Published on: January 23, 2023

ಪರಾಕ್ರಮ್ ದಿವಸ್‌

ಪರಾಕ್ರಮ್ ದಿವಸ್‌


ಸುದ್ದಿಯ್ಲಲಿ ಏಕಿದೆ? ಭಾರತದ ಇತಿಹಾಸಕ್ಕೆ ಅಪ್ರತಿಮ ಕೊಡುಗೆಯನ್ನು ನೀಡಿರುವ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮದಿನ ಹಿನ್ನೆಲೆಯಲ್ಲಿ ನೇತಾಜಿಯವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಗೌರವ ಸಲ್ಲಿಸಿದ್ದಾರೆ.


ಮುಖ್ಯಾಂಶಗಳು

 • ವಸಾಹತುಶಾಹಿ ಆಳ್ವಿಕೆ ವಿರುದ್ಧ ಸುಭಾಷ್ ಚಂದ್ರ ಬೋಸ್ ಅವರ ತೀವ್ರ ಪ್ರತಿರೋಧಕ್ಕಾಗಿ ಅವರನ್ನು ಸದಾ ಸ್ಮರಿಸಲಾಗುತ್ತದೆ.
 • ಭಾರತದಲ್ಲಿ ಜನೆವರಿ 2021 ರಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಪರಾಕ್ರಮ ದಿವಸ್ ಎಂದು ಆಚರಿಸಲಾಗುತ್ತದೆ.
 • ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದೊಡ್ಡ  ದ್ವೀಪಗಳಿಗೆ ನಾಮಕರಣ ಮಾಡುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಆಚರಣೆಯ ಉದ್ದೇಶ :

 • ನೇತಾಜಿ ಅವರ ಜೀವನ, ಕಾರ್ಯವೈಖರಿ, ಅವರು ಕೈಗೊಳ್ಳುತ್ತಿದ್ದ ನಿರ್ಧಾರಗಳು ಸದಾ ಪ್ರೇರಣಾದಾಯಿಯಾಗಿವೆ. ಅವರ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ.

ರಾಸ್ ದ್ವೀಪಗಳು: 

 • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ 2018ರಲ್ಲಿ ರಾಸ್ ದ್ವೀಪಗಳನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ.
 • ನೀಲ್ ದ್ವೀಪ ಮತ್ತು ಹ್ಯಾವ್ಲಾಕ್ ದ್ವೀಪವನ್ನು ಶಹೀದ್ ದ್ವೀಪ ಮತ್ತು ಸ್ವರಾಜ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ.

ಅಂಡಮಾನ್ ಮತ್ತು ನಿಕೋಬಾರ್‌ನ 21 ದ್ವೀಪಗಳಿಗೆ ವೀರರ ಹೆಸರು ನಾಮಕರಣ

 • ಹೆಸರಿಲ್ಲದ  ದ್ವೀಪಗಳಿಗೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲು ಮುಂದಾಗಿದೆ.
 • ಮೇಜರ್ ಸೋಮನಾಥ ಶರ್ಮಾ, ನಾಯಕ್ ಜಾದುನಾಥ್ ಸಿಂಗ್, ಕಂಪನಿ ಹವಾಲ್ದಾರ್ ಮೇಜರ್ ಪೀರು ಸಿಂಗ್, ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ, ಮೇಜರ್ ರಾಮಸ್ವಾಮಿ ಪರಮೇಶ್ವರನ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಮತ್ತು ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಸೇರಿದಂತೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಈ ದ್ವೀಪಗಳಿಗೆ ಇಡಲಾಗುತ್ತದೆ.
 • ಉದ್ದೇಶ: ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅಪ್ರತಿಮ ತ್ಯಾಗ ಮಾಡಿದ ದೇಶದ ವೀರರಿಗೆ ಈ ನಿರ್ಧಾರ ಶಾಶ್ವತ ಗೌರವವಾಗಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್

 • ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖ ಕ್ರಾಂತಿಕಾರಿ ಹೋರಾಟಗಾರರಾಗಿದ್ದರು. ಅವರು ಜನವರಿ 23, 1897ರಂದು ಒರಿಸ್ಸಾದ ಕಟಕ್‌ನಲ್ಲಿ ಜನಿಸಿದರು.
 • ಸುಭಾಷ್ ಚಂದ್ರ ಬೋಸರ ಶಿಕ್ಷಣ ಇಂಗ್ಲೆಂಡ್‌ನಲ್ಲಿ ನಡೆಯಿತು. ಅಲ್ಲಿ ಅವರು ಕೇಂಬ್ರಿಜ್‌ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ನಡೆಸಿ, ಇಂಡಿಯನ್ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಅವರು ಆ‌ ಉನ್ನತ ಹುದ್ದೆಯನ್ನು ತಿರಸ್ಕರಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಭಾರತಕ್ಕೆ ಮರಳಿದರು.
 • ಸುಭಾಷ್ ಚಂದ್ರ ಬೋಸ್ ತನ್ನ ರಾಜಕೀಯ ಜೀವನದ ಆರಂಭದಲ್ಲಿ ಅಹಿಂಸೆ ಮತ್ತು ಶಾಂತಿಯುತ ಪ್ರತಿಭಟನೆಗಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು.
 • ಆದರೆ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಹತ್ತಿಕ್ಕಲು ಬ್ರಿಟಿಷರ ದಮನಕಾರಿ ನೀತಿ ಹೆಚ್ಚಾಗುತ್ತಿದ್ದಂತೆ ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಮಿಲಿಟರಿ ಕಾರ್ಯಾಚರಣೆಯೇ ಸರಿ ಎಂಬ ಅಭಿಪ್ರಾಯ ಹೊಂದಿದರು.
 • ಅವರು ಶಸ್ತ್ರ ಸಜ್ಜಿತ ಹೋರಾಟದಿಂದ ಮಾತ್ರವೇ ಭಾರತ ಬ್ರಿಟಿಷರಿಂದ ಮುಕ್ತಿ ಹೊಂದಲು ಸಾಧ್ಯ ಎಂದು ದೃಢವಾಗಿ ನಂಬಿದ್ದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕ :

 • 1920ರ ದಶಕದ ಕೊನೆಯಲ್ಲಿ ಬೋಸ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕರಾದರು. ಆಗ ಕಾಂಗ್ರೆಸ್ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಪ್ರಮುಖ ರಾಜಕೀಯ ಪಕ್ಷವಾಗಿತ್ತು. ಸುಭಾಷರು ಕ್ಷಿಪ್ರವಾಗಿ ಪಕ್ಷದಲ್ಲಿ ಹಂತ ಹಂತವಾಗಿ ಮೇಲೆ ಬೆಳೆಯುತ್ತಾ ಸಾಗಿದರು. 1938ರಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದರು. ಆದರೆ ಸ್ವಾತಂತ್ರ್ಯಕ್ಕಾಗಿ ಮಿಲಿಟರಿ ಹೋರಾಟ ನಡೆಸಬೇಕೆಂಬ ಅವರ ವಾದ ಕಾಂಗ್ರೆಸ್ ಒಳಗೇ ಭಿನ್ನಾಭಿಪ್ರಾಯ ಮೂಡಿಸಿತು. ಅವರು ಮರುವರ್ಷವೇ ಒತ್ತಾಯಪೂರ್ವಕವಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು.

ಫಾರ್ವರ್ಡ್ ಬ್ಲಾಕ್ ಸ್ಥಾಪನೆ

 • ಅವರು ಫಾರ್ವರ್ಡ್ ಬ್ಲಾಕ್ ಎಂಬ ಸಂಘಟನೆಯನ್ನು ಅದಕ್ಕಾಗಿ ಸ್ಥಾಪಿಸಿದರು. ಫಾರ್ವರ್ಡ್‌ ಬ್ಲಾಕ್ ಭಾರತದಲ್ಲಿದ್ದ ಎಲ್ಲ ಬ್ರಿಟಿಷ್ ವಿರೋಧಿ ಪಡೆಗಳನ್ನು ಒಂದುಗೂಡಿಸುವ ಉದ್ದೇಶ ಹೊಂದಿತ್ತು. ಅದರೊಡನೆ ಸುಭಾಷರು ಬ್ರಿಟಿಷರ ವಿರುದ್ಧ ಹೋರಾಡಲು ಇಂಡಿಯನ್ ನ್ಯಾಷನಲ್ ಆರ್ಮಿ (ಎನ್ಐಎ) ಎಂದೇ ಹೆಸರಾದ ಒಂದು ಮಿಲಿಟರಿ ಪಡೆಯನ್ನು ನಿರ್ಮಿಸಲಾರಂಭಿಸಿದರು.

ಬರ್ಲಿನ್‌ನಲ್ಲಿ ಫ್ರೀ ಇಂಡಿಯಾ ಸೆಂಟರ್ ಮತ್ತು ಇಂಡಿಯನ್ ಲೀಜನ್ ಸ್ಥಾಪನೆ

 • 1941ರಲ್ಲಿ, ಸುಭಾಷ್ ಜರ್ಮನಿಗೆ ತೆರಳಿ, ಅಡಾಲ್ಫ್ ಹಿಟ್ಲರ್ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿಯಾದರು. ಅಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಜರ್ಮನಿಯ ಸಹಕಾರ ಕೇಳಿದ ಸುಭಾಷರಿಗೆ ಜರ್ಮನಿಯಿಂದ ಹಣಕಾಸಿನ ಸಹಾಯ ಮತ್ತು ಮಿಲಿಟರಿ ಸಹಕಾರ ದೊರೆಯಿತು. ಅವರು ಬರ್ಲಿನ್‌ನಲ್ಲಿ ಫ್ರೀ ಇಂಡಿಯಾ ಸೆಂಟರ್ ಮತ್ತು ಇಂಡಿಯನ್ ಲೀಜನ್ ಸ್ಥಾಪಿಸಿದರು. ಇದು ಜರ್ಮನ್ ಸೇನೆಯ ಜೊತೆಗೂಡಿ ಹೋರಾಡುತ್ತಿದ್ದ ಭಾರತೀಯ ಯೋಧರ ಒಂದು ಪಡೆಯಾಗಿತ್ತು.

ಭಾರತದ ತಾತ್ಕಾಲಿಕ ಸರ್ಕಾರ’ :

 • 1942ರಲ್ಲಿ ಅವರು ಜರ್ಮನಿಯಿಂದ ಹೊರಟು, ಜಪಾನ್‌ಗೆ ತೆರಳಿದರು. ಅಲ್ಲಿ ಅವರು ಗಡಿಯಾಚೆಗಿನ ಭಾರತ ಸರ್ಕಾರವನ್ನು ಸ್ಥಾಪಿಸಿದರು. ಅದನ್ನು ‘ಮುಕ್ತ ಭಾರತದ ತಾತ್ಕಾಲಿಕ ಸರ್ಕಾರ’ ಎಂದು ಕರೆದರು. ಅವರು ಜಪಾನಿನಲ್ಲಿ ಐಎನ್ಎಯ ಮರುಸ್ಥಾಪನೆಗಾಗಿ ಪ್ರಯತ್ನ ನಡೆಸಿ, ಅದರ ಸೈನಿಕರಿಗೆ ತರಬೇತಿ ನೀಡಿದರು.
 • 1944ರಲ್ಲಿ ಸುಭಾಷ್ ಚಂದ್ರ ಬೋಸ್ ಮತ್ತು ಐಎನ್ಎ ಬ್ರಿಟಿಷ್ ಆಡಳಿತದ ಭಾರತದ ಮೇಲೆ ದಾಳಿ ನಡೆಸಿದರು. ಆದರೆ ಆ ದಾಳಿ ವಿಫಲವಾಯಿತು. ಐಎನ್ಎ ಸೋಲು ಅನುಭವಿಸಿತು. ಸುಭಾಷ್ ಚಂದ್ರ ಬೋಸ್ ಅವರು 1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಸುನೀಗಿದರು ಎಂದು ನಂಬಲಾಗಿದೆ.