Published on: February 6, 2023

‘ಲಂಟಾನ ಕಮರಾ’

‘ಲಂಟಾನ ಕಮರಾ’


ಸುದ್ದಿಯಲ್ಲಿ ಏಕಿದೆ? ಚಾಮರಾಜನಗರದ ಬುಡಕಟ್ಟು ಕುಟುಂಬಗಳು ಈ ಲಂಟಾನ ಗಿಡಗಳಿಂದ ಪೀಠೋಪಕರಣಗಳು, ಬುಟ್ಟಿಗಳು, ಟೇಬಲ್‌ಗಳು, ಬುಕ್‌ಸ್ಟ್ಯಾಂಡ್‌ಗಳು, ಕೀ ಹೋಲ್ಡರ್‌ಗಳು ಇತ್ಯಾದಿಗಳನ್ನು ತಯಾರಿಸುತ್ತಿದ್ದು, ಜೀವನೋಪಾಯವನ್ನೇ ಇದೀಗ ಜೀವನಾಧಾರವಾಗಿ ಮಾಡಿಕೊಂಡಿದ್ದಾರೆ.


ಮುಖ್ಯಾಂಶಗಳು

 • ರಾಜ್ಯದ ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ ಮತ್ತು ಸಾಮಾಜಿಕ ಅರಣ್ಯಗಳನ್ನು ಲಂಟಾನ ಕಮರಾ ಎಂಬ ಕಳೆ ಗಿಡ ಆವರಿಸಿಕೊಳ್ಳುತ್ತಿದ್ದು, ಕೆಲವು ಅರಣ್ಯಗಳಂತೂ ‘ಲಂಟಾನ ಕಾಡು’ಗಳಾಗಿ ರೂಪಾಂತರಗೊಂಡಿವೆ.
 • ಇದೊಂದು ಮುಳ್ಳಿನ ಕಳೆ ಗಿಡವಾಗಿದ್ದು, ಎಲ್ಲಿ ಈ ಗಿಡ ಬೆಳೆಯುತ್ತದೆಯೋ ಆ ಪ್ರದೇಶದಲ್ಲಿ ಇತರೆ ಸಸ್ಯಗಳು ಬೆಳೆಯಲು ಈ ಗಿಡ ಅವಕಾಶ ನೀಡುವುದಿಲ್ಲ. ಹೀಗಾಗಿಯೇ ಇದು ಅರಣ್ಯಕ್ಕೆ ಮಾರಕವೆಂದು ಹೇಳಲಾಗುತ್ತದೆ.
 • ಅರಣ್ಯಕ್ಕೆ ಮಾರಕವಾಗಿರುವ ಲಂಟಾನ ಇದೀಗ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (ಬಿಟಿಆರ್) ಸಮೀಪದ ಕಣಿಯನಪುರ ಕಾಲೋನಿಯ ಬುಡಕಟ್ಟು ಕುಟುಂಬಗಳ ಬಾಳಿಗೆ ಬೆಳಕಾಗಿದೆ.

ಬುಡಕಟ್ಟು ಜನರಿಗೆ ಹೇಗೆ ಉಪಯುಕ್ತ?

 • ಈ ಬುಡಕಟ್ಟು ವಸಾಹತು ಪ್ರದೇಶದ ಮಹಿಳೆಯರು ಬಂಡೀಪುರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಲಂಟಾನಾದಿಂದ ತಯಾರಿಸಿದ ಪೀಠೋಪಕರಣಗಳು ಮತ್ತು ಇತರೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರೊಂದಿಗೆ ಪರೋಕ್ಷವಾಗಿ ಅರಣ್ಯ ಇಲಾಖೆಗೂ ಸಹಾಯ ಮಾಡುತ್ತಿರುವ ಈ ಬುಡಕಟ್ಟು ಕುಟುಂಬಗಳು, ತಮ್ಮ ಆದಾಯ ಮೂಲವನ್ನೂ ಕಂಡುಕೊಂಡಿದ್ದಾರೆ.
 • ಪೀಠೋಪಕಣಗಳ ಸಿದ್ಧಪಡಿಸಲು ತರಬೇತಿ ಪಡೆದಿದ್ದು, ಉತ್ತಮ ಜೀವನ ನಡೆಸಲು ಯೋಗ್ಯಹಣವನ್ನು ಗಳಿಸಲು ಲಂಟಾನ ಭರವಸೆಯಾಗಿ ಮಾರ್ಪಟ್ಟಿದೆ.

ತರಬೇತಿ :

 • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪಕ್ಕದಲ್ಲಿರುವ ಮತ್ತು ಗುಂಡ್ಲುಪೇಟೆ ಪಟ್ಟಣದಿಂದ 25 ಕಿಮೀ ದೂರದಲ್ಲಿರುವ ಮಂಗಲ ಗ್ರಾಮ ಪಂಚಾಯಿತಿಯ ಸುಮಾರು 300 ಮಹಿಳೆಯರು ಲಂಟಾನದಿಂದ ಕರಕುಶಲ ಮತ್ತು ಪೀಠೋಪಕರಣಗಳನ್ನು ತಯಾರಿಸುವ ತರಬೇತಿ ಪಡೆದುಕೊಂಡಿದ್ದಾರೆ.
 • ಚಾಮರಾಜನಗರ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಮತ್ತು ಪ್ರಧಾನ ಮಂತ್ರಿ ವನ್ ಧನ್ (ಪಿಎಂವಿಡಿ) ಯೋಜನೆಯಡಿಯಲ್ಲಿ ಬುಡಕಟ್ಟು ಜನಾಂಗದವರಿಗೆ ತರಬೇತಿ ನೀಡಲು ಆರ್ಥಿಕ ನೆರವು ಒದಗಿಸಲಾಗುತ್ತಿದೆ.
 • ಎನ್‌ಜಿಒ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್‌ಮೆಂಟ್ (ಎಟಿಆರ್‌ಇಇ) ಬುಡಕಟ್ಟು ಜನರಿಗೆ ಕರಕುಶಲ ತರಬೇತಿಯನ್ನು ನೀಡಿದ್ದು, ಕಣಿಯನಪುರ ಕಾಲೋನಿಯಲ್ಲಿ ಸ್ಥಾಪಿಸಲಾದ ಪಿಎಂವಿಡಿ ಘಟಕದಲ್ಲಿ 40 ದಿನಗಳ ಕಾಲ ನಡೆದ ಈ ತರಬೇತಿಯನ್ನು ನೀಡಲಾಯಿತು.

ತಯಾರಿಸಲಾಗುವ ವಸ್ತುಗಳು : ಲಂಟಾನದಿಂದ ಬುಟ್ಟಿಗಳು, ಟೇಬಲ್‌ಗಳು, ಬುಕ್‌ಸ್ಟ್ಯಾಂಡ್‌ಗಳು, ಕೀ ಹೋಲ್ಡರ್‌ಗಳು, ಪಂಜರಗಳು, ಟ್ರೇಗಳು, ಹಣ್ಣಿನ ಬುಟ್ಟಿಗಳನ್ನು ಸಿದ್ಧಪಡಿಸುತ್ತಿದ್ದಾರೆ.

ವನ ಸಖಿ : ಘಟಕದಲ್ಲಿ ಒಬ್ಬ ಬುಡಕಟ್ಟು ಮಹಿಳೆಯನ್ನು ವನ ಸಖಿಯಾಗಿ ನೇಮಿಸಲಾಗಿದೆ, ಅವರು ಘಟಕದ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ”ಜಿಲ್ಲಾ ಪಂಚಾಯತ್ ವನ ಸಖಿ ಸೇವೆಗಾಗಿ ಗೌರವಧನ ನೀಡುತ್ತದೆ. lantanasalecraft.com ನಲ್ಲಿ ಉಲ್ಲೇಖಿಸಲಾದ ಬೆಲೆಗಳ ಆಧಾರದ ಮೇಲೆ ಪೀಠೋಪಕರಣಗಳು ಮತ್ತು ಕರಕುಶಲ ವಸ್ತುಗಳ ದರಗಳನ್ನು ನಿಗದಿಪಡಿಸಲಾಗಿದೆ.

ಲಂಟಾನ ಕಮರಾ ಪರಿಚಯ

 • ಲಂಟಾನದ ಮೂಲ ಮೆಕ್ಸಿಕೊ ಆಗಿದೆ.1820ರ ಸುಮಾರಿಗೆ ಕೋಲ್ಕತಾಕ್ಕೆ ಅಲಂಕಾರಿಕ ಹೂವಿನ ಗಿಡದ ರೂಪದಲ್ಲಿ ಕಾಲಿಟ್ಟಿತು.
 • ಉಲ್ಲೇಖನೀಯ ಅಂಶ ಎಂದರೆ, ಲಂಟಾನ ಇವತ್ತು ಅತಿ ಹೆಚ್ಚು ಇರುವುದು ದಕ್ಷಿಣ ಭಾರತದಲ್ಲಿ; ಅದೂ ಕರ್ನಾಟಕದ ಕಾಡುಗಳಲ್ಲಿ. ಜೊತೆಗೆ, ನಮ್ಮ ಕೃಷಿ ಭೂಮಿಯನ್ನೂ ಆವರಿಸಿಕೊಂಡಿದೆ.
 • ಗ್ರಾಮೀಣ ಭಾಗದಲ್ಲಿ ಇದನ್ನು ಜಿಡ್ಡಿ ಗಿಡ ಇಲ್ಲವೇ ರೋಜವಾಳ ಎಂದು ಕರೆಯುತ್ತಾರೆ.
 • ಬಳ್ಳಿಯಂತೆ, ಪೊದೆ ರೂಪದಲ್ಲಿ ಹಬ್ಬುವ ಲಂಟಾನಾವನ್ನು ರೈತರು ‘ಮುಳ್ಳಿನ ಬೇಲಿ’ಯಾಗಿ ಬಳಕೆ ಮಾಡುವುದುಂಟು.
 • ನೀರಿಲ್ಲದೆ, ಯಾವುದೇ ಪರಿಸರದಲ್ಲೂ ಈ ಲಂಟಾನಾ ಚಿಗುರೊಡೆಯುತ್ತದೆ.

ಅರಣ್ಯಕ್ಕೆ ಲಂಟಾನ ಕಮರಾ  ಅಪಾಯಕಾರಿ ಏಕೆ?

 • ಸುಟ್ಟರೆ ಸಾಯದ, ಪ್ರಾಣಿಗಳಿಗೆ ಆಹಾರವಲ್ಲದ ಮತ್ತು ಇತರ ಸಸ್ಯ, ಗಿಡಗಳು ಬೆಳೆಯದಂತೆ ಜೈವಿಕ ಸಮತೋಲನಕ್ಕೆ ಹೊಡೆತ ನೀಡುತ್ತಿರುವ ಲಂಟಾನಾ, ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾಡಿನಲ್ಲಿ ಪ್ರಾಣಿಗಳ ಮೇವಿನ ಕೊರತೆಗೂ ಇದು ಮೂಲವಾಗಿದೆ.
 • ಎಲ್ಲಿ ಲಂಟಾನಾ ಸಸ್ಯ ಬೆಳೆದಿರುತ್ತವೆಯೋ ಅಲ್ಲಿ ಕಾಡು ಪ್ರಾಣಿಗಳು ತೂರಲು ಸಾಧ್ಯವಾಗುವುದಿಲ್ಲ.
 • ಈ ಲಂಟಾನಾ ಹೆಚ್ಚಾಗಿರುವ ಕಡೆ ಕಾಡ್ಗಿಚ್ಚು ಹಬ್ಬುವ ಆತಂಕವೂ ಜಾಸ್ತಿ.
 • ಲಂಟಾನವನ್ನು ನಾಶ ಮಾಡಲು ಸಾಧ್ಯವಿಲ್ಲ. ಬದಲಿಗೆ ನಿಯಂತ್ರಿಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಬುಡಕಟ್ಟು ಜನರು ಅರಣ್ಯ ಇಲಾಖೆಗೆ ಪರೋಕ್ಷವಾಗಿ ನೆರವಾಗಿದ್ದಾರೆ