Published on: July 15, 2022

ಇಸ್ರೊ ಜತೆ 60 ನವೋದ್ಯಮಗಳ ನೋಂದಣಿ

ಇಸ್ರೊ ಜತೆ 60 ನವೋದ್ಯಮಗಳ ನೋಂದಣಿ

 ಸುದ್ದಿಯಲ್ಲಿ ಏಕಿದೆ?

‘ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸಿದ ಬಳಿಕ ಸುಮಾರು 60 ನವೋದ್ಯಮಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜತೆ ಒಪ್ಪಂದ ನೋಂದಾಯಿಸಿಕೊಂಡಿವೆ’.

ಮುಖ್ಯಾಂಶಗಳು 

  • ಇಸ್ರೊದ ನ್ಯೂಸ್ಪೇ ಸ್ ಇಂಡಿಯಾ ಲಿಮಿಟೆಡ್ ಮೂಲಕ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಹಲವು ಕಂಪನಿಗಳು ಆಸಕ್ತಿ ವಹಿಸಿವೆ. ಕೆಲವು ಕಂಪನಿಗಳು ಬಾಹ್ಯಾಕಾಶದಲ್ಲಿ ತ್ಯಾಜ್ಯಗಳ ನಿರ್ವಹಣೆಯಲ್ಲೂ ತೊಡಗಿಸಿಕೊಂಡಿವೆ’.
  • ‘ದಿಗಂತರ ನವೋದ್ಯಮವು ಬಾಹ್ಯಾಕಾಶ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿದೆ. ಜತೆಗೆ, ವಿವಿಧ ಕಂಪನಿಗಳು ನ್ಯಾನೊ ಉಪಗ್ರಹಗಳು, ಉಡಾವಣೆ ವಾಹಕಗಳು, ಸಂಶೋಧನೆ ವಲಯ ಕ್ಷೇತ್ರಗಳಲ್ಲೂ ನವೋದ್ಯಮಗಳು ತೊಡಗಿಸಿಕೊಂಡಿವೆ’.

ಉದ್ದೇಶ  

  • ‘ಉಪಗ್ರಹಗಳ ಉಡಾವಣೆಯಿಂದಾಗಿ ಬಾಹ್ಯಾಕಾಶದಲ್ಲಿ ಈಗ ದಟ್ಟಣೆ ಹೆಚ್ಚಾಗುತ್ತಿವೆ. ನಮಗೆ ಸುಸ್ಥಿರ ಬಾಹ್ಯಾಕಾಶ ಕ್ಷೇತ್ರ ಅಗತ್ಯವಿದೆ. ಹೀಗಾಗಿ, ಬಾಹ್ಯಾಕಾಶದಲ್ಲಿ ತ್ಯಾಜ್ಯ ಮತ್ತು ದಟ್ಟಣೆಯಾಗುವುದನ್ನು ತಪ್ಪಿಸಬೇಕಾಗಿದೆ. ತ್ಯಾಜ್ಯಗಳಿಂದ ಉಪಗ್ರಹಗಳಿಗೆ ಹಾನಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆರಂಭಿಸಿರುವ ಐಎಸ್4ಒಎಂ ಮಹತ್ವದ ಹೆಜ್ಜೆಯಾಗಿದೆ’.
  • ‘ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಯಿಂದಾಗಿ ಭಾರತ 2047ರಲ್ಲಿ ಅತ್ಯಮೂಲ್ಯ ಸಾಧನೆ ಮಾಡಿ ಜಗತ್ತಿನಲ್ಲೇ ಮುಂಚೂಣಿ ದೇಶವಾಗಲಿದೆ’.
  • ಅಂತರಿಕ್ಷದಲ್ಲಿ ಅಪರಿಮಿತ ಅವಕಾಶ: ಕಕ್ಷೆಯಲ್ಲಿ ಉಪಗ್ರಹಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದು, ಕ್ಷುದ್ರಗ್ರಹಗಳ ದಾಳಿಯ ಮಾಹಿತಿ, ಪರಿಪಕ್ವವಾದ ಹವಾಮಾನ ಮಾಹಿತಿ ಸೇರಿದಂತೆ ಅಂತರಿಕ್ಷದಲ್ಲಿ ಅಪರಿಮಿತ ಅವಕಾಶಗಳಿವೆ ಎಂದು ಇದೇ ವೇಳೆ ಹೇಳಿದೆ.

ಅಪಾಯವೇನು?

  • ಇವುಗಳಿಂದಾಗಿ ಭೂಮಿಗೆ ಯಾವುದೇ ರೀತಿಯ ಹಾನಿ ಆಗದಿದ್ದರೂ, ಕಕ್ಷೆಯಲ್ಲಿ ಅನಾಥವಾಗಿ ಸುತ್ತುತ್ತಿರುವ ಇವುಗಳು, ಕಾರ್ಯನಿರ್ವಹಿಸುವ ಕೃತಕ ಉಪಗ್ರಹಗಳು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾರ್ಯನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಬಹುದು ಎಂಬ ಆತಂಕ ವಿಜ್ಞಾನಿಗಳಲ್ಲಿದೆ.

ಪರಿಹಾರವೇನು?

  • ಬಲೆ ಬಳಸಿ ಕಸದ ಚೂರುಗಳನ್ನು ಹಿಡಿದು ಅವುಗಳನ್ನು ಭೂವಾತಾವರಣಕ್ಕೆ ತಂದು ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಉರಿಸುವುದು, ಇದೇ ಮಾದರಿಯಲ್ಲಿ ಬಲೂನುಗಳನ್ನು ಬಳಸಿ ಅವಶೇಷಗಳನ್ನು ಭೂವಾತಾವರಣಕ್ಕೆ ತಂದು ಅವುಗಳು ಹೊತ್ತಿ ಉರಿಯುವಂತೆ ಮಾಡುವುದು ಮತ್ತು ಭೂಮಿಯಿಂದ ಲೇಸರ ಕಿರಣಗಳನ್ನು ಬಿಟ್ಟು ಅವಶೇಷಗಳನ್ನು ಸುರಕ್ಷಿತ ಕಕ್ಷೆಗೆ ಅಥವಾ ಭೂವಾತಾವರಣಕ್ಕೆ ಎಳೆದು ತರುವುದು ಸೇರಿದಂತೆ ಹಲವು ಪರಿಹಾರ ಸೂತ್ರಗಳು ಸಂಶೋಧಕರ ಮನದಲ್ಲಿದೆ.

ಬಾಹ್ಯಾಕಾಶದಲ್ಲಿನ ಸ್ಪೇಸ್ ಜಂಕ್:

ಬಾಹ್ಯಾಕಾಶದಲ್ಲಿ ತ್ಯಾಜ್ಯ (ಸ್ಪೇಸ್ ಜಂಕ್) ತುಂಬಿದೆ. ಮನುಷ್ಯರು ಹೋದಲೆಲ್ಲ ಕಸ ತುಂಬುವುದು ಸಾಮಾನ್ಯ. ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿ ಕೂಡ ಕಸ/ತ್ಯಾಜ್ಯಗಳು ತುಂಬಿಕೊಂಡಿವೆ. ಮಾನವರು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಉಪಗ್ರಹಗಳು, ನೌಕೆ, ರಾಕೆಟ್ ಹಾಗೂ ಇತರ ಸಂಶೋಧನಾ ಸಾಧನಗಳಲ್ಲಿ ಕೆಲವು ವಿಫಲವಾಗಿ ನಿಷ್ಕ್ರಿಯಗೊಂಡಿರುತ್ತವೆ.

ಇವುಗಳ ಪಳೆಯುಳಿಕೆ ಅಥವಾ ಅವಶೇಷಗಳನ್ನೇ ಬಾಹ್ಯಾಕಾಶ ತ್ಯಾಜ್ಯ ಎಂದು ಕರೆಯಲಾಗುತ್ತದೆ.

6 ಸಾವಿರಕ್ಕೂ ಅಧಿಕ ಟನ್ ತ್ಯಾಜ್ಯ :

ಪ್ರಸ್ತುತ ಸುಮಾರು 6 ಸಾವಿರಕ್ಕೂ ಅಧಿಕ ಟನ್ ತ್ಯಾಜ್ಯವಿದೆ ಎಂದು ಅಂದಾಜಿಸಲಾಗಿದೆ. ಬಾಹ್ಯಾಕಾಶ ಕಸವನ್ನು ಸಮರ್ಥವಾಗಿ ನಿಭಾಯಿಸಲು ಭಾರತ ಸೇರಿದಂತೆ ವಿವಿಧ ದೇಶಗಳು ಪ್ರಯತ್ನಿಸುತ್ತಿವೆ. ಭಾರತದ ಅಂತರಿಕ್ಷ ಸಂಸ್ಥೆಯೊಂದಿಗೆ ಮೈತ್ರಿ ಮಾಡಿಕೊಂಡ ಕೆಲವು ಸ್ಟಾರ್ಟ್ ಅಪ್ಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡಲಿವೆ. ಈ ಮೂಲಕ ಸ್ಚಚ್ಛ ಬಾಹ್ಯಾಕಾಶಕ್ಕೆ ಪ್ರಯತ್ನಿಸಲಿವೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.