದಿವೆ. ಆದರೂ ರಾಜಕೀಯ ಪಕ್ಷಗಳು ಇಸಿಐಗೆ ನೇಮಕಾತಿಗಳನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನನ್ನು ಪರಿಚಯಿಸಿಲ್ಲ ಎಂದು ಆದೇಶದಲ್ಲಿ ಸುಪ್ರೀಂ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಪ್ರಸ್ತುತವಿರುವ ನೇಮಕ ಪ್ರಕ್ರಿಯೆ

  • ಸಂವಿಧಾನದ 324 ನೇ ವಿಧಿಯ 1ನೇ ಉಪವಿಧಿಯನ್ವಯ ಸಂಸತ್ತು ಅಂಗೀಕರಿಸಿದ ಕಾನೂನಿನನ್ವಯ ಮುಖ್ಯ ಚುನಾವಣಾಧಿಕಾರಿ ಹಾಗೂ ಇತರ ಚುನಾವಣಾ ಅಧಿಕಾರಿಗಳನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ಇವರುಗಳ ಜೊತೆಗೆ ಅವಶ್ಯಕ ಇದ್ದರೆ ಚುನಾವಣಾ ಆಯೋಗದೊಡನೆ ಸಮಾಲೋಚಿಸಿ ರಾಷ್ಟ್ರಾಧ್ಯಕ್ಷರು ಪ್ರಾದೇಶಿಕ ಚುನಾವಣಾಧಿಕಾರಿಗಳನ್ನು ನೇಮಿಸುತ್ತಾರೆ ಎಂಬುದಿದ್ದರೂ ಸಹ ಪ್ರಸ್ತುತ ಪ್ರಧಾನಿ ನೀಡುವ ಶಿಫಾರಸಿಗೆ ಅನುಗುಣವಾಗಿ ರಾಷ್ಟ್ರಪತಿಯವರು ಚುನಾವಣಾ ಆಯುಕ್ತರನ್ನು ನೇಮಿಸುವ ವ್ಯವಸ್ಥೆ ಇದೆ.
  • ಆರು ವರ್ಷಗಳ ಅವಧಿಗೆ ಆಯುಕ್ತರನ್ನು ನೇಮಿಸಲಾಗುತ್ತದೆ. ಸಾಮಾನ್ಯವಾಗಿ ನಿವೃತ್ತ ಅಧಿಕಾರಿಗಳನ್ನೇ ಇದಕ್ಕೆ ಪರಿಗಣಿಸಲಾಗುತ್ತದೆ.

ನಿಮಗಿದು ತಿಳಿದಿರಲಿ?

1989 ರ ವರೆಗೂ ಚುನಾವಣಾ ಆಯೋಗವು ಏಕ ಸದಸ್ಯ ಆಯೋಗವಾಗಿಯೇ ಕಾರ್ಯ ನಿರ್ವಹಿಸುತ್ತಿತ್ತು. ಪ್ರಥಮ ಬಾರಿಗೆ ಅಕ್ಟೋಬರನಲ್ಲಿ ಕೇಂದ್ರ ಸರ್ಕಾರವು ಇಬ್ಬರು ಚುನಾವಣಾಧಿಕಾರಿಗಳನ್ನು ನೇಮಕ ಮಾಡಿತು. ಆದರೆ ಅಧಿಕಾರಕ್ಕೆ ಬಂದ ಹೊಸ ಸರ್ಕಾರವು 1990 ರಲ್ಲಿ ಈ ನೇಮಕವನ್ನು ರದ್ದುಗೊಳಿಸಿತು. ನಂತರ ದಿನೇಶ ಗೋಸ್ವಾಮಿ ಸಮಿತಿಯು ಬಹುಸದಸ್ಯ ಆಯೋಗಕ್ಕೆ ಶಿಫಾರಸ್ಸು ಮಾಡಿತು. 1991 ರಲ್ಲಿ ಸುಪ್ರೀಂ ಕೋರ್ಟ್ ಬಹು ಸದಸ್ಯ ಆಯೋಗದ ಅವಶ್ಯಕತೆಯನ್ನು ಸಮ್ಮತಿಸಿತು. ಇವೆಲ್ಲವುಗಳ ಫಲವಾಗಿ 1993ರಲ್ಲಿ ಚುನಾವಣಾ ಆಯೋಗವನ್ನು ಬಹು ಸದಸ್ಯ ಆಯೋಗವನ್ನಾಗಿ ರಚಿಸಲಾಯಿತು