Published on: April 19, 2023

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ

ಸುದ್ದಿಯಲ್ಲಿ ಏಕಿದೆ? ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ (ಪಿಎಂಎಫ್‌ಬಿವೈ) ಯೋಜನೆ ಅನುಷ್ಠಾನದಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ ಎಂದು ಘೋಷಿಸಲಾಗಿದೆ.

ಮುಖ್ಯಾಂಶಗಳು

 • ಸಮ್ಮೇಳನದಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
 • ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕರ್ನಾಟಕ ರಾಜ್ಯವು ಯೋಜನೆಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತ್ತು ಕ್ಲೈಮ್​ಗಳನ್ನು ಸಮಯೋಚಿತವಾಗಿ ಇತ್ಯರ್ಥಪಡಿಸುವ ಮೂಲಕ ದೇಶಕ್ಕೆ ಉದಾಹರಣೆಯಾಗಿದೆ.

ರಾಜ್ಯದಲ್ಲಿ ಯೋಜನೆ ಹೇಗೆ ಅನುಷ್ಟಾನಗೊಳ್ಳುತ್ತಿದೆ?

 • 2018ರಿಂದ 2022ರ ಮೇ 31ರ ವರೆಗೆ ವಿವಿಧ ಕಾರ್ಯಾಚರಣೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ 5.66 ಲಕ್ಷ ರೈತರ 687.4 ಕೋಟಿ ರೂ.ಗಳ ಕ್ಲೇಮ್​ಗಳು ಬಾಕಿ ಉಳಿದಿದ್ದವು. ಇದನ್ನು ಪೂರ್ಣಗೊಳಿಸಲು ರಾಜ್ಯದಾದ್ಯಂತ ಅಭಿಯಾನ ಆರಂಭಿಸಲಾಯಿತು.
 • ಇದೇ ರೀತಿ, 2021 ರಲ್ಲಿ, ಪಿಎಂಎಫ್​ಬಿವೈ ಯೋಜನೆಯಡಿ ರಾಜ್ಯದಲ್ಲಿ 13.35 ಲಕ್ಷ ಹೆಕ್ಟೇರ್ ಪ್ರದೇಶವನ್ನು ವಿಮೆ ಮಾಡಲಾಗಿದೆ ಮತ್ತು 2022 ರಲ್ಲಿ ಇದು 18.94 ಲಕ್ಷ ಹೆಕ್ಟೇರ್​ಗಳಿಗೆ ಏರಿಕೆಯಾಗಿದೆ.
 • ಸಾಮಾನ್ಯ ಸೇವಾ ಕೇಂದ್ರಗಳು ಕಳೆದ 6 ವರ್ಷಗಳಿಂದ ಸಾಲ ಪಡೆಯದ ರೈತರ ನೋಂದಣಿಯಲ್ಲಿ ತೊಡಗಿವೆ. 2022 ರಿಂದ, ರಾಜ್ಯದಲ್ಲಿ ಗ್ರಾಮ-ಒನ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳ ಮೂಲಕ 4.66 ಲಕ್ಷ ರೈತರನ್ನು ನೋಂದಾಯಿಸಲಾಗಿದೆ. ಇದು ಮತ್ತೆ ಸಾಲ ಪಡೆಯದ ರೈತರ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ವಿಮಾ ಉತ್ಪನ್ನವನ್ನು ರೈತರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗಿದೆ.
 • ಇದೇ ರೀತಿ, 2022ರಲ್ಲಿ, ನೈಸರ್ಗಿಕ ವಿಪತ್ತುಗಳಿಂದ ಹಾನಿಗೊಳಗಾದ 5.60 ಲಕ್ಷ ರೈತರಿಗೆ ಈಗಾಗಲೇ ಅದೇ ವರ್ಷದೊಳಗೆ (ಹಿಂದಿನ ವರ್ಷಗಳಲ್ಲಿ ಇದನ್ನು ಮಾಡಲಾಗಿರಲಿಲ್ಲ) ಬೆಳೆ ವಿಮಾ ಕ್ಲೈಮ್​ಗಳನ್ನು ಇತ್ಯರ್ಥಪಡಿಸಲಾಗಿದೆ.
 • ಕರ್ನಾಟಕದಲ್ಲಿ ಶೇ. 100 ರಷ್ಟು ಬೆಳೆ ಕಟಾವು ಪ್ರಯೋಗಗಳನ್ನು ಸಿಸಿಇ ಅಗ್ರಿ ಆಪ್ ಬಳಸಿ ನಡೆಸಲಾಗುತ್ತದೆ.

ಯೋಜನೆಯ ವಿವರ

 • ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು 18 ಫೆಬ್ರವರಿ 2016 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು.
 • ಎಲ್ಲಾ ಮುಂಗಾರು (ಖಾರಿಫ್) ಬೆಳೆಗಳಿಗೆ ರೈತರು ಕೇವಲ 2% ಮತ್ತು ಎಲ್ಲಾ ಹಿಂಗಾರು (ರಬಿ) ಬೆಳೆಗಳಿಗೆ 1.5% ನಷ್ಟು ಏಕರೂಪದ ಪ್ರೀಮಿಯಂ ಇರುತ್ತದೆ. ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳ ಸಂದರ್ಭದಲ್ಲಿ, ರೈತರು ಪಾವತಿಸಬೇಕಾದ ಪ್ರೀಮಿಯಂ ಕೇವಲ 5% ಆಗಿರುತ್ತದೆ.
 • ಅರ್ಹತೆ: ಅರ್ಹ ರೈತರು ಮಾನ್ಯತೆ ಪಡೆದ ಉತ್ಪನ್ನಗಳಲ್ಲಿ ವಿಮಾ ಆಸಕ್ತಿಯನ್ನು ಹೊಂದಿರಬೇಕು. ಸಾಲ ಪಡೆಯದ ರೈತರು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಭೂ ದಾಖಲೆಗಳನ್ನು ಸಲ್ಲಿಸಲು ಜವಾಬ್ದಾರರಾಗಿರುತ್ತಾರೆ – ಹಕ್ಕು ದಾಖಲೆ (ROR), ಭೂ ಸ್ವಾಧೀನ ಪ್ರಮಾಣಪತ್ರ (LPC) ಇತ್ಯಾದಿ.
 • ಉದ್ದೇಶ : ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ –
 1. a) ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ಬೆಳೆ ನಷ್ಟ/ಹಾನಿಯಿಂದ (ತಡೆಗಟ್ಟಲಾಗದ ನೈಸರ್ಗಿಕ ಅಪಾಯಗಳು) ಬಳಲುತ್ತಿರುವ ರೈತರಿಗೆ ಆರ್ಥಿಕ ಬೆಂಬಲವನ್ನು ಒದಗಿಸುವುದು
 2. b) ಕೃಷಿಯಲ್ಲಿ ಅವರ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವುದು
 3. c) ರೈತರ ಆದಾಯವನ್ನು ಸ್ಥಿರಗೊಳಿಸುವುದು
 4. d) ರೈತರಿಗೆ ಪ್ರೋತ್ಸಾಹಿಸುವುದು

ನಿಮಗಿದು ತಿಳಿದಿರಲಿ

 • ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ವಿಶ್ವದ ಮೂರನೇ ಅತಿದೊಡ್ಡ ಬೆಳೆ ವಿಮಾ ಯೋಜನೆಯಾಗಿದೆ. ಪ್ರತಿ ವರ್ಷ ಯೋಜನೆಯಡಿ ಸುಮಾರು 5 ಕೋಟಿ ರೈತರ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಫಸಲ್ ಭೀಮಾ ಯೋಜನೆ ರೈತರನ್ನು ತಲುಪಲು ಮತ್ತು ಕಾರ್ಯಾಚರಣೆಗಳನ್ನು ಹೆಚ್ಚಿಸುವಲ್ಲಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸುತ್ತಿದೆ.
 • ಇತ್ತೀಚೆಗೆ ಪರಿಚಯಿಸಲಾದ ಹವಾಮಾನ ಮಾಹಿತಿ ಮತ್ತು ಸಂಪರ್ಕಜಾಲ ದತ್ತಾಂಶ ವ್ಯವಸ್ಥೆ (WINDS), ತಂತ್ರಜ್ಞಾನದ ಆಧಾರದ ಮೇಲೆ ಇಳುವರಿ ಅಂದಾಜು ವ್ಯವಸ್ಥೆ (YES-Tech), ನೈಜ ಸಮಯದ ವೀಕ್ಷಣೆಗಳ ಸಂಗ್ರಹ ಮತ್ತು ಬೆಳೆಗಳ ಛಾಯಾಚಿತ್ರಗಳು (CROPIC) ಮುಂತಾದ ಕೆಲವು ಕ್ರಮಗಳು ಫಸಲ್ ಭೀಮಾ ಯೋಜನೆಯನ್ನು ಇನ್ನಷ್ಟು ದಕ್ಷತೆ ಮತ್ತು ಪಾರದರ್ಶಕತೆಯಿಂದ ತರಲು ಪರಿಣಾಮಕಾರಿಯಾಗಿದೆ.