Published on: November 29, 2022

ವಿಶ್ವಸಂಸ್ಥೆಯ ಭದ್ರತಾ ಮಂಡಳಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ

ಸುದ್ದಿಯಲ್ಲಿ ಏಕಿದೆ?

ಭಾರತ ಡಿ. 1ರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುತ್ತಿದ್ದು, ಭಯೋತ್ಪಾದನೆ ನಿಗ್ರಹ ಮತ್ತು ಬಹುಪಕ್ಷೀಯ ಸಂಬಂಧಗಳ ಸುಧಾರಣೆಯು ದೇಶದ ಆದ್ಯತೆಯಾಗಿರಲಿದೆ ಎಂದು ಭಾರತದ ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ತಿಳಿಸಿದ್ದಾರೆ.

ಮುಖ್ಯಾಂಶಗಳು

 • ಭಾರತದ ಒಂದು ತಿಂಗಳ ಅಧಿಕಾರಾವಧಿ ಡಿ.31ಕ್ಕೆ ಮುಕ್ತಾಯವಾಗಲಿದೆ.
 • ಇದಕ್ಕೂ ಮೊದಲು 2021 ಆಗಸ್ಟ್‌ನಲ್ಲಿ ಭಾರತ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿತ್ತು.
 • ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿ ಭಾರತದ ಎರಡು ವರ್ಷದ ಅಧಿಕಾರಾವಧಿಯು ಮುಕ್ತಾಯದ ಹಂತದಲ್ಲಿದೆ.
 • 15 ರಾಷ್ಟ್ರಗಳು ಮಂಡಳಿಯ ಸದಸ್ಯತ್ವ ಹೊಂದಿವೆ. ಇಂಗ್ಲಿಷ್‌ ವರ್ಣಮಾಲೆಯ ಪ್ರಕಾರ ಆಯಾ ದೇಶಗಳಿಗೆ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಒಂದು ತಿಂಗಳ ಅವಧಿಗೆ ಕಾರ್ಯನಿರ್ವಹಿಸುವ ಅವಕಾಶ ನೀಡಲಾಗುತ್ತದೆ.
 • ಮಹಾತ್ಮ ಗಾಂಧಿ ಪುತ್ಥಳಿ ಲೋಕಾರ್ಪಣೆ: ಅಧಿಕಾರಾವಧಿ ಸ್ಮರಣಾರ್ಥ ಮಹಾತ್ಮ ಗಾಂಧಿ ಅವರ ಪುತ್ಥಳಿಯನ್ನು ಭಾರತ ವಿಶ್ವಸಂಸ್ಥೆಗೆ ಉಡುಗೊರೆಯಾಗಿ ನೀಡಲಿದೆ. ಡಿ.14ರಂದು ಪುತ್ಥಳಿ ಅನಾವರಣಗೊಳ್ಳಲಿದೆ. ಇದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾಗುತ್ತಿರುವ ಮಹಾತ್ಮ ಅವರ ಮೊದಲ ಶಿಲ್ಪ. ಗುಜರಾತಿನ ‘ಏಕತಾ ಪ್ರತಿಮೆ’ಯ ಶಿಲ್ಪಿ ಪದ್ಮಶ್ರೀ ಪುರಸ್ಕೃತ ರಾಮ್‌ ಸುತಾರ್‌ ಅವರು ಈ ಪುತ್ಥಳಿ ನಿರ್ಮಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ 

 • ವಿಶ್ವಸಂಸ್ಥೆಯ ಪ್ರಧಾನ ಅಂಗಸಂಸ್ಥೆಗಳಲ್ಲಿ ಭದ್ರತಾ ಮಂಡಳಿ ಬಹಳ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಅಂಗಸಂಸ್ಥೆಯಾಗಿದೆ.
 • ಭದ್ರತಾ ಮಂಡಳಿಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 15 (ಖಾಯಂ 5 ರಾಷ್ಟ್ರಗಳು + ಖಾಯಂ ಅಲ್ಲದ 10 ರಾಷ್ಟ್ರಗಳು) ಅಮೆರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ ದೇಶಗಳು ಖಾಯಂ ಸದಸ್ಯರಾಷ್ಟ್ರಗಳಾಗಿವೆ.
 • ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳನ್ನು ವಿಶ್ವಸಂಸ್ಥೆಯ ಸಾಮಾನ್ಯಸಭೆ 02 ವರ್ಷಗಳ ಕಾಲವಧಿಗೆ ಚುನಾಯಿಸುತ್ತದೆ.2021 ಜನವರಿ 1ರಿಂದ 2022 ಡಿಸೆಂಬರ್ 31ರವರೆಗಿನ ಎರಡು ವರ್ಷಗಳ ಅವಧಿಗೆ ಏಷ್ಯಾ ಫೆಸಿಪಿಕ್ ಪ್ರದೇಶದಿಂದ ಭಾರತವು ವಿಶ್ವಸಂಸ್ಥೆಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುತ್ತದೆ.
 • 1950-51ರಲ್ಲಿ ಭಾರತವು ಭದ್ರತಾ ಮಂಡಳಿಯ ತಾತ್ಕಾಲಿಕ ಅವಧಿಯ ಸದಸ್ಯತ್ವವನ್ನು ಮೊದಲ ಬಾರಿಗೆ ಪಡೆದುಕೊಂಡಿತ್ತು.
 • 2021-22 ನೇ ಅವಧಿಯು ಸೇರಿದರೆ ಭಾರತವು ಒಟ್ಟು 08 ಬಾರಿ ಈ ತಾತ್ಕಾಲಿಕ ಅವಧಿಯ ಸದಸ್ಯತ್ವವನ್ನು ಪಡೆದಿರುತ್ತದೆ.
 • ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ)ಯು ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಸಂಸ್ಥೆಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆಗಾಗಿ ಇದನ್ನು ಸ್ಥಾಪಿಸಲಾಗಿದೆ. ತನ್ನ ಸದಸ್ಯ ರಾಷ್ಟ್ರಗಳ ಸಮಸ್ಯೆಗಳ ಕುರಿತು ತೀರ್ಮಾನ ನೀಡಲು ಇರುವ ವಿಶ್ವಸಂಸ್ಥೆಯ ಏಕೈಕ ಅಂಗಸಂಸ್ಥೆಯಾಗಿದೆ. ಭದ್ರತಾ ಮಂಡಳಿಯ ಮೊದಲ ಸಭೆಯು 1946ರ ಜನವರಿ 17ರಂದು ನಡೆದಿತ್ತು.

ಇತಿಹಾಸವೇನು?

 • ವಿಶ್ವಸಂಸ್ಥೆ ರಚನೆಯಾಗುವ ಮುನ್ನ ರಾಷ್ಟ್ರ ರಾಷ್ಟ್ರಗಳ ನಡುವಿನ ವ್ಯಾಜ್ಯಗಳನ್ನು ಬಗೆಹರಿಸಲು ‘ಇಂಟರ್‌ನ್ಯಾಷನಲ್‌ ಕಮಿಟಿ ಆಫ್‌ ದಿ ರೆಡ್‌ ಕ್ರಾಸ್‌‘ ಮತ್ತು ‘ಹ್ಯೂಗ್‌ ಕನ್ವೆಂನ್ಸನ್‌ ಆಫ್‌ 1899 ಆ್ಯಂಡ್‌ 1907’ ಎಂಬ ಸಂಘಟನೆಗಳಿದ್ದವು.
 • 1ನೇ ವಿಶ್ವಯುದ್ಧದ ಬಳಿಕ ಭಾರೀ ಪ್ರಮಾಣದಲ್ಲಿ ಜನರ ಪ್ರಾಣ, ಆಸ್ತಿ ಹಾನಿಯಾದ ಬಳಿಕ ರಾಷ್ಟ್ರಗಳ ನಡುವೆ ಸಾಮರಸ್ಯಕ್ಕಾಗಿ ಪ್ಯಾರೀಸ್‌ ಶಾಂತಿ ಸಭೆ ನಡೆಸಲಾಯಿತು. ಹಲವು ದೇಶಗಳ ಜಗಳವನ್ನು ಬಗೆಹರಿಸುವಲ್ಲಿ ಇದು ಯಶಸ್ವಿಯಾಯಿತು. ಮಂಚೂರಿಯದ ಜಪಾನಿಯರ ಆಕ್ರಮಣ(1931), ಎರಡನೇ ಇಟಲಿ-ಯುಥಿಯೊಪಿಯಾ ಯುದ್ಧ (1935), ಎರಡನೇ ಮಹಾಯುದ್ಧಕ್ಕೆ ನಾಂದಿಯಾದ ನಾಝಿ ಯುದ್ಧ ಇತ್ಯಾದಿಗಳನ್ನು ಬಗೆಹರಿಸಲು ಈ ಲೀಗ್‌ ವಿಫಲವಾಯಿತು.
 • ಇದು ಭದ್ರತಾ ಮಂಡಳಿ ಆರಂಭಕ್ಕೆ ನಾಂದಿಯಾಯಿತು.

ಕಾಯಂ ಸದಸ್ಯ ರಾಷ್ಟ್ರಗಳು

 • ಚೀನಾ, ಫ್ರಾನ್ಸ್‌, ರಷ್ಯಾ ಫೆಡರೇಷನ್‌, ಇಂಗ್ಲೆಂಡ್‌ ಮತ್ತು ಅಮೆರಿಕ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾಗಿವೆ. 10 ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳಿವೆ. 60ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಇನ್ನೂ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಾಗಿಲ್ಲ. ಭಾರತಕ್ಕೆ ಸದಸ್ಯತ್ವ ನೀಡಲು ಚೀನಾ ಸೇರಿದಂತೆ ಕೆಲವು ದೇಶಗಳು ಅಡ್ಡಗಾಲು ಹಾಕುತ್ತಿವೆ.

ವಿಶ್ವಸಂಸ್ಥೆಯ ಪ್ರಮುಖ ಅಂಗಸಂಸ್ಥೆಗಳು ಯಾವುವು?

 • ಭದ್ರತಾ ಸಮಿತಿ(ಸೆಕ್ಯುರಿಟಿ ಕೌನ್ಸಿಲ್‌).
 • ಆರ್ಥಿಕ ಹಾಗೂ ಸಾಮಾಜಿಕ ಸಮಿತಿ (ಎಕಾನಮಿಕ್‌ ಆಂಡ್‌ ಸೋಷಿಯಲ್‌ ಕೌನ್ಸಿಲ್‌).
 • ಧರ್ಮದರ್ಶಿ ಸಮಿತಿ (ಟ್ರಸ್ಟಿಶಿಪ್‌ ಕೌನ್ಸಿಲ್‌).
 • ಸಚಿವಾಲಯ (ಸೆಕ್ರೆಟೇರಿಯೇಟ್‌).
 • ಅಂತಾರಾಷ್ಟ್ರೀಯ ನ್ಯಾಯಾಲಯ (ಇಂಟರ್‌ನ್ಯಾಷನಲ್‌ ಕೋರ್ಟ್‌ ಫಾರ್‌ ಜಸ್ಟೀಸ್‌).

ಯಾವಾಗ ವಿಶ್ವ ಸಂಸ್ಥೆ ಸ್ಥಾಪನೆಯಾಯಿತು?

 • ಮೂರನೇ ಮಹಾಯುದ್ಧ ನಡೆಯಬಾರದೆಂದು ಅಮೆರಿಕದ ಅಧ್ಯಕ್ಷ ಪ್ರಾಂಕ್ಲಿನ್‌ ಡಿ ರೂಸವೆಲ್ಟ್‌, ಇಂಗ್ಲೆಂಡ್‌ನ ಚರ್ಚಿಲ್‌ ಮತ್ತು ರಷ್ಯಾದ ಜೋಸೆಪ್‌ ಸ್ಟಾಲಿನ್‌ ಚರ್ಚಿಸಿದರ ಫಲವಾಗಿ 1945 ಅಕ್ಟೋಬರ್‌ 24ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು. ಅಮೆರಿಕದ ಪ್ರಾಂಕ್ಲಿನ್‌ ಡಿ ರೂಸವೆಲ್ಟ್‌ ಅವರು ವಿಶ್ವಸಂಸ್ಥೆ ಎಂದು ಮೊದಲ ಬಾರಿಗೆ ಕರೆದರು.

ವಿಶ್ವಸಂಸ್ಥೆ ಕಚೇರಿ ಎಲ್ಲಿದೆ?

 • ಅಂತಾರಾಷ್ಟ್ರೀಯ ನ್ಯಾಯಾಲಯವೊಂದನ್ನು ಹೊರತುಪಡಿಸಿ ಉಳಿದ ಐದೂ ಅಂಗಸಂಸ್ಥೆಗಳ ಕೇಂದ್ರ ಕಚೇರಿ ನ್ಯೂಯಾರ್ಕ್‌ನಲ್ಲಿದೆ.