Published on: December 26, 2022

ಬಾಂಬ್ ಸೈಕ್ಲೋನ್‌

ಬಾಂಬ್ ಸೈಕ್ಲೋನ್‌

ಸುದ್ದಿಯಲ್ಲಿ  ಏಕಿದೆ? ಅಮೆರಿಕದಲ್ಲಿ ಐತಿಹಾಸಿಕ ಚಳಿ ಚಂಡಮಾರುತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಚಂಡಮಾರುತದ ಕಾರಣದಿಂದ ತಾಪಮಾನದಲ್ಲಿ ಭಾರಿ ಏರಿಳಿತ ಉಂಟಾಗುತ್ತಿದ್ದು ಅಮೇರಿಕ ಸರ್ಕಾರವು ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.

ಮುಖ್ಯಾಂಶಗಳು

  • 14 ಲಕ್ಷಕ್ಕೂ ಹೆಚ್ಚಿನ ಮನೆಗಳು ಮತ್ತು ಉದ್ಯಮಗಳು ಬಾಂಬ್ ಸೈಕ್ಲೋನ್ ಕಾರಣದಿಂದ ತೀವ್ರ ಹೊಡೆತ ಅನುಭವಿಸಿವೆ.
  • ಸಂಪರ್ಕ ಕಡಿತ, ವಿದ್ಯುತ್ ಅಭಾವ ಮತ್ತು ತಾಪಮಾನ ಕುಸಿತದ ಸಂಕಷ್ಟ ಜನರನ್ನು ಕಂಗಾಲಾಗಿಸಿದೆ. ಅಮೆರಿಕದ ಪಶ್ಚಿಮ ರಾಜ್ಯ ಮೊಂಟಾನಾದಲ್ಲಿ ತಾಪಮಾನ -45 ಡಿಗ್ರಿಗೆ ಕುಸಿದಿದೆ.
  • ಚಂಡಮಾರುತದಿಂದಾಗಿ ಎಲ್ಲ ಕೇಂದ್ರ ರಾಜ್ಯಗಳಲ್ಲಿ ಉಷ್ಣಾಂಶ ಭಾರಿ ಕುಸಿತ ಕಂಡಿದೆ.
  • ಡೆಸ್ ಮೋಯಿನ್ಸ್, ಲೋವಾದಂತಹ ಸ್ಥಳಗಳಲ್ಲಿ ತಾಪಮಾನ -37 ಫ್ಯಾರನ್ ಹೀಟ್ ದಾಖಲಾಗಿದೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.

ಚಂಡಮಾರುತ:

  • ಆರ್ಕಿಕ್ಟ್‌ ತೀರದಿಂದ ಬೀಸುತ್ತಿರುವ ಭಾರೀ ಚಳಿಗಾಳಿಯು ಚಂಡಮಾರುತದ ಸ್ವರೂಪ ಪಡೆದುಕೊಂಡು ಅಮೆರಿಕದ ಹಲವು ರಾಜ್ಯಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ. ಕಳೆದ 24 ಗಂಟೆಗಳಲ್ಲಿ ಹಲವು ಪ್ರದೇಶಗಳಲ್ಲಿ 20 ಸೆಂ.ಮೀಗಿಂತ ಹಿಮಪಾತವಾಗಿದೆ.

ಏನಿದು ಬಾಂಬ್ ಸೈಕ್ಲೋನ್?

  • ಸ್ಫೋಟಕ ಸೈಕ್ಲೋಜೀನಿಸಿಸ್ ಸ್ಥಿತಿಯನ್ನು ಬಾಂಬ್ ಸೈಕ್ಲೋನ್ ಎಂದು ಕರೆಯಲಾಗುತ್ತದೆ.
  • ಬೇರೆ ಬೇರೆ ತೂಕದ (ತಣ್ಣನೆಯ, ಒಣ) ಗಾಳಿಯು ಒಂದಾದ ವೇಳೆ ‘ಸೈಕ್ಲೋನ್‌ ಬಾಂಬ್‌’ ಸೃಷ್ಟಿಯಾಗುತ್ತದೆ. ಆದ್ರ್ರ ಗಾಳಿ ಮತ್ತು ಬಿಸಿ ಗಾಳಿ ಒಂದಾದ ವೇಳೆ, ಹಗುರವಾಗಿರುವ ಬಿಸಿ ಗಾಳಿ ಮೇಲೆ ಏರುತ್ತದೆ. ಈ ಮೂಲಕ ಮೋಡದ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಪರಿಣಾಮ ವಾಯುಭಾರ ಕುಸಿತ ಉಂಟಾಗುತ್ತದೆ. ಬಳಿಕ ವಾಯುಭಾರ ಕುಸಿತವಾದ ಪ್ರದೇಶದಲ್ಲಿ ಆದ್ರ್ರ ಗಾಳಿಯು ಸುರಳಿಯಾಕಾರದಲ್ಲಿ ಆ್ಯಂಟಿಕ್ಲಾಕ್‌ ದಿಕ್ಕಿನಲ್ಲಿ ಸುತ್ತಲು ಆರಂಭವಾಗುತ್ತದೆ. ಇದನ್ನೇ ಬಾಂಬ್‌ ಸೈಕ್ಲೋನ್‌ ಅನ್ನುತ್ತಾರೆ.

ಬಾಂಬ್‌ ಹೆಸರೇಕೆ?

  • ವಾಯುಭಾರ ಭಾರಿ ಕುಸಿತವಾದ ಪ್ರದೇಶದಲ್ಲಿ ಸೃಷ್ಟಿಯಾಗುವ ಭಾರಿ ಪ್ರಮಾಣದ ಶಕ್ತಿಯ ಕಾರಣ ಫ್ರೆಡ್‌ ಸ್ಯಾಂಡ​ರ್‍ಸ್ ಮತ್ತು ಜಾನ್‌ ಗೈಕುಮ್‌ ಎಂಬ ವಿಜ್ಞಾನಿಗಳು ಇದಕ್ಕೆ ‘ಬಾಂಬ್‌ ಸೈಕ್ಲೋನ್‌’ ಎಂದು ಮೊದಲ ಬಾರಿಗೆ ಹೆಸರಿಸಿದ್ದಾರೆ.

ಸೈಕ್ಲೋನ್‌ ಬಾಂಬ್‌ ಹೇಗೆ ಸೃಷ್ಟಿಯಾಗುತ್ತದೆ?

  • ವಾತಾವರಣದಲ್ಲಿ ಗಾಳಿಯು ಒತ್ತಡವು 24 ಗಂಟೆಯಲ್ಲಿ ಕನಿಷ್ಠ 24 ಮಿಲಿಬಾರ್‌ನಷ್ಟು ಕಡಿಮೆಯಾದ ವೇಳೆ, ವಾಯುಭಾರ ಮತ್ತಷ್ಟು ಕುಸಿತವಾಗಿ ಚಂಡಮಾರುತವು ಮತ್ತಷ್ಟು ಪ್ರಬಲವಾಗುತ್ತದೆ. ಹೀಗೆ ಅತ್ಯಲ್ಪ ಅವಧಿಯಲ್ಲಿ ವಾತಾವರಣದಲ್ಲಿ ಗಾಳಿಯ ಒತ್ತಡ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿ ಚಂಡಮಾರುತವು ಅತ್ಯುಗ್ರ ಸ್ವರೂಪ ಪಡೆದುಕೊಂಡು ಅನಾಹುತ ಸೃಷ್ಟಿಸುತ್ತದೆ.
  • ಬಾಂಬ್‌ ಸೈಕ್ಲೋನ್‌ನಿಂದಾಗಿ ಚಂಡಮಾರುತ ಇನ್ನಷ್ಟು ವೇಗ ಪಡೆದುಕೊಳ್ಳುತ್ತದೆ, ಭಾರಿ ಪ್ರಮಾಣದ ಹಿಮಪಾತ, ಭಾರೀ ಮಳೆ, ಬಿರುಗಾಳಿ, ಕರಾವಳಿ ಪ್ರದೇಶದಲ್ಲಿ ಪ್ರವಾಹವೂ ಸೃಷ್ಟಿಯಾಗಬಹುದು. ಆದರೆ ಇದು ಬಾಂಬ್‌ ಸೈಕ್ಲೋನ್‌ ಸೃಷ್ಟಿಯಾದ ಪ್ರದೇಶ ಮತ್ತು ಚಂಡಮಾರುತದ ವೇಗವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಗಾಳಿಯು ಮಿಲಿಬಾರ್‌ 1000ದಿಂದ 1050ರವರೆಗೆ ಇರುತ್ತದೆ.