Published on: July 25, 2023

ಅಕ್ಕಿ ರಫ್ತು ನಿಷೇಧ

ಅಕ್ಕಿ ರಫ್ತು ನಿಷೇಧ

ಸುದ್ದಿಯಲ್ಲಿ ಏಕಿದೆ? ಕುಚ್ಚಿಲಕ್ಕಿ ಹಾಗೂ ಬಾಸ್ಮತಿ ಹೊರತುಪಡಿಸಿ ಇತರ ಬಗೆಯ ಅಕ್ಕಿ ರಫ್ತನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ.

ಮುಖ್ಯಾಂಶಗಳು

  • ಬಾಸ್ಮತಿ ಹೊರತುಪಡಿಸಿದ ಬಿಳಿ ಅಕ್ಕಿಯ ರಫ್ತು ನೀತಿ ಪರಿಷ್ಕರಿಸಲಾಗಿದ್ದು, ಇದರ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ ಎಂದು ಡಿಜಿಎಫ್​ಟಿ (ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ) ಅಧಿಸೂಚನೆಯಲ್ಲಿ ತಿಳಿಸಿದೆ.
  • ಕಪ್ಪು ಸಮುದ್ರದ ಮೂಲಕ ಯೂಕ್ರೇನ್​ನ ಧಾನ್ಯ ಸಾಗಣೆಗೆ ಅವಕಾಶ ನೀಡುವ ಒಪ್ಪಂದದಿಂದ ರಷ್ಯಾದ ನಿರ್ಗಮಿಸಿರುವುದು ಜಾಗತಿಕ ಆಹಾರ ಭದ್ರತೆಗೆ ಬೆದರಿಕೆ ಒಡ್ಡಿದೆ. ಅದರಲ್ಲೂ ವಿಶೇಷವಾಗಿ ಕಡಿಮೆ ಆದಾಯದ ದೇಶಗಳಲ್ಲಿ ಆಹಾರದ ಬೆಲೆಗಳು ಇದರಿಂದಾಗಿ ಹೆಚ್ಚಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಚ್ಚರಿಸಿದೆ.

ಉದ್ದೇಶ

  • ಕಪ್ಪು ಸಮುದ್ರ ಧಾನ್ಯ ಒಪ್ಪಂದದಿಂದ ರಷ್ಯಾ ಹಿಂದೆ ಸರಿದ ನಂತರ ಈಗ ಜಾಗತಿಕ ಆಹಾರ ಬೆಲೆಗಳು ಮತ್ತಷ್ಟು ಹೆಚ್ಚಳವಾಗುವ ಅಪಾಯ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿ ಅಕ್ಕಿಯ ಪೂರೈಕೆ ಹೆಚ್ಚಿಸುವ ಹಾಗೂ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆಯನ್ನು ನಿಯಂತ್ರಣದಲ್ಲಿಡುವುದಾಗಿದೆ

ಕೇಂದ್ರ ಆಹಾರ ಸಚಿವಾಲಯದ ಅಂಕಿಅಂಶಗಳ ಪ್ರಕಾರ

  • ಭಾರತವು ಥೈಲ್ಯಾಂಡ್, ಇಟಲಿ, ಸ್ಪೇನ್, ಶ್ರೀಲಂಕಾ ಮತ್ತು ಅಮೆರಿಕಕ್ಕೆ ಈ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ರವಾನಿಸುತ್ತದೆ.
  • ‘ದೇಶಿ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆಯು ಏರಿಕೆ ಕಾಣುತ್ತಿದೆ.
  • ಒಂದು ವರ್ಷದಲ್ಲಿಅಕ್ಕಿ ಬೆಲೆ ಶೇಕಡ 11.5ರಷ್ಟು ಹೆಚ್ಚಾಗಿದೆ.
  • ಕಳೆದ ಒಂದು ತಿಂಗಳಲ್ಲಿ ಶೇ 3ರಷ್ಟು ಏರಿಕೆ ಕಂಡಿದೆ’.
  • ಭಾರತದಿಂದ ರಫ್ತಾಗುವ ಅಕ್ಕಿಯಲ್ಲಿ ಹೆಚ್ಚಿನ ಪಾಲು ಇರುವುದು ಬಾಸ್ಮತಿ ಹಾಗೂ ಕುಚ್ಚಿಲಕ್ಕಿಯದ್ದು. ಈ ಬಗೆಯ ಅಕ್ಕಿ ರಫ್ತಿಗೆ ನಿರ್ಬಂಧ ಇಲ್ಲ. ಹೀಗಾಗಿ ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಆಕರ್ಷಕ ಬೆಲೆಯ ಪ್ರಯೋಜನ ದೊರೆಯಲಿದೆ.

ಅಕ್ಕಿ ರಫ್ತು ಹೆಚ್ಚಾಗಲು ಕಾರಣ

  • ‘ಎಲ್–ನಿನೊ ಪರಿಣಾಮ, ಅಕ್ಕಿಯನ್ನು ಬೆಳೆಯುವ ದೇಶಗಳಲ್ಲಿನ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೆಲೆ ಹೆಚ್ಚಾಗಿರುವುದು ರಫ್ತುಜಾಸ್ತಿಆಗುತ್ತಿರುವುದಕ್ಕೆ ಕಾರಣ.

ಅಕ್ಕಿ ಬೆಲೆ ಹೆಚ್ಚಾಗಲು ಕಾರಣ

  • ಭಾರತದಲ್ಲಿ ಅಕ್ಕಿಯ ಬೆಲೆಗಳು ಕಳೆದ ಮೂರು ತಿಂಗಳಲ್ಲಿ ಶೇಕಡಾ 20-30ರಷ್ಟು ಮತ್ತು ಕಳೆದ 10-12 ದಿನಗಳಲ್ಲಿ ಅಂದಾಜು ಶೇಕಡಾ 10ರಷ್ಟು ಏರಿಕೆ ಕಂಡಿವೆ. ಏಕೆಂದರೆ ಕಳೆದ ಚಳಿಗಾಲದ ಋತುವಿನಲ್ಲಿ ಅಕ್ಕಿ ಕೊಯ್ಲು ಕಳಪೆಯಾಗಿದೆ. ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಮಳೆ ಕೊರತೆ ಮತ್ತು ಉತ್ತರ ಭಾರತದಲ್ಲಿ ಮಳೆಯ ಪ್ರವಾಹದ ನಡುವೆ ಮುಂಗಾರು ಬೆಳೆಯ ಬಿತ್ತನೆಯು ಕಡಿಮೆಯಾಗಿದೆ. ಅಲ್ಲದೆ, ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇ.7ರಷ್ಟು ಏರಿಕೆ ಮಾಡಿದೆ.

ರಫ್ತು ನಿಷೇಧ ಪರಿಣಾಮ:

  • ದೇಶದಲ್ಲಿ ಅಕ್ಕಿ ಬೆಲೆಗಳನ್ನು ನಿಯಂತ್ರಿಸಲು ಅನುಕೂಲವಾಗಲಿದೆ
  • ಜಾಗತಿಕ ಬೆಲೆಗಳು ಮತ್ತಷ್ಟು ಹೆಚ್ಚಳ ಸಾಧ್ಯತೆ ಇದೆ
  • ವಿಯೆಟ್ನಾಂ, ಥೈಲ್ಯಾಂಡ್ ಮತ್ತು ಪಾಕಿಸ್ತಾನದಿಂದ ಮಾರಾಟವಾಗುವ ಅಕ್ಕಿಗಿಂತಲೂ ಭಾರತದ ಅಕ್ಕಿ ಬೆಲೆಗಳು ಸಾಮಾನ್ಯವಾಗಿ ಅಗ್ಗವಾಗಿರುತ್ತವೆ. ಹೀಗಾಗಿ, ಭಾರತದ ಅಕ್ಕಿಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಆಫ್ರಿಕಾದ ಬಡ ದೇಶಗಳಿಗೆ ಇದರಿಂದ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದೆ.
  • ಬಾಸ್ಮತಿ ಹೊರತುಪಡಿಸಿದ ಭಾರತದಿಂದ ಒಟ್ಟಾರೆ ರಫ್ತು ಮಾಡುವ ಅಕ್ಕಿಯ ಪೈಕಿ ಈಗ ನಿಷೇಧಿಸಲಾಗಿರುವ ಬಿಳಿ ಅಕ್ಕಿಯ ಪ್ರಮಾಣವು ಶೇಕಡಾ 25ರಷ್ಟಿದೆ. ಇದರ ರಫ್ತು ನಿಷೇಧದಿಂದಾಗಿ ಜಾಗತಿಕ ಅಕ್ಕಿ ವ್ಯಾಪಾರದಲ್ಲಿ 40-50 ಲಕ್ಷ ಟನ್ ಅಕ್ಕಿ ಕೊರತೆಯಾಗಲಿದೆ.

ಯಾವುದಕ್ಕೆ  ಅವಕಾಶ ಕಲ್ಪಿಸಲಾಗಿದೆ?

  • ಸರ್ಕಾರವು ಕೆಲವು ದಿನಗಳ ಮಟ್ಟಿಗೆ ಒಂದಿಷ್ಟು ಷರತ್ತುಗಳ ಆಧಾರದಲ್ಲಿ ಬಿಳಿ ಅಕ್ಕಿ ರಫ್ತು ಮಾಡಲು ಅನುಮತಿ ನೀಡಿದೆ. ಉದಾಹರಣೆಗೆ, ರಫ್ತು ನಿಷೇಧಿಸುವ ಅಧಿಸೂಚನೆ ಹೊರಡಿಸುವ ಮೊದಲೇ ಹಡಗಿನಲ್ಲಿ ಅಕ್ಕಿ ಸರಕನ್ನು ಲೋಡ್ ಮಾಡಲು ಪ್ರಾರಂಭಿಸಿದ್ದರೆ ರಫ್ತಿಗೆ ಅವಕಾಶ ನೀಡಲಾಗುತ್ತದೆ.
  • ಬಾಸ್ಮತಿ ಹೊರತುಪಡಿಸಿದ ಕಚ್ಚಾ ಮತ್ತು ಸ್ಟೀಮ್ ಅಕ್ಕಿಯ ಮೇಲಿನ ಪ್ರಸ್ತುತ ನಿಷೇಧವು ಕಡಿಮೆ ಬೆಲೆಯ ದಪ್ಪ ಧಾನ್ಯದ ಅಕ್ಕಿ (ಐಆರ್64/ರತ್ನ) ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
  • ಬಾಸ್ಮತಿ ಹೊರತುಪಡಿಸಿದ ಅರೆಬೆಯಿಸಿದ (ಪ್ಯಾರಾಬಾಯಿಲ್ಡ್ ರೈಸ್) ರೂಪದಲ್ಲಿ ಅಕ್ಕಿಯನ್ನು ರಫ್ತು ಮಾಡಲು ಈಗಲೂ ಅವಕಾಶವಿದೆ. ಹೀಗಾಗಿ, ಬಾಸ್ಮತಿ ಹೊರತುಡಿಸಿದ ಅಕ್ಕಿಯ ಒಟ್ಟಾರೆ ರಫ್ತಿನ ಮೇಲೆ ತೀವ್ರ ಪರಿಣಾಮ ಉಂಟಾಗುವುದಿಲ್ಲ.

2022 ರಲ್ಲಿ ಕೇಂದ್ರ ಸರ್ಕಾರ ಕೈಗೊಂಡ ರಫ್ತಿಗೆ ಪ್ರತಿಕೂಲ ಕ್ರಮಗಳು

  • ಕಳೆದ ಹಣಕಾಸು ವರ್ಷದಲ್ಲಿ ರಫ್ತಿಗೆ ಪ್ರತಿಕೂಲವಾದ ಎರಡು ಕ್ರಮಗಳನ್ನು ಕೈಗೊಳ್ಳಲಾಗಿದೆ. ತುಂಡಾದ ಅಕ್ಕಿ (ನುಚ್ಚಕ್ಕಿ)ರಫ್ತಿನ ಮೇಲಿನ ನಿಷೇಧ ಮತ್ತು ಬಾಸ್ಮತಿ ಹೊರತುಪಡಿಸಿದ ಅಕ್ಕಿ ರಫ್ತಿನ ಮೇಲೆ ಶೇಕಡಾ 20 ಸುಂಕ ವಿಧಿಸಲಾಗಿತ್ತು.

ಭಾರತದ ಅಕ್ಕಿ ರಫ್ತಿನ ವಿವರ

  • ವಿಶ್ವದಲ್ಲಿಯೇ ಅತಿಹೆಚ್ಚು ಅಕ್ಕಿ ರಫ್ತು ಮಾಡುವ ದೇಶ ಭಾರತವಾಗಿದೆ. ಒಟ್ಟಾರೆ ಜಾಗತಿಕ ಅಕ್ಕಿ ರಫ್ತು ವ್ಯಾಪಾರದಲ್ಲಿ ಭಾರತದ ಪಾಲು ಶೇಕಡಾ 40ರಷ್ಟಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತಿಂಗಳಲ್ಲಿ 15.5 ಲಕ್ಷ ಟನ್ ಬಾಸ್ಮತಿ ಹೊರತುಪಡಿಸಿದ ಬಿಳಿ ಅಕ್ಕಿಯನ್ನು ಭಾರತ ರಫ್ತು ಮಾಡಿದೆ.
  • 2022ರಲ್ಲಿ ಇದೇ ಅವಧಿಯಲ್ಲಿ 11.5 ಲಕ್ಷ ಟನ್ ಅಕ್ಕಿಯನ್ನು ರಫ್ತು ಮಾಡಲಾಗಿತ್ತು. ಇದೇ ಅವಧಿಯಲ್ಲಿ ಬಾಸ್ಮತಿ ಹೊರತುಪಡಿಸಿದ ಎಲ್ಲ ತಳಿಗಳ ಅಕ್ಕಿ ರಫ್ತು ಕಳೆದ ವರ್ಷ 43 ಲಕ್ಷ ಟನ್ ಆಗಿದ್ದರೆ, ಈ ವರ್ಷ 45 ಲಕ್ಷ ಟನ್​ಗೆ ಏರಿದೆ. 2022ರ ಸೆಪ್ಟೆಂಬರ್​ನಿಂದ ಶೇಕಡಾ 20ರಷ್ಟು ರಫ್ತು ಸುಂಕವನ್ನು ವಿಧಿಸಲಾಗಿದ್ದರೂ ಅಕ್ಕಿ ರಫ್ತು ಪ್ರಮಾಣ ಹೆಚ್ಚಳ ಕಂಡಿದೆ.

ಕಪ್ಪು ಸಮುದ್ರ  ಧಾನ್ಯ ಒಪ್ಪಂದ

  • 2022ರ ಜುಲೈನಲ್ಲಿ ಉಕ್ರೇನ್ ಬಂದರುಗಳಿಂದ ಧಾನ್ಯ ಮತ್ತು ಆಹಾರ ಪದಾರ್ಥಗಳ ಸುರಕ್ಷಿತ ಸಾಗಣೆಯ ಉಪಕ್ರಮವನ್ನು ಕಪ್ಪು ಸಮುದ್ರದ ಧಾನ್ಯ ಉಪಕ್ರಮ ಎಂದೂ ಕರೆಯುತ್ತಾರೆ, ಇದು ರಷ್ಯಾದ ಉಕ್ರೇನ್ ದೇಶದ ಮೇಲಿನ ಆಕ್ರಮಣದ ಸಮಯದಲ್ಲಿ ರಷ್ಯಾ, ಉಕ್ರೇನ್, ಟರ್ಕಿ ಮತ್ತು ವಿಶ್ವಸಂಸ್ಥೆಯ ನಡುವಿನ ಒಪ್ಪಂದವಾಗಿತ್ತು.
  • ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಜಾಗತಿಕವಾಗಿ ಯೂಕ್ರೇನ್ ಮುಂಚೂಣಿಯಲ್ಲಿದೆ. ಆದರೆ, ರಷ್ಯಾ ಜತೆಗಿನ ಯುದ್ಧದಿಂದಾಗಿ ಯೂಕ್ರೇನ್​ನಿಂದ ಧಾನ್ಯಗಳ ರಫ್ತು ಮಾಡುವುದು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಯೂಕ್ರೇನ್​ನ ದಕ್ಷಿಣ ಭಾಗದ ಬಂದರುಗಳ ಮೂಲಕ ಧಾನ್ಯಗಳನ್ನು ಇತರೆ ದೇಶಗಳಿಗೆ ರವಾನಿಸುವ ನಿಟ್ಟಿನಲ್ಲಿ ರಷ್ಯಾ ಜತೆಗೆ ಈ ಒಪ್ಪಂದಕ್ಕೆ ಬರಲಾಗಿತ್ತು. ‘ಈ ಒಪ್ಪದಿಂದ ರಷ್ಯಾ ಹಿಂದೆ ಸರಿದ ಪರಿಣಾಮವಾಗಿ ಯೂಕ್ರೇನ್​ನಿಂದ ಧಾನ್ಯ ಪೂರೈಕೆಗೆ ಅಡಚಣೆಯಾಗಿದೆ. ಕಪ್ಪು ಸಮುದ್ರದ ವ್ಯಾಪಾರವು ಆಹಾರ ಮತ್ತು ರಸಗೊಬ್ಬರಗಳ ಜಾಗತಿಕ ಬೆಲೆಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನಿರ್ಣಾಯಕವಾಗಿದೆ’.

ನಿಮಗಿದು ತಿಳಿದಿರಲಿ

  • ಚೀನಾ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕವಾಗಿದೆ. ಪಶ್ಚಿಮ ಬಂಗಾಳವು ಭಾರತದಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯವಾಗಿದೆ.
  • ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಪಂಜಾಬ್, ಒಡಿಶಾ ಮತ್ತು ಛತ್ತೀಸಗಡ ದೇಶದಲ್ಲಿ ಪ್ರಮುಖವಾಗಿ ಅಕ್ಕಿ ಬೆಳೆಯುವ ರಾಜ್ಯಗಳಾಗಿವೆ.