Published on: June 22, 2023

ಎಬಿಎ ಫಸ್ಟ್ ರನ್ನರ್ (ಎಎಫ್ಆರ್)

ಎಬಿಎ ಫಸ್ಟ್ ರನ್ನರ್ (ಎಎಫ್ಆರ್)

ಸುದ್ದಿಯಲ್ಲಿ  ಏಕಿದೆ? ಅಹ್ಮದಾಬಾದ್ ನಲ್ಲಿರುವ ಅಜಿಸ್ಟಾ ಬಿಎಸ್‌ಟಿ ಏರೋಸ್ಪೇಸ್ ಸಂಸ್ಥೆ ಮೊದಲ ಉಪಗ್ರಹ ಎಬಿಎ ಫಸ್ಟ್ ರನ್ನರ್ (ಎಎಫ್ಆರ್) ಅನ್ನು ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಉಡಾವಣೆ ಮಾಡಿದೆ.

ಮುಖ್ಯಾಂಶಗಳು

  • ಎಎಫ್ಆರ್ ಭಾರತದ ಖಾಸಗಿ ಉದ್ಯಮ ಅಭಿವೃದ್ಧಿ ಪಡಿಸಿರುವ ಉಪಗ್ರಹವಾಗಿದೆ. ಇದು ಈ ಗಾತ್ರದ ಮತ್ತು ಸಾಮರ್ಥ್ಯದ ಪ್ರಥಮ ಉಪಗ್ರಹವಾಗಿದ್ದು, ನಾಗರಿಕ ಮತ್ತು ರಕ್ಷಣಾ ಉದ್ದೇಶಗಳ ವಿವಿಧ ಕಾರ್ಯಗಳಿಗೆ ಇದನ್ನು ಬಳಸಬಹುದಾಗಿದೆ.
  • ಕಂಪನಿಯು ಭಾರತವನ್ನು ಉಪಗ್ರಹಗಳ ಬೃಹತ್ ತಯಾರಿಕೆಯ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ

ಅಜಿಸ್ಟಾ ಬಿಎಸ್‌ಟಿ ಏರೋಸ್ಪೇಸ್ (ಎಬಿಎ) ಸಂಸ್ಥೆ

  • ಅಜಿಸ್ಟಾ ಬಿಎಸ್‌ಟಿ ಏರೋಸ್ಪೇಸ್ (ಎಬಿಎ) ಸಂಸ್ಥೆಯನ್ನು ಅಜಿ಼ಸ್ಟಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಬರ್ಲಿನ್ ಸ್ಪೇಸ್ ಟೆಕ್ನಾಲಜೀಸ್ ಜಿಎಂಬಿಎಚ್ ಆರಂಭಿಸಿದ್ದವು. ಎಬಿಎ ಭಾರತದ ಅಹ್ಮದಾಬಾದ್‌ನಲ್ಲಿ ತನ್ನ ಕಾರ್ಖಾನೆಯನ್ನು ಹೊಂದಿದ್ದು, ಸಣ್ಣ ಉಪಗ್ರಹಗಳನ್ನು ಉತ್ಪಾದಿಸುತ್ತದೆ. ಈ ಕಾರ್ಖಾನೆ 50,000 ಚದರ ಅಡಿಗಳಷ್ಟು ದೊಡ್ಡದಾಗಿದೆ.
  • ಈ ಕಂಪನಿಯಲ್ಲಿ ಭಾರತೀಯ ಸಂಸ್ಥೆಯಾದ ಅಜಿಸ್ಟಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ 70% ಪಾಲು ಹೊಂದಿದ್ದು, ಜರ್ಮನಿಯ ಬರ್ಲಿನ್ ಸ್ಪೇಸ್ ಟೆಕ್ನಾಲಜೀಸ್‌ ಜಿಎಂಬಿಎಚ್ ಉಳಿದ 30% ಪಾಲು ಹೊಂದಿದೆ.

ಎಬಿಎ ಫಸ್ಟ್ ರನ್ನರ್ ಉಪಗ್ರಹ

  • 80 ಕೆಜಿ ತೂಕ ಹೊಂದಿದ್ದು, ಪ್ಯಾನ್ ಕ್ರೊಮಾಟಿಕ್ ಮತ್ತು ಮಲ್ಟಿ ಸ್ಪೆಕ್ಟ್ರಲ್ ಮೋಡ್ಸ್ ಬ್ರೀಫ್ ಎಕ್ಸ್‌ಪ್ಲನೇಶನ್ ಎಂಬ ಎರಡೂ ಛಾಯಾಚಿತ್ರ ಸಾಮರ್ಥ್ಯದ ಆಪ್ಟಿಕಲ್ ರಿಮೋಟ್ ಸೆನ್ಸಿಂಗ್ ಪೇಲೋಡನ್ನು ಹೊಂದಿದೆ.

ರಿಮೋಟ್ ಸೆನ್ಸಿಂಗ್ ಇಮೇಜ್

  • ರಿಮೋಟ್ ಸೆನ್ಸಿಂಗ್ ಎಂದರೆ, ಯಾವುದೇ ವಸ್ತು ಅಥವಾ ಪ್ರದೇಶದೊಡನೆ ನೇರ ಸಂಪರ್ಕಕ್ಕೆ ಬರದೆ ಸಾಕಷ್ಟು ದೂರದಿಂದಲೇ ಅದರ ಕುರಿತ ಮಾಹಿತಿ ಕಲೆಹಾಕುವ ವಿಧಾನವಾಗಿದೆ. ಇದನ್ನು ವಿವಿಧ ಸೆನ್ಸರ್‌ಗಳಾದ ಕ್ಯಾಮರಾಗಳು, ಲೇಸರ್‌ಗಳು ಮತ್ತು ರೇಡಾರ್‌ಗಳನ್ನು ಬಳಸುವ ಮೂಲಕ ನೆರವೇರಿಸಲಾಗುತ್ತದೆ.

ಪ್ಯಾನ್ ಕ್ರೊಮಾಟಿಕ್ ಇಮೇಜ್

  • ಪ್ಯಾನ್ ಕ್ರೊಮಾಟಿಕ್ ಇಮೇಜ್ ಎಂದರೆ ಬೆಳಕಿನ ಒಂದು ಬ್ಯಾಂಡ್, ಸಾಮಾನ್ಯವಾಗಿ ಕಣ್ಣಿಗೆ ಕಾಣುವ ಸ್ಪೆಕ್ಟ್ರಮ್ ಬಳಸಿ ಸೆರೆಹಿಡಿಯುವ ಛಾಯಾಚಿತ್ರವಾಗಿದೆ. ಅಂದರೆ, ಇವುಗಳು ತಾವು ಸೆರೆಹಿಡಿಯಬೇಕಾದ ವಸ್ತು ಅಥವಾ ಪ್ರದೇಶದ ಕಾಂತಿಯನ್ನು ಮಾತ್ರವೇ ಸಂಗ್ರಹಿಸುತ್ತವೆ. ಅದರ ಬಣ್ಣಗಳ ಕುರಿತಾದ ಮಾಹಿತಿಯನ್ನು ಕಲೆಹಾಕುವುದಿಲ್ಲ.

ಮಲ್ಟಿ ಸ್ಪೆಕ್ಟ್ರಲ್ ಇಮೇಜ್

  • ಇನ್ನು ಮಲ್ಟಿ ಸ್ಪೆಕ್ಟ್ರಲ್ ಛಾಯಾಚಿತ್ರಗಳೆಂದರೆ, ಸಾಮಾನ್ಯವಾಗಿ ಬೆಳಕಿನ ವಿವಿಧ ಬ್ಯಾಂಡ್‌ಗಳಲ್ಲಿ ಸೆರೆಹಿಡಿಯಲಾದ ಚಿತ್ರವಾಗಿರುತ್ತದೆ. ಅದರಲ್ಲೂ, ನೋಡಬಹುದಾದ ಮತ್ತು ಇನ್‌ಫ್ರಾರೆಡ್‌ಗೆ ಸನಿಹವಿರುವ ಸ್ಪೆಕ್ಟ್ರಮ್ ಆಗಿರುತ್ತದೆ. ಅಂದರೆ, ಈ ಛಾಯಾಚಿತ್ರಗಳು ಮಾಹಿತಿ ಬೇಕಾಗಿರುವ ವಸ್ತು ಅಥವಾ ಪ್ರದೇಶವನ್ನು ವಿವಿಧ ಬಣ್ಣಗಳಲ್ಲಿ ಸೆರೆಹಿಡಿಯುತ್ತವೆ. ಈ ಚಿತ್ರಗಳು ವಿವಿಧ ವಸ್ತುಗಳು ಮತ್ತು ಸಾಮಗ್ರಿಗಳನ್ನು ಗುರುತಿಸಲು ನೆರವಾಗುತ್ತವೆ.

ಎಲ್ಲೆಲ್ಲಿ ಇವುಗಳನ್ನು ಬಳಸಲಾಗುತ್ತದೆ?

  • ಭೂ ವಿಚಕ್ಷಣೆಯಿಂದ ಭೂಮಿಯ ಬಳಕೆಯನ್ನು ಗಮನಿಸಲು, ಹವಾಮಾನ ಬದಲಾವಣೆ ಗುರುತಿಸಲು, ಭೂ ಮೇಲ್ಮೈಯ ವಿವರಣಾತ್ಮಕ ನಕಾಶೆಯನ್ನು ರಚಿಸಲು ಇದರ ಬಳಕೆಯಾಗುತ್ತದೆ.
  • ಸುರಕ್ಷತೆ ಮತ್ತು ಗಡಿ ಭದ್ರತೆಯನ್ನು ವೀಕ್ಷಿಸಲು, ಅಕ್ರಮ ಚಟುವಟಿಕೆಗಳನ್ನು ಗುರುತಿಸಲು ಬಳಸಲಾಗುತ್ತದೆ.
  • ಕೃಷಿ ಮತ್ತು ಬೆಳೆಗಳನ್ನು ವೀಕ್ಷಿಸಲು, ಕೀಟ ಮತ್ತು ರೋಗಗಳನ್ನು ಗುರುತಿಸಲು ಬಳಕೆಯಾಗುತ್ತದೆ.
  • ವನ್ಯಜೀವಿ ಸಂರಕ್ಷಣೆಗಾಗಿ ಮತ್ತು ಪ್ರಾಣಿಗಳ ಸಂಖ್ಯೆಯನ್ನು ಗಮನಿಸಲು, ಅವುಗಳ ಆವಾಸ ಸ್ಥಾನಗಳನ್ನು ಗುರುತಿಸಲು ಬಳಸಲಾಗುತ್ತದೆ.