Published on: September 27, 2022

ಚುನಾವಣೆಗೆ ಸ್ಪರ್ಧಿಸುವುದು ವ್ಯಕ್ತಿಯ ಮೂಲಭೂತ ಹಕ್ಕಲ್ಲ

ಚುನಾವಣೆಗೆ ಸ್ಪರ್ಧಿಸುವುದು ವ್ಯಕ್ತಿಯ ಮೂಲಭೂತ ಹಕ್ಕಲ್ಲ

ಸುದ್ದಿಯಲ್ಲಿ ಏಕಿದೆ?

ಚುನಾವಣೆಗೆ ಸ್ಪರ್ಧಿಸುವುದು ವ್ಯಕ್ತಿಯ ಮೂಲಭೂತ ಹಕ್ಕೂ ಅಲ್ಲ, ಕಾನೂನಿನ ಅನ್ವಯ ಸಾಮಾನ್ಯ ಹಕ್ಕೂ ಅಲ್ಲ, ಇದು ಶಾಸನದಿಂದ ನೀಡಲ್ಪಟ್ಟ ಹಕ್ಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮುಖ್ಯಾಂಶಗಳು

 • ‘ನನ್ನ ಹೆಸರನ್ನು ಸೂಚಿಸಲು ಮತ್ತು ಅನುಮೋದಿಸಲು ಯಾರೂ ಇಲ್ಲದ ಕಾರಣದಿಂದಾಗಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದ ನನ್ನ ಮೂಲಭೂತ ಹಕ್ಕುಗಳಾದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗಿದೆ’ ಎಂದು ವ್ಯಕ್ತಿಯೊಬ್ಬರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
 • ಅಲ್ಲಿ ಅರ್ಜಿ ತಿರಸ್ಕೃತವಾದ್ದರಿಂದ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತಾ ಹಾಗೂ ಸುಧಾಂಶು ಧುಲಿಯಾ ಅವರು, ರಾಜ್ಯಸಭೆಗೆ ಸ್ಪರ್ಧಿಸಬೇಕಾದಲ್ಲಿ ಸ್ಪರ್ಧಿಯ ಹೆಸರನ್ನು ಸೂಚಿಸಬೇಕು ಮತ್ತು ಅನುಮೋದಿಸಬೇಕು ಎಂದು ಜನಪ್ರಾತಿನಿಧ್ಯ ಕಾಯ್ದೆ, 1950 ಹಾಗೂ ಚುನಾವಣಾ ನಿಯಮಗಳು, 1961ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.
 • ನಾಲ್ಕು ವಾರಗಳ ಒಳಗಾಗಿ ಸುಪ್ರೀಂ ಕೋರ್ಟ್‌ನ ಕಾನೂನು ನೆರವು ಸಮಿತಿಗೆ ಒಂದು ಲಕ್ಷ ದಂಡ ಕಟ್ಟಬೇಕು ಎಂದೂ ಆದೇಶಿಸಿದ ಸುಪ್ರೀಂ ಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿತು.
 • ಆದ್ದರಿಂದ, 1950ರ ಜನಪ್ರತಿನಿಧಿ ಕಾಯಿದೆ ಹಾಗೂ 1961ರ ಚುನಾವಣಾ ನಿಯಮಾವಳಿ ಅಡಿಯಲ್ಲಿ ಅಭ್ಯರ್ಥಿಯ ಹೆಸರನ್ನು ನಾಮಪತ್ರ ಭರ್ತಿ ಮಾಡುವಾಗ ಸೂಚಿಸಬೇಕಾದದ್ದು ಅವರ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ರಿಟ್‌ ಅರ್ಜಿ ಸಂಪೂರ್ಣ ತಪ್ಪು ಗ್ರಹಿಕೆಗಳಿಂದ ಕೂಡಿದ್ದು, ಹೀಗಾಗಿ ಈಗಿನ ವಿಶೇಷ ಅನುಮತಿ ಅರ್ಜಿ ಕೂಡ ತಪ್ಪಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೂಭೂತ ಹಕ್ಕುಗಳ ಅರ್ಥ :-

 • ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕಾಗಿ ಸಂವಿಧಾನ ನೀಡಿರುವ ಅವಕಾಶಗಳನ್ನು ಮೂಲಭೂತ ಹಕ್ಕುಗಳೆಂದು ಕರೆಯಲಾಗುತ್ತದೆ.

ಮೂಲಭೂತ ಹಕ್ಕುಗಳ ವಿಧಗಳು :

 • ಸಮಾನತೆಯ ಹಕ್ಕು(ವಿಧಿ 14 – 18)
 • ಸ್ವಾತಂತ್ರ್ಯದ ಹಕ್ಕು(ವಿಧಿ 19 – 22)
 • ಶೋಷಣೆಯ ವಿರುದ್ಧದ ಹಕ್ಕು(ವಿಧಿ 23, 24)
 • ಧಾರ್ಮಿಕ ಸ್ವಾತಂತ್ರ್ಯದ ಹಕ್ಕು(ವಿಧಿ 25 – 28)
 • ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು(ವಿಧಿ 29, 30)
 • ಸಂವಿಧಾನಬದ್ಧ ಪರಿಹಾರದ ಹಕ್ಕು(ವಿಧಿ 32 – 35)