Published on: September 30, 2022

ಸುದ್ಧಿ ಸಮಾಚಾರ – 30 ಸೆಪ್ಟೆಂಬರ್ 2022

ಸುದ್ಧಿ ಸಮಾಚಾರ – 30 ಸೆಪ್ಟೆಂಬರ್ 2022

  • 412ನೇ ಮೈಸೂರು ದಸರಾ-2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದರು. ನಂತರ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರು 7ನೇ ಬಾರಿ ಖಾಸಗಿ ದರ್ಬಾರ್ ನಡೆಸಿದರು.

  • ಖ್ಯಾತ ರಾಗ ಸಂಯೋಜಕ, ಗಾಯಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ಕುವೆಂಪು ರಚಿತ ಜಯಭಾರತ ಜನನಿಯ ತನುಜಾತೆ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ಈಗ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ್ದು, ಇದಕ್ಕಾಗಿ ಎರಡು ನಿಮಿಷ ಮೂವತ್ತು ಸೆಕೆಂಡ್ ಕಾಲಮಿತಿಯನ್ನೂ ನಿಗದಿ ಪಡಿಸಿದೆ.
  • ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳು ಭಾರತಕ್ಕೆ ಸೇರಿ ಸೆಪ್ಟೆಂಬರ್17 ಕ್ಕೆ 75 ವರ್ಷಗಳು ಪೂರ್ಣಗೊಂಡಿವೆ. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಸರಕಾರ ಕಲ್ಯಾಣ ಕರ್ನಾಟಕ ಉತ್ಸವನ್ನಾಗಿ ಆಚರಣೆ ಮಾಡುತ್ತಿದೆ.
  • ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕಂಪನಿಯ ಮಾಲೀಕರ ಗಮನಕ್ಕೆ ತಾರದೇ, ಮತ್ತೊಂದು ಕಂಪನಿಯಲ್ಲಿ ಉದ್ಯೋಗ ಮಾಡುವುದನ್ನು ‘ಮೂನ್ಲೈಟಿಂಗ್’ ಎನ್ನುತ್ತಾರೆ. ಸರಳವಾಗಿ ಹೇಳಬೇಕೆಂದರೆ, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಉದ್ಯೋಗಗಳನ್ನು ಮಾಡುವುದು.
  • ಬೆಂಗಳೂರು ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಭಾರತದಲ್ಲಿ ಮೊದಲ ಬಾರಿಗೆ ಲಡಾಖ್ನಲ್ಲಿ ‘ಡಾರ್ಕ್ ಸ್ಕೈ ರಿಸರ್ವ್’ ಅನ್ನು ಸ್ಥಾಪಿಸಲಿದೆ. ಚಾಂಗ್ತಾಂಗ್ ವನ್ಯಜೀವಿ ಅಭಯಾರಣ್ಯದ ಭಾಗವಾಗಿ ಲಡಾಖ್ನ ಹಾನ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ‘ನೈಟ್ ಸ್ಕೈ ಅಭಯಾರಣ್ಯ’ವನ್ನು ನಿರ್ಮಿಸಲಾಗುವುದು. ಅಭಯಾರಣ್ಯವು ಆಪ್ಟಿಕಲ್, ಗಾಮಾ ಕಿರಣ ಮತ್ತು ಅತಿಗೆಂಪು ಟೆಲಿಸ್ಕೋಪ್ಗಳಿಗಾಗಿ ವಿಶ್ವದ ಅತಿ ಎತ್ತರದ ತಾಣವಾಗಿದೆ
  • ರಾಜಸ್ಥಾನ ಸಿಎಂ ಅವರು ಮಹಿಳೆಯರಿಗೆ-ಮಾತ್ರ ಸಾಲ ಯೋಜನೆ ‘ಮಹಿಳಾ ನಿಧಿ’ ಪ್ರಾರಂಭಿಸಿದ್ದಾರೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಮಹಿಳೆಯರಿಗೆ ಸಾಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ಪ್ರಾರಂಭಿಸಲಾಗಿದೆ. ತೆಲಂಗಾಣ ನಂತರ, ರಾಜಸ್ಥಾನವು ಮಹಿಳಾ ನಿಧಿ ಯೋಜನೆಯನ್ನು ಸ್ಥಾಪಿಸಿದ ದೇಶದ ಎರಡನೇ ರಾಜ್ಯವಾಗಿದೆ.
  • ಒಡಿಶಾ ನುವಾಖಾಯ್ ಮುಖ್ಯವಾಗಿ ಒಡಿಶಾದ ಜನರು ಆಚರಿಸುವ ಕೃಷಿ ಹಬ್ಬವಾಗಿದೆ. ಅನ್ನದ ಹೊಸ ಋತುವನ್ನು ಸ್ವಾಗತಿಸಲು ಹಬ್ಬವನ್ನು ಆಚರಿಸಲಾಗುತ್ತದೆ. ನುವಾಖೈ ಎಂಬುದು ಹೊಸ ಅನ್ನವನ್ನು ತಿನ್ನುವುದನ್ನು ಸೂಚಿಸುವ ಎರಡು ಪದಗಳ ಸಂಯೋಜನೆಯಾಗಿದೆ, ‘ನುವಾ’ ಎಂದರೆ ಹೊಸ ಮತ್ತು ‘ಖೈ’ ಎಂದರೆ ತಿನ್ನುವುದು. ಇದನ್ನು ಗಣೇಶ ಚತುರ್ಥಿ ಹಬ್ಬದ ಮರುದಿನ ಆಚರಿಸಲಾಗುತ್ತದೆ ಮತ್ತು 2022 ರಲ್ಲಿ ಇದನ್ನು 1 ಸೆಪ್ಟೆಂಬರ್ 2022 ರಂದು ಆಚರಿಸಲಾಯಿತು.
  • ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ನೆರವು ಮತ್ತು ಪರಿಹಾರ ಕಲ್ಪಿಸುವ ಪಿಎಂ ಕೇರ್ಸ್‌ ನಿಧಿಯ ಟ್ರಸ್ಟಿಗಳಾಗಿ ಟಾಟಾ ಸನ್ಸ್ ಮುಖ್ಯಸ್ಥ ರತನ್‌ ಟಾಟಾ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ.ಥಾಮಸ್‌, ಲೋಕಸಭೆಯ ಮಾಜಿ ಉಪ ಸಭಾಪತಿ ಕರಿಯಾ ಮುಂಡಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ’. ‘ಇನ್ಫೊಸಿಸ್‌ ಫೌಂಡೇಷನ್‌ನ ಸುಧಾ ಮೂರ್ತಿ, ಮಾಜಿ ಸಿಎಜಿ ರಾಜೀವ್‌ ಮೆಹರಿಷಿ, ಟೀಚ್‌ ಫಾರ್‌ ಇಂಡಿಯಾ ಸಂಸ್ಥೆಯ ಸಹ ಸ್ಥಾಪಕ ಆನಂದ ಶಾ ಸೇರಿದಂತೆ ಕೆಲವು ಗಣ್ಯರನ್ನು ಪಿ.ಎಂ ಕೇರ್ಸ್‌ ಸಲಹಾ ಮಂಡಳಿಗೆ ನಾಮನಿರ್ದೇಶನ ಮಾಡುವ ಕುರಿತು ನಿರ್ಣಯವನ್ನು ಟ್ರಸ್ಟ್‌ ಕೈಗೊಂಡಿದೆ.
  • ಕರ್ನಾಟಕದ ಅಥ್ಲೀಟ್‌ ಎಂ.ಆರ್. ಪೂವಮ್ಮ ಅವರಿಗೆ ಆ್ಯಂಟಿ ಡೋಪಿಂಗ್ ಅಪೀಲ್ ಪ್ಯಾನಲ್‌ (ಎಡಿಎಪಿ) ಎರಡು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಪೂವಮ್ಮ ಅವರು ಕಳೆದ ವರ್ಷ ಫೆಬ್ರುವರಿಯಲ್ಲಿ ಪಟಿಯಾಲದಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್‌ಪ್ರಿ ಕೂಟದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಪರೀಕ್ಷೆಗೆ ನೀಡಿದ್ದ ಮಾದರಿಯಲ್ಲಿ ನಿಷೇಧಿತ ಮೆಥೈಲ್‌ಹೆಕ್ಸಾನೀಮೈನ್ ಮದ್ದಿನ ಅಂಶ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷದ ಜೂನ್‌ನಲ್ಲಿ ಅವರಿಗೆ ಎಡಿಡಿಪಿ ಮೂರು ತಿಂಗಳ ನಿಷೇಧ ಶಿಕ್ಷೆ ವಿಧಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಮೇಲ್ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಎಡಿಎಪಿ ಶಿಕ್ಷೆಯನ್ನು ಎರಡು ವರ್ಷಕ್ಕೆ ವಿಸ್ತರಿಸಿದೆ. ಪೂವಮ್ಮ ಅವರಿಂದ ಪರೀಕ್ಷೆಗಾಗಿ 2021ರ ಫೆಬ್ರುವರಿ 18ರಂದು ಮಾದರಿ ಸಂಗ್ರಹಿಸಲಾಗಿತ್ತು. ಅಂದಿನಿಂದ ಅವರು ಸ್ಪರ್ಧಿಸಿದ್ದ ಎಲ್ಲ ಫಲಿತಾಂಶಗಳನ್ನು ಅಮಾನ್ಯಗೊಳಿಸಲಾಗುತ್ತದೆ. ಗೆದ್ದ ಪದಕಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
  • ಬೆಸ್ಟ್‌ ಹ್ಯೂಮನ್‌ ರೈಟ್ಸ್‌ ಪ್ರಶಸ್ತಿ

ಪತ್ರಕರ್ತೆ ದಿವಂಗತ ಗೌರಿ ಲಂಕೇಶ್‌ ಅವರ ಕುರಿತ ಸಾಕ್ಷ್ಯಚಿತ್ರ ‘ಗೌರಿ’ಗೆ ಟೊರೆಂಟೊದಲ್ಲಿ ನಡೆದ ಮಹಿಳಾ ಚಲನಚಿತ್ರೋತ್ಸವದಲ್ಲಿ ‘ಬೆಸ್ಟ್‌ ಹ್ಯೂಮನ್‌ ರೈಟ್ಸ್‌’ ಪ್ರಶಸ್ತಿ ಲಭಿಸಿದೆ.

ಸಾಕ್ಷ್ಯಚಿತ್ರ ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾ ಫಿಲಂ ಫೆಸ್ಟಿವಲ್‌, ಡಾಕ್‌ ನ್ಯೂಯಾರ್ಕ್‌, ಆಮ್‌ಸ್ಟರ್‌ಡ್ಯಾಮ್‌ನ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಉತ್ಸವ, ಸನ್‌ಡಾನ್ಸ್‌ ಚಿತ್ರೋತ್ಸವಗಳಿಗೂ ಆಯ್ಕೆಯಾಗಿದೆ’. ಆ್ಯಮ್‌ಸ್ಟರ್‌ಡ್ಯಾಂನ ಫ್ರೀ ಪ್ರೆಸ್‌ ಅನ್‌ಲಿಮಿಟೆಡ್‌ ‘ಗೌರಿ’ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ.