Published on: December 19, 2022

ಭಾರತದ ಪ್ರಥಮ ಡಾರ್ಕ್ ಸ್ಕೈ ಪಾರ್ಕ್

ಭಾರತದ ಪ್ರಥಮ ಡಾರ್ಕ್ ಸ್ಕೈ ಪಾರ್ಕ್

ಸುದ್ದಿಯಲ್ಲಿ ಏಕಿದೆ? ಭಾರತದ ಪ್ರಥಮ ಡಾರ್ಕ್ ಸ್ಕೈ ಪಾರ್ಕ್ ಗಾಢ ಕತ್ತಲು ಇರುವಂತಹ ಹಾಗೂ  ದೀರ್ಘಾವಧಿಯಲ್ಲಿ ಮೋಡಗಳು ಬಾರದಂತಹ ತಾಣಗಳನ್ನು ಸ್ಕೈ ಪಾರ್ಕ್ ನಿರ್ಮಾಣಕ್ಕೆ ಗುರುತಿಸಲಾಗುತ್ತದೆ. ಭಾರತದಲ್ಲಿ ಲಡಾಖ್‌ನ ‘ಹಾನ್ಲೆ’ ಎಂಬ ಪ್ರದೇಶವನ್ನು ಡಾರ್ಕ್‌ ಸ್ಕೈ ಪಾರ್ಕ್‌ಗಾಗಿ ಆಯ್ಕೆ ಮಾಡಲಾಗಿದೆ.

ಮುಖ್ಯಾಂಶಗಳು

 • ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೊಫಿಸಿಕ್ಸ್‌ನ ತಜ್ಞರು ಡಾರ್ಕ್‌ ಸ್ಕೈ ಪಾರ್ಕ್ ಸೌಲಭ್ಯ ಅಭಿವೃದ್ಧಿಪಡಿಸಲು ವೈಜ್ಞಾನಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುತ್ತಿದ್ದಾರೆ.
 • ಈಗಾಗಲೇ ಪ್ರಾಥಮಿಕ ಹಂತದ ಕಾರ್ಯ ಆರಂಭವಾಗಿದ್ದು, ಮಹತ್ವದ ಉಪಕರಣಗಳನ್ನು ಜೋಡಿಸುವ ಕಾರ್ಯವೂ ಚಾಲನೆಯಲ್ಲಿದೆ. ‍ನಂತರ ಪೂರ್ಣ ಪ್ರಮಾಣದ ವೀಕ್ಷಣಾ ಕಾರ್ಯ ಮುಂದುವರೆಯುತ್ತದೆ.
 • ಪ್ರತಿ ರಾತ್ರಿಯೂ ಆಕಾಶಕಾಯಗಳ ವೀಕ್ಷಣೆಗೆ ಅನುಕೂಲವಾಗುವ ಕೆಲ ತಾಣಗಳನ್ನು ಗುರುತಿಸುವ ಮತ್ತು ಅವುಗಳನ್ನು ರಕ್ಷಿಸುವ ಕೆಲಸ ವಿಶ್ವದಾದ್ಯಂತ ನಡೆಯುತ್ತಿದೆ.
 • ಇಂಥದ್ದೊಂದು ಪ್ರದೇಶಗಳನ್ನು ಗುರುತಿಸಲು ಹುಟ್ಟಿಕೊಂಡ ಸಂಸ್ಥೆಯೇ ‘ಅಂತರಾಷ್ಟ್ರೀಯ ಡಾರ್ಕ್ ಸ್ಕೈ ಅಸೋಸಿಯೇಷನ್’.
 • ಈ ಸಂಘಟನೆ  ‘ಇಂಟರ್‌ನ್ಯಾಷನಲ್‌ ಡಾರ್ಕ್ ಸ್ಕೈ ಪಾರ್ಕ್’ ಹೆಸರಿನಲ್ಲಿ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ನಕ್ಷತ್ರಗಳು ಮತ್ತು ಇನ್ನಿತರೆ ಆಕಾಶ ಕಾಯಗಳ ವೀಕ್ಷಿಸುವುದಕ್ಕಾಗಿ ಕೆಲವು ತಾಣಗಳನ್ನು ಗುರುತಿಸಿ, ಸಂರಕ್ಷಿಸಲಾಗಿದೆ.

‘ಅಂತರಾಷ್ಟ್ರೀಯ ಡಾರ್ಕ್ ಸ್ಕೈ ಅಸೋಸಿಯೇಷನ್’

 • ಕೃತಕ ಬೆಳಕಿನ ಆಕರಗಳಿಂದ ಮುಕ್ತವಾದ ಎತ್ತರದ ತಾಣಗಳನ್ನು ಹುಡುಕಿ, ‘ಡಾರ್ಕ್ ಸ್ಕೈ ಪಾರ್ಕ್’ ನಿರ್ಮಿಸುವುದು, ಆ ಮೂಲಕ ಗ್ರಹತಾರೆಗಳ ಅಧ್ಯಯನಕ್ಕೆ ಮುಕ್ತ ವಾತಾವರಣ ಕಲ್ಪಿಸುವುದು ಈ ಅಸೋಸಿಯೇಷನ್‌ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಖಾಸಗಿ ಅಥವಾ ಸಾರ್ವಜನಿಕ ವಲಯದ ಸಂರಕ್ಷಿತ ತಾಣಗಳನ್ನು ಡಾರ್ಕ್ ಸ್ಕೈ ಪಾರ್ಕ್‌ಗೆ‌ ಆಯ್ಕೆ ಮಾಡಲಾಗುತ್ತದೆ.

ಹಾನ್ಲೆಕಣಿವೆ ಪ್ರದೇಶ

 • ಕಣಿವೆ ಪ್ರದೇಶವು ಲಡಖಾನಲ್ಲಿದ್ದು 15,000 ಅಡಿ ಎತ್ತರದಲ್ಲಿದೆ.
 • ಹಾನ್ಲೆಯು ಹಾನ್ಲೆ ನದಿಯ ಕಣಿವೆಯಲ್ಲಿದೆ, ಇದು ಟಿಬೆಟ್‌ನ ಗಡಿಯಲ್ಲಿರುವ ಇಮಿಸ್ ಲಾ ಪಾಸ್ ಬಳಿ ಹುಟ್ಟುತ್ತದೆ ಮತ್ತು ನೋವಿ ಮತ್ತು ಲೋಮಾ ಬಳಿ ಸಿಂಧೂ ನದಿಯನ್ನು ಸೇರುತ್ತದೆ.
 • ಹಾನ್ಲೆಯಲ್ಲಿ ಈಗಾಗಲೇ ಭಾರತೀಯ ಖಗೋಳ ವೀಕ್ಷಣಾಲಯ ಸಂಕೀರ್ಣವಿದ್ದು, ಇದನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ನಿರ್ವಹಿಸುತ್ತಿದೆ.
 • ಇದೇ ಹಾನ್ಲೆಯಲ್ಲಿ ಬಹುದೊಡ್ಡ ಟೆಲಿಸ್ಕೋಪ್‌ವೊಂದನ್ನು ಅಳವಡಿಸಲಾಗಿದ್ದು, ಇದರ ಮೂಲಕ ಖಗೋಳ ವಿಜ್ಞಾನಿಗಳು ಎಕ್ಸೋಪ್ಲಾನೆಟ್‌ಗಳು, ಗೆಲಕ್ಸಿಗಳು ಮತ್ತು ನಕ್ಷತ್ರಗಳನ್ನು ಅಧ್ಯಯನ ಮಾಡುತ್ತಿದ್ದಾರೆ.

ಲಡಾಖ್‌ ಅನ್ನು ಏಕೆ ಆಯ್ಕೆ ಮಾಡಲಾಗಿದೆ? 

 • ಹಾನ್ಲೆ ಡಾರ್ಕ್ ಸ್ಕೈ ರಿಸರ್ವ್ ತಾಣವು ಚಾಂಗ್ತಾಂಗ್‌ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿದೆ. ಲಡಾಖ್ ಸಮುದ್ರ ಮಟ್ಟದಿಂದ ಸುಮಾರು 4500 ಮೀಟರ್ ಎತ್ತರವಾಗಿದ್ದು, ಪರ್ವತ ಪ್ರದೇಶಗಳೊಂದಿಗೆ ಇರುವ ಒಂದು ವಿಶಿಷ್ಟವಾದ ಶೀತ ಪ್ರದೇಶವಾಗಿದೆ.
 • ಇಲ್ಲಿ ನಿಂತು 180 ಡಿಗ್ರಿ ಕೋನದಿಂದ ಆಕಾಶವನ್ನು ವೀಕ್ಷಿಸಬಹುದಾಗಿದೆ.
 • ದೀರ್ಘ ಮತ್ತು ಕಠಿಣವಾದ ಚಳಿಗಾಲದ ತಾಣವಾಗಿರುವ ಇಲ್ಲಿ ಕನಿಷ್ಠ ತಾಪಮಾನ ಮೈನಸ್ 40 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ.
 • ಇಲ್ಲಿ ಸೀಮಿತ ಸಸ್ಯವರ್ಗ, ಎತ್ತರದ ಪ್ರದೇಶಗಳು ಮತ್ತು ವಿರಳ ಜನಸಂಖ್ಯೆಯೊಂದಿಗೆ ವಿಸ್ತಾರವಾದ ಪ್ರದೇಶಗಳಿವೆ.
 • ಇವೆಲ್ಲವೂ ದೀರ್ಘಾವಧಿಯ ಖಗೋಳ ವೀಕ್ಷಣಾಲಯ ಮತ್ತು ಗಾಢವಾದ ಆಕಾಶದ ಸ್ಥಳಗಳಿಗೆ ಪರಿಪೂರ್ಣವಾಗಿ ಹೊಂದಾಣಿಕೆಯಾಗುತ್ತವೆ.
 • ಇನ್ನೊಂದು ವಿಶೇಷ ಏನೆಂದರೆ ಇದು ಮೋಡರಹಿತ ಆಕಾಶ ಮತ್ತು ಕಡಿಮೆ ವಾತಾವರಣದ ನೀರಿನ ಆವಿಯನ್ನು ಹೊಂದಿದ್ದು ಆಪ್ಟಿಕಲ್, ಇನ್ಫ್ರಾರೆಡ್ ಮತ್ತು ಗಾಮಾ ಕಿರಣಗಳ ದೂರದರ್ಶಕಗಳಿಗಾಗಿ ವಿಶ್ವದ ಅತಿ ಎತ್ತರದ ತಾಣಗಳಲ್ಲಿ ಒಂದಾಗಿದೆ.