Published on: October 18, 2021

ಚೀನಾ ರೀಲರ್ ಮಷಿನ್

ಚೀನಾ ರೀಲರ್ ಮಷಿನ್

ಸುದ್ಧಿಯಲ್ಲಿ ಏಕಿದೆ? ಚೀನಾದಿಂದ ರೇಷ್ಮೆ ಜಿಲ್ಲೆಗೆ(ರಾಮನಗರ)  ದಶಕದ ಹಿಂದೆ ಪ್ರಾಯೋಗಿಕ ಪರೀಕ್ಷಾರ್ಥವಾಗಿ ಬಂದ ಆಟೋಮೆಟಿಕ್‌ ರೀಲರ್‌ ಮೆಷಿನ್‌ (ಎಆರ್‌ಎಂ) ಇದೀಗ ಜಿಲ್ಲೆಯಲ್ಲಿ ಹಂತ ಹಂತವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ ಸಾಗಿದೆ.

  • ಈ ಯಂತ್ರವು ರೇಷ್ಮೆ ನೂಲು ಬಿಚ್ಚಾಣಿಯಲ್ಲಿ ಹೆಚ್ಚಿನ ಉಪಯುಕ್ತವಾಗಿರುವುದರಿಂದ ಜಿಲ್ಲೆಯಲ್ಲಿ ಈಗ 18 ಘಟಕಗಳಿಗೆ ವಿಸ್ತಾರಗೊಂಡಿದೆ. ಈ ಮೂಲಕ ಗುಣಮಟ್ಟದ ಮಿಶ್ರತಳಿ(ಬಿಳಿ ರೇಷ್ಮೆ) ರೇಷ್ಮೆ ಉತ್ಪಾದಿಸುವ ಮೂಲಕ ಜಿಲ್ಲೆಯ ಇಮೇಜ್‌ ಜಾಗತಿಕ ಮಟ್ಟದಲ್ಲಿ ಹೆಚ್ಚಿದೆ. ಮಾಗಡಿ ತಾಲೂಕನ್ನು ಹೊರತುಪಡಿಸಿ ಇತರ ತಾಲೂಕುಗಳಾದ ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿಗಳಲ್ಲಿ ಈ ಯಂತ್ರ ಅಳವಡಿಸಿಕೊಳ್ಳಲು ಅನುಮತಿ ಇದೆ.

ಗುಣಮಟ್ಟ ಎತ್ತಿಹಿಡಿಯುವ ಮಷಿನ್‌

  • ಚೀನಾ ಸ್ವಯಂಚಾಲಿತ ನೂಲು ತೆಗೆವ ಯಂತ್ರಕ್ಕೆ ಏಕೆ ಹೆಚ್ಚು ನೂಲು ಬಿಚ್ಚಣಿದಾರರು ಮನಸೋಲುತ್ತಿದ್ದಾರೆ ಎಂದರೆ ‘ಡೀನಿಯಲ್‌ ಇಂಡಿಕೇಟರ್‌’ ಎಂಬ ನೂಲಿನ ಸಾಮರ್ಥ್ಯ ಮತ್ತು ಗುಣಮಟ್ಟ ಗುರುತಿಸುವ ಅತ್ಯಾಧುನಿಕ ವ್ಯವಸ್ಥೆಯೇ ಇದರಲ್ಲಿದೆ. ಇದರಿಂದ ರೇಷ್ಮೆದಾರದ ಗುಣಮಟ್ಟವನ್ನು ನಿಖರವಾಗಿ ತಿಳಿಯಬಹುದು. ಎಳೆಎಳೆಯಾಗಿ ಹರಿದುಬರುತ್ತಾ ಇರುವ ರೇಷ್ಮೆ ನೂಲಿನ ಗುಣಮಟ್ಟದಲ್ಲಿ ಸ್ವಲ್ಪ ಮಾತ್ರದ ವ್ಯತ್ಯಾಸವಾದರೂ ಈ ‘ಡೀನಿಯಲ್‌ ಇಂಡಿಕೇಟರ್‌’ ತಕ್ಷಣ ನೂಲಿನ ಲೋಪವನ್ನು ತೋರಿಸಿ ಗುಣಮಟ್ಟ ಕಾಯುತ್ತದೆ. ಹೀಗಾಗಿ ಈ ಯಂತ್ರದಿಂದ ಬಂದ ನೂಲಿಗೆ ಬೆಲೆ ಹೆಚ್ಚು. 400 ಮಂದಿ ಕೆಲಸಮಾಡುವ ಜಾಗದಲ್ಲಿ ಕೇವಲ 50 ಮಂದಿ ಈ ಯಂತ್ರದಲ್ಲಿ ಕೆಲಸ ಮಾಡಬಹುದು.

ವಿದೇಶಿ ರೇಷ್ಮೆಗೆ ಸ್ಪರ್ಧೆ

  • ದೇಶಿಯ ರೇಷ್ಮೆಗಿಂತ ಉತ್ತಮ ಗುಣಮಟ್ಟ ಎಂಬ ವಾದ ಮುಂದಿಟ್ಟು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದವರ ಭ್ರಮೆಯನ್ನು ಈ ಯಂತ್ರ ಕಳಚಿದೆ. ಯಂತ್ರದಿಂದ ಹೊರಬರುವ ರೇಷ್ಮೆಯ ಗುಣಮಟ್ಟ 2ಎದಿಂದ 3ಎ ದರ್ಜೆಯದ್ದಾಗಿರುತ್ತದೆ. ಆದರೆ ರಾಮನಗರದ ಆಟೋಮ್ಯಾಟಿಕ್‌ ರೀಲಿಂಗ್‌ ಯೂನಿಟ್‌ನಲ್ಲಿ ತಯಾರಾಗುವ ನೂಲು 4ಎ ದರ್ಜೆಯ ಗುಣಮಟ್ಟ ಹೊಂದಿರುತ್ತದೆ. ಇದಕ್ಕೆ ಇಲ್ಲಿನ ಉತ್ತಮ ಹವಾಮಾನ ಮತ್ತು ನೀರಿನ ಸಾರಾಂಶವೇ ಮುಖ್ಯ ಕಾರಣ ಎನ್ನಲಾಗಿದೆ.

ವಾರ್ಷಿಕ 40 ಟನ್‌ಗೂ ಹೆಚ್ಚು ನೂಲು

  • ಈಗ ಬಳಕೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಘಟಕಗಳಲ್ಲಿ ಪ್ರತಿದಿನ ಸರಾಸರಿ 700ರಿಂದ 800 ಕಿಲೋ ರೇಷ್ಮೆಗೂಡುಗಳ ನೂಲನ್ನು ಬಿಚ್ಚಲು ಅವಕಾಶವಾಗುತ್ತಿದೆ. ಎರಡು ಪಾಳಿಗಳಲ್ಲಿ ಸುಮಾರು 50 ನೌಕರರನ್ನು ಬಳಸಿ ವಾರ್ಷಿಕ 40 ಟನ್‌ ರೇಷ್ಮೆ ನೂಲನ್ನು ಉತ್ಪಾದಿಸಲು ಅವಕಾಶವಿದೆ. ಎಷ್ಟು ಪ್ರಮಾಣದ ಗೂಡನ್ನು ಖರೀದಿಸಿದರೂ ಆರು ತಿಂಗಳ ಕಾಲ ಕೆಡದಂತೆ ಸಂಗ್ರಹಿಸಿ ಇಡುತ್ತಾರೆ.