Published on: February 23, 2023

ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ 2023

ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ 2023


ಸುದ್ದಿಯಲ್ಲಿ ಏಕಿದೆ? ಮಹಿಳೆಯರು ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ 2023 ಅನ್ನು ರಾಜ್ಯ ವಿಧಾನಸಭೆ ಅಂಗೀಕರಿಸಿದೆ.


ಮುಖ್ಯಾಂಶಗಳು

  • ಪ್ರಸ್ತುತ, ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಮಹಿಳೆಯರಿಗೆ ಕಾರ್ಖಾನೆಗಳಲ್ಲಿ ಹಗಲು-ರಾತ್ರಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ.
  • ವಿಧಾನಸಭೆಯಲ್ಲಿ ಮಸೂದೆಗೆ ಅಂಗೀಕಾರ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಈ ಕುರಿತು ಕಾನೂನನ್ನು ರೂಪಿಸುತ್ತಿದೆ.
  • 2019 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಫ್ಯಾಕ್ಟರಿ ಕಾಯ್ದೆ, 1948 ರ ಅಡಿಯಲ್ಲಿ ನೋಂದಾಯಿಸಲಾದ ಕಾರ್ಖಾನೆಗಳಲ್ಲಿ ಮಹಿಳೆಯರು ರಾತ್ರಿ ಪಾಳಿಯಲ್ಲಿ (ಸಂಜೆ 7 ರಿಂದ ಬೆಳಿಗ್ಗೆ 6 ರ ನಡುವೆ) ಕೆಲಸ ಮಾಡಬಹುದು ಎಂದು ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿತ್ತು. ಆದರೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಮಹಿಳಾ ಕಾರ್ಮಿಕರಿಂದ ಲಿಖಿತ ಒಪ್ಪಿಗೆಯನ್ನು ಪಡೆದುಕೊಂಡಿರಬೇಕೆಂದು ತಿಳಿಸಿತ್ತು.
  • ಕರ್ನಾಟಕ ಈಗಾಗಲೇ ಕಾರ್ಖಾನೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡಲಾಗುತ್ತಿದೆ.

ಕಾಯ್ದೆಯಲ್ಲಿರುವ ನಿಯಮಗಳು

  • ಕಾಯ್ದೆಯ ಪ್ರಕಾರ ದುಡಿಮೆ ಮತ್ತು ಗಳಿಕೆಯಲ್ಲಿ ಸಮಾನತೆ ಮತ್ತು ಸಮಾನ ಅವಕಾಶವನ್ನು ನೀಡಲು ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯವನ್ನು ಖಾತರಿಪಡಿಸುವ ಷರತ್ತಿಗೆ ಒಳಪಟ್ಟು ದಿನದ 24 ಗಂಟೆಯಲ್ಲಿ ಯಾವ ಅವಧಿಯಲ್ಲಿ ಬೇಕಾದರೂ ಕೆಲಸ ಮಾಡಬಹುದಾಗಿದೆ.
  • ಅವಧಿ ಮೀರಿ ಕೆಲಸಕ್ಕಾಗಿ (ಓವರ್‌ ಟೈಮ್) ಮಹಿಳಾ ಕೆಲಸಗಾರರಿಗೆ ಅನುವು ಮಾಡಿಕೊಡುವುದಕ್ಕಾಗಿ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಮಹಿಳಾ ಕೆಲಸಗಾರರಿಂದ ಲಿಖಿತ ಒಪ್ಪಿಗೆ ಪಡೆದು ಅವಕಾಶ ನೀಡಬಹುದಾಗಿದೆ.
  • ರಾತ್ರಿ ಪಾಳಿಯಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸಾಕಷ್ಟು ಮಹಿಳಾ ಭದ್ರತೆಯನ್ನು ನೀಡಬೇಕು. ಮಹಿಳಾ ಕಾರ್ಮಿಕರು ಮುಂಚಿತವಾಗಿ ಆಗಮಿಸಲು ಮತ್ತು ಕೆಲಸದ ಬಳಿಕ ವಿಶ್ರಮಿಸಲು ಸಾಕಷ್ಟು ಸಂಖ್ಯೆಯಲ್ಲಿ ವಿಶ್ರಾಂತಿ ಕೊಠಡಿಗಳನ್ನು ಕಲ್ಪಿಸಬೇಕು.
  • ಮಹಿಳಾ ಕಾರ್ಮಿಕರಿಗೆ ಅವರ ಮನೆಯಿಂದ ಕೆಲಸ ಸ್ಥಳದವರೆಗೆ ಮತ್ತು ಅಲ್ಲಿಂದ ಹಿಂದಿರುಗಲು (ರಾತ್ರಿ ಪಾಳಿ ಮಾತ್ರ) ಸಾರಿಗೆ ಸೌಲಭ್ಯವನ್ನು ನೀಡಬೇಕು. ಈ ವಾಹನಗಳಲ್ಲಿ ಭದ್ರತಾ ಸಿಬ್ಬಂದಿ (ಮಹಿಳಾ ಭದ್ರತಾ ಸಿಬ್ಬಂದಿ ಒಳಗೊಂಡಿರಬೇಕು) ಒದಗಿಸಬೇಕು. ಪ್ರತಿಯೊಂದು ಸಾರಿಗೆ ವಾಹನವು ಸಿಸಿಟಿವಿ ಕ್ಯಾಮರಾ ಮತ್ತು ಜಿಪಿಎಸ್‌ ವ್ಯವಸ್ಥೆ ಹೊಂದಿರಬೇಕು.
  • ರಾತ್ರಿ ಪಾಳಿಯಲ್ಲಿ ಪಾಳಿ ಪ್ರಭಾರದಲ್ಲಿರುವ ಮೇಲ್ವಿಚಾರಕರು ಅಥವಾ ಫೋರ್‌ಮೆನ್‌ ಅಥವಾ ಇತರ ಮೇಲ್ವಿಚಾರಣಾ ಸಿಬ್ಬಂದಿ ವೃಂದಬಲದ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಇಲ್ಲದಷ್ಟು ಮಹಿಳೆಯರು ಇರಬೇಕು.
  • ಬೆಳಗಿನ ಪಾಳಿಯಿಂದ ರಾತ್ರಿ ಪಾಳಿಗೆ ಹಾಗೆಯೇ ರಾತ್ರಿ ಪಾಳಿಯಿಂದ ಬೆಳಗಿನ ಪಾಳಿಗೆ ಮಹಿಳಾ ಕಾರ್ಮಿಕರನ್ನು ಬದಲಿಸಿದಾಗಲೆಲ್ಲಾ ಹಿಂದಿನ ಪಾಳಿಗಳು ಮತ್ತು ರಾತ್ರಿ ಪಾಳಿಯ ಮಧ್ಯದ ವಿರಾಮ ಅಥವಾ ಅಂತರವು ನಿರಂತರ 12 ಗಂಟೆಗಳಿಗಿಂತ ಕಡಿಮೆಯಾಗಿರಬಾರದು.
  • ಮಹಿಳಾ ಸಿಬ್ಬಂದಿಯನ್ನು ಕರೆದೊಯ್ಯುವ ವಾಹನದಲ್ಲಿ ಪ್ರತಿಯೊಬ್ಬ ಚಾಲಕನ ವೈಯಕ್ತಿಕ ವಿವರಣೆ ಮತ್ತು ತಾವಾಗಿಯೇ ಉದ್ಯೋಗವನ್ನು ಪಡೆದ ಎಲ್ಲಾ ಚಾಲಕರ ಹಿಂದಿನ ಉದ್ಯೋಗದ ಪೂರ್ವ ಇತಿಹಾಸ ಪರಿಶೀಲಿಸಬೇಕು.
  • ಮಹಿಳಾ ಉದ್ಯೋಗಿಗಳ ದೂರವಾಣಿ ಸಂಖ್ಯೆ, ವಿಶೇಷವಾಗಿ ಮೊಬೈಲ್‌ ಸಂಖ್ಯೆಗಳು ಇ–ಮೇಲ್‌ ಐಡಿ ಮತ್ತು ವಿಳಾಸವನ್ನು ಅನಧಿಕೃತ ವ್ಯಕ್ತಿಗಳಿಗೆ ಬಹಿರಂಗಪಡಿಸಬಾರದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತೆ ಯಾವುದೇ ಮಹಿಳಾ ಸಿಬ್ಬಂದಿಗೆ ಕಡ್ಡಾಯ ಅಥವಾ ಕಟ್ಟುಪಾಡು ಮಾಡುವಂತಿಲ್ಲ. ರಾತ್ರಿಪಾಳಿ ಗಳಲ್ಲಿ ಕೆಲಸ ಮಾಡುವ ಆಸಕ್ತಿ ಇರುವ ಮಹಿಳಾ ನೌಕರರಿಂದ ಲಿಖಿತ ಸಮ್ಮತಿ ಪಡೆಯಬೇಕು.
  • ಕೆಲಸದ ಅವಧಿಯನ್ನು 9ರಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಅವಕಾಶ ಮಾಡಿಕೊಡಲಾಗುತ್ತದೆ.
  • ದೈನಂದಿನ ಗರಿಷ್ಠ ಕೆಲಸದ ಅವಧಿ ಹೆಚ್ಚಿಸಲು ಅನುಕೂಲವಾಗುವಂತೆ ಕಾರ್ಖಾನೆಗಳ ಯಾವುದೇ ಗುಂಪು ಅಥವಾ ವರ್ಗ, ಕಾರ್ಮಿಕನ ಒಟ್ಟು ಕೆಲಸದ ಅವಧಿಯನ್ನು ವಿರಾಮ ಇಲ್ಲದೆ 6 ಗಂಟೆಗಳ ವರೆಗೂ ವಿಸ್ತರಿಸಬಹುದಾಗಿದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.
  • ಅವಧಿ ಮೀರಿದ ಕೆಲಸದ ಸಂದರ್ಭದಲ್ಲಿ ಸಾಮಾನ್ಯ ದರಕ್ಕಿಂ ತ ದುಪ್ಪಟ್ಟು ದರದಲ್ಲಿ ಕೆಲಸಗಾರನಿಗೆ ವೇತನ ಪಾವತಿಸುವ ಜತೆಗೆ ಕೆಲಸದ ವೇಳೆಯನ್ನು ನಿಗದಿ ಮಾಡುವುದಕ್ಕೂ ಕಾಯ್ದೆಯಲ್ಲಿ ಅವಕಾಶವಿದೆ.